ಸುವರ್ಣ ವಿಧಾನಸೌಧ ನಾಮಕರಣಕ್ಕೆ ಒಪ್ಪಿಗೆ

7

ಸುವರ್ಣ ವಿಧಾನಸೌಧ ನಾಮಕರಣಕ್ಕೆ ಒಪ್ಪಿಗೆ

Published:
Updated:

ಬೆಳಗಾವಿ: `ಸುವರ್ಣಸೌಧ ಕಟ್ಟಡಕ್ಕೆ ಸುವರ್ಣ ವಿಧಾನಸೌಧ ಎಂದು ನಾಮಕರಣ ಮಾಡಲು ಒಪ್ಪಿಗೆ ನೀಡಲಾಗಿದ್ದು ಈ ಸಂಬಂಧ ಶನಿವಾರ ಅಧಿಕೃತ ಆದೇಶ ಹೊರಬೀಳಲಿದೆ` ಎಂದು ವಿಧಾನಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಶುಕ್ರವಾರ ಇಲ್ಲಿ ಹೇಳಿದರು.ಸುವರ್ಣಸೌಧ ಕಟ್ಟಡದ ಕಾಮಗಾರಿ ಪರಿಶೀಲಿಸಿ, ಅಧಿಕಾರಿಗಳ ಸಭೆ ನಡೆಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಸೇರಿದಂತೆ ಅನೇಕರು ಸುವರ್ಣ ವಿಧಾನಸೌಧ ಎಂದು ಹೆಸರಿಸುವಂತೆ ಹಾಗೂ ಕಟ್ಟಡದ ಮುಂದೆ `ಕಾಯಕವೇ ಕೈಲಾಸ~ ಎಂದು ಬರೆಸುವಂತೆ ಮನವಿ ಮಾಡಿದ್ದರು. ಅವರ ಮನವಿ ಪುರಸ್ಕರಿಸಲಾಗಿದೆ~ ಎಂದರು.ಉದ್ಘಾಟನಾ ಕಾರ್ಯಕ್ರಮವನ್ನು ರಾಷ್ಟ್ರಪತಿ ಭವನದ ಶಿಷ್ಟಾಚಾರದಂತೆ ರೂಪಿಸಲಾಗಿದೆ. ಕಟ್ಟಡದ ಲೋಕಾರ್ಪಣೆ ನಂತರ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುವರು. ಇದಾದ ನಂತರ ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡುವರು ಎಂದು  ವಿವರಿಸಿದರು.ಸಾರ್ವಜನಿಕ ಸಮಾರಂಭದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಎಂ. ವೀರಪ್ಪ ಮೊಯಿಲಿ, ಎಸ್.ಎಂ.ಕೃಷ್ಣ, ಧರ್ಮಸಿಂಗ್, ಎಚ್.ಡಿ.ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದಗೌಡ, ಕೇಂದ್ರದ ಸಚಿವರಾದ ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್.ಮುನಿಯಪ್ಪ ಭಾಗವಹಿಸುವರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ವಿವರಿಸಿದರು`ನಾಲ್ಕು ತಿಂಗಳ ಹಿಂದೆ ವಿಧಾನಸಭೆಯ 60ನೇ ವರ್ಷದ ನೆನಪಿನ ಕಾರ್ಯಕ್ರಮ ನಡೆದಿತ್ತು. ಆ ಕಾರ್ಯಕ್ರಮದ ಮಾದರಿಯಲ್ಲಿಯೇ ಸುವರ್ಣ ವಿಧಾನಸೌಧದ ಉದ್ಘಾಟನಾ ಸಮಾರಂಭವೂ ಅದ್ದೂರಿಯಾಗಿ ನಡೆಯಲಿದೆ~ ಎಂದು ಕಾನೂನು ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದರು.ವಿಧಾನಸಭೆ ಉಪಾಧ್ಯಕ್ಷ ಎನ್.ಯೋಗೇಶ ಭಟ್, ಸಂಸದ ಸುರೇಶ ಅಂಗಡಿ, ಶಾಸಕರಾದ ಪ್ರಕಾಶ ಹುಕ್ಕೇರಿ, ಸತೀಶ ಜಾರಕಿಹೊಳಿ, ಸಂಜಯ ಪಾಟೀಲ, ಕಾಕಾಸಾಹೇಬ ಪಾಟೀಲ ಈ ಸಂದರ್ಭದಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry