ಸುವರ್ಣ ಭೂಮಿ ಯೋಜನೆ ಎಲ್ಲ ರೈತರಿಗೂ ಕಡ್ಡಾಯ

ಭಾನುವಾರ, ಜೂಲೈ 21, 2019
22 °C

ಸುವರ್ಣ ಭೂಮಿ ಯೋಜನೆ ಎಲ್ಲ ರೈತರಿಗೂ ಕಡ್ಡಾಯ

Published:
Updated:

ಬೆಂಗಳೂರು:  ರಸಗೊಬ್ಬರ ಹಾಗೂ ಬೀಜಗಳನ್ನು ಖರೀದಿ ಮಾಡುವ ರೈತರಿಗೆ 10 ಸಾವಿರ ರೂಪಾಯಿಗಳ ಸಹಾಯಧನ ನೀಡುವ ಸರ್ಕಾರದ `ಸುವರ್ಣ ಭೂಮಿ~ ಯೋಜನೆಯ ಲಾಭ ರಾಜ್ಯದ  ಎಲ್ಲ ಫಲಾನುಭವಿ ರೈತರಿಗೂ ಕಡ್ಡಾಯವಾಗಿ ದೊರಕುವಂತೆ ಮಾಡಬೇಕು ಎಂದು ಹೈಕೋರ್ಟ್ ಮಂಗಳವಾರ ಆದೇಶಿಸಿದೆ.ಈ ಆದೇಶದಿಂದಾಗಿ, ಯೋಜನೆಯನ್ನು ಇನ್ನೂ ಕನಿಷ್ಠ ಐದು ವರ್ಷಗಳವರೆಗೆ ಚಾಲ್ತಿಯಲ್ಲಿ ಇಡುವ ಅನಿವಾರ್ಯತೆ ಅಧಿಕಾರಕ್ಕೆ ಬರುವ ಸರ್ಕಾರಗಳ ಮೇಲಿದೆ.ಕಾರಣ, ಈ ಯೋಜನೆಯ ಫಲಾನುಭವಿಗಳ ಸಂಖ್ಯೆ ರಾಜ್ಯದಲ್ಲಿ ಸುಮಾರು 52 ಲಕ್ಷ ಇದೆ. ಪ್ರತಿವರ್ಷ 10 ಲಕ್ಷ ರೈತರಿಗೆ ಮಾತ್ರ ಧನಸಹಾಯ ನೀಡಬಹುದಾಗಿದೆ ಎಂದು ಅಡ್ವೊಕೇಟ್ ಜನರಲ್ ಅಶೋಕ ಹಾರ‌್ನಹಳ್ಳಿ ಅವರು ಕೋರ್ಟ್‌ಗೆ ತಿಳಿಸಿದರು. ಎಲ್ಲ ಫಲಾನುಭವಿಗಳು ಧನಸಹಾಯ ಪಡೆಯುವವರೆಗೆ ಒಂದು ಬಾರಿ ಯೋಜನೆಯ ಲಾಭ ಪಡೆದ ರೈತರು ಮತ್ತೊಮ್ಮೆ ಪಡೆದುಕೊಳ್ಳಲಾಗದು ಎಂದು ಅವರು ವಿವರಿಸಿದರು.ಇದನ್ನು ಗಣನೆಗೆ ತೆಗೆದುಕೊಂಡರೆ ಐದು ವರ್ಷಗಳವರೆಗೆ ಯೋಜನೆಯನ್ನು ಸರ್ಕಾರ ಮುಂದುವರಿಸಬೇಕಾಗುತ್ತದೆ.`ಬಜೆಟ್‌ನಲ್ಲಿ ಹಣ ಮೀಸಲು ಇರಿಸಿದರೆ ಮಾತ್ರ ರೈತರಿಗೆ ಧನಸಹಾಯ ನೀಡಲಾಗುವುದು~ ಎಂಬ ಹಾರ‌್ನಹಳ್ಳಿ ಅವರ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ಕೋರ್ಟ್, `ಸಾಧ್ಯವೇ ಇಲ್ಲ. ಎಲ್ಲ ರೈತರಿಗೂ ಈ ಯೋಜನೆಯ ಲಾಭ ನೀಡುವುದು ಕಡ್ಡಾಯ~ ಎಂದು ಸ್ಪಷ್ಟಪಡಿಸಿತು.ಯೋಜನೆಯ ಫಲಾನುಭವಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡುತ್ತಿರುವುದನ್ನು ಪ್ರಶ್ನಿಸಿ ವಕೀಲ ಟಿ.ವೈ. ಕಾಟ್ವಾ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಕೇಹರ್ ಹಾಗೂ ನ್ಯಾಯಮೂರ್ತಿ ಎಚ್.ಜಿ.ರಮೇಶ್ ಅವರನ್ನು ಒಳಗೊಂಡ ವಿಭಾಗೀಯ ಪೀಠ ನಡೆಸಿತು. ಲಾಟರಿ ಮೂಲಕ ಫಲಾನುಭವಿಗಳ ಆಯ್ಕೆಯನ್ನು ಪೀಠ ಎತ್ತಿ ಹಿಡಿದರೂ ಮೇಲಿನಂತೆ ನಿರ್ದೇಶಿಸಿದೆ.ಸರ್ಕಾರದ ಸ್ಪಷ್ಟನೆ: ಐದು ಎಕರೆಗಳಿಗಿಂತ ಕಡಿಮೆ ಜಮೀನು ಉಳ್ಳವರಿಗೆ ಧನಸಹಾಯ ನೀಡಲಾಗುತ್ತಿದೆ. ಒಂದು ಎಕರೆ ಜಮೀನು ಉಳ್ಳ ರೈತ ಐದು ಎಕರೆ ಜಮೀನು ಉಳ್ಳವರಿಗಿಂತ ಬಡವರಾಗಿರುತ್ತಾರೆ. ಅವರಿಗೆ ಅನ್ಯಾಯ ಆಗುವ ಸಾಧ್ಯತೆ ಇದೆ ಎನ್ನುವುದು ಅರ್ಜಿದಾರರ ಮುಖ್ಯ ವಾದವಾಗಿತ್ತು. ಆದರೆ ಅದಕ್ಕೆ ಸ್ಪಷ್ಟನೆ ನೀಡಿದ ಹಾರ‌್ನಹಳ್ಳಿ ಅವರು, `ಈ ಯೋಜನೆ ಖುಷ್ಕಿ ಜಮೀನು (ಒಣ ಭೂಮಿ) ಹೊಂದಿರುವ ರೈತರಿಗೆ ಮಾತ್ರ ಅನ್ವಯ ಆಗುತ್ತದೆ. ಇಂತಹ ಜಮೀನು ಹೊಂದಿರುವ ರೈತ ಎಷ್ಟೇ ವಿಸ್ತಾರವಾದ ಭೂಮಿ ಹೊಂದಿದ್ದರೂ ಆತ ಕಡುಬಡವನೇ. ಅರ್ಜಿದಾರರ ವಾದದಂತೆ ಕಡಿಮೆ ಬಡವ, ಬಡವರಲ್ಲಿ ಸಿರಿವಂತ ಎನ್ನುವ ಮಾತೇ ಇಲ್ಲ~ ಎಂದರು. ಈ ಮಾತನ್ನು ಪೀಠ ಒಪ್ಪಿಕೊಂಡಿತು.`52 ಲಕ್ಷ ರೈತರ ಪೈಕಿ 21 ಲಕ್ಷ ಮಂದಿ ಈಗಾಗಲೇ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ~ ಎಂದು ಹಾರ‌್ನಹಳ್ಳಿ ವಿವರಿಸಿದರು. ಅರ್ಜಿಯನ್ನು ಪೀಠ ಇತ್ಯರ್ಥಗೊಳಿಸಿತು.ಚುನಾವಣೆ ನಂತರ...?

ಸುವರ್ಣ ಭೂಮಿ ಯೋಜನೆಯನ್ನು ಸರ್ಕಾರ ಮುಂದುವರಿಸುವುದೋ ಇಲ್ಲವೋ ಎಂಬುದನ್ನು ಹಾಸ್ಯ ಚಟಾಕಿಯ ರೂಪದಲ್ಲಿ ಪ್ರಶ್ನಿಸಿದ ನ್ಯಾ. ಕೇಹರ್ ಅವರು, `ಈ ಸಾಲಿನಲ್ಲಿ ಮೊದಲ ಕಂತಿನ ಹಣ ಬಿಡುಗಡೆಯಾಗುವುದು ಎಂದು ನೀವು (ಸರ್ಕಾರ) ಹೇಳಿದ್ದೀರಿ. ಹಾಗಿದ್ದರೆ ಎರಡನೇ ಹಂತದ ಹಣ ಬಿಡುಗಡೆಯಾಗುವುದು ಯಾವಾಗ? ಹಣ ಬಿಡುಗಡೆಯ ನಂತರ ಚುನಾವಣೆ ಇದೆಯೋ ಅಥವಾ ಮೊದಲೇ ಇದೆಯೋ ಎಂದು ಅಡ್ವೊಕೇಟ್ ಜನರಲ್ ಅಶೋಕ ಹಾರ‌್ನಹಳ್ಳಿ ಅವರನ್ನು ಪ್ರಶ್ನಿಸಿದರು. ಅದಕ್ಕೆ ಏನು ಉತ್ತರಿಸುವುದು ಎಂದು ಗೊತ್ತಾಗದೆ ಹಾರ‌್ನಹಳ್ಳಿ ಅವರು ನಕ್ಕು ಸುಮ್ಮನಾದರು!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry