ಭಾನುವಾರ, ಜೂನ್ 20, 2021
24 °C
ಶೈಕ್ಷಣಿಕ ಅಂಗಳ

ಸುವರ್ಣ ಮಹೋತ್ಸವದ ಹೊಸ್ತಿಲಲ್ಲಿ ಪ್ರೌಢಶಾಲೆ

ಪ್ರಜಾವಾಣಿ ವಾರ್ತೆ/ ಶಿವಾನಂದ ಹಸರಗುಂಡಗಿ Updated:

ಅಕ್ಷರ ಗಾತ್ರ : | |

ಅಫಜಲಪುರ: ಕಳೆದ ಶತಮಾನದ ಮಧ್ಯ ಭಾಗ, 1953ರಲ್ಲಿ ಆರಂಭವಾದ ಅಫಜಲಪುರ ಪಟ್ಟಣದ ಸರ್ಕಾರಿ ಪ್ರೌಢಶಾಲೆಗೆ ಈಗ ಸುವರ್ಣ ಸಂಭ್ರಮ.ಪ್ರಸಕ್ತ ವರ್ಷ 2014 ಅನ್ನು ಶಾಲೆಯ ಸುವರ್ಣ ಮಹೋತ್ಸ ವರ್ಷ ಎಂದು ಆಚರಿಸಲು  ಶಾಲಾ ಸಿಬ್ಬಂದಿ ಮುಂದಾಗಿದ್ದಾರೆ. ಅದಕ್ಕಾಗಿ ಹಳೆಯ ವಿದ್ಯಾರ್ಥಿಗಳ ಸಹಕಾರ ಪಡೆಯಲು ನಿರ್ಧರಿಸಿದ್ದಾರೆ.ಶಾಲಾಭಿವೃದ್ಧಿ ಸಮಿತಿ ಸದಸ್ಯರು ಈ ಬಗ್ಗೆ ಸಭೆ ನಡೆಸಿ ಕಾರ್ಯಕ್ರಮ ರೂಪಿಸಿದ್ದಾರೆ. ಸಮಿತಿ ಪ್ರಸಕ್ತ ಸಾಲಿನಲ್ಲಿ ಶಾಲೆಯ ವಿದ್ಯಾರ್ಥಿಗಳಿಂದ  ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ವಿವಿಧ ಕ್ರೀಡಾ ಚಟುವಟಿಕೆಗಳನ್ನು ಹಮ್ಮಿಕೊಂಡಿದೆ.2014 ಅಕ್ಟೋಬರ್‌ದಲ್ಲಿ ಶಿಕ್ಷಣ ಸಚಿವರನ್ನು ಕರೆಯಿಸಿ ಸುವರ್ಣ ಮಹೋತ್ಸವ ಆಚರಿಸಲು ರೂಪರೇಷೆಗಳನ್ನು ಸಿದ್ಧಪಡಿಸಲಾಗುತ್ತಿದೆ. ಈ ಶಾಲೆಯ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರೂ ಆಗಿರುವ ಶಾಸಕ ಮಾಲೀಕಯ್ಯ ಗುತ್ತೇದಾರರು ಈ ಬಗ್ಗೆ ಆಸಕ್ತಿ  ತೋರಿಸಿದ್ದಾರೆ.ಸರ್ಕಾರಿ ಸಂಯುಕ್ತ  ಪಿಯು: ಈ ಪ್ರೌಢ­ಶಾಲೆಯಲ್ಲಿ 602 ಮಕ್ಕಳಿದ್ದಾರೆ. ಒಟ್ಟು 28 ಶಿಕ್ಷಕರಿದ್ದಾರೆ. ಕಳೆದ 5 ವರ್ಷಗಳ ಹಿಂದೆ ಕೆಲವೊಂದು ಕಾರಣಗಳಿಂದ ಶಾಲೆಯ ಪರಿಸ್ಥಿತಿ ಸರಿ ಇರಲಿಲ್ಲ. ಹದಿನೈದು ವರ್ಷಗಳ ಹಿಂದೆ ಇದಕ್ಕೆ ಪಿ ಯೂ ಕಾಲೇಜು ಸೇರಿದಾಗ ಇದು ಸರ್ಕಾರಿ ಸಂಯುಕ್ತ ಪದವಿಪೂರ್ವ ಕಾಲೇಜಾಗಿತ್ತು.  ಹೀಗಾದಾಗ, ಪಿ ಯು ಕಾಲೇಜಿನ ಉಪಪ್ರಾಚಾರ್ಯರು ಹೈಸ್ಕೂಲಿನ ಜವಾಬ್ದಾರಿ ಹೊರುತ್ತಾರೆ. ಕೆಲವು ವರ್ಷಗಳ ಹಿಂದೆ ನಿರಂತರ ಶಿಕ್ಷಕರ ಗೈರು ಹಾಜರಾತಿ  ಮತ್ತು ಆಗಿದ್ದ ಉಪಪ್ರಾಚಾರ್ಯರರ ಅನಾಸಕ್ತಿಯಿಂದ ಹೈಸ್ಕೂಲಿಗೆ ಕೆಟ್ಟ ಹೆಸರು ಬಂದಿತ್ತು. ಆಗ,  ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿತ್ತು.ಕಳೆದ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಇಲ್ಲಿಗೆ ವರ್ಗವಾಗಿ ಬಂದ, ಮಹಾದೇವಪ್ಪ ತಾಂಬೆ ಸರ್ಕಾರಿ ಸಂಯುಕ್ತ ಪ್ರೌಢಶಾಲೆಗೆ ಉಪ ಪ್ರಾಚಾರ್ಯರಾಗಿ ಅಧಿಕಾರ ವಹಿಸಿಕೊಂಡ ನಂತರ, ಅವರ ಆಸಕ್ತಿಯಿಂದ ಶಾಲೆಯ ಚಿತ್ರಣ ಬದಲಾಗತೊಡಗಿದೆ.ಬದಲಾದ ಪರಿಸರ: ಶಿಕ್ಷಕರಲ್ಲಿ ಶಿಸ್ತು ಮೂಡಿಸಿದ ಅವರು,  ತರಗತಿಗಳು ಸಮಯಕ್ಕೆ ಸರಿಯಾಗಿ ನಡೆಯುವಂತೆ ನೋಡಿಕೊಂಡರು. ಮಕ್ಕಳಿಗಾಗಿ ಹತ್ತು ಹಲವು ಸಾಂಸ್ಕೃತಿಕ ಮತ್ತು ಪಠ್ಯ ಕಾರ್ಯಕ್ರಮಗಳನ್ನು ಏರ್ಪಡಿಸಿ ಶೈಕ್ಷಣಿಕ ಪರಿಸರ ಸುಧಾರಿಸಲು ಮುಂದಾದರು.

ಮನೆಮನೆ ಭೇಟಿ, ಪಾಲಕರ ಸಭೆ ಕೈಗೊಂಡು ಮಕ್ಕಳ ಹಾಜರಾತಿ ಮತ್ತು ಕಲಿಕೆಯ ಬಗ್ಗೆ ಗಮನ ನೀಡತೊಡಗಿದರು. ನಂತರ ಸಹಜವಾಗಿ ಮಕ್ಕಳ ಸಂಖ್ಯೆ ಹೆಚ್ಚಳವಾಯಿತು. ಶಾಲೆಯ ಪರಿಸ್ಥಿತಿಯಲ್ಲಿ ಬದಲಾವಣೆ ಕಂಡಿತು.ಈಗ, ಎಸ್ಸೆಸ್ಸೆಲ್ಸಿ ಮಕ್ಕಳ ಫಲಿತಾಂಶ ಸುಧಾರಿಸಲು ಆಯಾ ವಿಷಯವಾರು ರಸಪ್ರಶ್ನೆ ಕಾರ್ಯಕ್ರಮವನ್ನು ಪ್ರತಿ ಶನಿವಾರ ಏರ್ಪಡಿಸಲಾಗುತ್ತಿದೆ. ಸತತವಾಗಿ ಮೂರು ಬಾರಿ ಗೆಲುವು ಸಾಧಿಸಿದ ರಸಪ್ರಶ್ನೆ ತಂಡಕ್ಕೆ ಉಪಪ್ರಾಚಾರ್ಯರು 500 ರೂಪಾಯಿ ಬಹುಮಾನ ನೀಡಿ ಪ್ರೋತ್ಸಾಹಿಸುತ್ತಿದ್ದಾರೆ.ವಿಜ್ಞಾನ ವಸ್ತು ಪ್ರದರ್ಶನ, ಗಣಿತ ವಸ್ತು ಪ್ರದರ್ಶನ, ಪಠ್ಯ ಮತ್ತು ಪಠ್ಯೇತರ ವಿಷಯಗಳ ಚರ್ಚೆ  ನಡೆಸಲಾಗುತ್ತಿದೆ. ಪ್ರತಿ ಪಾಠದ ಮೇಲೆ ಕಿರುಪರೀಕ್ಷೆ ನಡೆಸಲಾಗುತ್ತಿದೆ. ವಾರಕ್ಕೊಮೆ ಯೋಗ, ಡ್ರೀಲ್‌ ಮಾಡಿಸುವದು ಹಾಗೂ ಸಂಗೀತ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ.

ಈ ಪ್ರೌಢಶಾಲೆಯ ಮಕ್ಕಳು ಗಣಿತ, ವಿಜ್ಞಾನ ವಿಷಯದ ರಸಪ್ರಶ್ನೆ ಕಾರ್ಯಕ್ರಮಗಳಲ್ಲಿ ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟದಲ್ಲೂ ಭಾಗವಹಿಸಿದ್ದಾರೆ.ಕುಂದು ಕೊರತೆ ಮಾಹಿತಿ: ಈ ಸರ್ಕಾರಿ ಸಂಯುಕ್ತ ಪ್ರೌಢಶಾಲೆಯ ಕಟ್ಟಡದಲ್ಲಿಯೇ ಪದವಿ ಪೂರ್ವ ಕಾಲೇಜು, ರಾಷ್ಟ್ರೀಯ ಆಂಗ್ಲ ಮಾಧ್ಯಮ ಶಾಲೆಗಳು ನಡೆಯುತ್ತಿದೆ.ಶಾಲೆಯ ಸಿಬ್ಬಂದಿ ಹಾಗೂ ಮಕ್ಕಳಿಗೆ ಶೌಚಾಲಯ ಸೌಲಭ್ಯವಿಲ್ಲ. ಶಾಲೆಗೆ ಕಾಂಪೌಂಡ್‌ ಗೋಡೆಯಿಲ್ಲ . ಈ ಸರ್ಕಾರಿ ಪ್ರೌಢಶಾಲೆಯ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿರುವ ಶಾಸಕ ಮಾಲೀಕಯ್ಯ ಗುತ್ತೇದಾರರು, ವಾರದ ಹಿಂದೆ ಶಿಕ್ಷಕರೊಂದಿಗೆ ಸಭೆ ನಡೆಸಿ ಕುಂದು ಕೊರತೆಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಆದರೂ, ಶಾಲೆಯ ಪರಿಸರದಲ್ಲಿ ಇನ್ನೂ ಯಾಕೋ ಸಂಭ್ರಮದ ಲಕ್ಷಣಗಳು ಕಾಣುತ್ತಿಲ್ಲ.‘ಶೌಚಾಲಯ ಕಲ್ಪಿಸುತ್ತೇವೆ’

ಶಾಲೆಗೆ ಮೂಲ ಸೌಕ­ರ್ಯಳನ್ನು ಒದಗಿಸುವ ಬಗ್ಗೆ ಶಾಸ­ಕರ ಗಮನ ಸೆಳೆ­ಯ­ಲಾಗಿದೆ. ಮುಂದಿನ ದಿನ­ಗಳಲ್ಲಿ ಶಾಲೆಗೆ ಕುಡಿ­ಯುವ ನೀರು, ಶೌಚಾ­ಲ­ಯ ವ್ಯವಸ್ಥೆ ಕಲ್ಪಿಸಲಾಗುವದು.

-ಶಾಲಾ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಶ್ರೀಶೈಲ ಬಳೂರ್ಗಿ

'ಅರ್ಥಪೂರ್ಣ ಆಚರಿಸಿ’

ನಾನು ಈ ಶಾಲೆಯಲ್ಲಿ 1977ರಲ್ಲಿ ವ್ಯಾಸಂಗ ಮಾಡಿದ್ದೇನೆ. ಆದರೆ ಈಗ ಶಾಲೆ ಸಾಕಷ್ಟು ಬೆಳೆದಿದೆ.

ಈಗ ವಿದ್ಯಾರ್­ಥಿಗಳಿಗೆ ಸಾಕಷ್ಟು ಅನು­ಕೂಲ­ಗಳಿವೆ. ಶಾಲೆಯ ಸುವರ್ಣ ಮಹೋ­ತ್ಸವ ಅರ್ಥಪೂರ್ಣವಾಗಿ ಆಚರಿಸಬೇಕಿದೆ.

–ಹಳೆಯ ವಿದ್ಯಾರ್ಥಿ, ಸುಭಾಷ್‌ ವಿ ಗುತ್ತೇದಾರ, ಬಳೂರ್ಗಿ

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.