ಸುವರ್ಣ ವಿಧಾನ ಸೌಧಕ್ಕೆ ಹೊಲ ಕೊಟ್ಟವರಿಗೆ ಎಲೆ- ಅಡಿಕೆಗೂ ಕಾಸಿಲ್ಲ

7

ಸುವರ್ಣ ವಿಧಾನ ಸೌಧಕ್ಕೆ ಹೊಲ ಕೊಟ್ಟವರಿಗೆ ಎಲೆ- ಅಡಿಕೆಗೂ ಕಾಸಿಲ್ಲ

Published:
Updated:

ಚನ್ನಮ್ಮನ ಕಿತ್ತೂರು: ಹೆಮ್ಮೆಯ ಸುವರ್ಣ ವಿಧಾನ ಸೌಧ ನಾಡಿಗೆ ಸಮರ್ಪಣೆಯಾಗಿದೆ. ಇಡೀ ಉತ್ತರ ಕರ್ನಾಟಕವೇ ಈ ಸಂಭ್ರಮದಲ್ಲಿ ಮಿಂದು ಹೋಗಿದೆ. ಮತ್ತೊಂದು `ಶಕ್ತಿ ಕೇಂದ್ರ~ ಎಂದೇ ಭಾವಿಸಲಾಗಿರುವ ಆಕರ್ಷಕ ಕಟ್ಟಡದ ಸುತ್ತಲಿನ ಕೃಷಿ ಯೋಗ್ಯ ಜಮೀನನ್ನು ಸರ್ಕಾರ ಮತ್ತೆ ವಶಪಡಿಸಿಕೊಳ್ಳಲಿದೆ ಎಂಬ ಭೀತಿ ಈ ಭಾಗದ ರೈತರದು.`ಈಗಾಗಲೇ ನೂರಾರು ಎಕರೆ ಭೂಮಿಯನ್ನು ನೀಡಿದ್ದೇವೆ. ಭೂಮಿ ಮಾರಾಟ ಮಾಡಿ ಬಂದಿದ್ದ ಹಣ ಅನೇಕ ರೈತರಲ್ಲಿ ಇಂದು ಉಳಿದಿಲ್ಲ. ಊರಿಗೆ ದೊಡ್ಡ `ಕಮತ್~ ಎನ್ನುವರರ ಬದುಕು ಭೂಮಿ ನೀಡಿದ್ದರಿಂದ ಮೂರಾಬಟ್ಟೆಯಾಗಿದೆ. ಸರ್ಕಾರ ನೀಡಿದ ದುಡ್ಡು ಖರ್ಚಾಯಿತು. ಕೆಲವರಿಗೆ ಈಗ ತಿನ್ನಲು ಎಲೆ- ಅಡಿಕೆಗೂ ದುಡ್ಡಿಲ್ಲ ಎಂಬ ದುಸ್ಥಿತಿ ಇದೆ~ ಎಂದು ಸುವರ್ಣ ವಿಧಾನ ಸೌಧ ಪಕ್ಕದ ಊರಾದ ಕಾಮಕಾರಟ್ಟಿ ರೈತರಾದ ಮಲ್ಲಪ್ಪ ಚನ್ನಪ್ಪ ಲಕಮಣ್ಣವರ ಮತ್ತು ಸೋಮನಾಥ್  ಚವಾಣ್ ಹೇಳಿದರು.`ಕೆ.ಕೆ. ಕೊಪ್ಪ, ಕುಂಡಸಕೊಪ್ಪ, ಯರಮಳ್ಳಿ, ಕೊಣಸೊಪ್ಪ ಮತ್ತು ಕಾಮಕಾರಟ್ಟಿ ಗ್ರಾಮ ವ್ಯಾಪ್ತಿಯ ಕೃಷಿ ಜಮೀನನ್ನು ಸರ್ಕಾರಕ್ಕೆ ಕೊಟ್ಟರೆ ನಾವೇನು ಮಾಡಬೇಕು? ಕೊಟ್ಟ ರೊಕ್ಕ ಎಷ್ಟು ದಿನ ನಮ್ಮ ಕೈಯಾಗ ಉಳಿದೈತ್ರಿ~ ಎಂದು ಅವರು ಪ್ರಶ್ನಿಸಿದರು.`ಎರಡು ತಿಂಗಳ ಹಿಂದೆ ಮಾಜಿ ಶಾಸಕ ಕಿಣೇಕರ್ ಅವರ ಜೊತೆಗೆ ಭೂಮಿ ನೀಡುವುದಿಲ್ಲ ಎಂದು ಆಗ್ರಹಿಸಿ ಅನೇಕ ಬಾರಿ ಪ್ರತಿಭಟನೆ ಮಾಡಿದ್ದೆವು~ ಎನ್ನುತ್ತಾರೆ ಕೃಷಿಕರಾದ ಮಲ್ಲಪ್ಪ ಹಾಗೂ ಸೋಮನಾಥ್.`ಜಮೀನಿದ್ದರೆ ಏನಾದರೂ ಅದರಲ್ಲಿ ಬೆಳೆದು ಹೊಟ್ಟೆ ತುಂಬಿಸಿಕೊಳ್ಳುತ್ತೇವೆ. ಒಕ್ಕಲುತನವೇ ನಮ್ಮ ಬದುಕಾಗಿದೆ. ಭೂಮಿ ಹೋದರೆ ನಾವು ಏನು ಮಾಡೋದು ಎಂಬುವುದು ತೋಚುತ್ತಿಲ್ಲ ಎಂದು ಹಲಗಾ ಗ್ರಾಮದ ನೇಮಿನಾಥ ಇಟಗಿ ಆತಂಕ ವ್ಯಕ್ತಪಡಿಸುತ್ತಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry