ಭಾನುವಾರ, ಮೇ 16, 2021
26 °C

ಸೂಕಿ ಮುಂದಿರುವ ಸವಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮ್ಯಾನ್ಮಾರ್‌ನ ಸಂಸತ್ತಿನ ಕೆಳಮನೆಗೆ ನಡೆದ ಉಪ ಚುನಾವಣೆಗಳಲ್ಲಿ ವಿರೋಧ ಪಕ್ಷದ ನಾಯಕಿ ಆಂಗ್ ಸಾನ್ ಸೂಕಿ ಅವರಿಗೆ ಸಿಕ್ಕಿರುವ ಗೆಲುವು ಆ ದೇಶದ ಪ್ರಜಾತಂತ್ರ ವ್ಯವಸ್ಥೆಯ ಮರುಹುಟ್ಟಿಗೆ ನಾಂದಿಯಾಗುವ ನಿರೀಕ್ಷೆ ಮೂಡಿಸಿದೆ. ಸೂಕಿ ಅವರ ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ ಪಕ್ಷ 44 ಸ್ಥಾನಗಳ ಪೈಕಿ 43 ಸ್ಥಾನಗಳನ್ನು ಗೆಲ್ಲುವ ಮೂಲಕ ಮಿಲಿಟರಿ ಆಡಳಿತಕ್ಕೆ ಮೊದಲ ಆಘಾತ ನೀಡಿದೆ.

 

ಸಹಜವಾಗಿಯೇ ಈ ಫಲಿತಾಂಶ ಎರಡು ದಶಕಗಳ ಕಾಲದಿಂದ ಸೂಕಿ ಅವರ ಹೋರಾಟಕ್ಕೆ ಬೆಂಬಲವಾಗಿ ನಿಂತಿದ್ದ ಪ್ರಜಾತಂತ್ರ ಪರವಾದಿಗಳಿಗೆಲ್ಲ ಹರ್ಷ ತಂದಿದೆ. ಅಂತರರಾಷ್ಟ್ರೀಯ ವೀಕ್ಷಕರ ಮೇಲ್ವಿಚಾರಣೆಯಲ್ಲಿ ನಡೆದ ಈ ಚುನಾವಣೆಯ ಫಲಿತಾಂಶಗಳನ್ನು ಅಧಿಕೃತವಾಗಿ ಘೋಷಣೆ ಮಾಡಲು ಇನ್ನೂ ಕೆಲವು ದಿನ ಹಿಡಿಯಬಹುದು.

 

ತನ್ನ ವಿರೋಧಿಗಳು ಗೆದ್ದಿದ್ದಾರೆಂಬ ಕಾರಣಕ್ಕೆ ಫಲಿತಾಂಶಗಳ ವಿಚಾರದಲ್ಲಿ ಮಿಲಿಟರಿ ಮತ್ತು ಮಿಲಿಟರಿ ಕೃಪಾಪೋಷಿತ ನಾಗರಿಕ ಸರ್ಕಾರ ಹಸ್ತಕ್ಷೇಪ ಮಾಡಲಾರದು ಎಂಬುದೇ ಪ್ರಜಾತಂತ್ರ ಪ್ರೇಮಿಗಳ ಆಶಯ. ಸೂಕಿ ಅವರ ಗೆಲುವು ಭಾರತಕ್ಕೆ ಮಹತ್ವಪೂರ್ಣವಾದುದು. ಮ್ಯಾನ್ಮಾರ್ ನಮ್ಮ ನೆರೆಯ ದೇಶ.

 

ಸ್ವಾತಂತ್ರ್ಯ ಹೋರಾಟದ ನಾಯಕರಾಗಿದ್ದ ಸೂಕಿ ಅವರ ತಂದೆ ಆಂಗ್ ಸಾನ್ ಭಾರತದ ಮಿತ್ರರಾಗಿದ್ದರು. ಸೂಕಿ ಪದವಿ ತರಗತಿಯವರೆಗೆ ಶಿಕ್ಷಣ ಪಡೆದದ್ದು ದೆಹಲಿಯಲ್ಲಿ. ಇದೇನೇ ಇದ್ದರೂ, ಸೂಕಿ ಅವರಿಗೆ ಮ್ಯಾನ್ಮಾರ್‌ನ ಮುಂದಿನ ದಿನಗಳು ದೊಡ್ಡ ಸವಾಲನ್ನು ಒಡ್ಡಲಿವೆ. ಮಿಲಿಟರಿ ಪ್ರಾಬಲ್ಯದ ಸಂಸತ್ತಿನಲ್ಲಿ ಸೂಕಿ ನೇತೃತ್ವದ ಪಕ್ಷ ಮಹತ್ವದ ಬದಲಾವಣೆಗಳನ್ನು ತರಲು ಸಾಧ್ಯವಿಲ್ಲ ಎನ್ನುವ ಮಾತು ನಿಜ.

 

ಆದರೆ ಕಸಿದುಕೊಂಡಿರುವ ನಾಗರಿಕ ಸ್ವಾತಂತ್ರ್ಯವನ್ನು ಮರುಸ್ಥಾಪಿಸುವುದಕ್ಕಾಗಿ ಸಂಸತ್ತನ್ನು ಅವರು ಒಂದು ವೇದಿಕೆಯಾಗಿ ಬಳಸಿಕೊಳ್ಳಲು ಸಾಧ್ಯ. 2015ರಲ್ಲಿ ನಡೆಯಲಿರುವ ಪೂರ್ಣ ಪ್ರಮಾಣದ ಸಂಸತ್ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲು ಅವರಿಗೆ ಇದು ಉತ್ತಮ ಅವಕಾಶ.  ದೇಶದ ಮೇಲೆ ಹಾಕಿರುವ ಅಂತರರಾಷ್ಟ್ರೀಯ ನಿರ್ಬಂಧಗಳಿಂದ ಬಿಡುಗಡೆ ಪಡೆಯಲು ಸೂಕಿ ಅವರನ್ನು ಬೊಂಬೆಯನ್ನಾಗಿ ಬಳಸಲು ಮಿಲಿಟರಿ ಯೋಚಿಸಿರುವ ಸಾಧ್ಯತೆಯೂ ಇದೆ. ಆದರೆ ದೇಶ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿ ನಿಭಾಯಿಸಲಾರದ ಸ್ಥಿತಿಗೆ ತಲುಪಿರುವುದರಿಂದಲೇ ಮಿಲಿಟರಿ, ಸುಧಾರಣೆಗೆ ಮುಂದಾಗಿದೆ ಎನ್ನುವುದರಲ್ಲಿ ಅನುಮಾನವಿಲ್ಲ.ಮ್ಯಾನ್ಮಾರ್‌ನಲ್ಲಿ ಪ್ರಜಾತಂತ್ರ ಸ್ಥಾಪನೆಗೆ ಅಮೆರಿಕ ಸೇರಿದಂತೆ ಪಾಶ್ಚಾತ್ಯ ದೇಶಗಳು ವಿಶೇಷ ಆಸಕ್ತಿ ತಾಳಿವೆ. ಚೀನಾ ಆಡಳಿತಗಾರರು ಯೋಜನಾ ಬದ್ಧವಾಗಿ ಭಾರತದ ನೆರೆಯ ಪಾಕಿಸ್ತಾನ, ಶ್ರೀಲಂಕಾ, ಮ್ಯಾನ್ಮಾರ್‌ಅನ್ನೂ ಮಿತ್ರ ದೇಶವನ್ನಾಗಿ ಮಾಡಿಕೊಂಡಿದ್ದಾರೆ.ಏಷ್ಯಾ ಪೆಸಿಫಿಕ್ ವಲಯದಲ್ಲಿ ಬದಲಾಗುತ್ತಿರುವ ಈ ಸಂಬಂಧಗಳು ಅಮೆರಿಕ, ಅಷ್ಟೇ ಏಕೆ, ಭಾರತದ ನಿದ್ದೆಯನ್ನೂ ಕೆಡಿಸಿವೆ. ಮ್ಯಾನ್ಮಾರ್‌ನಲ್ಲಿ ಪ್ರಜಾತಂತ್ರ ಶಕ್ತಿಗಳನ್ನು ಬಲಪಡಿಸುವುದು ಭದ್ರತೆ ಮತ್ತು ವಾಣಿಜ್ಯದ ದೃಷ್ಟಿಯಿಂದ ಭಾರತ ಮತ್ತು ಇತರ ಪ್ರಜಾತಂತ್ರವಾದಿ ದೇಶಗಳಿಗೆ ಬಹಳ ಮುಖ್ಯವಾದುದು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.