ಸೂಕ್ತ ಪರಿಹಾರ ನೀಡದಿದ್ದರೆ ರೈಲು ಸಂಚಾರಕ್ಕೆ ಅಡ್ಡಿ

7
ಹರಿಹರ–ಕೊಟ್ಟೂರು ರೈಲು ಸಂಚಾರ ಕುರಿತ ಸಭೆಯಲ್ಲಿ ರೈತರ ಎಚ್ಚರಿಕೆ

ಸೂಕ್ತ ಪರಿಹಾರ ನೀಡದಿದ್ದರೆ ರೈಲು ಸಂಚಾರಕ್ಕೆ ಅಡ್ಡಿ

Published:
Updated:

ದಾವಣಗೆರೆ: ‘ಆ ಭಾಗದ ರೈತರ ಬದುಕನ್ನೇ ನೀವು ಕಸಿದುಕೊಂಡಿದ್ದೀರಿ... ನಿಮ್ಮ ಅವೈಜ್ಞಾನಿಕ ಕಾಮಗಾರಿಯಿಂದಾಗಿ ರೈತರ ಲಕ್ಷಾಂತರ ಮೌಲ್ಯದ ಬೆಳೆ  ನಾಶವಾಗುತ್ತಿದೆ... ಸಭೆ ಮೇಲೆ ಸಭೆ ಮಾಡುತ್ತೀರಾ. ಇದುವರೆಗೂ ನೊಂದ ರೈತರಿಗೆ ಸೂಕ್ತ ಪರಿಹಾರ ಮಾತ್ರ ಕೊಡುತ್ತಿಲ್ಲ... ಸೂಕ್ತ ಪರಿಹಾರ ನೀಡದ ಹೊರತು ಈ ಭಾಗದಲ್ಲಿ ರೈಲು ಸಂಚರಿಸಲು ನಾವು ಬಿಡುವುದಿಲ್ಲ..!  ಹೀಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಂಸತ್‌ ಸದಸ್ಯ ಜಿ.ಎಂ.ಸಿದ್ದೇಶ್ವರ ಅವರ ನೇತೃತ್ವದಲ್ಲಿ ಮಂಗಳವಾರ ನಡೆದ ಮಧ್ಯ ಕರ್ನಾಟಕದ ಬಹುನಿರೀಕ್ಷಿತ ಹರಿಹರ–ಕೊಟ್ಟೂರು ರೈಲು ಮಾರ್ಗದ ಚಾಲನೆಗೆ ಅಡ್ಡಿಯಾಗಿರುವ ರೈತರ ಸಮಸ್ಯೆಗಳ ಚರ್ಚೆ ಮತ್ತು ಪರಿಹಾರ ಸಭೆಯಲ್ಲಿ ರೈತರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಸಭೆಯಲ್ಲಿ ಹರಿಹರ ತಾಲ್ಲೂಕಿನ ಕರಲಹಳ್ಳಿ, ದೀಟೂರು, ಗಂಗನರಸಿ, ಅಮರಾವತಿ, ಹೊಟ್ಟೆಗನಹಳ್ಳಿ ಮತ್ತು ಕುರುಬರಹಳ್ಳಿ ಸೇರಿದಂತೆ ಕೊಟ್ಟೂರು, ಹರಿಹರ ರೈಲು ಮಾರ್ಗದ ಗ್ರಾಮಗಳ ರೈತರು ಭಾಗವಹಿಸಿ ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಮುಂದೆ ಅಳಲು ತೋಡಿಕೊಂಡರು.‘ಕಳೆದ 8 ವರ್ಷಗಳಿಂದ ಕೇವಲ ಸಭೆಗಳನ್ನು ನಡೆಸಿ, ಭರವಸೆಗಳ ಮಾತುಗಳನ್ನು ಹೇಳಿಕೊಂಡು ಬರುತ್ತಿದ್ದೀರಿ. ಸೂಕ್ತ ಪರಿಹಾರವನ್ನು ರೈತರಿಗೆ ನೀಡುತ್ತಿಲ್ಲ. ರೈಲ್ವೆ ಇಲಾಖೆಯ ಅಧಿಕಾರಿಗಳು ಆ ಭಾಗದಲ್ಲಿ ಕಾಮಗಾರಿ ಹೆಸರಿನಲ್ಲಿ ಅಲ್ಲಲ್ಲಿ ದೊಡ್ಡ ದೊಡ್ಡ ಗುಂಡಿಗಳನ್ನು ತೋಡಿ, ಅದನ್ನು ಹಾಗೆಯೇ ಬಿಟ್ಟಿದ್ದಾರೆ. ಇದರಿಂದಾಗಿ ಮಳೆ ನೀರು ನಿಂತು ಲಕ್ಷಾಂತರ ಮೌಲ್ಯದ ಬೆಳೆ ನಾಶವಾಗಿದೆ.ಇದನ್ನು ಯಾರು ತುಂಬಿಕೊಡುತ್ತಾರೆ? ಈ ಬಗ್ಗೆ ರೈಲ್ವೆ ಅಧಿಕಾರಿಗಳಲ್ಲಿ ವಿಚಾರಿಸಿದರೇ, ಅವರು ಧರ್ಪದಿಂದ ಮಾತನಾಡುತ್ತಾರೆ. ಸಾಕು, ನಿಮ್ಮ ಭರವಸೆಯ ಮಾತುಗಳ ಸಭೆ ನಮಗೆ ತಕ್ಷಣ ಸೂಕ್ತ ಪರಿಹಾರ ಕೊಡಿ. ಬೇಗನೆ ಪರಿಹಾರ ನೀಡದೇ ಇದ್ದಲ್ಲಿ ನಾವು ಆ ಭಾಗದಲ್ಲಿ ನೂತನ ರೈಲು ಸಂಚಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಸಭೆಯಲ್ಲಿ ಭಾಗವಹಿಸಿದ್ದ ರೈತ ಮುಖಂಡ ಹೊನ್ನೂರು ಮುನಿಯಪ್ಪ ಆಕ್ರೋಶ ವ್ಯಕ್ತಪಡಿಸಿದರು.ರೈಲ್ವೆ ಇಲಾಖೆ ಅಧಿಕಾರಿಗಳು ಅವೈಜ್ಞಾನಿಕ ಕಾಮಗಾರಿ ನಡೆಸಿ ರಸ್ತೆ, ಪೈಪ್‌ಲೈನ್‌ ಕ್ರಾಸಿಂಗ್‌ ವ್ಯವಸ್ಥೆಯನ್ನು ಕೂಡ ಹಾಳು ಮಾಡಿರುತ್ತಾರೆ. ಇದರಿಂದಾಗಿ ಅಲ್ಲಿನ ಗ್ರಾಮಗಳ ರೈತರಿಗೆ ಸಾಕಷ್ಟು ತೊಂದರೆಯಾಗಿದೆ ಎಂದು ಆರೋಪಿಸಿದರು.ರೈತರ ಸಮಸ್ಯೆಗಳನ್ನು ಆಲಿಸಿದ ಜಿ.ಎಂ.ಸಿದ್ದೇಶ್ವರ ಮಾತನಾಡಿ, ಉದ್ದೇಶಿತ ನೂತನ ರೈಲು ಮಾರ್ಗದ ಬಹುತೇಕ ಪ್ರದೇಶದ ರೈತರಿಗೆ ಈಗಾಗಲೇ ಸೂಕ್ತ ಪರಿಹಾರವನ್ನು ನೀಡಲಾಗಿದೆ. ಇನ್ನು ಕೇವಲ 10 ಕಿ.ಮೀ. ವ್ಯಾಪ್ತಿಯ ಪ್ರದೇಶದ ರೈತರಿಗೆ ಪರಿಹಾರ ನೀಡಬೇಕಿದೆ. ಅದನ್ನು ತಕ್ಷಣ ನೀಡಲು ಕ್ರಮಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.‘ಭೂಮಿ ಕಳೆದುಕೊಂಡ ರೈತರ ಬಗ್ಗೆ ನಮಗೂ ಕಾಳಜಿ ಇದೆ. ಬಾಕಿ ಉಳಿದ ಕಾಮಗಾರಿಗೆ ಅವಕಾಶ ನೀಡಿ. ನೂತನ ರೈಲು ಸಂಚಾರ ಆರಂಭವಾಗಲು ಸಹಕರಿಸಬೇಕು. ನಿಮಗೆ ಆದಷ್ಟು ಬೇಗನೆ ಸೂಕ್ತ ಪರಿಹಾರ ಸಿಗುವಂತೆ ಪ್ರಯತ್ನಿಸುತ್ತೇನೆ’ ಎಂದು ಕಾಂಗ್ರೆಸ್‌ ಹಿರಿಯ ಮುಖಂಡ ಕೆ.ಸಿ.ಕೊಂಡಯ್ಯ ಹೇಳಿದರು.ಜಿಲ್ಲಾಧಿಕಾರಿ ಎಸ್‌.ಟಿ.ಅಂಜನ್‌ ಕುಮಾರ್‌ ಮಾತನಾಡಿ, ಈಗಾಗಲೇ ಬಹುತೇಕ ರೈತರಿಗೆ ಪರಿಹಾರ ದೊರೆತಿದೆ. ಇನ್ನು ಕೆಲವೇ ದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಅಧಿಕಾರಿ ಹಾಗೂ ರೈಲ್ವೆ ಇಲಾಖೆ ಅಧಿಕಾರಿಗಳು ಸೇರಿದಂತೆ ಸಂಬಂಧಪಟ್ಟ ಎಲ್ಲ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ, ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ, ಸೂಕ್ತ ಪರಿಹಾರ ನೀಡುವಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ರೈತರಿಗೆ ಭರವಸೆ ನೀಡಿದರು.‘ಎಲ್ಲಾ ಅಧಿಕಾರಿಗಳು ಇದುವರೆಗೂ ಕೇವಲ ಭರವಸೆಯನ್ನು ನೀಡುತ್ತಾ ಬಂದಿದ್ದಾರೆ. ಅಧಿಕಾರಿಗಳು ಇನ್ನು ತಡಮಾಡದೇ ಸಂಬಂಧಪಟ್ಟ ರೈತರಿಗೆ ತಕ್ಷಣ ಪರಿಹಾರ ನೀಡಬೇಕು ಎಂದು ಸಭೆಯಲ್ಲಿ ಭಾಗವಹಿಸಿದ್ದ ರೈತರು ಪಟ್ಟು ಹಿಡಿದರು.ಎಲ್ಲರಿಗೂ ಬೇಗನೆ ಪರಿಹಾರ ಕೊಡಿಸಲು ಕ್ರಮಕೈಗೊಳ್ಳಲಾಗುವುದು ಎಂದು  ಶಾಸಕ ಎಸ್‌.ಎಸ್‌.ಮಲ್ಲಿಕಾರ್ಜುನ್‌ ಮತ್ತು ಹರಿಹರ ಶಾಸಕ ಶಿವಶಂಕರ್‌ ರೈತರಿಗೆ ಮತ್ತೊಮ್ಮೆ ಭರವಸೆ ನೀಡಿದರು.ಕಾಂಗ್ರೆಸ್‌ ಮುಖಂಡ ರವಿ ಗಾಂಧಿ, ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ, ಕೆಂಚನಹಳ್ಳಿ ಶೇಖರಪ್ಪ, ಆಳೂರು ನಾಗರಾಜ್‌, ಬುಳ್ಳಾಪುರ ಹನುಮಂತಪ್ಪ, ಮರಳಸಿದ್ದಪ್ಪ ಸೇರಿದಂತೆ ಹಲವಾರು ರೈತ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry