ಸುವರ್ಣ ವಿಧಾನಸೌಧದಲ್ಲೀಗ ನೀರವ ಮೌನ!

7

ಸುವರ್ಣ ವಿಧಾನಸೌಧದಲ್ಲೀಗ ನೀರವ ಮೌನ!

Published:
Updated:

ಬೆಳಗಾವಿ: ನಾಲ್ಕು ದಿನಗಳ ಹಿಂದೆಯಷ್ಟೇ ಸಹಸ್ರಾರು ಜನರ ಸಮ್ಮುಖದಲ್ಲಿ ರಾಷ್ಟ್ರಪತಿ ಅವರಿಂದ ಅದ್ದೂರಿಯಾಗಿ ಉದ್ಘಾಟನೆಗೊಂಡ `ಸುವರ್ಣ ವಿಧಾನ ಸೌಧ~ದಲ್ಲೆಗ ನೀರವ ಮೌನ! ಒಳಗೆ ಹೋಗಿ ಮೊಗಸಾಲೆಯಲ್ಲಿ ಹೆಜ್ಜೆ ಹಾಕುತ್ತಿದ್ದಂತೆಯೇ ಎಲ್ಲ ಕೊಠಡಿಗಳಿಗೂ ಹಾಕಿರುವ ಬೀಗಗಳ ಸರಮಾಲೆಯೇ ಸ್ವಾಗತಿಸುತ್ತಿವೆ.`ಸುವರ್ಣ ವಿಧಾನ ಸೌಧ~ದ ಮೊಗಸಾಲೆ ಸ್ವಚ್ಛಗೊಳಿಸುತ್ತಿರುವ ಬೆರಳೆಣಿಕೆಯಷ್ಟು ಕಾರ್ಮಿಕರು ಅಲ್ಲಲ್ಲಿ ಕಾಣುತ್ತಿರುವುದನ್ನು ಬಿಟ್ಟರೆ, ಇಡೀ ಕಟ್ಟಡ ಬಿಕೋ ಎನ್ನುತ್ತಿದೆ. ಅಧಿಕಾರಿಗಳು, ಜನರು ಭೇಟಿ ನೀಡದ ಸುವರ್ಣ ಸೌಧದ ಬಾಗಿಲುಗಳನ್ನು ಭದ್ರತಾ ಸಿಬ್ಬಂದಿ ಕಾಯುತ್ತಿರುವ ದೃಶ್ಯ ಕಾಣ ಸಿಗುತ್ತಿದೆ.ಇಲ್ಲಿ ಸುಮಾರು 50 ಹವಾ ನಿಯಂತ್ರಿತ ಕೊಠಡಿಗಳಿವೆ. ಇದುವರೆಗೂ ಯಾವುದೇ ಸರ್ಕಾರಿ ಕಚೇರಿಗಳನ್ನು ಇಲ್ಲಿಗೆ ಸ್ಥಳಾಂತರಿಸುವ ಬಗ್ಗೆ ಇನ್ನೂ ನಿರ್ಧಾರ ಕೈಗೊಳ್ಳದೇ ಇರುವುದರಿಂದ ಎಲ್ಲ ಕೊಠಡಿಗಳಿಗೂ ಬೀಗಮುದ್ರೆ ಬಿದ್ದಿದೆ.

ಸ್ಮಾರಕ ಕಟ್ಟಡ?: ಇಲ್ಲಿ ಯಾವುದೇ ಚಟುವಟಿಕೆ ನಡೆಯದೇ ಇದ್ದರೆ, ಸುವರ್ಣ ವಿಧಾನಸೌಧವು ಜನ ಸಂಪರ್ಕ ಕಡಿತಗೊಂಡು `ಸ್ಮಾರಕ ಕಟ್ಟಡ~ ಆಗುವ ಸಾಧ್ಯತೆ ಇದೆ.ಕಟ್ಟಡವು ಗುಡ್ಡದ ಮೇಲಿರುವುದರಿಂದ ಬಾವಲಿ, ಹಕ್ಕಿಗಳ ಆವಾಸ ಸ್ಥಾನವೂ ಆದೀತು. ಹೀಗಾಗಿ ಈ ಕಟ್ಟಡದ `ಸುವರ್ಣ ಪ್ರಭಾವಳಿ~ ಮಾಸದಂತೆ ನೋಡಿಕೊಳ್ಳಲು ನಿತ್ಯವೂ ಅಪಾರ ಪ್ರಮಾಣದ ಸಿಬ್ಬಂದಿ ನಿರ್ವಹಣೆ ಮಾಡಬೇಕಾದ ಜವಾಬ್ದಾರಿ ಇನ್ನು ಮೇಲೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಅಧಿಕಾರಿಗಳ ಮೇಲೆ ಬೀಳಲಿದೆ.`ಸುವರ್ಣ ಸೌಧ ನಿರ್ಮಿಸಿರುವ ಶಿರ್ಕೆ ಕಂಪೆನಿಯು ಇನ್ನೊಂದು ತಿಂಗಳಲ್ಲಿ ಸರ್ಕಾರಕ್ಕೆ ಕಟ್ಟಡ ಹಸ್ತಾಂತರಿಸಲಿದೆ. ಇದರ ನಿರ್ವಹಣೆಯನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು ನೋಡಿಕೊಳ್ಳಲಿದೆ. ಒಂದೊಮ್ಮೆ ಇದರ ನಿರ್ವಹಣೆ ಜವಾಬ್ದಾರಿಯನ್ನು ನಮ್ಮ ಇಲಾಖೆಗೇ ವಹಿಸಿದರೆ, ನಾವು ನೋಡಿಕೊಳ್ಳುತ್ತೇವೆ~ ಎಂದು ಲೋಕೋಪಯೋಗಿ ಇಲಾಖೆ ಅಧೀಕ್ಷಕ ಎಂಜಿನಿಯರ್ ವಿನಾಯಕ ಸೂಗೂರ ತಿಳಿಸುತ್ತಾರೆ.ವಿದ್ಯುತ್ ಬಿಲ್ ರೂ 7 ಲಕ್ಷ: `ನಿರ್ವಹಣೆ ಸಲುವಾಗಿ ನಿತ್ಯವೂ ವಿದ್ಯುತ್ ದೀಪಗಳನ್ನು ಉರಿಸಿದರೂ ಪ್ರತಿ ತಿಂಗಳು ಸುಮಾರು ರೂ 4ರಿಂದ 5 ಲಕ್ಷ ವಿದ್ಯುತ್ ಬಿಲ್ ಬರಬಹುದು~ ಎಂದು ಹೆಸ್ಕಾಂ ಕಾರ್ಯ ನಿರ್ವಾಹಕ ಎಂಜಿನಿಯರ್ ಟಿ.ಬಿ. ಮಜ್ಜಗಿ ಅಭಿಪ್ರಾಯಪಡುತ್ತಾರೆ.ನೀರಿಗೆ ರೂ. 4 ಲಕ್ಷ?: 
`ಕಟ್ಟಡ ದೂಳು ಹಿಡಿಯದಂತೆ ನಿಯಮಿತವಾಗಿ ಸ್ವಚ್ಛಗೊಳಿಸಲೇಬೇಕು. ಜೊತೆಗೆ ಸುವರ್ಣಸೌಧದ ಆವರಣದಲ್ಲಿ ಸುಮಾರು 15 ಎಕರೆ ಪ್ರದೇಶದಲ್ಲಿ ಲಾನ್ ಹಾಗೂ ವಿವಿಧ ಬಗೆಯ ಹೂ-ಗಿಡಗಳನ್ನು ಬೆಳೆಸಿರುವುದರಿಂದ ತಪ್ಪದೇ ನೀರುಣಿಸಬೇಕು. ಹೀಗಾಗಿ ನಿತ್ಯ ಸರಾಸರಿ 10 ಲಕ್ಷ ಲೀಟರ್ ನೀರು ಬಳಸಿದರೂ ಒಂದು ತಿಂಗಳಿಗೆ ಸುಮಾರು ರೂ 4 ಲಕ್ಷ  ನೀರಿನ ಬಿಲ್ ಬರುವ ಸಾಧ್ಯತೆ ಇದೆ~ ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಾರ್ಯನಿರ್ವಾಹಕ ಎಂಜಿನಿಯರ್ ಬಿ.ಎಸ್. ಅಲೆಗಾಂವ ಹೇಳುತ್ತಾರೆ.

ಜೀವಂತಿಕೆ ನೀಡಬೇಕು

ಗಡಿ ಅಭಿವೃದ್ಧಿ ಪ್ರಾಧಿಕಾರದ ಕಚೇರಿ ಗಡಿ ಭಾಗದಲ್ಲಿ ಇರಬೇಕು. ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಪುಸ್ತಕ ಅಭಿವೃದ್ಧಿ ಪ್ರಾಧಿಕಾರ, ಸಕ್ಕರೆ ಅಧ್ಯಯನ ಕೇಂದ್ರ, ಪ್ರಾದೇಶಿಕ ಆಯುಕ್ತರ ಕಚೇರಿಯಂತಹ ಈ ಭಾಗಕ್ಕೆ ಅನುಕೂಲ ಆಗುವ ಕಚೇರಿಗಳನ್ನು ಇಲ್ಲಿಗೆ ತರುವ ಮೂಲಕ ಸುವರ್ಣ ವಿಧಾನ ಸೌಧಕ್ಕೆ ಜೀವಂತಿಕೆ ನೀಡಬೇಕು. ಇಲ್ಲದಿದ್ದರೆ ಇದರ ನಿರ್ವಹಣಾ ವೆಚ್ಚವೇ ಹೆಚ್ಚಾಗಿ `ಬಿಳಿ ಆನೆ~ಯಾಗುವ ಆತಂಕವಿದೆ~

- ಸಿದ್ಧನಗೌಡ ಪಾಟೀಲ (ಮಾಜಿ ಮೇಯರ್)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry