ಭಾನುವಾರ, ಏಪ್ರಿಲ್ 18, 2021
23 °C

ಸುವರ್ಣ ಭೂಮಿ: ಅರ್ಜಿಗಾಗಿ ಪರದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುವರ್ಣ ಭೂಮಿ: ಅರ್ಜಿಗಾಗಿ ಪರದಾಟ

 ಸುವರ್ಣ ಭೂಮಿ ಯೋಜನೆ ಯಲ್ಲಿ ರೈತರಿಗೆ ವಿವಿಧ ಷರತ್ತುಗಳು ಅನ್ವಯಿಸುತ್ತಿವೆ. ಅಲ್ಲದೇ  ಅರ್ಜಿ ಪಡೆಯಬೇಕ್ರಾೂ ಫಜೀತಿ ಪಡಬೇಕಾದ ಅನಿವಾರ್ಯತೆ ಇದೆ. ವಿವಿಧೆಡೆ ಯೋಜನೆಯ ಬುಧವಾರ ನಡೆದ ಜಟಾಪಟಿ ಇಲ್ಲಿದೆ.ಸೇಡಂ ವರದಿ

ಸುವರ್ಣ ಭೂಮಿ ಯೋಜನೆ ಅಡಿಯಲ್ಲಿ 5 ಎಕರೆಗಿಂತ ಕಡಿಮೆ ಇರುವ ಖುಷ್ಕಿ ಭೂಮಿಯ ಸಣ್ಣ ರೈತರ ಪುನರುಜ್ಜೀವನಕ್ಕಾಗಿ ಪ್ರತಿ ಕುಟುಂಬಕ್ಕೆ 2 ಎಕರೆಗೆ 10 ಸಾವಿರ ರೂ.ಗಳನ್ನು ಎರಡು ಕಂತುಗಳಲ್ಲಿ ಸಹಾಯ ಧನ ವಿತರಿಸಲು ಅರ್ಜಿಗಳನ್ನು ಅಹ್ವಾನಿಸಲಾಗಿದೆ ಎಸಂದು ಸಹಾಯಕ ಕೃಷಿ ನಿರ್ದೇಶಕ ಡಾ. ಡಿ. ಲಿಂಗಮಾಂತು ತಿಳಿಸಿದ್ದಾರೆ.ಅರ್ಜಿದಾರರು ಸ್ವತಃ ರೈತ ಸಂಪರ್ಕ ಕೇಂದ್ರಗಳಿಗೆ ಬಂದು ಸಣ್ಣ ರೈತ ಎಂದು ಖಚಿತ ಪಡಿಸಲು ಪಹಣಿ, ಹೋಲ್ಡಿಂಗ್, ಭಾವಚಿತ್ರ ಹೊಂದಿರುವ ಗುರುತಿನ ಚೀಟಿ, ಒಂದು ಭಾವ ಚಿತ್ರ ಮತ್ತು ಬ್ಯಾಂಕ್ ಖಾತೆ ಸಂಖ್ಯೆ ಒಳಗೊಂಡ ಸಂಪೂರ್ಣ ಮಾಹಿತಿಯನ್ನು ಅರ್ಜಿ ನಮೂನೆಯಲ್ಲಿ ಭರ್ತಿ ಮಾಡಲು ಅವರು ವಿನಂತಿಸಿದ್ದಾರೆ.ಅರ್ಜಿಗಳು ಸರ್ಕಾರ ನಿಗಡಿಪಡಿಸಿದ ಗುರಿಗಿಂತ ಹೆಚ್ಚಾದಲ್ಲಿ ಫಲಾನುಭವಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಗುವುದು. ಸಣ್ಣ ರೈತರಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ, ಸಾವಯವ ಕೃಷಿ, ಜೈವಿಕ ಇಂಧನ ಬೆಳೆಗಾರರು, ರೇಷ್ಮೆ, ತೋಟಗಾರಿಕೆ, ಮೀನುಗಾರಿಕೆಗಳಲ್ಲಿ ವೈಜ್ಞಾನಿಕವಾಗಿ ತೊಡಗಿಸಿಕೊಂಡವರಿಗೆ ಶೇಕಡವಾರು ಆದ್ಯತೆ ನೀಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.ವೈಜ್ಞಾನಿಕವಾಗಿ ಹೊಸ ತಳಿ ಬೀಜ, ಬೀಜೋಪಚಾರ ಔಷಧಿ, ಲಘು ಪೋಷಕಾಂಶಗಳು, ಜೈವಿಕ ಗೊಬ್ಬರ ಮತ್ತು ಕೀಟನಾಶಕ ಔಷಧಿಗಳನ್ನು ಬಳಸಿ ಕೃಷಿಯಲ್ಲಿ ತೊಡಗಿಸಿಕೊಳ್ಳದವರಿಗೆ 2ನೇ ಕಂಡಿನ ಅನುದಾನ 5 ಸಾವಿರ ರೂ.ಗಳನ್ನು ತಡೆಹಿಡಿಯಲಾಗುವುದು. ಅರ್ಜಿಗಳನ್ನು ಸ್ವೀಕರಿಸಲು ಏಪ್ರಿಲ್ 25 ಕಡೆ ದಿನವಾಗಿರುತ್ತದೆ. ಹೆಚ್ಚಿನ ಮಾಹಿತಿಗೆ ತಮ್ಮ ವ್ಯಾಪ್ತಿಯ ರೈತ ಸಂಪರ್ಕ ಕೆಂದ್ರಗಳ ಮುಖ್ಯಸ್ಥರನ್ನು ಇಲ್ಲವೇ ತಮ್ಮನ್ನು ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ 93419 55566 ಹಾಗೂ 94490 89589 ಮೂಲಕ ಸಂಪರ್ಕಿಸಲು ಅವರು ವಿನಂತಿಸಿದ್ದಾರೆ.ಕಾಳಗಿ ವರದಿ

ರಾಜ್ಯದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಸಣ್ಣ ಹಾಗೂ ಅತಿ ಸಣ್ಣ ರೈತ ಕುಟುಂಬಗಳ ಆರ್ಥಿಕ ಸ್ಥಿತಿ ಸುಧಾರಿಸುವ ಹಿನ್ನೆಲೆಯಲ್ಲಿ ಸರ್ಕಾರ ಜಾರಿಗೆ ತಂದಿರುವ ‘ಸುವರ್ಣ ಭೂಮಿ ಯೋಜನೆ’ಗೆ ಅರ್ಜಿ ಸಲ್ಲಿಸಲು ಮುಗಿಬಿದ್ದ ರೈತರ ದೃಶ್ಯ ರೈತ ಸಂಪರ್ಕ ಕೇಂದ್ರದಲ್ಲಿ ಬುಧವಾರ ಕಂಡುಬಂತು.ಐದು ಎಕರೆಗಿಂತ ಕಡಿಮೆ ವಿಸ್ತೀರ್ಣ ಹೊಂದಿರುವ ಸಣ್ಣ, ಅತಿ ಸಣ್ಣ ಮತ್ತು ಪರಿಶಿಷ್ಟ ಜಾತಿ, ಪಂಗಡದ ರೈತರು ಈ ಯೋಜನೆಯ ಫಲಾನುಭವಿಗಳಾಗಿದ್ದು, ಅರ್ಜಿ ಸಲ್ಲಿಕೆಗೆ ಇದೇ 25 ಕೊನೇ ದಿನವಾಗಿದೆ ಎಂದು ತಿಳಿದುಬಂದಿದೆ.ಈ ನಿಮಿತ್ತ ಪ್ರಸಕ್ತ ಸಾಲಿನ ಹೋಲ್ಡಿಂಗ್, ಗುರುತಿನ ಚೀಟಿ, ಬ್ಯಾಂಕ್ ಪಾಸ್‌ಬುಕ್ ಝರಾಕ್ಸ್, ಪಾಸ್‌ಪೋರ್ಟ್ ಫೋಟೊ ಲಗತ್ತಿಸಿದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಬಿರುಸಿನಿಂದ ಸಾಗಿದೆ. ಇದರಿಂದಾಗಿ ಆಯಾ ಗ್ರಾಮ ಲೇಖಪಾಲಕರು ಕರ್ತವ್ಯದ ಸ್ಥಳ ಬಿಟ್ಟು ಕದಲದಂತಾಗಿ ಹೋಲ್ಡಿಂಗ್ ನೀಡುವುದರಲ್ಲಿ ಮಗ್ನರಾಗಿದ್ದಾರೆ. ಜೆರಾಕ್ಸ್ ಅಂಗಡಿ, ಫೋಟೊ ಸ್ಟುಡಿಯೋಗಳಿಗೆ ಹೆಚ್ಚಿನ ಕೆಲಸ ದೊರೆತಂತಾಗಿದೆ ಎಂಬ ಮಾತು ಕೇಳಿ ಬರುತ್ತಿವೆ.ವಿಪರ್ಯಾಸದ: ಚಿತ್ತಾಪುರ ತಾಲ್ಲೂಕಿನಲ್ಲಿ ಎಷ್ಟೇ ಅರ್ಜಿಗಳು ಸಲ್ಲಿಕೆಯಾಗಿದ್ದರೂ ಕೇವಲ ಮೂರು ಸಾವಿರದ ಐದನೂರ ರೈತರಿಗೆ ಮಾತ್ರ ಲಾಟರಿ ಮುಖಾಂತರ ಸಹಾಯಧನ ಸಿಗಲಿದೆ. ಉಳಿದವರಿಗೆ ಏನೆಂಬ ಪ್ರಶ್ನೆ ರೈತವರ್ಗದಲ್ಲಿ ಭುಗಿಲೆದ್ದಿದೆ.ಅಫಜಲಪುರ ವರದಿ

ರಾಜ್ಯ ಸರ್ಕಾರ ಜಾರಿಗೆ ತಂದಿರುವ ಸುವರ್ಣ ಭೂಮಿ ಯೋಜನೆಯಡಿ ಸಣ್ಣ ಹಾಗೂ ಅತಿ ಸಣ್ಣ ರೈತರಿಗಾಗಿ ಮೇ ಮೊದಲ ವಾರದಲ್ಲಿ 5 ಸಾವಿರ ರೂಪಾಯಿ ಸಹಾಯಧನ ನೀಡುವುದಾಗಿ ಸರ್ಕಾರ ಘೋಷಣೆ ಮಾಡಿದ್ದರಿಂದ, ಒಂದು ಕಡೆ ಅರ್ಜಿಗಾಗಿ ರೈತರು ಪರದಾಡಿದರೆ ಇನ್ನೊಂದು ಕಡೆ ಅರ್ಜಿಯನ್ನು ನೀಡಲು ಪರದಾಡುವಂತಾಗಿದೆ.ರಾಜ್ಯದಲ್ಲಿ 10 ಲಕ್ಷ ಸಣ್ಣ ಮತ್ತು ಅತಿ ಸಣ್ಣ ರೈತರನ್ನು ಗುರುತಿಸಿ ಅವರು ಹೈನುಗಾರಿಕೆ, ತೋಟಗಾರಿಕೆ ಸಾವಯವ ಕೃಷಿಯನ್ನು ಕೈಗೊಳ್ಳಲು ಹತ್ತು ಸಾವಿರ ರೂಪಾಯಿ ನೀಡಲು ಮುಂದಾಗಿದೆ. ಮೊದಲ ಕಂತಾಗಿ ಮೇ ಮೊದಲ ವಾರದಲ್ಲಿ 5 ಸಾವಿರ ರೈತರ ಖಾತೆಗೆ ನೀಡಲು ಸರ್ಕಾರ ನಿರ್ಧರಿಸಿದೆ ಹೀಗಾಗಿ ರೈತರು ಅರ್ಜಿ ನೀಡಲು ಮುಂದಾಗಿದ್ದಾರೆ.ಈ ಯೋಜನೆ ಬಗ್ಗೆ ಯಾರಿಗೂ ಸರಿಯಾದ ಮಾಹಿತಿ ಇಲ್ಲ. ಆದರೂ ಸಹಾಯಧನಕ್ಕಾಗಿ ಅರ್ಜಿ ನೀಡಲು ಹಳ್ಳಿಯಿಂದ ರೈತರು ತಂಡೋಪತಂಡವಾಗಿ ಬರುತ್ತಿದ್ದಾರೆ. ಏ.24 ಕೊನೆಯ ದಿನವೆಂದು ಹೇಳಲಾಗುತ್ತಿದೆ.  ಅದರೆ ಇನ್ನೂ ಮುಕ್ಕಾಲು ಭಾಗ ಸಣ್ಣ ರೈತರು ಅರ್ಜಿ ನೀಡಿಲ್ಲ. ಹೀಗಾಗಿ ಈ ಯೋಜನೆ ಬಗ್ಗೆ ಈಗಲೇ ಅಪಸ್ವರ ಎದ್ದಿದೆ.ಎರಡು ವರ್ಷಗಳ ಹಿಂದೆ ಸರ್ಕಾರ ಬೀಜ, ಗೊಬ್ಬರಕ್ಕಾಗಿ ಪ್ರತಿ ರೈತರಿಗೆ ರೂ. 2 ಸಾವಿರ ಸಹಾಯಧನ ನೀಡುವುದಾಗಿ ಘೋಷಿಸಿತ್ತು, ಆದರೆ ಇದು ಎಲ್ಲ ರೈತರಿಗೆ ಸಹಾಯಧನ ಬಂದು ಮುಟ್ಟಲಿಲ್ಲ. ಹೀಗಾಗಿ ರೈತರು ಅರ್ಜಿ ನೀಡುವಾಗಲೇ ಇದರ ಬಗ್ಗೆ ಅನುಮಾನ ಪಡುತ್ತಿದ್ದಾರೆ. ಒತ್ತಾಯ: ತಾಲ್ಲೂಕಿನ ಬಂದರವಾಡ ಗ್ರಾಮದಲ್ಲಿ 350 ಸಣ್ಣ ರೈತರಿದ್ದಾರೆ. ಆದರೆ ಕೃಷಿ ಸಹಾಯಕರು ಕೇವಲ 70 ಅರ್ಜಿಗಳನ್ನು ನೀಡಿದ್ದಾರೆ. ಅದು ಬೇಕಾದವರಿಗೆ ನೀಡಲಾಗಿದೆ. ಹೀಗಾಗಿ ಬಡ ಸಣ್ಣ ರೈತರು ಅರ್ಜಿ ಪಡೆಯಲು ಗೋಳಾಡುವಂತಾಗಿದೆ. ಸರ್ಕಾರ ಪ್ರತಿ ಗ್ರಾಮಕ್ಕೆ ಅರ್ಜಿಗಳನ್ನು ಸಾಕಷ್ಟು ನೀಡಬೇಕು ಅರ್ಜಿ ನೀಡಲು ಕೊನೆಯ ದಿನಾಂಕವನ್ನು ಇನ್ನೂ ಒಂದು ವಾರ ಹೆಚ್ಚಿಸಬೇಕು ಎಂದು ರೈತ ಮುಖಂಡ ಲಕ್ಷ್ಮಣ ಕಟ್ಟಿಮನಿ ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.