ಸುವರ್ಣ ಗ್ರಾಮ ಅಸ್ತಂಗತ?

7

ಸುವರ್ಣ ಗ್ರಾಮ ಅಸ್ತಂಗತ?

Published:
Updated:
ಸುವರ್ಣ ಗ್ರಾಮ ಅಸ್ತಂಗತ?

 ಕರ್ನಾಟಕ ಏಕೀಕರಣಗೊಂಡು 50 ವರ್ಷ ತುಂಬಿದ ನೆನಪಿಗಾಗಿ ರಾಜ್ಯ ಸರ್ಕಾರ ರೂಪಿಸಿರುವ ಮಹತ್ವಾಕಾಂಕ್ಷೆಯ `ಸುವರ್ಣ ಗ್ರಾಮೋದಯ~ ಯೋಜನೆ ಅಗತ್ಯವಿರುವ ಅನುದಾನ, ಇಚ್ಛಾಶಕ್ತಿ, ಸಮನ್ವಯದ ಕೊರತೆಯಿಂದಾಗಿ ಹಾದಿ ತಪ್ಪುತ್ತಿದೆ.

 

ಈ ಯೋಜನೆಯಡಿ ಕೈಗೆತ್ತಿಕೊಂಡಿರುವ ಕಾಮಗಾರಿಗಳ ಅನುಷ್ಠಾನ ಮಂದಗತಿಯಲ್ಲಿ ಸಾಗಿದೆ.ಸುವರ್ಣ ಗ್ರಾಮೋದಯ ಯೋಜನೆಯಡಿ ಆಯ್ಕೆಯಾದ ಗ್ರಾಮಗಳನ್ನು ಸರ್ವಾಂಗೀಣವಾಗಿ ಅಭಿವೃದ್ಧಿಪಡಿಸುವುದು ಸರ್ಕಾರದ ಮುಖ್ಯ ಉದ್ದೇಶವಾಗಿತ್ತು. ಆದರೆ ಆಯ್ಕೆಯಾದ ಗ್ರಾಮಕ್ಕೆ ಒಂದು ಕೋಟಿ ರೂಪಾಯಿ ನೀಡುವ ಬದಲು, ಆ ಗ್ರಾಮದ ಜನಸಂಖ್ಯೆ ಆಧರಿಸಿ ಕಡಿಮೆ ಅನುದಾನ ನೀಡುತ್ತಿರುವುದರಿಂದ ಗ್ರಾಮವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಉದ್ದೇಶ ಈಡೇರುತ್ತಿಲ್ಲ.ಅನುದಾನದ ಕೊರತೆಯಿಂದಾಗಿ ಅನೇಕ ಕಡೆ ಕಾಮಗಾರಿಗಳು ಅಪೂರ್ಣಗೊಂಡಿವೆ. ಕೆಲವೆಡೆ ರಸ್ತೆ, ಚರಂಡಿ ಸೇರಿದಂತೆ ಕೇವಲ ಒಂದೆರಡು ಕಾಮಗಾರಿಗಳನ್ನು ಮಾತ್ರ ತೆಗೆದುಕೊಳ್ಳಲಾಗಿದೆ. ಸ್ಥಳೀಯರ ಅಸಹಕಾರದಿಂದಾಗಿ ಕೆಲವೆಡೆ ಕಾಮಗಾರಿಗಳನ್ನು ತೆಗೆದುಕೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ ಯೋಜನೆ ಅನುಷ್ಠಾನಗೊಂಡು ಆರು ವರ್ಷವಾದರೂ ನಿರೀಕ್ಷಿತ ಮಟ್ಟದ ಗುರಿ ಮುಟ್ಟಲು ಸಾಧ್ಯವಾಗಿಲ್ಲ.`ಸುವರ್ಣ ಕರ್ನಾಟಕ~ ವರ್ಷವನ್ನು ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶದಿಂದ 2006-07ರಲ್ಲಿ ಆಗಿನ ಸಮ್ಮಿಶ್ರ ಸರ್ಕಾರ ರೂಪಿಸಿರುವ `ಸುವರ್ಣ ಗ್ರಾಮೋದಯ~ ಯೋಜನೆಯ ಮುಖ್ಯ ಉದ್ದೇಶ ಹಳ್ಳಿಗಳ ಸಮಗ್ರ ಅಭಿವೃದ್ಧಿ. ಜನರ ಜೀವನಮಟ್ಟವನ್ನು ಸುಧಾರಿಸಲು ಗ್ರಾಮಕ್ಕೆ ಅಗತ್ಯವಿರುವ ರಸ್ತೆ, ಒಳಚರಂಡಿ, ಕುಡಿಯುವ ನೀರು, ಶೌಚಾಲಯ, ವಿದ್ಯುತ್, ಸಮುದಾಯ ಭವನ, ಅಂಗನವಾಡಿ, ಆಸ್ಪತ್ರೆ, ಅಗತ್ಯವಿರುವ ಗ್ರಾಮಗಳಲ್ಲಿ ಹೊಸ ಬಡಾವಣೆಗಳ ನಿರ್ಮಾಣ ಮಾಡುವ ಗುರಿ ಹೊಂದಲಾಗಿತ್ತು.ಅಷ್ಟೇ ಅಲ್ಲದೆ ಕೃಷಿ, ತೋಟಗಾರಿಕೆ, ಅರಣ್ಯ, ಪಶುಸಂಗೋಪನೆ ಮತ್ತು ರೇಷ್ಮೆಯಂತಹ ಭೂ ಆಧಾರಿತ ಚಟುವಟಿಕೆಗಳ ಅಭಿವೃದ್ಧಿಯನ್ನು ಯೋಜನಾ ಬದ್ಧವಾಗಿ ಕೈಗೊಳ್ಳುವುದು. ಕೃಷಿ ಹೊಂಡಗಳ ನಿರ್ಮಾಣ, ಜಲಾನಯನ ಪ್ರದೇಶದ ಅಭಿವೃದ್ಧಿ, ಚೆಕ್‌ಡ್ಯಾಂಗಳ ನಿರ್ಮಾಣ, ತುಂತುರು/ಹನಿ ನೀರಾವರಿಗೆ ಪ್ರೋತ್ಸಾಹ, ನಿರುದ್ಯೋಗಿ ಯುವಕರಿಗೆ ಕೃಷಿಯೇತರ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಕೂಡಾ ಇದರ ಉದ್ದೇಶವಾಗಿತ್ತು.ಒಂದು ಗ್ರಾಮದಲ್ಲಿ ಈ ಎಲ್ಲ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸುಮಾರು 3.29 ಕೋಟಿ ರೂಪಾಯಿ ವೆಚ್ಚವಾಗಬಹುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಅಂದಾಜಿಸಿತ್ತು. ಈ ಪೈಕಿ 2.29 ಕೋಟಿ ರೂಪಾಯಿಯನ್ನು ರಾಜ್ಯ ಮತ್ತು ಜಿಲ್ಲಾ ವಲಯದಡಿ, ಯೋಜನಾ ಕಾರ್ಯಕ್ರಮಗಳಿಗೆ ನಿಗದಿಪಡಿಸಿರುವ ಅನುದಾನದಡಿ ಬಳಸಿಕೊಳ್ಳಲು ಹಾಗೂ ಉಳಿದ ಒಂದು ಕೋಟಿ ರೂಪಾಯಿಯನ್ನು ಸುವರ್ಣ ಗ್ರಾಮೋದಯ ಯೋಜನೆಯಡಿ ವೆಚ್ಚ ಮಾಡಲು ನಿರ್ಧರಿಸಲಾಗಿತ್ತು.ಆರಂಭದಲ್ಲೇ ಹಿನ್ನಡೆ: ರಾಜ್ಯ ಮತ್ತು ಜಿಲ್ಲಾ ವಲಯದ ಅನುದಾನವನ್ನು ಸುವರ್ಣ ಗ್ರಾಮೋದಯ ಯೋಜನೆಗೆ ಬಳಸಿಕೊಳ್ಳುವುದನ್ನು ಕುಂದಾಪುರ ತಾಲ್ಲೂಕಿನ ಎರಡು ಪಂಚಾಯಿತಿಗಳು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದವು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯ ಬೇರೆ ಯೋಜನಾ ಕಾರ್ಯಗಳಿಗೆ ನಿಗದಿಪಡಿಸಿರುವ ಅನುದಾನವನ್ನು ಸುವರ್ಣ ಗ್ರಾಮೋದಯ ಯೋಜನೆಗೆ ಬಳಸಿಕೊಳ್ಳದಂತೆ ಸೂಚಿಸಿತು.

 

ಇದರಿಂದಾಗಿ ಗ್ರಾಮವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಸರ್ಕಾರದ ಆಶಯಕ್ಕೆ ಹಿನ್ನಡೆಯಾಯಿತು. ಸುವರ್ಣ ಗ್ರಾಮೋದಯ ಯೋಜನೆಯ ನೀಲನಕ್ಷೆ ರಸ್ತೆ, ಚರಂಡಿ, ಸಮುದಾಯ ಭವನ, ಅಂಗನವಾಡಿ ಕೇಂದ್ರಗಳಿಗೆ ಕಟ್ಟಡ ನಿರ್ಮಾಣಕ್ಕೆ ಸೀಮಿತವಾಯಿತು. ಅಲ್ಲದೆ ಈ ಯೋಜನೆಯಡಿ ಆಯ್ಕೆಯಾದ ಎಲ್ಲ ಗ್ರಾಮಗಳಿಗೆ ಒಂದು ಕೋಟಿ ರೂಪಾಯಿ ಅನುದಾನವೂ ದೊರೆಯಲಿಲ್ಲ.ಒಬ್ಬ ವ್ಯಕ್ತಿಗೆ ರೂ 2,500ದಂತೆ 2001ರ ಜನಗಣತಿ ಆಧರಿಸಿ ಗ್ರಾಮದಲ್ಲಿನ ಜನಸಂಖ್ಯೆಗೆ ಅನುಗುಣವಾಗಿ ಅನುದಾನವನ್ನು ಬಿಡುಗಡೆ ಮಾಡಲಾಗುತ್ತಿದೆ. ಗ್ರಾಮದಲ್ಲಿ ಒಂದು ಸಾವಿರ ಜನಸಂಖ್ಯೆ ಇದ್ದರೆ ನಿಯಮಾವಳಿ ಪ್ರಕಾರ ಆ ಗ್ರಾಮಕ್ಕೆ 25 ಲಕ್ಷ ರೂಪಾಯಿ ಅನುದಾನ ದೊರೆಯುತ್ತದೆ. ಆದರೆ ಇಷ್ಟು ಕಡಿಮೆ ಅನುದಾನದಲ್ಲಿ ಗ್ರಾಮವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಆಗುತ್ತಿಲ್ಲ ಎಂಬುದು ಶಾಸಕರ ಅಳಲು. ನಿಯಮಾವಳಿ ಪ್ರಕಾರ ಗ್ರಾಮದಲ್ಲಿ ಸಿಮೆಂಟ್ ರಸ್ತೆ ನಿರ್ಮಿಸಬೇಕು.

 

ರಸ್ತೆಯಲ್ಲಿ ನೀರು ಹರಿಯದಂತೆ ಸೂಕ್ತ ಚರಂಡಿ ವ್ಯವಸ್ಥೆ ಮಾಡಬೇಕು. ಸಮುದಾಯ ಭವನ, ಅಂಗನವಾಡಿ ಕಟ್ಟಡಗಳನ್ನು ನಿರ್ಮಿಸಬೇಕು. ಆದರೆ ಸರ್ಕಾರ ನೀಡುವ ಅನುದಾನ ರಸ್ತೆ, ಚರಂಡಿಗೆ ಸಾಕಾಗುವುದಿಲ್ಲ. ಇದರಿಂದಾಗಿ ಅನೇಕ ಕಡೆ ಇಂದಿಗೂ ಸಮುದಾಯ ಭವನ, ಅಂಗನವಾಡಿ ಕಟ್ಟಡಗಳ ನಿರ್ಮಾಣವಾಗಿಲ್ಲ.ಸ್ಥಳೀಯರ ಆಸಕ್ತಿಯಿಂದಾಗಿ ಬೀದರ್ ಜಿಲ್ಲೆಯ ನಿಡುವಂಚಿ ಗ್ರಾಮದಲ್ಲಿ ಈ ಯೋಜನೆ ಉತ್ತಮವಾಗಿ ಅನುಷ್ಠಾನಗೊಂಡಿದೆ. ಗುಣಮಟ್ಟದ ಸಿಮೆಂಟ್ ರಸ್ತೆಗಳ ನಿರ್ಮಾಣವಾಗಿದೆ. ಆದರೆ ತುಮಕೂರು ಜಿಲ್ಲೆಯ ಚೇಳೂರು ಗ್ರಾಮದಲ್ಲಿ ಕಳಪೆ ಕಾಮಗಾರಿಗಳು ನಡೆದಿವೆ. ಸಿಮೆಂಟ್ ರಸ್ತೆ ನಿರ್ಮಾಣವಾಗಿಲ್ಲ. ಅಂಗನವಾಡಿ ಕಟ್ಟಡ ನಿರ್ಮಾಣ ಕಾರ್ಯ ಅರ್ಧಕ್ಕೆ ನಿಂತಿದೆ. ಬಹುತೇಕ ಕಡೆ ಗುಣಮಟ್ಟ ಚೆನ್ನಾಗಿದೆ. ಕೆಲವೆಡೆ ಕಾಮಗಾರಿಗಳ ಗುಣಮಟ್ಟ ಕಳಪೆಯಾಗಿರಬಹುದು ಎನ್ನುತ್ತಾರೆ ಅಧಿಕಾರಿಗಳು.ಯೋಜನೆಯ ಉದ್ದೇಶದ ಬಗ್ಗೆ ಯಾರಿಂದಲೂ ಅಪಸ್ವರ ಕೇಳಿ ಬರುತ್ತಿಲ್ಲ. ಆದರೆ ಅನುಷ್ಠಾನ ಹಂತದಲ್ಲಿನ ಲೋಪಗಳನ್ನು ಸರಿಪಡಿಸಬೇಕು ಎಂಬ ಮಾತುಗಳು ಕೇಳಿ ಬರುತ್ತಿವೆ. `ಅನುದಾನವನ್ನು ಹೆಚ್ಚಿಸಬೇಕು, ಶಾಸಕರು, ಅಧಿಕಾರಿಗಳು ಸರಿಯಾಗಿ ಮೇಲ್ವಿಚಾರಣೆ ನಡೆಸಬೇಕು.ಒಂದು ಗ್ರಾಮದಲ್ಲಿನ ಕಾಮಗಾರಿಗಳು ಪೂರ್ಣಗೊಳ್ಳುವವರೆಗೂ ಮತ್ತೊಂದು ಗ್ರಾಮವನ್ನು ಈ ಯೋಜನೆಗೆ ಆಯ್ಕೆ ಮಾಡಬಾರದು, ಕಾಲ ಕಾಲಕ್ಕೆ ಅನುದಾನ ಬಿಡುಗಡೆಯಾಗಬೇಕು, ಹಂಚಿಕೆಯಾಗಿರುವ ಅನುದಾನಕ್ಕೆ ಸೀಮಿತವಾಗಿ ಕ್ರಿಯಾ ಯೋಜನೆ ರೂಪಿಸಬೇಕು ಮತ್ತು ಕಾಲಮಿತಿಯಲ್ಲಿ ಅನುಷ್ಠಾನಗೊಳಿಸಬೇಕು~ ಎನ್ನುವುದು ಜನತೆ ಮತ್ತು ಜನಪ್ರತಿನಿಧಿಗಳ ಅಭಿಪ್ರಾಯ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry