ಮಂಗಳವಾರ, ಮೇ 11, 2021
25 °C

ಸುಳ್ಳು ಸಾರುವ ಹುನ್ನಾರ ನಿಲ್ಲಲಿ....

ಡಾ. ಮೀನಾಕ್ಷಿ ಬಾಳಿ,ಗುಲ್ಬರ್ಗ Updated:

ಅಕ್ಷರ ಗಾತ್ರ : | |

ಬಸವಣ್ಣ ಮತ್ತು ಆತನ ಶರಣ ಸಂಗಾತಿಗಳನ್ನು ಒಪ್ಪಿಕೊಳ್ಳಲು ಯಾವ ಕಾಲದಲ್ಲೂ ವೈದಿಕ ತತ್ವಶಾಸ್ತ್ರಕ್ಕೆ ಕಷ್ಟ. ಜೊತೆಗೆ ಬಸವಾದಿ ಶರಣರ ಒಟ್ಟು ಧೋರಣೆಯ ಬಗ್ಗೆ ತಪ್ಪಭಿಪ್ರಾಯ ಮೂಡಿಸುವ ಮೂಲಕವೇ ಅವರನ್ನು ವೈದಿಕ ಸಿದ್ದಾಂತ ನಿವಾರಿಸಿಕೊಳ್ಳಬಯಸುತ್ತದೆ.ಇದಕ್ಕೆ ನಿದರ್ಶನ, ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿಗಳು ಬಸವಣ್ಣನವರ ಕುರಿತು ನೀಡಿರುವ ಹೇಳಿಕೆ (ಪ್ರಜಾವಾಣಿ ಜೂನ್12). ಬ್ರಾಹ್ಮಣರ ಪ್ರತ್ಯೇಕ ಪಂಕ್ತಿ ಭೋಜನ ಕ್ರಮವನ್ನು ಸಮರ್ಥಿಸಿಕೊಂಡಿರುವ ಪೇಜಾವರಶ್ರೀಗಳು, ಮಾಂಸಾಹಾರಿಗಳ ಜೊತೆ ಕುಳಿತು ಊಟ ಮಾಡಿದರೆ ಮಹಾನರಕ ಎಂಬುದಾಗಿ ಬಸವಣ್ಣನವರೇ ಹೇಳಿದ್ದಾರೆ ಎಂದಿದ್ದಾರೆ. ಈ ರೀತಿಯ ಹೇಳಿಕೆ ನೀಡಲು ಬಸವಾದಿ ಶರಣರ ಯಾವ ವಚನ ಆಧಾರವಾಗಿದೆ ಎಂಬುದನ್ನು ಅವರು ಸ್ಪಷ್ಟ ಪಡಿಸಬೇಕಿತ್ತು.ಬಸವಣ್ಣ, ಅಲ್ಲಮ, ಸಿದ್ಧರಾಮ, ಅಕ್ಕಮಹಾದೇವಿ ಮುಂತಾಗಿ 12ನೇ ಶತಮಾನದ ವೈದಿಕ ವಿರೋಧಿ ಹೋರಾಟಗಾರರು ಯಾವುದೇ ಆಹಾರ ಪದ್ಧತಿಯನ್ನು ತುಚ್ಛೀಕರಿಸಿ ಮಾತಾಡಿದ್ದು ಇಲ್ಲ. ಬಸವಣ್ಣ ಮಾಂಸಾಹಾರಿಗಳ ವಿರೋಧಿಯಾಗಿದ್ದ ಎನ್ನಲು ಏನಾದರೂ ಆಧಾರ ಇವೆಯೇ? ದಲಿತರ ಕೇರಿಗೆ ಹೋಗಿ ಅವರನ್ನು ಅಪ್ಪಿಕೊಂಡು ಅಪ್ಪ, ಬೊಪ್ಪ ನನ್ನಯ್ಯ, ಚಿಕ್ಕಯ್ಯ ಎಂದು ಗೌರವಿಸಿದ ಬಸವಣ್ಣ ಇದೇ ಸಂದರ್ಭದಲ್ಲಿ ಎಡದ ಕೈಯಲ್ಲಿ ಕತ್ತಿ, ಬಲದ ಕೈಯಲ್ಲಿ ಮಾಂಸ

ಬಾಯಲ್ಲಿ ಸುರೆಯ ಗಡಿಗೆ, ಕೊರಳಲ್ಲಿ ದೇವರಿರಲು

ಅವರನ್ನು ಲಿಂಗನೆಂಬೆ, ಸಂಗನೆಂಬೆ

ಕೂಡಲ ಸಂಗಮದೇವಾ ಅವರ ಮುಖಲಿಂಗಿಗಳೆಂಬೆನುಎಂದು ಹೇಳುತ್ತಾರೆ.  ವೃತ್ತಿಯಿಂದ ಚಾಂಡಾಲನೇ ಆಗಿರಲಿ. ಪ್ರವೃತ್ತಿಯಿಂದ ಮಾಂಸಾಹಾರಿ, ಸುರೆ ಸೇವಿಸುವವನಾಗಿರಲಿ, ಅಂಥವನು ಕೂಡಾ ಶರಣಸಿದ್ಧಾಂತವನ್ನು ಗೌರವಿಸುವವನಾದರೆ ಸಮಾನತೆಯ ಪ್ರತೀಕವಾದ ಲಿಂಗ ಧರಿಸಿದನಾದರೆ ಅವನನ್ನು ಸಂಗಯ್ಯನೆಂದೇ ಕಾಣುತ್ತೇನೆ ಎಂದು ಈ ವಚನದಲ್ಲಿ ತುಂಬ ಸ್ಪಷ್ಟವಾಗಿ ಬಸವಣ್ಣನವರು ಹೇಳಿದ್ದಾರೆ.ಇಡೀ ಶರಣ ಸಂದೋಹದಲ್ಲಿ ಬಸವಣ್ಣ, ಚನ್ನಬಸವಣ್ಣ, ಅಕ್ಕಮಹಾದೇವಿ, ನೀಲಾಂಬಿಕೆ, ಗಂಗಾಂಬಿಕೆಯಂಥ ಬೆರಳೆಣಿಕೆಯಷ್ಟು ಜನರನ್ನು ಹೊರತು ಪಡಿಸಿದರೆ ಉಳಿದವರೆಲ್ಲಾ ತಳಸಂಸ್ಕೃತಿಯಿಂದ ಬಂದವರಾಗಿದ್ದರು. ಅವರೆಲ್ಲ ತಮ್ಮ ಆಹಾರ ಪದ್ಧತಿಯ ಲಭ್ಯತೆ, ರೂಢಿಯನ್ನು ಅನುಸರಿಸಿಕೊಂಡೇ ಬಂದಿದ್ದರೆ ಹೊರತು ಶುದ್ಧ ಶಾಖಾಹಾರಿಗಳಾಗಿ ಬಂದಿದ್ದರೆಂಬ ಬಗ್ಗೆ ಎಲ್ಲಿಯೂ ಉಲ್ಲೇಖವಿಲ್ಲ. ಮಾಂಸಾಹಾರದ ಹಿನ್ನೆಲೆಯಿಂದ ಬಂದಿದ್ದ ಹಲವಾರು ಶರಣರು ಆ ಕುರಿತು ತಮ್ಮ ವಚನಗಳಲ್ಲಿ ವಿವರಗಳನ್ನು ದಾಖಲಿಸಿದ್ದಾರೆ.

ದಲಿತ ವಚನಕಾರನಾಗಿದ್ದ ಉರಿಲಿಂಗಪೆದ್ದಿಯ ಹೆಂಡತಿ ಕಾಳವ್ವೆಯ ವಚನವೊಂದು ಹೀಗಿದೆ;ಕುರಿ ಕೋಳಿ ಕಿರಿ ಮೀನು ತಿಂಬವರಿಗೆಲ್ಲ ಕುಲಜ ಕುಲಜರೆಂದೆಂಬರು

ಶಿವಗೆ ಪಂಚಾಮೃತವ ಕರೆವ ಪಶುವ ತಿಂಬ ಮಾದಿಗ ಕೀಳು ಜಾತೆಯೆಂಬರು

ಅವರೆಂತು ಕೀಳು ಜಾತಿಯಾದರು? ಜಾತಿಗಳೇ ನೀವೇಕೆ ಕೀಳಾಗಿರೋ?

ಬ್ರಾಹ್ಮಣನುಂಡುದು ಪುಲ್ಲಿಗೆ ಶೋಭಿತವಾಗಿ ನಾಯಿ ನೆಕ್ಕಿ ಹೋಯಿತು

ಮಾದಿಗರುಂಡದ್ದು ಪುಲ್ಲಿಗೆ, ಬ್ರಾಹ್ಮಣರಿಗೆ ಶೋಭಿತವಾಯಿತು

ಅದೆಂತೆಂದಡೆ; ಸಿದ್ದಲಿಕೆಯಾಯಿತು, ಸಗ್ಗಳೆಯಾಯಿತು

ಸಿದ್ದಲಿಕೆಯ ತುಪ್ಪವನು, ಸಗ್ಗಳೆಯ ನೀರನು

ಶುದ್ದವೆಂದು ಕುಡಿದ ಬುದ್ಧಿಗೇಡಿ ವಿಪ್ರರಿಗೆ ನಾಯಕ ನರಕ ತಪ್ಪದಯ್ಯ

ಉರಿಲಿಂಗಪೆದ್ದಿಗಳರಸು ಒಲ್ಲನವ್ವ.ಕಾಳವ್ವೆಯ ಈ ವಚನ ಅಂದು -ಇಂದಿಗೂ ಚಾಲ್ತಿಯಲ್ಲಿರುವ ಶೂದ್ರಾತಿ ಶೂದ್ರರ ಆಹಾರ ಪದ್ಧತಿ ಕುರಿತು ಸ್ವಾಭಿಮಾನದ ಪ್ರಶ್ನೆ ಎತ್ತುತ್ತದೆ. ಇಲ್ಲಿ ಮಾಂಸಾಹಾರ ವರ್ಜ್ಯವೆಂದು ಹೇಳಿಯೇ ಇಲ್ಲ. ಬದಲಾಗಿ ಮಾಂಸಹಾರಿಗಳಲ್ಲಿಯೇ ಕೋಳಿ, ಕುರಿ, ಮೀನು ತಿನ್ನುವವರನ್ನು ಶ್ರೇಷ್ಠ ಕುಲದವರೆಂದು, ಸತ್ತ ದನದ ಮಾಂಸ ತಿನ್ನುವವರನ್ನು ಕೀಳು ಕುಲದವರೆಂದು ಭೇದ ಕಲ್ಪಿಸುವುದೇಕೆ?ಮಾಂಸಾಹಾರಿಗಳಲ್ಲೂ ವರ್ಗೀಕರಣ ಮಾಡಿದ ಧೂರ್ತತನವನ್ನು ಕಾಳವ್ವೆ `ಬ್ರಾಹ್ಮಣನುಂಡುದು ಪುಲ್ಲಿಗೆ ಶೋಭಿತವಾಗಿ ನಾಯಿ ನೆಕ್ಕಿ ಹೋಯಿತು' ಎಂದು ಕಟುಕುತ್ತಾಳೆ. ಸಣ್ಣ ಪ್ರಾಣಿಗಳನ್ನು ಒಂದಿಂಚೂ ಬಿಡದೆ ಪೂರ್ತಿ ತಿನ್ನುವ ಮೇಲ್ವರ್ಗಕ್ಕಿಂತ ಮುದಿ ದನದ ಮಾಂಸ ತಿಂದು ಮೇಲಿನ ಚರ್ಮ ಹದ ಮಾಡಿ ಅದರಿಂದ ತುಪ್ಪ ತುಂಬುವ ಸಗ್ಗಳಿಕೆ ಮತ್ತು ನೀರು ತುಂಬಿಸಬಹುದಾದ ಸಿದ್ದಲಿಕೆ ಮಾಡುವ ದುಡಿಯುವ ವರ್ಗವೇ ಗೌರವಕ್ಕೆ ಪಾತ್ರವಲ್ಲವೇ? ಎಂದು ಕೇಳುತ್ತಾಳೆ. ಕಾಳವ್ವೆ ತನ್ನಂಥವರ ಆಹಾರ ಸಂಸ್ಕೃತಿಯ ಹಿಂದಿರುವ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಪಲಕುಗಳನ್ನು ತುಂಬಾ ಸೂಕ್ಷ್ಮವಾಗಿಯೇ ಹೊಳೆಯಿಸುತ್ತಾಳೆ. ಆಹಾರ ಪದ್ಧತಿಯನ್ನು ಟೀಕಿಸುವರಿಗೆ ನಾಯಕ ನರಕ ತಪ್ಪದೆಂದು ಎಚ್ಚರಿಸುತ್ತಾಳೆ.ಬಸವಾದಿ ಶರಣರು ಯಾಗ, ಯಜ್ಞಗಳ ಹೆಸರಿನಲ್ಲಿ ನಡೆಸುವ ಪ್ರಾಣಿ ವಧೆಯನ್ನು ಧಿಕ್ಕರಿಸಿರುವುದುಂಟು;ಮಾತಿನ ಮಾತಿಂಗೆ ನಿನ್ನ ಕೊಂದಹರೆಂದು

ಎಲೆ ಹೋತೆ ಅಳು ಕಂಡ್ಯಾ

ವೇದವನೋದಿದವರ ಮುಂದೆ ಅಳು ಕಂಡ್ಯಾ

ಶಾಸ್ತ್ರವನೋದಿದವರ ಮುಂದೆ ಅಳು ಕಂಡ್ಯಾ.......ಎಂಬ ಈ ವಚನದಲ್ಲಿ ವಿಪ್ರರು ಸರ್ವದಯಾಪರ ಆದರ್ಶಗಳನ್ನು ಹೇಳುತ್ತಲೇ ಯಾಗಗಳಲ್ಲಿ ಬಲಿ ಕೊಡುವ ಹೋತಿನ ಆಕ್ರಂದನವನ್ನು ಕುರಿತು ಕೂಡಲಸಂಗಯ್ಯನಲ್ಲಿ ಮೊರೆಯಿಡುತ್ತಾರೆ. ಅಂತೆಯೇ  `ಕೊಲ್ಲೆನಯ್ಯ ಪ್ರಾಣಿಗಳ, ಮೆಲ್ಲೆನಯ್ಯ ಬಾಯಿಚ್ಛೆಗೆ `ಎನ್ನುತ್ತಾನೆ.ದೇವರ ಹೆಸರಿನಲ್ಲಿ ತಾನು ಪ್ರಾಣಿಗಳ ವಧೆ ಮಾಡಿ ಕದ್ದು ಮುಚ್ಚಿ ಮಾಂಸಾಹಾರ ಸೇವಿಸಿ ಶಾಖಾಹಾರ ವೈಭವೀಕರಿಸುವ ಡಂಭಾಚಾರಿಗಳ ಬಣ್ಣ ಬಯಲಿಗೆಳೆದಿದ್ದಾರೆ. ಜೇಡರ ದಾಸಿಮಯ್ಯನು ತನ್ನೊಂದು ವಚನದಲ್ಲಿ, `ಅಡಗುತಿಂಬರು ಕಣಕದಡಿಗೆಯಿರಲ್ಕೆ, ಕುಡಿಯುವರು ಸುರೆಯ ಹಾಲಿರಲಿಕ್ಕೆ' ಎಂದು ಟೀಕಿಸುತ್ತಾನೆ. ಕಣಕದ ಅಡುಗೆ ಇರಲಿಕ್ಕೆ ಅಂದರೆ ಸಸ್ಯಾಹಾರದ ಸಮೀಚಿನ ಭೋಜನವಿದ್ದಾಗಲೂ ಬಡವರ ಆಹಾರ ಕಸಿದುಕೊಳ್ಳುವ, ಹಾಲು ಸಮೃದ್ಧವಾಗಿರಲೂ ನಶೆ ಏರಿಸುವ ಮದ್ಯ ಸೇವಿಸುವುದನ್ನು ಖಂಡಿಸುತ್ತಾನೆ. ಬದುಕಲು ಅವಶ್ಯವಿರುವಷ್ಟು ಸಸ್ಯಾಹಾರ ಎಲ್ಲರಿಗೂ ಸಿಗದಿರುವ ಸಂದರ್ಭದಲ್ಲಿ ಮಾಂಸಹಾರವನ್ನು ತುಚ್ಛವೆಂದು ಅವರೆಲ್ಲೂ ಹೇಳಿಲ್ಲ.ಧಾರ್ಮಿಕ ಕಾರಣಗಳಿಗಾಗಿ ಮತ್ತು ಬಾಯಿ ಚಟಕ್ಕಾಗಿ ಪ್ರಾಣಿಗಳನ್ನು ಕೊಲ್ಲುವವರನ್ನು ಶರಣರು ಉಗ್ರವಾಗಿ ಖಂಡಿಸಿದ್ದಾರೆ. ಆದರೆ ನಿಸರ್ಗ ಧರ್ಮದ ಬಗೆಗೆ ಅವರೆಲ್ಲೂ ಅವಾಸ್ತವ, ಅವೈಜ್ಞಾನಿಕ, ಆದರ್ಶಗಳನ್ನಿಟ್ಟುಕೊಂಡವರಾಗಿರಲಿಲ್ಲ. 12ನೇ ಶತಮಾನದ ಶರಣರ ಸಮಗ್ರ ವಚನಗಳನ್ನು ತಲಸ್ಪರ್ಶಿಯಾಗಿ ಅಭ್ಯಸಿಸಿದವರಿಗೆ ಇದು ಗಮನಕ್ಕೆ ಬರದೆ ಇರದು. ಆದ್ದರಿಂದ ಪಂಕ್ತಿಭೇದದಂಥ ಅನೈತಿಕ ವಿಚಾರವನ್ನು ಸಮರ್ಥಿಸಿಕೊಳ್ಳಲು ಪೇಜಾವರಶ್ರಿಗಳು ಬಸವಣ್ಣನವರನ್ನು ತಪ್ಪು ತಪ್ಪಾಗಿ ಬಿಂಬಿಸುವುದು ಸರಿಯಲ್ಲ. ಬಸವಾದಿ ಶರಣರನ್ನು ಉದ್ದೇೀಶಪೂರ್ವಕವಾಗಿ ತಪ್ಪಾಗಿ ಬಿಂಬಿಸುತ್ತಿರುವ ಈ ಹುನ್ನಾರಗಳನ್ನು ಅರ್ಥಮಾಡಿಕೊಂಡು ನಾವೆಲ್ಲ ಪ್ರಾಂಜಲ ಮನಸಿನಿಂದ ವಚನಗಳ ಓದಿಗೆ ಮತ್ತೆ ಮತ್ತೆ ಒಡ್ಡಿಕೊಳ್ಳಬೇಕಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.