ಸುವರ್ಣ ಮಹೋತ್ಸವದ ಶಾಲೆಗೆ ಕುಸಿತದ ಭೀತಿ

7

ಸುವರ್ಣ ಮಹೋತ್ಸವದ ಶಾಲೆಗೆ ಕುಸಿತದ ಭೀತಿ

Published:
Updated:
ಸುವರ್ಣ ಮಹೋತ್ಸವದ ಶಾಲೆಗೆ ಕುಸಿತದ ಭೀತಿ

ಕಾರ್ಗಲ್:  ಸುವರ್ಣ ಮಹೋತ್ಸವ ಸಂಭ್ರಮದ ಇಲ್ಲಿನ ಲಿಂಗನಮಕ್ಕಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ಕುಸಿತದ ಭೀತಿ ಆವರಿಸಿದೆ.1957ರಲ್ಲಿ ಸ್ಥಾಪನೆಯಾದ ಈ ಶಾಲೆಯಲ್ಲಿ ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀ ಸೇರಿದಂತೆ ಅನೇಕ ಮಹನೀಯರು ಪ್ರಾಥಮಿಕ ಶಿಕ್ಷಣ ಪೂರೈಸಿದ್ದಾರೆ.   2008ರಲ್ಲಿ ಈ ಶಾಲೆಗೆ ಸುವರ್ಣ ವರ್ಷಾಚಾರಣೆಯ ಭಾಗ್ಯ ಒದಗಿಬಂದಿತ್ತು.  ವಿದ್ಯಾರ್ಥಿಗಳು, ಶಾಲಾ ನಿರ್ವಹಣಾ ಸಮಿತಿಯೊಂದಿಗೆ ಮಾಜಿ ವಿದ್ಯಾರ್ಥಿಗಳು ಸೇರಿ ಅದ್ದೂರಿಯಾಗಿ ಸುವರ್ಣ ಮಹೋತ್ಸವ ಆಚರಿಸಿದ್ದರು.ಅಂದಿನ ಕಾರ್ಯಕ್ರಮದಲ್ಲಿ ಮಾತನಾಡಿದ ರಾಘವೇಶ್ವರ ಸ್ವಾಮೀಜಿ,   ಶಾಲೆಯನ್ನು ದತ್ತು ತೆಗೆದುಕೊಳ್ಳುವ ಇಚ್ಛೆ ವ್ಯಕ್ತಪಡಿಸಿದರು. ಅಂತೆಯೇ ಶಿಕ್ಷಣ ಇಲಾಖೆ ಶಾಲೆಯನ್ನು ಮಠದ ಸುಪರ್ದಿಗೆ ಕಾನೂನುಬದ್ಧವಾಗಿ ದತ್ತು ನೀಡಿತು. 2010ರ ಜನವರಿಯಲ್ಲಿ ಈ ಬಗ್ಗೆ ಅಧಿಕೃತ ಪತ್ರಕ್ಕೂ ಅಂಕಿತವಾಯಿತು. ಮೇಲ್ವಿಚಾರಣೆಗೆ, ದತ್ತು ಯೋಜನಾ ಸಮಿತಿ ಎಂದು 10 ಸದಸ್ಯರ ತಂಡ ರಚನೆಯಾಯಿತು.50 ವರ್ಷದಿಂದ ಶಾಲೆಯ ಮೇಲ್ವಿಚಾರಣೆ ನಡೆಸಿ, ಅಭಿವೃದ್ಧಿಗೆ ತನ್ನದೇ ಆದ ಕೊಡುಗೆಗಳನ್ನು ನೀಡುತ್ತಿದ್ದ ಕೆಪಿಸಿ ಶಾಲಾಡಳಿತದಿಂದ ಸಂಪೂರ್ಣವಾಗಿ ಹೊರನಡೆದಿದೆ.`ಇಂದು ಶಾಲೆಯ ಕೊಠಡಿಗಳ ಮೇಲ್ಛಾವಣಿ ಕುಸಿದು ಬೀಳುವ ಸಂಭವವಿರುವುದರಿಂದ ಶಿಕ್ಷಕರು ಮಕ್ಕಳಿಗೆ ಶಾಲೆಯ ಹೊರ ಆವರಣದಲ್ಲಿ ಪಾಠ ಹೇಳಿ ಕೊಡುವ ದುಸ್ಥಿತಿ ನಿರ್ಮಾಣವಾಗಿದೆ. ಶಾಲೆಯ ಬೆಳವಣಿಗೆಗೆ ಬೇಕಾದ ಚಟುವಟಿಕೆಗಳು ನಡೆಯುತ್ತಿಲ್ಲ~ ಎಂದು ಶಿಕ್ಷಕ ಹಿರಣ್ಣಯ್ಯ ನೊಂದು ನುಡಿಯುತ್ತಾರೆ.ಕಟ್ಟಡದ ಮೇಲ್ಛಾವಣಿ ಕುಸಿಯುವ ಅಪಾಯವಿದೆ. ಒಮ್ಮೆ ಪಕ್ಕಾಸು ಮುರಿದು ಬಿದ್ದಾಗ ತಾವು ಮತ್ತು ಮಕ್ಕಳು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದೇವೆ ಎಂದು ಅವರು ಆತಂಕ ವ್ಯಕ್ತಪಡಿಸುತ್ತಾರೆ.`ಈ ಶಾಲೆಯಲ್ಲಿ  49 ಮಕ್ಕಳು ಓದುತ್ತಿದ್ದು, 3 ಶಿಕ್ಷಕರಿದ್ದಾರೆ. ಇಲಾಖೆಯಿಂದ ದೊರಕುತ್ತಿರುವ ಅಲ್ಪ ಸಹಾಯ ಸಾಲುತ್ತಿಲ್ಲ~ ಎಂದು ಮುಖ್ಯ ಶಿಕ್ಷಕ ಬಸವರಾಜ್ ಹೇಳುತ್ತಾರೆ.ಶಾಲೆ ನಿರ್ವಹಣೆಗೂ ನಮಗೂ ಸಂಬಂಧವಿಲ್ಲ. ಶಾಲೆ ನಿರ್ವಹಣೆ ದತ್ತು ಪಡೆದವರ ಜವಾಬ್ದಾರಿ ಎಂದು ಕೆಪಿಸಿ  ಎಂಜಿನಿಯರ್ ಜೆ.ಕೆ. ಚಂದ್ರಶೇಖರ್ ಉತ್ತರಿಸುತ್ತಾರೆ. ಶಾಲೆ ಅಭಿವೃದ್ಧಿ ಕುರಿತು ಕೆಪಿಸಿ, ಮಠ, ಶಿಕ್ಷಣ ಇಲಾಖೆ ಒಟ್ಟಾಗಿ ಕುಳಿತು ಯೋಜನೆ ರೂಪಿಸಬೇಕು ಎಂಬುದು ಈ ಶಾಲೆ ಹಳೇ ವಿದ್ಯಾರ್ಥಿ ಪಿ. ಮುರುಗೇಶ್ ಅವರ ಅಭಿಪ್ರಾಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry