ಶುಕ್ರವಾರ, ಏಪ್ರಿಲ್ 23, 2021
31 °C

ಸುಸೂತ್ರ ಹೆರಿಗೆ ನೆರವಿಗೆ ಬಂದ ದೊಡ್ಡಣ್ಣ

ಶ್ರೀಪಾದ ಯರೇಕುಪ್ಪಿ Updated:

ಅಕ್ಷರ ಗಾತ್ರ : | |

ಕೆಲ ವರ್ಷಗಳ ಹಿಂದೆ ಉತ್ತರ ಕರ್ನಾಟಕದ ಗ್ರಾಮೀಣ ಭಾಗದಲ್ಲಿ ಹೆರಿಗೆಗಳು ಹೆಚ್ಚಾಗಿ ಮನೆಯಲ್ಲೇ ಆಗುತ್ತಿದ್ದವು. ಆಗ ಪ್ರಸೂತಿ ನಂತರದ ರಕ್ತಸ್ರಾವ ತಡೆಯುವುದೇ ಬಹು ದೊಡ್ಡ ಸಮಸ್ಯೆಯಾಗಿತ್ತು. ನವಜಾತ ಶಿಶುಗಳನ್ನು ಆರೈಕೆ ಮಾಡಲು ಸಹ ಸೂಕ್ತ ಸೌಲಭ್ಯ ಇರಲಿಲ್ಲ. ಇದರಿಂದ ತಾಯಂದಿರು ಮತ್ತು ಕೂಸುಗಳ ಸಾವಿನ ಪ್ರಕರಣಗಳು ಮೇಲಿಂದ ಮೇಲೆ ವರದಿಯಾಗುತ್ತಿದ್ದವು.ಇಂಥ ಸಂದರ್ಭದಲ್ಲಿ ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಜವಾಹರಲಾಲ್ ನೆಹರು ವೈದ್ಯಕೀಯ ಮಹಾವಿದ್ಯಾಲಯದ (ಜೆಎನ್‌ಎಂಸಿ) ಮಹಿಳಾ ಮತ್ತು ಮಕ್ಕಳ ಆರೋಗ್ಯ ಸಂಶೋಧನಾ ಘಟಕವು ಅಧ್ಯಯನವೊಂದನ್ನು ನಡೆಸಿತು. ಇದೀಗ ಈ ಸಂಶೋಧನೆ ಯಶಸ್ವಿಯಾಗಿದ್ದು, ಇದರ ಫಲಶ್ರುತಿ ಈಗಿನ ಮಹಿಳೆಯರು ಮತ್ತು ಮಕ್ಕಳಿಗೆ ಲಭ್ಯವಾಗುತ್ತಿದೆ.ನವಜಾತ ಶಿಶುವಿನ ಸಂರಕ್ಷಣೆ, ಪೋಷಣೆಯಲ್ಲಿ ಉತ್ತಮ ಸಾಧನೆ ಮಾಡಿರುವ ಈ ಘಟಕ, ಸಮುದಾಯ ಆಧಾರಿತ ಸಂಶೋಧನೆಯನ್ನೂ ಕೈಗೆತ್ತಿಕೊಂಡಿದೆ. ಈ ನಿಟ್ಟಿನಲ್ಲಿ ಅದು ಕಂಡುಕೊಂಡ `ಮಿಸೋಪ್ರೊಸ್ಟಾಲ್~ ಔಷಧಿಯ ಬಳಕೆ ಪ್ರಸೂತಿ ನಂತರದ ರಕ್ತಸ್ರಾವ ನಿಯಂತ್ರಣದಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ.ಸಂಶೋಧನೆಗೆ ಚಾಲನೆ

ಅಮೆರಿಕದ ರಾಷ್ಟ್ರೀಯ ಆರೋಗ್ಯ ಸಂಸ್ಥೆಯು (ಎನ್‌ಎಚ್‌ಆರ್) 2001ರಲ್ಲಿ ಮಹಿಳೆಯರು ಮತ್ತು ಮಕ್ಕಳ ಆರೋಗ್ಯ ಸಂಶೋಧನೆಗಾಗಿ ಜಾಗತಿಕ ಜಾಲವೊಂದನ್ನು ಆರಂಭಿಸಿತು. ಈ ಸಂಸ್ಥೆಯ ಧನಸಹಾಯದಡಿ ಭಾರತದಲ್ಲಿ ಎರಡು, ಪಾಕಿಸ್ತಾನ, ಜಾಂಬಿಯ, ಕೀನ್ಯ, ದಕ್ಷಿಣ ಅಮೆರಿಕದ ಅರ್ಜೆಂಟಿನಾ, ಮಧ್ಯ ಅಮೆರಿಕದ ಗ್ವಾಟೆಮಾಲ ದೇಶಗಳಲ್ಲಿ ತಲಾ ಒಂದು ಸಂಶೋಧನಾ ಘಟಕಗಳು ಆರಂಭವಾದವು.

 

ಇದರ ಭಾಗವಾಗಿ, ಜೆಎನ್‌ಎಂಸಿ ಸಂಶೋಧನಾ ಘಟಕವು ಅದೇ ವರ್ಷ ಎನ್‌ಎಚ್‌ಆರ್‌ನ ಅಂಗ ಸಂಸ್ಥೆಯಾದ ಮಕ್ಕಳ ಆರೋಗ್ಯ ಮತ್ತು ಮಾನವ ಅಭಿವೃದ್ಧಿ ರಾಷ್ಟ್ರೀಯ ಸಂಸ್ಥೆಯ ಸಹಯೋಗದಲ್ಲಿ ತನ್ನ ಸಂಶೋಧನಾ ಅಧ್ಯಯನವನ್ನು ಆರಂಭಿಸಿತು.ಬೆಳಗಾವಿ ಜಿಲ್ಲೆಯ ಯಮಕನಮರಡಿ, ನೇಗಿನಹಾಳ, ಹಿರೇಬಾಗೇವಾಡಿ, ಬೆಂಡಿಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಂಶೋಧನೆಗೆ ಚಾಲನೆ ನೀಡಲಾಯಿತು. 2006ರವರೆಗೂ ಈ ಕಾರ್ಯದಲ್ಲಿ ತೊಡಗಿಕೊಂಡ ತಂಡ, ಮಿಸೋಪ್ರೊಸ್ಟಾಲ್ ಮಾತ್ರೆಯಿಂದ ಪ್ರಸೂತಿ ನಂತರದ ರಕ್ತಸ್ರಾವವನ್ನು ನಿಯಂತ್ರಿಸಬಹುದು ಎಂಬುದನ್ನು ಸಾಬೀತುಪಡಿಸಿದೆ. 1600 ಮಹಿಳೆಯರ ಮೇಲೆ ಈ ಔಷಧಿ ಪ್ರಯೋಗಿಸಲಾಗಿದ್ದು, ಶೇ 50ಕ್ಕಿಂತಲೂ ಹೆಚ್ಚು ಉತ್ತಮ ಫಲಿತಾಂಶ ಲಭ್ಯವಾಗಿದೆ.`ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಉಪ ಕೇಂದ್ರಗಳಲ್ಲಿ ಈ ಮಾತ್ರೆ ನೀಡುವ ಬಗ್ಗೆ ಆರೋಗ್ಯ ಸಹಾಯಕಿಯರಿಗೆ ತರಬೇತಿ ನೀಡಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆ 2011ರಲ್ಲಿ ಅತ್ಯವಶ್ಯಕ ಔಷಧಿಯ ಪಟ್ಟಿಯಲ್ಲಿ ಸೇರಿಸಿರುವ ಈ ಮಾತ್ರೆಯನ್ನು ಎಲ್ಲ ಪ್ರಾಥಮಿಕ ಕೇಂದ್ರಗಳಿಗೂ ಒದಗಿಸಬೇಕೆಂದು ಕೇಂದ್ರ ಸರ್ಕಾರ ರಾಷ್ಟ್ರೀಯ ಮಾರ್ಗಸೂಚಿಯಲ್ಲಿ ತಿಳಿಸಿದೆ.20 ರಾಷ್ಟ್ರಗಳಲ್ಲಿ ಆಯಾಯ ಆರೋಗ್ಯ ಇಲಾಖೆಗಳು ಮಿಸೋಪ್ರೊಸ್ಟಾಲ್ ಬಳಕೆಗೆ ಅನುಮತಿ ನೀಡಿವೆ~ ಎಂದು ಸಂಶೋಧನಾ ತಂಡದ ಸಂಯೋಜಕ ಡಾ. ಶಿವಪ್ರಸಾದ ಗೌಡರ ಹೇಳುತ್ತಾರೆ.

`ರಕ್ತಸ್ರಾವ ತಡೆಯಲು ಆಕ್ಸಿಟೋಸಿನ್ ಇಂಜೆಕ್ಷನ್ ನೀಡಬೇಕಾಗುತ್ತಿತ್ತು. ಹೆರಿಗೆ ಆಗಿ ಒಂದು ನಿಮಿಷದೊಳಗೆ ಈ ಇಂಜೆಕ್ಷನ್ ನೀಡಬೇಕು. ಆದರೆ ಗ್ರಾಮ ಮಟ್ಟದಲ್ಲಿ ಇದು ಅಸಾಧ್ಯ.

 

ಈ ಕಾರಣದಿಂದ ಆಗಾಗ್ಗೆ ಗರ್ಭಿಣಿಯರು ಸಾವಿಗೀಡಾಗುತ್ತಿದ್ದರು. ಇದೀಗ ಮಿಸೋಪ್ರೊಸ್ಟಾಲ್ ಬಳಕೆಯಿಂದ ರಕ್ತಸ್ರಾವವನ್ನು ನಿಯಂತ್ರಣಕ್ಕೆ ತರಲಾಗಿದೆ. ಇದು ಮಾತ್ರೆಯಾದ್ದರಿಂದ ಸಕಾಲದಲ್ಲಿ ಇಂಜೆಕ್ಷನ್ ನೀಡಲು ತರಬೇತುದಾರರೇ ಸ್ಥಳದಲ್ಲಿ ಇರಬೇಕು ಎಂದೇನಿಲ್ಲ. ಯಾರು ಬೇಕಾದರೂ ಸುಲಭವಾಗಿ ಬಳಸಲು ಸಾಧ್ಯವಾಗಿದೆ~ ಎನ್ನುತ್ತಾರೆ ಅವರು.ಶಿಶು ಸಂರಕ್ಷಣೆ

ಹೀಗೆ ಬರೀ ತಾಯಂದಿರ ಜೀವ ಉಳಿಸುವುದಷ್ಟೇ ಅಲ್ಲ ಜನನದ ನಂತರ ಕೂಸಿಗೆ ಉಂಟಾಗುವ ಉಸಿರಾಟದ ತೊಂದರೆ ನಿವಾರಿಸಲು ಸಹ ಜೆಎನ್‌ಎಂಸಿ ಯಶಸ್ವಿಯಾಗಿದೆ.ಬ್ಯಾಗ್-ಮಾಸ್ಕ್ ಎಂಬ ಹೆಸರಿನಲ್ಲಿ 2005ರಿಂದ 2008ರವರೆಗೆ ಅಧ್ಯಯನ ನಡೆಸಿದ ಸಂಶೋಧನಾ ತಂಡ, ಉಸಿರಾಟದ ತೊಂದರೆಯಿಂದ ಸಾವಿಗೀಡಾಗುತ್ತಿದ್ದ ಕೂಸುಗಳ ಪ್ರಮಾಣವನ್ನು ನಿಯಂತ್ರಿಸಿದೆ. ಇದಕ್ಕಿಂತ ಮೊದಲು ಈ ಭಾಗದಲ್ಲಿ 1000 ನವಜಾತ ಶಿಶುಗಳಲ್ಲಿ 35 ಕೂಸುಗಳು ಸಾವಿಗೀಡಾಗುತ್ತಿದ್ದವು. ಈಗ ಸಾವಿನ ಪ್ರಮಾಣ 15ಕ್ಕೆ ಇಳಿದಿರುವುದು ಅಧ್ಯಯನದಿಂದ ತಿಳಿದು ಬಂದಿದೆ.`ಉಸಿರಾಟದ ತೊಂದರೆ ಇರುವ ಮಕ್ಕಳಿಗೆ ಮಾಸ್ಕ್ ಹಾಕಿ ಬ್ಯಾಗ್ ಪಂಪ್ ಮಾಡುವ ಮೂಲಕ ಕೃತಕ ಉಸಿರಾಟ ನೀಡಲಾಗುತ್ತದೆ. ಜಿಲ್ಲೆಯ 26 ಪ್ರಾಥಮಿಕ ಕೇಂದ್ರಗಳಲ್ಲಿ ದಾದಿಯರು, ಆರೋಗ್ಯ ಸಹಾಯಕಿಯರು, ಪ್ರಾಥಮಿಕ ಆರೋಗ್ಯ ಕೇಂದ್ರಗಳ ಆರೋಗ್ಯಾಧಿಕಾರಿಗಳು, ಖಾಸಗಿ ನರ್ಸಿಂಗ್ ಹೋಂಗಳ ಸಿಬ್ಬಂದಿಗೆ ಕೃತಕ ಉಸಿರಾಟ ನೀಡುವ ಬಗ್ಗೆ ತರಬೇತಿ ನೀಡಲಾಗಿದೆ~ ಎಂದು ಡಾ. ಗೌಡರ ಹೇಳುತ್ತಾರೆ.ಕೇಂದ್ರ ಸರ್ಕಾರ ಸಹ 2010ರಿಂದ ನವಜಾತ ಶಿಶು ಸುರಕ್ಷಾ ಕಾರ್ಯಕ್ರಮದಲ್ಲಿ ಬ್ಯಾಗ್- ಮಾಸ್ಕ್ ಬಳಕೆಗೆ ಒತ್ತು ನೀಡಿದೆ. ಅಮೆರಿಕದ ಚಿಕ್ಕ ಮಕ್ಕಳ ಅಕಾಡೆಮಿಯ ಮಾರ್ಗದರ್ಶನದಲ್ಲಿ ಸಮುದಾಯಕ್ಕೆ ಅವಶ್ಯವಿರುವ ಕೆಲವು ಅಂಶಗಳನ್ನು ಅಧ್ಯಯನದಲ್ಲಿ ಅಳವಡಿಸಿಕೊಳ್ಳಲಾಗಿದೆ.ಅಥಣಿ, ಚಿಕ್ಕೋಡಿ, ಗೋಕಾಕ, ರಾಮದುರ್ಗ, ಬೈಲಹೊಂಗಲ, ಸವದತ್ತಿ ತಾಲ್ಲೂಕು ಆಸ್ಪತ್ರೆಗಳು, ಕಾಗವಾಡ, ಸಂಕೇಶ್ವರ, ನಾಗನೂರ, ಬೆಳವಡಿಯ ಸಮುದಾಯ ಆರೋಗ್ಯ ಕೇಂದ್ರಗಳು, 16 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 8 ಖಾಸಗಿ ಆಸ್ಪತ್ರೆಗಳಲ್ಲಿ ಈಚೆಗೆ ತರಬೇತಿ ಆರಂಭಿಸಲಾಗಿದೆ.ಅವಧಿ ಪೂರ್ವ ಜನನದ ತೊಂದರೆಯಿಂದ ಬಳಲುವ ಮಕ್ಕಳ ಆರೋಗ್ಯ ಸಂರಕ್ಷಣೆಗೂ ಜೆಎನ್‌ಎಂಸಿ ಮುಂದಾಗಿದೆ.`ಇಂತಹ ಮಕ್ಕಳ ಪುಪ್ಪುಸ (ಲಂಗ್ಸ್) ಸರಿಯಾಗಿ ಬೆಳೆದಿರುವುದಿಲ್ಲ. ಇದರಿಂದ ಮಕ್ಕಳು ವಿವಿಧ ತೊಂದರೆಗಳಿಗೆ ಒಳಗಾಗುವ ಸಾಧ್ಯತೆ ಹೆಚ್ಚು. ಅವಧಿ ಪೂರ್ವ ಹೆರಿಗೆ ಸಂಭವಿಸುವ ಲಕ್ಷಣ ಕಂಡು ಬರುವ ಮಹಿಳೆಯರಿಗೆ `ಡೆಕ್ಸಾಮೆಥಸೋನ್~ ಎಂಬ ಇಂಜೆಕ್ಷನ್ ನೀಡುವುದರಿಂದ ಮಕ್ಕಳ ಪುಪ್ಪುಸದ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಈ ಕುರಿತು ಆಶಾ ಕಾರ್ಯಕರ್ತೆಯರಿಗೆ ತರಬೇತಿ ನೀಡಲಾಗಿದೆ.ಇಂಥ ಗರ್ಭಿಣಿಯರನ್ನು ಗುರುತಿಸಿ, ಸಮೀಪದ ಪ್ರಾಥಮಿಕ ಕೇಂದ್ರಗಳಲ್ಲಿ ಮೊದಲನೇ ಇಂಜೆಕ್ಷನ್ ನೀಡಬೇಕು. 16 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಈಗಾಗಲೇ ತರಬೇತಿ ನೀಡಲಾಗುತ್ತಿದೆ~ ಎಂದು ಗೌಡರ ಮಾಹಿತಿ ನೀಡುತ್ತಾರೆ.ಪ್ರಸೂತಿ ನಂತರದ ರಕ್ತಸ್ರಾವ ನಿಯಂತ್ರಣದ ಸಂಶೋಧನಾ ತಂಡದಲ್ಲಿ ಜೆಎನ್‌ಎಂಸಿಯ ಡಾ. ಬಿ.ಎಸ್.ಕೋಡ್ಕಣಿ,  ಡಾ. ವಿಜಯಾ ನಾಯ್ಕ, ಡಾ. ಎಂ.ಬಿ.ಬೆಲ್ಲದ, ಡಾ. ಶೋಭನಾ ಪಟ್ಟೇದ ಹಾಗೂ ನವಜಾತ ಶಿಶುವಿಗೆ ಕೃತಕ ಉಸಿರಾಟ ನೀಡುವ ಬಗ್ಗೆ ಡಾ. ವಿ.ಡಿ.ಪಾಟೀಲ, ಡಾ. ಎನ್.ಎಸ್.ಮಹಾಂತ ಶೆಟ್ಟಿ, ಡಾ. ಎಸ್.ಎಂ.ಧಡೇದ, ಡಾ. ರೂಪಾ ಬೆಲ್ಲದ ಅಧ್ಯಯನ ನಡೆಸಿದ್ದರು. ಜೆಎನ್‌ಎಂಸಿ ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಅಮೆರಿಕದ ಎನ್‌ಎಚ್‌ಆರ್, ಸಂಶೋಧನೆಗೆ ಧನಸಹಾಯ ಮುಂದುವರಿಸುವ ಇಂಗಿತ ವ್ಯಕ್ತಪಡಿಸಿದೆ.

 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.