ಸೋಮವಾರ, ಜನವರಿ 27, 2020
25 °C
facebook ಟೂರಿಸಂ

ಸುಸ್ಥಿರ ಪ್ರವಾಸೋದ್ಯಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುಸ್ಥಿರ ಪ್ರವಾಸೋದ್ಯಮ

­‘ವಾಹ್ ಸೂಪರ್ ಕ್ಲಿಕ್. ಫೋಟೊಗ್ರಫಿ ಅದ್ಭುತವಾಗಿದೆ. ಈ ಪ್ಲೇಸ್. ಎಲ್ಲಿದೆ ಇದು ? ಎಷ್ಟು ದೂರ ? ವಾಹನ ವ್ಯವಸ್ಥೆ ಇದೆಯಾ ? ಅಲ್ಲಿ ಬೋರ್ಡಿಂಗ್, ಲಾಡ್ಜಿಂಗ್ ವ್ಯವಸ್ಥೆ ಇದೆಯಾ? ಯಾವುದಾದರೂ ಸಂಪರ್ಕ ಸಂಖ್ಯೆ ಕೊಡ್ತೀರಾ..?’ತನ್ನ ಫೇಸ್‌ಬುಕ್ ಅಕೌಂಟ್‌ನಲ್ಲಿರುವ ಚಿತ್ರಗಳನ್ನು ಕಂಡು ಖಾತೆದಾರರು ಪ್ರತಿಕ್ರಿಯಿಸುವ ರೀತಿಯನ್ನು ನಿಮ್ಹಾನ್ಸ್ ನಲ್ಲಿ ಸೈಕೋ ಫಾರ್ಮಕಾಲಜಿ ವಿಭಾಗದಲ್ಲಿ ಸಂಶೋಧನಾ ಅಭ್ಯರ್ಥಿಯಾಗಿರುವ ರವಿ ಹೆಗಡೆ ಹೀಗೆ ವಿವರಿಸುತ್ತಾರೆ. ‘ಫೇಸ್‌ಬುಕ್‌ನಲ್ಲಿ ಅಪ್‌ಡೇಟ್ ಮಾಡುವ ಬಹುತೇಕ ಚಿತ್ರಗಳಿಗೆ ಖಾತೆದಾರರು ಹೀಗೆ ಅತ್ಯುತ್ಸಾಹದಿಂದ ಪ್ರತಿಕ್ರಿಯಿಸುತ್ತಾರೆ. ಅದರಲ್ಲಿ ಕೆಲವರು ಚಿತ್ರಗಳು, ತಾಣಗಳ ಬಗ್ಗೆ ವಿಮರ್ಶೆಯನ್ನೂ ಮಾಡುತ್ತಾರೆ’ ಎನ್ನುವುದು ಅವರ ಅಭಿಪ್ರಾಯ.ಹೊನ್ನಾವರದ ರವಿ ಹೆಗಡೆ ಎಂ.ಎಸ್ಸಿ ಪ್ರಾಣಿಶಾಸ್ತ್ರ ಪದವೀಧರರು. ಬಯೋ ಫಿಸಿಕ್ಸ್‌ನಲ್ಲಿ ಎಂ.ಫಿಲ್ ಮಾಡಿದ್ದಾರೆ (ಕ್ಲಿನಿಕಲ್ ಟ್ರಯಲ್). ಸದ್ಯ ನಿಮ್ಹಾನ್ಸ್‌ನಲ್ಲಿ ನರರೋಗ ವಿಷಯಕ್ಕೆ ಸಂಬಂಧಿಸಿದ ಸಂಶೋಧನೆ ನಡೆಸುತ್ತಿದ್ದಾರೆ. ಶಿಕ್ಷಣ, ವೃತ್ತಿ, ಹವ್ಯಾಸ ಹೀಗೆ ಎಲ್ಲ ಕ್ಷೇತ್ರದಲ್ಲೂ ಅವರದ್ದು ವಿಭಿನ್ನ ಪಯಣ. ಬಾಲ್ಯದಿಂದಲೇ ಛಾಯಾಗ್ರಹಣದ ಆಸಕ್ತಿ. ಪರಿಸರ ಕಾಳಜಿ. ಪದವಿ ವಿದ್ಯಾಭ್ಯಾಸ ಹಾಗೂ ಸಂಶೋಧನೆಯ ಅವಧಿಯಲ್ಲಿ ಪಶ್ಚಿಮಘಟ್ಟಗಳ ಕಾಡಿನಲ್ಲಿ ಜಂಗಮನಂತೆ ಸಂಚಾರ. ಸ್ಥಳ ಪರಿಸರ ಪರಿಸ್ಥಿತಿಯ ಬದಲಾವಣೆಯ ದಾಖಲಾತಿಯ ಹವ್ಯಾಸ. ಶರಾವತಿ ನದಿಯ ಆಸುಪಾಸಿನ ಕಾಡಿನಲ್ಲಿ ಓಡಾಡುತ್ತಾ ಪರಿಸರ ಚಿತ್ರಗಳ ಜೊತೆಗೆ ಶಿಲಾಶಾಸನಗಳ ಅಧ್ಯಯನ. ಹೀಗೆ ವಿಭಿನ್ನ ಪಯಣದಲ್ಲಿ ಕ್ಲಿಕ್ಕಿಸಿದ ಛಾಯಾಚಿತ್ರ-ಗಳನ್ನು ಫೇಸ್‌ಬುಕ್‌ಗೆ ಅಪ್‌ಲೋಡ್ ಮಾಡುತ್ತಿದ್ದಾರೆ.ಪ್ರತಿ ವಾರ ತಪ್ಪದೇ ಚಿತ್ರಗಳನ್ನು ಅಪ್‌ಡೇಟ್ ಮಾಡುವ ಹವ್ಯಾಸ ಹೆಗಡೆಯವರದ್ದು. ‘ಒಂದು ವಾರ ಚಿತ್ರಗಳನ್ನು ಅಪ್‌ಡೇಟ್ ಮಾಡದಿದ್ದರೆ, ಫೇಸ್‌ಬುಕ್ ಗೆಳೆಯರು ಇ-ಮೇಲ್ ಮೂಲಕ ವಿಚಾರಿಸುತ್ತಾರೆ. ಚಿತ್ರಗಳ ಜೊತೆಗೆ ಆಂಗ್ಲ ಭಾಷೆಯಲ್ಲಿ ನೀಡುವ ಸಣ್ಣ ಮಾಹಿತಿ, ಫೇಸ್‌ಬುಕ್ ಗೆಳೆಯರಿಗೆ ಇದೊಂದು ರೀತಿಯ ಪರಿಸರ ಪ್ರವಾಸಿ ಮಾಹಿತಿ ಸಂವಹನದ ಜಾಲತಾಣಗಳಾಗಿದೆ’ ಎನ್ನುತ್ತಾರೆ ರವಿಹೆಗಡೆ.ನಿಮ್ಹಾನ್ಸ್, ರಾಮನ್ ಇನ್ಸ್‌ಟಿಟ್ಯೂಟ್, ಐಐಎಸ್‌ಸಿಯಂತಹ ಪ್ರತಿಷ್ಠಿತ ಸಂಶೋಧನಾ ಕೇಂದ್ರಗಳಲ್ಲಿ ಕೆಲಸ ಮಾಡುವವರು ರವಿ ಹೆಗಡೆಯವರ ಫೇಸ್‌ಬುಕ್ ಖಾತೆಯಲ್ಲಿರುವ ಛಾಯಾಚಿತ್ರಗಳಿಗೆ ಮನಸೋತು, ತಾಣಗಳ ವೀಕ್ಷಣೆಗೆ ಮುಂದಾಗಿದ್ದಾರೆ. ಹಾಗೆ ಸ್ಥಳ ವೀಕ್ಷಣೆಗೆ ಹೋಗುವವರೆಲ್ಲರಿಗೂ ರವಿ ಹೆಗಡೆಯವರೇ ಮಾರ್ಗದರ್ಶನ ನೀಡುತ್ತಾರೆ. ಕಿವಿಮಾತು ಹೇಳುತ್ತಾರೆ. ಹೊರ ದೇಶದ ಗೆಳೆಯರಿಗೆ, ಸ್ಥಳೀಯ ಗೈಡ್ ಹಾಗೂ ನಿಷ್ಠಾವಂತ ವಾಹನ ಚಾಲಕರನ್ನು ಪರಿಚಯಿಸಿಕೊಟ್ಟಿದ್ದಾರೆ.ಧಾರೇಶ್ವರ ಬೀಚ್ ಪರಿಸರದ ಪ್ರದೇಶದಲ್ಲಿ (‘ಅಂದು- ಇಂದು’) ಹತ್ತು ವರ್ಷಗಳ ಅಂತರದಲ್ಲಿ ಉಂಟಾಗಿರುವ ಬದಲಾವಣೆಗಳನ್ನು ಚಿತ್ರಸಹಿತ ದಾಖಲಿಸಿದ್ದಾರೆ. 10 ವರ್ಷಗಳ ಹಿಂದೆ 4 ಮಾನವ ಚಾಲಿತ ದೋಣಿಗಳಲ್ಲಿ ಮೀನು ಹಿಡಿಯುತ್ತಿದ್ದ ಮೀನುಗಾರರು, ಇಂದು 40 ಯಾಂತ್ರಿಕ ಬೋಟ್‌ಗಳು ದಡದಲ್ಲಿ ನಿಂತಿವೆ. ‘ಮೊದಲು ತಿಳಿಯಾಗಿದ್ದ ಅರಬ್ಬೀ ಸಮುದ್ರ, ಯಾಂತ್ರೀಕರಣದ ಪ್ರಭಾವದಿಂದ ಕಲುಷಿತಗೊಳ್ಳುತ್ತಿದೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ.ಶಾಸನಗಳು, ಪುರಾತತ್ವ ಸ್ಮಾರಕಗಳ ಸಂರಕ್ಷಣೆ ಕುರಿತು ಆಸಕ್ತಿ ತೋರಿಸುವ ರವಿ ಹೆಗಡೆಯವರು, ಹಂಪಿಯಲ್ಲಿ ಪುರಂದರ ದಾಸರ ಕಲ್ಲಿನ ವಿಗ್ರಹಕ್ಕೆ ಕುಂಕುಮ ಹಚ್ಚಿ, ಅಪರೂಪದ ದಾಸವರೇಣ್ಯರ ಕುರುಹನ್ನೂ ಅಳಿಸಿ ಹಾಕುತ್ತಿರುವ ನಾಗರಿಕರ ಮೌಢ್ಯಕ್ಕೆ ವಿರೋಧ ವ್ಯಕ್ತಪಡಿಸುತ್ತಾರೆ. ಈ ಕುರಿತು ಬಳ್ಳಾರಿ ಜಿಲ್ಲಾಧಿಕಾರಿಯವರನ್ನು ಸಂಪರ್ಕಿಸಿ, ಭಾರತೀಯ ಪುರಾತತ್ವ ಇಲಾಖೆಯ ಕಾನೂನಿನ ವ್ಯಾಪ್ತಿಯಲ್ಲಿ ಈ ರೀತಿ ವಿಗ್ರಹಗಳನ್ನು ಪೂಜಿಸುವ ಅವಕಾಶವಿರುವ ಬಗ್ಗೆ ಮಾಹಿತಿ ಪಡೆದಿದ್ದಾರೆ. ‘ನಾನು ಕೇವಲ ಛಾಯಾಚಿತ್ರ ತೆಗೆಯುವುದನ್ನಷ್ಟೇ ಹವ್ಯಾಸವಾಗಿಸಿಕೊಂಡಿಲ್ಲ, ಸುಸ್ಥಿರ ಪ್ರವಾಸೋದ್ಯಮ, ಸಾಂಸ್ಕೃತಿಕ ರಕ್ಷಣೆಯಲ್ಲೂ ಕೆಲಸ ಮಾಡುತ್ತಿದ್ದೇನೆ’ ಎಂದು ಸ್ಪಷ್ಟಪಡಿಸುತ್ತಾ, ಫೇಸ್‌ಬುಕ್ ಬಳಕೆಯಿಂದಲೂ ಈ ಕುರಿತು ಜಾಗೃತಿ ಮೂಡಿಸಬಹುದು ಎನ್ನುತ್ತಾರೆ ರವಿ ಹೆಗಡೆ.

 

ಪ್ರತಿಕ್ರಿಯಿಸಿ (+)