ಸುವರ್ಣಭೂಮಿ- 10 ಸಾವಿರ ಪ್ರೋತ್ಸಾಹಧನ

7

ಸುವರ್ಣಭೂಮಿ- 10 ಸಾವಿರ ಪ್ರೋತ್ಸಾಹಧನ

Published:
Updated:
ಸುವರ್ಣಭೂಮಿ- 10 ಸಾವಿರ ಪ್ರೋತ್ಸಾಹಧನ

ಉಡುಪಿ: ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಘೋಷಿಸಿದಂತೆ ಸಣ್ಣ, ಅತಿಸಣ್ಣ ರೈತ ಕುಟುಂಬ  ಗಳ ಪುನರುಜ್ಜೀವಕ್ಕಾಗಿ ‘ಸುವರ್ಣ ಭೂಮಿ ಯೋಜನೆ’ಯಡಿ ಖುಷ್ಕಿ ಜಮೀನು ಹೊಂದಿರುವ ಸಣ್ಣ ಮತ್ತು ಅತಿಸಣ್ಣ ರೈತ ಕುಟುಂಬಗಳಿಗೆ ರೂ. 10 ಸಾವಿರ ಪ್ರೋತ್ಸಾಹ ಧನವನ್ನು ಜಿಲ್ಲೆಯ ರೈತರಿಗೂ ನೀಡಲಾಗುತ್ತಿದೆ.ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಎಂ.ಪ್ರಭಾಕರ್, 5 ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ರೈತರಷ್ಟೇ ಈ ಯೋಜನೆಗೆ ಅರ್ಹರು. ಅರ್ಜಿ ವಿತರಿಸಲಾಗುತ್ತಿದ್ದು, ರೈತರು ಭರ್ತಿ ಮಾಡಿ ಸಲ್ಲಿಸಲು ಇದೇ 25 ಕೊನೇದಿನ ಎಂದರು. ಅರ್ಹ ರೈತರಿಗೆ ಬ್ಯಾಂಕ್ ಮತ್ತು ಸಹಕಾರ ಬ್ಯಾಂಕ್‌ಗಳ ಮೂಲಕ ನೇರವಾಗಿ ರೂ. 10 ಸಾವಿರವನ್ನು ಎರಡು ಕಂತುಗಳ ಮೂಲಕ ನೀಡಲಾಗುವುದು. ಗರಿಷ್ಠ ಎರಡು ಎಕರೆಗೆ ಮೀರದಂತೆ ರೂ. 10 ಸಾವಿರ ನೀಡಲಾಗುತ್ತದೆ. 2 ಎಕರೆಗಿಂತ ಕಡಿಮೆ ಇದ್ದರೆ ಪ್ರೋತ್ಸಾಹ ಧನವನ್ನು ಅದೇ ಅನುಪಾತದಲ್ಲಿ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.ಪ್ರೋತ್ಸಾಹಧನವನ್ನು ಹೆಚ್ಚು ಮೌಲ್ಯದ ಬೆಳೆಗಳಾದ ಉತ್ತಮ ತಳಿಯ ತೋಟಗಾರಿಕೆ ಬೆಳೆಗಳಾದ (ಮಾವು, ದ್ರಾಕ್ಷಿ, ದಾಳಿಂಬೆ, ನಿಂಬೆ, ಬಾಳೆ, ಅನಾನಸ್, ಸಪೋಟ, ಪಪ್ಪಾಯಿ ಹಾಗೂ ಇತರೆ), ಜೈವಿಕ ಇಂಧನ (ಹೊಂಗೆ, ಸೀಮಾರೂಬ ಇತರೆ), ರೇಷ್ಮೆ, ಕೃಷಿ, ಜೇನು ಸಾಕಣೆ, ಸವಳು ಮತ್ತು ಜವಳು ಭೂಮಿಯಲ್ಲಿ ಮೀನು ಸಾಕಣೆ, ಸಾವಯವ ಕೃಷಿ ಹಾಗೂ ಕೃಷಿ ಬೆಳೆಗಳನ್ನು (ದ್ವಿ ದಳ ಧಾನ್ಯ, ಎಣ್ಣೆಕಾಳು, ವಾಣಿಜ್ಯ ಬೆಳೆಯಾದ ಬಿ.ಟಿ.ಹತ್ತಿ) ಬೆಳೆಯುವ ರೈತರಿಗೆ ದೊರಕಲಿದೆ. ಕೇವಲ ಭತ್ತ ಬೆಳೆಯುವ ರೈತರು ಈ ಯೋಜನೆಯಡಿಯಲ್ಲಿ ಪ್ರೋತ್ಸಾಹಧನ ಪಡೆಯಲು ಅರ್ಹರಲ್ಲ ಎಂದರು.ತೆರೆದ ಬಾವಿ, ಕೊಳವೆಬಾವಿ, ಕೆರೆ ಮುಂತಾದ ನೀರಾವರಿ ಮೂಲಗಳನ್ನು ಹೊಂದಿರುವ ರೈತರು ಈ ಯೋಜನೆಯ ಉಪಯೋಗ ಪಡೆಯಲು ಅರ್ಹರಾಗಿರುತ್ತಾರೆ. ಅಚ್ಚುಕಟ್ಟು ಪ್ರದೇಶಗಳ ವ್ಯಾಪ್ತಿಯಲ್ಲಿ ಬರುವ ರೈತರು ಈ ಯೋಜನೆಯ ಪ್ರಯೋಜನ ಪಡೆಯಲು ಅರ್ಹರಲ್ಲ ಎಂದರು.ಅರ್ಜಿ ಸ್ವೀಕಾರ ಆರಂಭ: ಗ್ರಾಮ ಪಂಚಾಯಿತಿ, ರೈತ ಸಂಪರ್ಕ ಕೇಂದ್ರಗಳಲ್ಲಿ ಅರ್ಜಿ ಲಭ್ಯವಿದ್ದು, ಈಗಾಗಲೇ ಅರ್ಜಿ ಸ್ವೀಕಾರವೂ ಆರಂಭವಾಗಿದೆ. ಅರ್ಜಿ ಮೂರು ವಿಭಾಗ ಒಳಗೊಂಡಿದ್ದು, ರೂ. 10ರ ಛಾಪಾ ಕಾಗದದಲ್ಲಿ ಸ್ವಯಂ ಘೋಷಣೆ, ಸ್ವಯಂ ದೃಢೀಕರಣ ಪಹಣಿ ಪತ್ರದ ನಕಲು ಪ್ರತಿಗಳು, ಜಾತಿ ಪ್ರಮಾಣ ಪತ್ರ, ಬ್ಯಾಂಕ್ ಪಾಸ್   ಬುಕ್ ಪ್ರತಿ ಲಗತ್ತಿಸಬೇಕಿದೆ ಎಂದರು.ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರಗಳಲ್ಲಿ ಮಾತ್ರವೇ ಭರ್ತಿ ಮಾಡಿದ ಅರ್ಜಿ ಸ್ವೀಕರಿಸಲಾಗುತ್ತದೆ. ಒಬ್ಬ ರೈತ ಒಂದು ಅರ್ಜಿಯನ್ನು ಮಾತ್ರವೇ ಸಲ್ಲಿಸಬೇಕು. ಅರ್ಜಿಯಲ್ಲಿ ತಪ್ಪು ಮಾಹಿತಿ ನೀಡಿದಲ್ಲಿ ಮುಂದಿನ ಮೂರು ವರ್ಷ ಸರ್ಕಾರದ ಯಾವುದೇ ಸಹಾಯಧನವನ್ನು ಪಡೆಯಲು ರೈತ ಅರ್ಹನಾಗಿರುವುದಿಲ್ಲ ಎಂದು ಗಮನ ಸೆಳೆದರು.ಉಡುಪಿ ಜಿಲ್ಲೆಯಲ್ಲಿ 1.79 ಲಕ್ಷ ರೈತರಿದ್ದು, 16,750 ಸಣ್ಣ, ಅತಿ ಸಣ್ಣ ರೈತರನ್ನು ಗುರುತಿಸಲಾಗಿದೆ. ಕಂದಾಯ ಇಲಾಖೆಯಲ್ಲಿನ ಸಣ್ಣ ಮತ್ತು ಅತಿ ಸಣ್ಣ ರೈತರ ಪಟ್ಟಿಯಲ್ಲಿ ಹೆಸರಿರುವ ರೈತರ ಅರ್ಜಿಗಳನ್ನು ಮಾತ್ರವೇ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಅರ್ಹ ಮಹಿಳಾ ಅರ್ಜಿದಾರರಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ ಎಂದರು. ಇಲಾಖೆ ನಿಗದಿಪಡಿಸಿದ ವರ್ಗವಾರು, ಜಾತಿವಾರು ಗುರಿಗಿಂತ ಸ್ವೀಕರಿಸಿದ ಅರ್ಜಿ ಹೆಚ್ಚಿಗೆ ಇದ್ದಲ್ಲಿ ಫಲಾನುಭವಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಗುತ್ತಿದೆ ಎಂದರು.ಜಿ.ಪಂ. ಸಿಇಒ ರಾಜಶೇಖರ್ ಹಾಗೂ ಜಂಟಿ ಕೃಷಿ ನಿರ್ದೇಶಕ ಬಿ.ವೈ.ಶ್ರೀನಿವಾಸ ಸುದ್ದಿಗೋಷ್ಠಿಯಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry