ಭಾನುವಾರ, ಜೂಲೈ 12, 2020
29 °C

ಸೂಕ್ಷ್ಮ ಕಲೆಯ ಸೃಜನಶೀಲ

ಕೆ.ಎಂ.ಸತೀಶ್ ಬೆಳ್ಳಕ್ಕಿ Updated:

ಅಕ್ಷರ ಗಾತ್ರ : | |

ಸೂಕ್ಷ್ಮ ಕಲೆಯ ಸೃಜನಶೀಲ

ಸೃಜನಶೀಲರೆಲ್ಲ ತಮ್ಮ ವಿಭಿನ್ನತೆಯಿಂದ ಇಷ್ಟವಾಗುತ್ತಾರೆ. ಆದರೆ, ಅವರಲ್ಲಿ ಕೆಲವರು ಮಾತ್ರ ಹೊಸತನ್ನು ಹುಟ್ಟುಹಾಕುತ್ತಾರೆ. ಹೌದು! ಕಲಾವಿದರ ಕಲ್ಪನಾ ವಿಲಾಸಕ್ಕೆ ಎಣೆಯಿಲ್ಲ. ಸೃಜನಶೀಲ ಕಲಾವಿದನ ಮನಸ್ಸು ನಿತ್ಯ ಹೊಸತನಕ್ಕಾಗಿ ತುಡಿಯುತ್ತಿರುತ್ತದೆ. ಇಂತಹ ಸೃಜನಶೀಲ ಮನಸ್ಸಿಗೊಂದು ತಾಜಾ ಉದಾಹರಣೆ ಸಿ.ರವಿ.

ಶಿಲ್ಪಿ ರವಿ ಅವರು ಸೂಕ್ಷ್ಮ ಕೆತ್ತನೆ ವಿಭಾಗದಲ್ಲಿ ಭರವಸೆಯ ಛಾಪು ಮೂಡಿಸಿದ ಪ್ರತಿಭಾವಂತ. ಅದಕ್ಕೆ ಸಾಕ್ಷಿ 0.5 ಮಿಮಿ ತೆಳು ಲೋಹದಲ್ಲಿ ‘ವಿಶ್ವಕಪ್ 2011’ ಟ್ರೋಫಿಯ ಪ್ರತಿಕೃತಿಯನ್ನು ಅದ್ಭುತವಾಗಿ ಕಡೆದಿಟ್ಟಿರುವುದು. ಇದರ ಕೆತ್ತನೆಗೆ ಅವರು ತೆಗೆದುಕೊಂಡ ಅವಧಿ ಕೇವಲ ಒಂದು ಗಂಟೆ.

ನೋಡಲು ಮನೋಹರವಾಗಿ ಕಾಣುವ ಅವರ ಕಲೆ ಎಲ್ಲರನ್ನು ಸೆಳೆಯುತ್ತದೆ. ಇವರ ಕಲೆಯ ಸೂಕ್ಷ್ಮತೆ ಹಾಗೂ ಲಾಲಿತ್ಯವನ್ನು ಕಂಡು ಗೆಳೆಯರೆಲ್ಲರೂ ಅವರನ್ನು ಪ್ರೀತಿಯಿಂದ ಗೋಲ್ಡ್ ರವಿ ಎಂದು ಕರೆಯುತ್ತಾರೆ.

ಈ ಶಿಲ್ಪಿಯ ಕೈಚಳಕದಲ್ಲಿ ಗಾಂಧಿ, ನೆಹರೂ, ಕಲಾಂ, ರಾಣಿ ಎಲಿಜಬೆತ್, ಸ್ವಾಮಿ ವಿವೇಕಾನಂದ, ತಾಜ್ ಮಹಲ್, ಐಫೆಲ್ ಟವರ್, ಪೀಸಾ ವಾಲುಗೋಪುರ, ನ್ಯೂಯಾರ್ಕ್‌ನ ಸ್ವಾತಂತ್ರ್ಯ ದೇವತೆ ವಿಗ್ರಹ, ಸಿನಿಮಾ ಹಾಗೂ ಕ್ರಿಕೆಟ್ ನಾಯಕರು ಹೀಗೆ ಜನಪ್ರಿಯ ಸ್ಥಳ, ವ್ಯಕ್ತಿಗಳೆಲ್ಲರೂ ಪೆನ್ಸಿಲ್ ಲೆಡ್‌ನಲ್ಲಿ ಆಕರ್ಷಕವಾಗಿ ಮೈದಳೆದಿದ್ದಾರೆ. 0.5 ಮಿಮಿ ಪೆನ್ಸಿಲ್ ಲೆಡ್ ಹಾಗೂ ಮೆಟಲ್‌ನಿಂದ ಸುಮಾರು 375ಕ್ಕೂ ಅಧಿಕ ಕಲಾಕೃತಿಯನ್ನು ಬಹು ಸುಂದರವಾಗಿ ಕೆತ್ತಿದ್ದಾರೆ. ಸಾಕಷ್ಟು ಸೂಕ್ಷ್ಮತೆಯನ್ನು ಬೇಡುವ ಪ್ರತಿ ಕೆತ್ತನೆಗೆ ಅವರು ತೆಗೆದುಕೊಳ್ಳುವ ಕಾಲಾವಧಿ ಮೂರು ಗಂಟೆ ಮಾತ್ರ.

ಕೆತ್ತನೆಗೆ ಸೂಜಿ ಹಾಗೂ ಬ್ಲೇಡ್ ಅನ್ನು ಸಾಧನವಾಗಿ ಬಳಸುತ್ತಾರೆ. ಕೆತ್ತನೆಗೆ ತುಂಬಾ ತಾಳ್ಮೆ ಹಾಗೂ ಏಕಾಗ್ರತೆ ಮುಖ್ಯ ಎಂಬುದು ಸಿ.ರವಿ ಅವರ ಅಭಿಪ್ರಾಯ.

ಗಂಜಾಮ್‌ನಲ್ಲಿ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ಸಿ.ರವಿ ಅವರು ಈ ಕಲೆಯನ್ನು 2002ರಲ್ಲಿ ಮೊದಲಿಗೆ ಹವ್ಯಾಸಕ್ಕೆಂದು ಆರಂಭಿಸಿದರು. ಆದರೆ ಇಂದು ಇನ್ನಿಲ್ಲದ ವ್ಯಾಮೋಹ ತಳೆದಿದ್ದಾರೆ. ಅವರ ಕಲಾರಾಧನೆಯ ಫಲವಾಗಿ ನಿತ್ಯ ಅನೇಕ ಸೂಕ್ಷ್ಮ ಕಲಾಕೃತಿಗಳು ಸೃಷ್ಟಿಯಾಗುತ್ತಿವೆ. ಈ ಕ್ಷೇತ್ರದಲ್ಲೇ ಮಹೋನ್ನತವಾದುದನ್ನು ಸಾಧಿಸಬೇಕು ಎಂಬುದು ಅವರ ಮನೋಭಿಲಾಷೆ.

ಅವರ ಕಲೆಯನ್ನು ಕಂಡು ಸಾಕಷ್ಟು ಪ್ರಶಸ್ತಿ ಹಾಗೂ ಮೆಚ್ಚುಗೆಗಳು ಎಲ್ಲೆಡೆಯಿಂದ ಹರಿದು ಬಂದಿವೆ. ಆಂಧ್ರದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು. ಮಾಜಿ ಸಚಿವೆ ರಾಣಿ ಸತೀಶ್, ರೋಶನ್ ಬೇಗ್, ಅಶೋಕ್ ಖೇಣಿ ಮತ್ತಿತರ ಗಣ್ಯರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಎಂಆರ್‌ಎಫ್ ಇನ್ನಿತರ ಕಂಪೆನಿ, ಸಂಸ್ಥೆಗಳವರು ಪ್ರೋತ್ಸಾಹಿಸಿದ್ದಾರೆ. ಸ್ಟಾರ್‌ನ್ಯೂಸ್‌ನಲ್ಲಿ ಶಿಲ್ಪಾರಾಧನೆ ಕುರಿತು ಇವರ ಕಾರ್ಯಕ್ರಮ ಪ್ರಸಾರವಾಗಿದೆ.

ಇವರೆಲ್ಲರ ಮೆಚ್ಚುಗೆಯನ್ನು ಸಕಾರಾತ್ಮಕವಾಗಿ ಸ್ವೀಕರಿಸಿರುವ ಸಿ.ರವಿ ಅವರು ತಮ್ಮ ಕಲೆಯ ಛಾಪನ್ನು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಹಾಗೂ ಗಿನ್ನೆಸ್ ಬುಕ್‌ನಲ್ಲಿ ದಾಖಲಿಸಬೇಕು ಎಂಬ  ಬಯಕೆ ಹೊಂದಿದ್ದಾರೆ.

ಅವರ ಸಂಪರ್ಕ ಸಂಖ್ಯೆ: 99025 55432.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.