ಸುಷಿರ, ತಂತಿ ವಾದ್ಯ ಅನುರಣನ

7
ನಾದದ ಬೆನ್ನೇರಿ...

ಸುಷಿರ, ತಂತಿ ವಾದ್ಯ ಅನುರಣನ

Published:
Updated:

ಕ್ಕಳ ಸಂಗೀತ ಪ್ರತಿಭಾ ವಿಕಸನವನ್ನೇ ಧ್ಯೇಯವಾಗಿಟ್ಟುಕೊಂಡು ಬಗೆ ಬಗೆ ಕಾರ್ಯಕ್ರಮಗಳನ್ನು ಆಯೋಜಿಸುವುದು, ಜೊತೆಗೇ ಸಂಗೀತದಲ್ಲಿ ಸರ್ವತೋಮುಖ ಸಾಧನೆಯತ್ತಲೂ ಗಮನ ಕೇಂದ್ರೀಕರಿಸುವುದು ವಂಶಿ ಅಕಾಡೆಮಿ ಆಫ್‌ ಮ್ಯೂಸಿಕ್‌ನ ವಿಶೇಷ.

ಕೊಳಲನ್ನು ಪ್ರಧಾನವಾಗಿ ಕಲಿಸುವ ಇಲ್ಲಿ ಎರಡು ತಿಂಗಳಿಗೊಮ್ಮೆ ‘ಮಕ್ಕಳ ದಿನ’ ಎಂಬ ಸಂಗೀತ ಕಾರ್ಯಕ್ರಮದ ಮೂಲಕ ಮಕ್ಕಳ ಕಲಿಕಾ ಮಟ್ಟವನ್ನು ಒರೆಗೆ ಹಚ್ಚಲಾಗುತ್ತದೆ. ಜತೆಗೆ ಮಕ್ಕಳ ಮನೋವಿಕಾಸಕ್ಕೆ ಒತ್ತು ನೀಡುವ ಕಾರ್ಯಕ್ರಮಗಳೂ ಇಲ್ಲಿ ನಿರಂತರ ನಡೆಯುತ್ತವೆ. ವಂಶಿ ಸಂಗೀತ ಶಾಲೆ ರಾಜಾಜಿನಗರದಲ್ಲಿದೆ. ಕಳೆದ ಸುಮಾರು 20 ವರ್ಷಗಳಿಂದ ಇಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ, ಕೊಳಲು, ವೀಣೆ, ಪಿಟೀಲು ಹೇಳಿಕೊಡಲಾಗುತ್ತದೆ.

80 ವಿದ್ಯಾರ್ಥಿಗಳು ಇಲ್ಲಿದ್ದಾರೆ. ಪ್ರತಿಯೊಬ್ಬರಿಗೂ ಪ್ರತ್ಯೇಕ ಪಾಠ ಲಭ್ಯ. ಬೆಳಗ್ಗೆಯಿಂದ ರಾತ್ರಿಯವರೆಗೂ ಇಲ್ಲಿ ನಿರಂತರವಾಗಿ ಸಂಗೀತ ಪಾಠ ನಡೆಯುತ್ತಿರುತ್ತದೆ. ಆನ್‌ಲೈನ್‌ನಲ್ಲೂ ಈ ಸಂಸ್ಥೆ ಸಂಗೀತ ಕಲಿಸುತ್ತಿದ್ದು ನಗರದ ಹೊರವಲಯದ 30 ಮಕ್ಕಳು ಆನ್‌ಲೈನ್‌ನಲ್ಲಿ ಸಂಗೀತ ಶಿಕ್ಷಣ ಪಡೆಯುತ್ತಿದ್ದಾರೆ.ಕೊಳಲು ವಾದಕರಾದ ವಿದ್ವಾನ್‌ ಬಿ.ಕೆ. ಅನಂತರಾಮ್‌ ಈ ಸಂಗೀತ ಶಾಲೆಯ ಪ್ರಾಂಶುಪಾಲರು. ವಿದುಷಿ ಕೆ.ಎಸ್‌. ಶ್ರೀಲಕ್ಷ್ಮಿ ಇಲ್ಲಿ ಶಾಸ್ತ್ರೀಯ ಗಾಯನ, ವೀಣೆ ಮತ್ತು ಪಿಟೀಲು ಹೇಳಿಕೊಡುತ್ತಾರೆ. ವಾಸ್ತವವಾಗಿ ವಿದ್ವಾನ್‌ ಅನಂತರಾಮ್‌ ಅವರು ಕಳೆದ 40 ವರ್ಷಗಳಿಂದ ಮಕ್ಕಳಿಗೆ ಕೊಳಲು ಕಲಿಸುತ್ತಾ ಬಂದಿದ್ದಾರೆ. ಆದರೆ ಸಂಸ್ಥೆಗೆ ‘ವಂಶಿ ಮ್ಯೂಸಿಕ್‌ ಅಕಾಡೆಮಿ’ ಎಂದು ನಾಮಕರಣವಾಗಿದ್ದು 20 ವರ್ಷಗಳ ಹಿಂದೆ.ಸಂಸ್ಥೆಯ ಹಲವಾರು ವಿದ್ಯಾರ್ಥಿಗಳು ರಾಜ್ಯ ಮಟ್ಟದ ಸಂಗೀತೋತ್ಸವಗಳಲ್ಲಿ, ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿ ಮೆಚ್ಚುಗೆ ಗಳಿಸಿದ್ದಾರೆ. ಅನಂತರಾಮ್ ಅವರ ಮಗ ಅಮಿತ್‌ ಎ. ನಾಡಿಗ್‌ ನಾಡಿನೆಲ್ಲೆಡೆ ತಂದೆಯೊಂದಿಗೆ ವೇಣುವಾದನ ಜುಗಲ್‌ಬಂದಿ ಹಾಗೂ ಸೋಲೊ ಪ್ರದರ್ಶನ ನೀಡಿ ಹೆಸರಾಗಿದ್ದಾರೆ. ವೇಣುವಾದನ ನಡೆಸಿಕೊಡುವ ‘ತಂದೆ-ಮಗ’ ಜೋಡಿ ಬಹಳ ಅಪರೂಪದ್ದು. ರಾಧಾ ರಾಘವನ್‌, ಪ್ರಸನ್ನ, ಬದರಿ ಶ್ರೀರಾಮ್‌ ಅವರೂ ಅನೇಕ ಕಡೆ ಕಛೇರಿ ನೀಡಿದವರೇ.‘ಇಲ್ಲಿ ಶಾಲಾ ಮಕ್ಕಳಲ್ಲದೆ ಸಾಫ್ಟ್‌ವೇರ್‌ ಎಂಜಿನಿಯರರು, ಉದ್ಯಮಿಗಳು, ಐಎಎಸ್‌/ಐಪಿಎಸ್‌ ಅಧಿಕಾರಿಗಳು, ಗೃಹಿಣಿಯರು ಮತ್ತು ಇತರ ವೃತ್ತಿನಿರತರು ಸಂಗೀತ ಕಲಿಯುತ್ತಿದ್ದಾರೆ. ಇವರಲ್ಲಿ ಅನಂತ್‌, ಆನಂದ್‌, ಆಶಿಶ್‌, ಶ್ರೀರಾಮ್‌, ಚನ್ನಬಸವಯ್ಯ, ಕಿರಣ್‌, ಮನು, ಮುಕುಂದ್‌, ಪವನ್‌, ಪ್ರಶಾಂತ್‌, ಸಂಜನಾ, ಶ್ರೀವತ್ಸ, ಸುರಭಿ ಮತ್ತು ಇತರರು ಉತ್ತಮ ಸಾಧನೆ ತೋರುತ್ತಿದ್ದಾರೆ’ ಎಂದು ಹೇಳುತ್ತಾರೆ ಬಿ.ಕೆ. ಅನಂತರಾಮ್‌.ಮಕ್ಕಳಿಗೆ ವೇದಿಕೆ

‘ಇಲ್ಲಿ ಸಂಗೀತ ಕಲಿಯುವ ಮಕ್ಕಳಿಗೆ ವೇದಿಕೆ ಒದಗಿಸುವ ಸಲುವಾಗಿ ಪ್ರತಿ ಎರಡು ತಿಂಗಳಿಗೊಮ್ಮೆ ವಿಶೇಷ ಸಂಗೀತ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಇದಕ್ಕಾಗಿಯೇ ‘ವಂಶಿ ವೇದಿಕೆ’ಯನ್ನು ಸ್ಥಾಪಿಸಲಾಗಿದೆ. ಇಲ್ಲಿ ಮಕ್ಕಳಿಗೆ ತಮ್ಮ ಪ್ರತಿಭೆಯ ಅನಾವರಣಕ್ಕೆ ಅವಕಾಶ ಕಲ್ಪಿಸಿಕೊಡಲಾಗುತ್ತದೆ. ಜತೆಗೆ ವೇದಿಕೆಯಲ್ಲಿ ಕಾರ್ಯಕ್ರಮ ಕೊಡುವ ಶಿಸ್ತು ಬೆಳೆಯುತ್ತದೆ. ಇದಲ್ಲದೆ ಎರಡು ತಿಂಗಳಿಗೊಮ್ಮೆ ‘ಮಕ್ಕಳ ದಿನ’ ಆಚರಿಸಿ, ಅಲ್ಲಿ ಕಾರ್ಯಕ್ರಮ ನಿರೂಪಣೆ ಮಾಡುವ ವಿಧಾನ, ಕಾರ್ಯಕ್ರಮ ಆಯೋಜಿಸುವ ಕ್ರಮ ಹೇಳಿಕೊಡಲಾಗುತ್ತದೆ.ಪ್ರತಿವರ್ಷ ನವೆಂಬರ್‌ನಲ್ಲಿ ವಂಶಿ ಅಕಾಡೆಮಿ ಕಾರ್ತಿಕ ಸಂಗೀತೋತ್ಸವ ಆಯೋಜಿಸುತ್ತದೆ. ಮೂರು ದಿನಗಳ ಕಾಲ ನಡೆಯುವ ಈ ಪ್ರತಿಷ್ಠಿತ ಸಂಗೀತ ಸಮ್ಮೇಳನದಲ್ಲಿ ಸುಮಾರು 75 ಹಿರಿಯ ಕಿರಿಯ ಕಲಾವಿದರು ಭಾಗವಹಿಸುತ್ತಾರೆ. ಈ ‘ಸಂಗೀತ ಹಬ್ಬ’ದಲ್ಲಿ ಮಕ್ಕಳಿಗೂ ವಿಶೇಷ ಆದ್ಯತೆ ನೀಡಿ ಕಛೇರಿ ನೀಡಲು ಅವಕಾಶ ಕಲ್ಪಿಸಲಾಗುತ್ತದೆ’ ಎಂದು ಹೇಳುತ್ತಾರೆ ಈ ಕೊಳಲು ವಿದ್ವಾಂಸರು.ವಂಶಿ ಅಕಾಡೆಮಿ ಇದುವರೆಗೆ ಅನೇಕ ಹಿರಿಯ ಕಿರಿಯ ಕಲಾವಿದರಿಗೆ ಹಾಡಲು, ನುಡಿಸಲು ಅವಕಾಶ ಕಲ್ಪಿಸಿದೆ. ಸುಮಾರು 50 ಹಿರಿಯ ವಿದ್ವಾಂಸರನ್ನು ಸನ್ಮಾನಿಸಿದೆ. ಪ್ರತೀ ವರ್ಷ ಸಂಗೀತ ಉತ್ಸವಗಳು, ಕಿರಿಯರಿಗೆ ಸಂಗೀತ ಸ್ಪರ್ಧೆಗಳು, ಕಾರ್ಯಾಗಾರಗಳು, ಸೋದಾಹರಣ ಉಪನ್ಯಾಸಗಳು, ಮನೆಯಂಗಳ ಮತ್ತು ಶಾಲೆ ಆವರಣದಲ್ಲಿ ಸಂಗೀತ ಸತ್ಸಂಗ ಎಂಬ ವಿನೂತನ ಕಾರ್ಯಕ್ರಮ ಆಯೋಜಿಸುತ್ತಾ ಬಂದಿದೆ. ಇವೆಲ್ಲದರ ಪ್ರಮುಖ ಉದ್ದೇಶ ಸಂಗೀತ ರಸಾಸ್ವಾದ ಮತ್ತು ಮಕ್ಕಳಲ್ಲಿ ಸದ್ಭಾವನೆ ಮೂಡಿಸುವುದೇ ಆಗಿದೆ. ಕೊಳಲಿನಲ್ಲಿ ನೂರಾರು ಪ್ರಯೋಗ

ವಿದ್ವಾನ್‌ ಅನಂತರಾಮ್‌ ಅವರದು ಸಂಗೀತದ ಮನೆತನ. ಇವರು ತಮ್ಮ ತಾಯಿ ವಿದುಷಿ ಎ. ರಾಜಮ್ಮ ಕೇಶವಮೂರ್ತಿ ಅವರ ಬಳಿ ಆರಂಭಿಕ ಸಂಗೀತ ಕಲಿತರು. ಬಳಿಕ ಸಿ.ಎಂ. ಮಧುರಾನಾಥ್‌, ಬಿ.ಎನ್‌. ಸುರೇಶ್‌, ಆನೂರು ರಾಮಕೃಷ್ಣ, ಎಂ.ಆರ್‌. ದೊರೆಸ್ವಾಮಿ, ಡಾ.ಎನ್‌. ರಮಣಿ ಅವರ ಬಳಿ ಕೊಳಲು ಕಲಿತವರು. ಸಂಗೀತದ ಹಿರಿಯ ವಿದ್ವಾಂಸ ಆರ್‌.ಕೆ. ಶ್ರೀಕಂಠನ್‌ ಅವರ ಬಳಿಯೂ ಮಾರ್ಗದರ್ಶನ ಪಡೆದವರು.ಕೇಂದ್ರ ಸರ್ಕಾರ ನೀಡುವ ಅನೇಕ ಫೆಲೊಷಿಪ್‌ಗಳನ್ನು ಪಡೆದವರು. ಕರ್ನಾಟಕ ವೇಣು ಪರಂಪರೆ ಎಂಬ ವಿನೂತನ ಪ್ರಾಜೆಕ್ಟ್‌ ಮಾಡಿ ಯಶ ಗಳಿಸಿದ ಇವರಿಗೆ ಕಂಚಿ ಕಾಮಕೋಟಿ ಮಠದಿಂದ ಆಸ್ಥಾನ ವಿದ್ವಾನ್‌ ಬಿರುದು ಲಭಿಸಿದೆ. ಅಲ್ಲದೆ ಕೆಂಪೇಗೌಡ ಪ್ರಶಸ್ತಿ, ವರ್ಷದ ಉತ್ತಮ ಕಲಾವಿದ ಪ್ರಶಸ್ತಿಯೂ ಸಿಕ್ಕಿದೆ. ಸುಮಾರು 40 ವರ್ಷಗಳಿಂದ ಕೊಳಲು ನುಡಿಸುತ್ತಾ ಬಂದಿರುವ ಇವರು ಇದುವರೆಗೆ ಬಹುತೇಕ ಎಲ್ಲ ಪ್ರತಿಷ್ಠಿತ ವೇದಿಕೆಗಳಲ್ಲಿ ಲೆಕ್ಕವಿಲ್ಲದಷ್ಟು ಕಛೇರಿ ನೀಡಿದ್ದಾರೆ.

ಅಮೆರಿಕ, ಕೆನಡಾ, ಷಿಕಾಗೊ, ನ್ಯೂಜೆರ್ಸಿ, ಫಿಲಿಡೆಲ್ಫಿಯಾ ಮುಂತಾದ ರಾಷ್ಟ್ರಗಳಲ್ಲಿ ಇವರ ಕೊಳಲ ನಾದ ಕೇಳುಗರ ಮನತಣಿಸಿದೆ. ಸಂಗೀತ, ಅದರಲ್ಲೂ ಕೊಳಲಿನಲ್ಲಿ ಸದಾ ಪ್ರಯೋಗಶೀಲತೆಗೆ ಒಡ್ಡಿಕೊಂಡಿರುವ ವಿದ್ವಾನ್‌ ಅನಂತರಾಮ್‌ ಅವರು ಒಂದೇ ರಾಗ ಬಳಸಿ ವರ್ಣದಿಂದ ತಿಲ್ಲಾನದವರೆಗಿನ ಎಲ್ಲ ಸಂಗೀತ ಪ್ರಕಾರಗಳನ್ನು ನುಡಿಸಿದ್ದು ಬಹಳ ವಿಶೇಷ. ಜತೆಗೆ ಒಬ್ಬರೇ ವಾಗ್ಗೇಯಕಾರರ ಸುಮಾರು 15 ಕೃತಿಗಳನ್ನು ಒಂದೇ ವೇದಿಕೆಯಲ್ಲಿ ನುಡಿಸಿ ದಾಖಲೆ ನಿರ್ಮಿಸಿದ್ದು ಕೂಡ ಇವರ ಸಾಧನೆಯ ಪಟ್ಟಿಗೆ ಸೇರುತ್ತದೆ. ವಿಳಾಸ: ವಿದ್ವಾನ್‌ ಬಿ.ಕೆ. ಅನಂತರಾಮ್‌, ವಂಶಿ ಅಕಾಡೆಮಿ ಆಫ್‌ ಮ್ಯೂಸಿಕ್‌, ನಂ. 1667 (9/2), 10ನೇ ಮುಖ್ಯ ರಸ್ತೆ, ಎ ಬ್ಲಾಕ್‌, ಎರಡನೆ ಹಂತ, ರಾಜಾಜಿನಗರ, ಬೆಂಗಳೂರು 10. ಫೋನ್‌: 9341228994. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry