ಭಾನುವಾರ, ಡಿಸೆಂಬರ್ 8, 2019
20 °C

ಸುಸ್ಥಿರ ಬದುಕು ಮತ್ತು ಮಹಿಳೆ ಆರೋಗ್ಯ

Published:
Updated:

ಮಹಿಳೆಯ ಆರೋಗ್ಯದ ವಿಚಾರಕ್ಕೆ ನಮ್ಮ ಸಮಾಜ ಇಂದಿಗೂ ಹೆಚ್ಚು ಪ್ರಾಮುಖ್ಯ ನೀಡಿಲ್ಲ. ಮಗುವನ್ನು ಹೆರುವ ವ್ಯಕ್ತಿಯಾಗಿ ಮಹಿಳೆಯನ್ನು ಗುರುತಿಸುವುದರಿಂದ ಆಕೆಯು ಗರ್ಭಿಣಿಯಾದಾಗ ಸಿಗುವ ಆರೈಕೆ ಕೂಡ ಆಕೆಗಲ್ಲದೆ ಹೊಟ್ಟೆಯಲ್ಲಿ ಬೆಳೆಯುವ ಮಗುವಿಗಾಗಿಯೇ ಇರುತ್ತದೆ.ಕಾಲ ಕಳೆದಂತೆ ಮಗುವಿನ ಆರೋಗ್ಯದಷ್ಟೇ ತಾಯಿಯ ಆರೋಗ್ಯವೂ ಮುಖ್ಯ ಎನ್ನುವ ತಿಳಿವಳಿಕೆ ಬಂದಿದ್ದರೂ ಬಾಣಂತಿಯ ಆರೈಕೆಯೂ ಹಾಲುಣಿಸುವ ಮಗುವಿಗಾಗಿಯೇ ಸೀಮಿತವಾಗಿರುತ್ತದೆ.ಆದರೆ ಹೆಣ್ಣಿಗೆ ತಾಯ್ತನಕ್ಕೆ ಸಂಬಂಧವಿಲ್ಲದ ಎಲ್ಲಾ ಆರೋಗ್ಯದ ಸಮಸ್ಯೆಗಳು ಗಂಡಿನಷ್ಟೇ ಇರುತ್ತವೆ ಎನ್ನುವ ದೃಷ್ಟಿಯನ್ನು ನಾವು ಇನ್ನೂ ಸಂಪೂರ್ಣವಾಗಿ ಬೆಳೆಸಿಕೊಂಡಿಲ್ಲ. ಈ ತಿಳಿವಳಿಕೆ ಇದ್ದರೂ ಅದನ್ನು ಅಷ್ಟಾಗಿ ಗಮನಿಸುವುದಿಲ್ಲ. ಮನೆಯಲ್ಲಿ ನಮ್ಮೆಲ್ಲರ ತಾಯಂದಿರ ಮತ್ತು ಹೆಂಡತಿಯರ ಆರೋಗ್ಯದ ವಿಚಾರವನ್ನೇ ಗಮನಿಸಿದರೂ ನಮಗೆ ಈ ವಿಷಯ ತಿಳಿಯುತ್ತದೆ.ಗಂಡನ, ಮಕ್ಕಳ ಮತ್ತು ಮನೆಯವರೆಲ್ಲರ ಆರೈಕೆ, ಲಾಲನೆ ಪಾಲನೆ, ಆಹಾರ ಒದಗಿಸುವ ಕೆಲಸ, ಮನೆಗೆಲಸವೆಲ್ಲವನ್ನೂ ಮಾಡುವುದರಲ್ಲೇ ಹೆಣ್ಣಿನ ಸಂಪೂರ್ಣ ಗಮನವಿರುವುದರಿಂದ ಆಕೆಯ ಆರೋಗ್ಯ ಕಡೆಗಣನೆಗೆ ಒಳಗಾಗಿರುತ್ತದೆ. ಇನ್ನು ದುಡಿಯುವ ಮಹಿಳೆಯ ಪಾಡು ನಮ್ಮೆಲ್ಲರಿಗೂ ತಿಳಿದಿದೆ. ಒಬ್ಬ ವ್ಯಕ್ತಿಯಾಗಿ ಅವಳ ಆರೋಗ್ಯವನ್ನು ತಾಯ್ತನದಿಂದ ಬಿಡಿಸಿ ನೋಡುವುದನ್ನು ನಾವು ಈಗಲಾದರೂ ರೂಢಿಸಿಕೊಳ್ಳಬೇಕಿದೆ.1987ರಲ್ಲಿ ಸುರಕ್ಷಿತ ತಾಯ್ತನದ ಅಭಿಯಾನ ಮತ್ತು 1995ರ ಬೀಜಿಂಗ್ ಮಹಿಳೆಯರಿಗಾಗಿ ಜಾಗತಿಕ ವೇದಿಕೆ ಮೊಟ್ಟಮೊದಲ ಬಾರಿಗೆ ಜಾಗತಿಕ ಮಟ್ಟದಲ್ಲಿ ಮಹಿಳೆಯರ ಆರೋಗ್ಯದ ಮೇಲೆ ದೃಷ್ಟಿ ಹರಿಸಿದವು.ಇವುಗಳ ಉದ್ದೇಶ ಕೂಡ ಆಕೆಯ ತಾಯ್ತನದ ಆರೋಗ್ಯಕ್ಕೆ ಪ್ರಾಮುಖ್ಯ ಕೊಡುವುದೇ ಆಗಿತ್ತು. ಆದರೆ ಈ ಅಭಿಯಾನಗಳ ಪ್ರಯತ್ನದಿಂದ ಜಾಗತಿಕ ಮಟ್ಟದಲ್ಲಿ, ಅದರಲ್ಲೂ ಮುಂದುವರೆಯುತ್ತಿರುವ ದೇಶಗಳಲ್ಲಿ, ಮಹಿಳೆಯ ತಾಯ್ತನದಿಂದಾಗುವ ಸಾವಿನ ಸಂಖ್ಯೆಯು ಕ್ರಮೇಣ ಗಣನೀಯವಾಗಿ ಕಡಿಮೆಯಾಗಲು ಸಾಧ್ಯವಾಯಿತು.ಈ ಪ್ರಯತ್ನಗಳ ವ್ಯಾಪ್ತಿಯಿಂದ ಮೊದಲ ಬಾರಿಗೆ (2000) ವಿಶ್ವಸಂಸ್ಥೆಯು ತನ್ನ ಕಾರ್ಯ ಪರಿಧಿಯೊಳಗೆ ಮಹಿಳೆಯ ಆರೋಗ್ಯಕ್ಕೆ ಸ್ಥಾನ ಕಲ್ಪಿಸಿಕೊಟ್ಟಿತು. ಮಹಿಳೆಯ ಆರೋಗ್ಯಕ್ಕೆ ಜಾಗತಿಕ ಮಟ್ಟದಲ್ಲಿ ಕಾರ್ಯಕ್ರಮಗಳು ರೂಪುಗೊಳ್ಳಲು ಇದರಿಂದ ಅನುವಾಯಿತು. ಇಲ್ಲಿ ನಾವು ಗಮನಿಸಬೇಕಾದ ಅಂಶವೆಂದರೆ, ಹೆಣ್ಣಿನ ಆರೋಗ್ಯಕ್ಕೆ ಸ್ವಲ್ಪ ಮಟ್ಟಿಗಾದರೂ ಪ್ರಾಮುಖ್ಯ ದೊರಕಿದ್ದು ತೀರಾ ಈಚೆಗೆ ಎಂಬುದು.2016ರಿಂದ ಚಾಲ್ತಿಗೆ ಬಂದಿರುವ ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿಯ ಗುರಿಗಳಲ್ಲಿ ಮಹಿಳೆಯ ಆರೋಗ್ಯವು ಸೇರಿದೆಯಾದರೂ ಅದರ ವ್ಯಾಪ್ತಿ ಮತ್ತೆ ತಾಯ್ತನ ಮತ್ತು ಮಗುವಿನ ಆರೈಕೆಗೇ ಬಹುಪಾಲು ಸೀಮಿತವಾಗಿರುವುದು ವಿಪರ್ಯಾಸ.ಮಹಿಳೆಯ ಆರೋಗ್ಯದ ವ್ಯಾಪ್ತಿಯು ಅವಳ ತಾಯ್ತನದಿಂದಾಚೆಗೆ ಒಂದು ಸಮುದಾಯವನ್ನು ಕಟ್ಟುವಲ್ಲಿ, ಒಂದು ದೇಶದ ಅಭಿವೃದ್ಧಿಗೆ ಪೂರಕವಾಗಿ ನಿಲ್ಲುತ್ತದೆ ಎಂಬ ಅಂಶವನ್ನು ನಾವು ಗುರುತಿಸಿ ಒಪ್ಪಿಕೊಳ್ಳಬೇಕಾಗುತ್ತದೆ. ಆರೋಗ್ಯವಂತ ಮಹಿಳೆ ತನ್ನ ಕುಟುಂಬ, ಸಮುದಾಯ ಮತ್ತು ಸಮಾಜಕ್ಕೆ ಸಮರ್ಥವಾಗಿ ದುಡಿಯುತ್ತಾಳೆ.ಈ ದುಡಿಮೆ ಒಂದು ದೇಶದ ಪ್ರಗತಿಗೆ ಪುರುಷರ ದುಡಿಮೆಯಷ್ಟೇ, ಹಲವು ಸಂದರ್ಭಗಳಲ್ಲಿ ಅದಕ್ಕಿಂತ ಹೆಚ್ಚು ಪ್ರಮುಖ ಪಾತ್ರ ವಹಿಸುತ್ತಿದೆ ಎನ್ನುವುದನ್ನು ಪರಿಗಣಿಸಬೇಕು.ಅಂದರೆ, ನಮ್ಮ ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಮಹಿಳೆಯರ ದುಡಿಮೆಯ ಪಾತ್ರವನ್ನು ನಾವು ಪರಿಗಣಿಸಬೇಕಿದೆ. ಲಕ್ಷಾಂತರ ಅಸಂಘಟಿತ ಶ್ರಮಿಕ ಮಹಿಳೆಯರು ಸಮಾಜದ ಕೆಳ ಸ್ತರದಲ್ಲಿ ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಅವರು ಗೃಹಿಣಿಯರಾಗಿ, ಕೃಷಿಕರಾಗಿ, ಕೂಲಿಕಾರರಾಗಿ, ಸಣ್ಣ ಪ್ರಮಾಣದ ವ್ಯಾಪಾರಿ ಮಹಿಳೆಯರಾಗಿ, ಮನೆ ಕೆಲಸದವರಾಗಿ, ಈಗಲೂ ಮಲ ಹೊರುವ ಮಹಿಳೆಯರಾಗಿ ನಮ್ಮ ನಡುವೆ ಇದ್ದಾರೆ.ಇವರ ದಿನನಿತ್ಯದ ಶ್ರಮ ಒಂದು ಸಮುದಾಯದ ಅಭಿವೃದ್ಧಿಗೆ ದೊಡ್ಡ ಮಟ್ಟದ ಕೊಡುಗೆಯಾಗಿದೆ. ಈ ಮಹಿಳೆಯರ ಶ್ರಮದ ಕೊಡುಗೆ ಲೆಕ್ಕಕ್ಕೆ ಸಿಗದೇ ಇರಬಹುದು. ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ ಅಧ್ಯಯನದ (2010) ಪ್ರಕಾರ ಮಹಿಳೆಯರ ಲೆಕ್ಕಕ್ಕೆ ಸಿಗುವ ಆದಾಯದ ಕೊಡುಗೆಯನ್ನು ಗಮನಿಸಿದರೆ ಅದು ನಮ್ಮ ದೇಶದ ಜಿಡಿಪಿಯಲ್ಲಿ ಶೇ 19.8ರಷ್ಟು ಇದೆ. ಆದರೆ ಲೆಕ್ಕಕ್ಕೆ ಸಿಗದ ಮಹಿಳೆಯ ಶ್ರಮ ಇನ್ನೂ ಅಧಿಕ.ಈ ಲೆಕ್ಕಕ್ಕೆ ಸಿಗದ ಶ್ರಮವೇ ನಮ್ಮ ಕುಟುಂಬಗಳನ್ನು ಮತ್ತು ಸಮಾಜವನ್ನು ಮುಂದುವರೆಸುತ್ತಿರುವುದು. ಈ ಶ್ರಮವೇ ನಮ್ಮ ದಿನ ನಿತ್ಯದ ಬದುಕನ್ನು ಸಾಧ್ಯವಾಗಿಸುತ್ತಿರುವುದು. ಮಹಿಳೆಯ ಶ್ರಮವನ್ನು ಶ್ರಮವೆಂದು ಗುರುತಿಸುವ ಪ್ರಯತ್ನವನ್ನೂ ನಾವು ಮಾಡಿಲ್ಲ. ಆಕೆಯ ಶ್ರಮವನ್ನು ಕರ್ತವ್ಯದ ರೂಪದಲ್ಲಿ ಸಮಾಜ ಸ್ವೀಕರಿಸುತ್ತಿದೆ. ಹಾಗಾಗಿ ಆಕೆಯ ಶ್ರಮವು ಗುರುತಿಸಿಕೊಳ್ಳದೆ ಗೌಣವಾಗುತ್ತದೆ.ಮಹಿಳೆಯ ಶ್ರಮ ಒಂದು ದೇಶದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಹೇಗೆ ಪೂರಕವಾಗಿರುತ್ತದೆ ಎಂಬುದನ್ನು ತಿಳಿಯಲು ಮಹಿಳೆಯ ಆರೋಗ್ಯದ ಹಲವು ಆಯಾಮಗಳನ್ನು ಗುರುತಿಸಬೇಕಾಗುತ್ತದೆ. ಮಹಿಳೆಯ ಆರೋಗ್ಯ ಮತ್ತು ಆಕೆಗೆ  ಇರುವ ಉದ್ಯೋಗಾವಕಾಶಗಳು ಒಂದಕ್ಕೊಂದು ಪೂರಕ. ಮಹಿಳೆಗೆ ಉದ್ಯೋಗದ ಅವಕಾಶಗಳು ಆಕೆಯ ಆರೋಗ್ಯದ ಸುಸ್ಥಿತಿಯ ಮೇಲೆ ನಿಂತಿರುತ್ತದೆ. ಆರೋಗ್ಯವಂತ ಹೆಣ್ಣು ಮಕ್ಕಳು ಯಶಸ್ವಿಯಾಗಿ ವಿದ್ಯಾಭ್ಯಾಸ ಮುಗಿಸುವ ಸಂಭವ ಹೆಚ್ಚು.ವಿದ್ಯಾಭ್ಯಾಸ ದೊರೆತ ಹೆಣ್ಣು ಮಕ್ಕಳಿಗೆ ಸಮಾಜವು ಉದ್ಯೋಗದ ಅವಕಾಶಗಳನ್ನು ಸೃಷ್ಟಿಸಬೇಕಾಗುತ್ತದೆ. ಉದ್ಯೋಗದ ಅವಕಾಶವಿಲ್ಲದಿದ್ದರೆ ಒಂದು ಹೆಣ್ಣು ಮಗುವಿಗೆ ಪೂರ್ಣ ಪ್ರಮಾಣದ ವಿದ್ಯಾಭ್ಯಾಸ ಕೊಡಿಸುವುದರ ಅವಶ್ಯಕತೆ ಆಕೆಯ ಕುಟುಂಬಕ್ಕೆ ಕಾಣದೇ ಇರಬಹುದು.ನಮ್ಮ ದೇಶದಲ್ಲಿ ಮಹಿಳೆಯರಿಗೆ ಉದ್ಯೋಗದ ಅವಕಾಶಗಳು ಆರೋಗ್ಯ ಸೇವಾ ಕ್ಷೇತ್ರದಲ್ಲಿರುವುದನ್ನು ಗಮನಿಸಬಹುದು. ಮಹಿಳೆಯರು ಆರೋಗ್ಯ ಸೇವೆಗಳನ್ನು ಉಪಯೋಗಿಸುವುದಷ್ಟೇ ಅಲ್ಲದೆ ಆರೋಗ್ಯ ಸೇವೆಗಳನ್ನು ಸಮಾಜಕ್ಕೆ ಕೊಡುವುದರಲ್ಲಿ ಕೂಡ ಗಮನಾರ್ಹ ಪಾತ್ರ ವಹಿಸಿದ್ದಾರೆ. ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆಯ ಅಧ್ಯಯನದ ಪ್ರಕಾರ, ದೇಶದ ಒಟ್ಟು ಆರೋಗ್ಯ ಸೇವಾ ಕ್ಷೇತ್ರದ ಉದ್ಯೋಗಗಳಲ್ಲಿ ಮಹಿಳೆಯರ ಪಾತ್ರ ಶೇ 33.6 ರಷ್ಟು ಇದೆ.ಹಾಗೆಯೇ, ಆರೋಗ್ಯ ಸೇವೆಗಳನ್ನು ಕೆಳ ಸ್ತರದ ವರ್ಗಗಳಿಗೆ ತಲುಪಿಸುವುದರಲ್ಲಿ ಮಹಿಳಾ ಉದ್ಯೋಗಿಗಳ ಪಾತ್ರವು ಹೆಚ್ಚು ಗಮನಾರ್ಹವಾದುದು. ಈ ಕ್ಷೇತ್ರದಲ್ಲಿ ದುಡಿಯುವ ಅವಕಾಶವನ್ನು ಹೆಚ್ಚಾಗಿ ಮಹಿಳೆಯರಿಗೆ ಕಲ್ಪಿಸಿಕೊಟ್ಟರೆ ಸಮಾಜಕ್ಕೆ ಒಳಿತು ಎಂಬುದನ್ನೂ  ಒಪ್ಪಬೇಕಾಗುತ್ತದೆ.ಮಹಿಳೆಯ ಉದ್ಯೋಗಾವಕಾಶಗಳಿಗೆ ಇರುವ ಕಾನೂನಾತ್ಮಕ ಅಡೆತಡೆಗಳನ್ನೂ ನಮ್ಮ ಸಮಾಜವು ನಿವಾರಿಸಬೇಕಾಗಿದೆ. ವಿಶ್ವಬ್ಯಾಂಕ್ ವರದಿ (2016) ಪ್ರಕಾರ ವಿಶ್ವದೆಲ್ಲೆಡೆ 155 ರಾಷ್ಟ್ರಗಳಲ್ಲಿ ಒಂದಾದರೂ ಕಾನೂನು ಲಿಂಗತಾರತಮ್ಯವನ್ನು ಪ್ರತಿಪಾದಿಸುತ್ತದೆ. ಕಾನೂನಿನ ರಕ್ಷಣೆ ಶೋಷಿತ ಮಹಿಳೆಗೆ ಸಮಾಜದಲ್ಲಿ ಆತ್ಮವಿಶ್ವಾಸದಿಂದ ಬದುಕಲು ಮತ್ತು ಸ್ವತಂತ್ರ ನಿರ್ಧಾರಗಳನ್ನು ಹೊಂದಲು ಅನುವು ಮಾಡಿಕೊಡುತ್ತದೆ.ವಿದ್ಯೆ ಕಲಿತ ಉದ್ಯೋಗಸ್ಥ ಹೆಣ್ಣು ಆರ್ಥಿಕವಾಗಿ ಸ್ವತಂತ್ರಳಾಗುವುದರಿಂದ ಆಕೆಯ ಆರೋಗ್ಯವೂ ವೃದ್ಧಿಸುತ್ತದೆ. ಅವಳ ಆರೋಗ್ಯದ ಸ್ಥಿತಿ ಕೇವಲ ಆಕೆಗೆ ಅನುಕೂಲವಾಗುವುದಷ್ಟೇ ಅಲ್ಲದೆ ಅವಳು ಪೋಷಿಸುವ ಸಮಾಜಕ್ಕೂ ಆಗುತ್ತದೆ.ಆಯ್ಕೆಯ ಸ್ವಾತಂತ್ರ್ಯವಿರುವ ಆರೋಗ್ಯವಂತ ಮಹಿಳೆಯ ನಿರ್ಧಾರಗಳು ಇಡೀ ಸಮಾಜವನ್ನು ಅಭಿವೃದ್ಧಿಯ ಕಡೆಗೆ ಕರೆದೊಯ್ಯುವಲ್ಲಿ ಸಹಕಾರಿ. ಹಾಗಾಗಿಯೇ ಒಂದು ದೇಶದ ಸುಸ್ಥಿರ ಸಾಮಾಜಿಕ–ಆರ್ಥಿಕ ಅಭಿವೃದ್ಧಿಗೆ ಸರ್ಕಾರವು ಮಹಿಳೆಯ ಆರೋಗ್ಯವೆಂದರೆ ತಾಯಿ ಮಗುವಿನ ಆರೈಕೆಯೆಂದಷ್ಟೇ ತಿಳಿಯದೆ ಮಹಿಳೆಯ ಆರೋಗ್ಯದ ಎಲ್ಲಾ ಆಯಾಮ ಗುರುತಿಸಿ ಪೋಷಿಸಬೇಕಾಗಿದೆ.

ಪ್ರತಿಕ್ರಿಯಿಸಿ (+)