ಸುವರ್ಣ ಸೌಧಕ್ಕೆ ಹಸಿರು ಉಡುಗೆ

7

ಸುವರ್ಣ ಸೌಧಕ್ಕೆ ಹಸಿರು ಉಡುಗೆ

Published:
Updated:

ಬೆಳಗಾವಿ: ನಗರದ ಹೊರವಲಯದ ಹಲಗಾ- ಬಸ್ತವಾಡದ ಗುಡ್ಡದ ಮೇಲೆ ನಿರ್ಮಾಣಗೊಂಡಿರುವ ಸುಂದರ `ಸುವರ್ಣ ವಿಧಾನಸೌಧ~ಕ್ಕೆ ಹಸಿರು ಉಡುಗೆ ತೊಡಿಸುವ ಕೆಲಸ ಭರದಿಂದ ಸಾಗಿದೆ. ಈ ಉದ್ದೇಶಿತ ನಂದನವನವು `ಸುವರ್ಣ ಕಿರೀಟ~ಕ್ಕೆ ಇನ್ನಷ್ಟು ಮೆರುಗು ನೀಡಲಿದೆ.ಒಟ್ಟು 127 ಎಕರೆ ಆವರಣದೊಳಗೆ ತಲೆಯೆತ್ತಿದ `ಸುವರ್ಣ ವಿಧಾನ ಸೌಧ~ದ ಸುತ್ತ-ಮುತ್ತಲಿನ ಪ್ರದೇಶ ಹಸಿರಿನಿಂದ ಕಂಗೊಳಿಸಲಿದೆ. ಸದ್ಯ ಸುಮಾರು 15 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಹುಲ್ಲು ಹಾಸು (ಲಾನ್), ವೈವಿಧ್ಯಮಯ ಹೂವಿನ ಗಿಡಗಳು ಜನರನ್ನು ಸ್ವಾಗತಿಸುತ್ತಿದೆ.ಸುವರ್ಣ ವಿಧಾನಸೌಧದ ಆವರಣದಲ್ಲಿ ಉದ್ಯಾನ ನಿರ್ಮಿಸುವ ಗುತ್ತಿಗೆಯನ್ನು ಪಡೆದಿರುವ ಪುಣೆ ಮೂಲದ  `ಗ್ರೀನ್ ಮೆಕ್ ಲ್ಯಾಂಡ್‌ಸ್ಕೇಪ್ ಆ್ಯಂಡ್ ಇರಿಗೇಶನ್~ ಸಂಸ್ಥೆಯು ಹಸಿರುಡುಗೆಯನ್ನು ತೊಡಿಸುತ್ತಿದೆ. ಪುಣೆ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಪಕ್ಕದ ಗುಡ್ಡದ ಮೇಲಿರುವ ಸುವರ್ಣ ಸೌಧದಲ್ಲಿ ನಿಂತು ನೋಡಿದರೆ, ಕಣ್ಣು ಹಾಯಿಸಿದಷ್ಟು ದೂರಕ್ಕೂ ಹಸಿರಿನ ಪ್ರದೇಶ ಕಂಗೊಳಿಸುತ್ತಿದೆ.

ಹೀಗಾಗಿ ಸುವರ್ಣ ಸೌಧವನ್ನು ಕೇವಲ ಕಟ್ಟಡಕ್ಕಷ್ಟೇ ಸೀಮಿತಗೊಳಿಸದೇ ಇಡೀ ಆವರಣದಲ್ಲಿ ವೈವಿಧ್ಯಮಯ ಹೂವಿನ ಗಿಡ-ಮರಗಳನ್ನು ಬೆಳೆಸುವ ಮೂಲಕ ಜನಾಕರ್ಷಣೆಯ ತಾಣವನ್ನಾಗಿ ರೂಪಿಸಲಾಗುತ್ತಿದೆ.

ಸುಮಾರು 14 ಎಕರೆ ಪ್ರದೇಶದಲ್ಲಿ ಮೆಕ್ಸಿಕನ್ ಟರ್ಫ್ ಲಾನ್ ನಿರ್ಮಿಸಲಾಗುತ್ತಿದೆ. ಪುಣೆ ಹಾಗೂ ಹೈದರಾಬಾದ್‌ನಿಂದ ಟರ್ಫ್ ಲಾನ್‌ನ ಪುಟ್ಟ ಪುಟ್ಟ ತುಂಡುಗಳನ್ನು ತಂದು ಬೆಳೆಸಲಾಗುತ್ತಿದೆ.

ಸೈಕೆಸ್, ಹಳದಿ- ಹಸಿರು ಮಿಶ್ರಿತ ಎಲೆ ಇರುವ ಬಿದಿರು, ಪೈಕಸ್ ಗೋಲ್ಡನ್, ಪೈಕಸ್ ವೆರಿಗೇಟೆಡ್, ಪೈಕಸ್ ಪಾಂಡಾ ಗಿಡಗಳನ್ನು ಬೆಳೆಸಲಾಗುತ್ತಿದೆ.  `ಪ್ಲುಮೆರಿಯಾ, ಅಲ್ಬಾ, ಫಿಕ್ಸ್‌ಪಿಂಕ್, ಪೆಂಟಾಜ್, ಹೆಮೆಲಿಯಾ, ಡಾಲ್ಫೊ, ದಾಸವಾಳದಂತಹ ಹೂವಿನ ಗಿಡಗಳನ್ನು ಇಲ್ಲಿ ನೆಡಲಾಗುತ್ತಿದ್ದು, ಜೇನು ಹಾಗೂ ಪಾತರಗಿತ್ತಿಗಳನ್ನು ಆಕರ್ಷಿಸಲಿದೆ.

ಸುವರ್ಣ ಸೌಧದ ಆವರಣ ಗೋಡೆಯ ಸುತ್ತ ಹಕ್ಕಿಗಳನ್ನು ಆಕರ್ಷಿಸುವ ಸಿಂಗಾಪುರ ಚೆರಿ ಗಿಡಗಳನ್ನು ನೆಡಲಾಗಿದೆ. ಆಂಧ್ರಪ್ರದೇಶದ ರಾಜಮಂಡ್ರಿಯ ನರ್ಸರಿಯಿಂದ ವಿಶೇಷ ಹೂವಿನ ಗಿಡಗಳನ್ನು ತರಿಸಲಾಗಿದೆ~ ಎಂದು ಉದ್ಯಾನದ ಮೇಲುಸ್ತುವಾರಿ ನೋಡಿಕೊಳ್ಳುತ್ತಿರುವ `ಗ್ರೀನ್ ಮೆಕ್ ಲ್ಯಾಂಡ್‌ಸ್ಕೇಪ್ ಆ್ಯಂಡ್ ಇರಿಗೇಶನ್~ ಸಂಸ್ಥೆಯ ಪಾಲುದಾರ ಬಿ.ಬಿ. ಪಾಟೀಲ `ಪ್ರಜಾವಾಣಿ~ಗೆ ತಿಳಿಸಿದರು.`ರೆಡ್ ಜಿಂಜರ್, ಹೆಲಿಕೊನಿಯಾ, ಟಬುಬಿಯಾ ರೊಜಿಯಾ, ಅವಲೆಂಡಾ ಇತ್ಯಾದಿ ಹೂವಿನ ಮರಗಳನ್ನೂ ನೆಡಲಾಗಿದೆ. ಋತುಮಾನಕ್ಕೆ ತಕ್ಕಂತೆ ಕೆಲವು ಮರಗಳು ಹೂವು ಬಿಡುವುದರಿಂದ ಆವರಣವು ವರ್ಷಪೂರ್ತಿ ಹೂವಿನಿಂದ ಕಂಗೊಳಿಸಲಿದೆ. ಒಂದೆರಡು ವರ್ಷಗಳಲ್ಲಿ ಗಿಡಗಳು ಬೆಳೆದ ಮೇಲೆ ಗುಡ್ಡದ ಮೇಲಿರುವ ಸುವರ್ಣ ಸೌಧದ ಆಕರ್ಷಣೆ ಇನ್ನಷ್ಟು ಹೆಚ್ಚಲಿದೆ~ ಎನ್ನುತ್ತಾರೆ ಪಾಟೀಲ.

 

15 ಎಕರೆ ಪ್ರದೇಶದಲ್ಲಿ ಉದ್ಯಾನ: `ಸುವರ್ಣ ಸೌಧದ ಒಳಗಡೆಯೂ ಟರ್ಫ್ ಲಾನ್ ನಿರ್ಮಿಸಲಾಗಿದೆ. ನೆರಳಿನಲ್ಲಿ ಬೆಳೆಯುವ ಸಸ್ಯಗಳನ್ನು ಹಚ್ಚಲಾಗಿದೆ. ಹಿಡಕಲ್ ಡ್ಯಾಮ್‌ನಿಂದ ನೇರವಾಗಿ ಕೊಳವೆಗಳ ಮೂಲಕ ನೀರನ್ನು ಇಲ್ಲಿಗೆ ತರಲಾಗಿದೆ. ಮಳೆ ನೀರು ಸಂಗ್ರಹ ವಿಧಾನದ ನೀರನ್ನೂ ಉದ್ಯಾನಕ್ಕೆ ಬಳಸಿಕೊಳ್ಳಲಾಗುವುದು.

ಸುವರ್ಣ ಸೌಧಕ್ಕೆ ದೀಪಾಲಂಕಾರ ಮಾಡಿರುವಂತೆ ಮುಂಬರುವ ದಿನಗಳಲ್ಲಿ ಉದ್ಯಾನ ಶೃಂಗಾರ ದೀಪಗಳನ್ನು ಜೋಡಿಸುವ ಮೂಲಕ ಸುಂದರಗೊಳಿಸಲಾಗುವುದು~ ಎಂದು ವಿವರಿಸಿದರು.

`ಸುವರ್ಣ ಸೌಧದ ಹೊರಗಿನ ಎಲ್ಲ ಪ್ರದೇಶಗಳಲ್ಲಿ ಉದ್ಯಾನ ಮಾಡಲು ಸುಮಾರು 30 ಕೋಟಿ ರೂಪಾಯಿ ಯೋಜನೆ ರೂಪಿಸಲಾಗಿತ್ತು.

ಸದ್ಯ ನಮಗೆ 2.48 ಕೋಟಿ ರೂಪಾಯಿ ನೀಡಲಾಗಿದ್ದು, 15 ಎಕರೆ ಪ್ರದೇಶಗಳಲ್ಲಿ ಉದ್ಯಾನದ ಕೆಲಸವನ್ನು ಕೈಗೆತ್ತಿಕೊಂಡಿದ್ದೇವೆ. ಕಳೆದ ಏಪ್ರಿಲ್‌ನಿಂದ ಕೆಲಸವನ್ನು ಆರಂಭಿಸಿದ್ದೇವೆ. ಉಬ್ಬು ತಗ್ಗಿನಿಂದ ಕೂಡಿದ್ದ ಗುಡ್ಡದಲ್ಲಿ ಸುಮಾರು 3 ಸಾವಿರ ಲಾರಿಯಲ್ಲಿ ಮಣ್ಣನ್ನು ತಂದು ನೆಲವನ್ನು ಸಮತಟ್ಟು ಮಾಡಿದ್ದೇವೆ.

ಮೂವರು ತಜ್ಞರು, ಸುಮಾರು 60 ಕಾರ್ಮಿಕರು ಇದರಲ್ಲಿ ತೊಡಗಿಕೊಂಡಿದ್ದು, ಒಂದೆರಡು ದಿನಗಳಲ್ಲಿ ಕೆಲಸ ಮುಗಿಯಲಿದೆ. ಒಂದು ವರ್ಷ ನಾವೇ ನಿರ್ವಹಣೆ ಮಾಡಲಿದ್ದೇವೆ~ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry