ಸೂಕ್ಷ್ಮ ಸಂವೇದಿಯ ಕುಂಚ ಕೌತುಕ

7
ಕಲಾ ಕಲಾಪ

ಸೂಕ್ಷ್ಮ ಸಂವೇದಿಯ ಕುಂಚ ಕೌತುಕ

Published:
Updated:

ಉತ್ತರ ಕರ್ನಾಟಕದ ಚಿತ್ರ ಕಲಾವಿದ ಆರ್.ಎಚ್. ಪಾಟೀಲ್ ತಮ್ಮ ಕುಂಚ ಪ್ರತಿಭೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ನಡೆದಿರುವ ಅವರ ಕಲಾ ಪ್ರದರ್ಶನದಲ್ಲಿ ಅವರ ಸೂಕ್ಷ್ಮ ಸಂವೇದನೆ, ಸಂಸ್ಕೃತಿಯ ಚಾಣಾಕ್ಷ ಗ್ರಹಿಕೆಯನ್ನು ಕಾಣಬಹುದು.ಪ್ರದರ್ಶನದಲ್ಲಿರುವ ಕಲಾಕೃತಿಗಳು ಉತ್ತರ ಕರ್ನಾಟಕದ ಜನಜೀವನ, ಬಹುಮುಖಿ ಸಂಸ್ಕೃತಿ ಮತ್ತು ನಗರದ ಕಟ್ಟಡ ದಟ್ಟಣೆ ಇವೆಲ್ಲವುಗಳನ್ನು ಕಲಾವಿದ ಕಂಡುಂಡ ಬಗೆಗೆ ಸಾಕ್ಷಿಯಂತಿವೆ. ಅಬ್‌ಸ್ಟ್ರಾಕ್ಟ್‌ನಲ್ಲಿ ಮೂಡಿಸಿರುವ ಉತ್ತರ ಕರ್ನಾಟಕದ ಮದುವೆ ಮನೆ ಇದಕ್ಕೊಂದು ಉತ್ತಮ ಉದಾಹರಣೆ. ಉತ್ತರ ಕರ್ನಾಟಕದ ಮನೆಯೊಂದರಲ್ಲಿ ಮದುವೆ ನಡೆಯಲಿದೆ ಎಂಬುದಕ್ಕೆ ಆ ಮನೆಯ ಹೊರಭಾಗದ ಗೋಡೆಗಳಲ್ಲಿ ಇಳಿಬಿದ್ದಿರುವ ಹುರಿಮಂಜು ಮತ್ತು ಸುಣ್ಣದ

ನೀರಿನ ಮಿಶ್ರಣದ ಗುರುತೇ ಸಾಕ್ಷಿಯಾಗುತ್ತದೆ. ಈ ಚಿತ್ರಣವನ್ನು ಪಾಟೀಲ್ ಅವರು ಬಹಳ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ.ಕಣ್ಣರಿಯದ ಸ್ಥಳಗಳನ್ನು ರಸವತ್ತಾಗಿ ಚಿತ್ರಿಸಿ ಕ್ಯಾನ್ವಾಸ್ ತುಂಬುವ ಬದಲು ವಾಸ್ತವಕ್ಕೆ ಹತ್ತಿರವಾದ, ಅವರಿವರು ಸುಲಭ ಮತ್ತು ಸರಳವಾಗಿ ಕಾಣುವ ಸ್ಥಳಗಳನ್ನು ಬಣ್ಣದ ಬೆಳಕಿನಲ್ಲಿ ಹಿಡಿದಿಟ್ಟಿರುವ ಕುಂಚ ಕೌತುಕ ಪಾಟೀಲರದ್ದು. ಉಷಾಕಾಲದ ಬೆಳಕಿನಲ್ಲಿ ಒಂದು ರೀತಿ ಕಾಣುವ ನಗರದ ಕಟ್ಟಡದಟ್ಟಣೆ ಬೈಗಿನ ರಂಗಿನಲ್ಲಿ ಮಿಂದು ಮಿಂಚುವ ಬಗೆಯೇ ಬೇರೆ. ಈ ವಿವರಗಳನ್ನು ಕಟ್ಟಡ ಸರಣಿಯ ಚಿತ್ರಗಳಲ್ಲಿ  ನೋಡಬಹುದು.ಮಹಾತ್ಮ ಗಾಂಧೀಜಿಯೂ ಆರ್.ಎಚ್. ಪಾಟೀಲರ ಕುಂಚದಲ್ಲಿ ಎರಡು ಭಾವಗಳಲ್ಲಿ ಕಾಣಿಸಿಕೊಂಡಿದ್ದಾರೆ. ನೋಡುಗರಿಗೆ ಗಾಂಧಿ ತಾತನ ಬೆನ್ನು ಮತ್ತು ಚರಕದ ಅರ್ಧಭಾಗ ಕಾಣುತ್ತದೆ. ತಾತ ಹೀಗೆ ಬೆನ್ನು ಹಾಕಿರುವುದು ಆಧುನಿಕತೆಗೋ? ಅಥವಾ ಆಧುನಿಕತೆ ವಸ್ತ್ರ ಸಂಸ್ಕೃತಿಗೆ ಮುಖಾಮುಖಿಯಾಗುತ್ತಿರುವ ಸೂಚನೆಯೇ ಆ ಭಂಗಿ? ನೋಡುಗರನ್ನು ಚಿಂತನೆಗೆ ಹಚ್ಚುವ ಕೌಶಲವನ್ನು ಪ್ರತಿ ಕಲಾಕೃತಿಯಲ್ಲಿ ಪಾಟೀಲ್ ಅವರು ತೋರಿದ್ದಾರೆ.ಹೀಗೆ ತಮ್ಮ ಚಿಂತನೆ ಮತ್ತು ಕಸುಬುದಾರಿಕೆಯನ್ನು ಪ್ರತಿ ಕಲಾಕೃತಿಯಲ್ಲೂ ತೋರಿಸಿ ನೋಡುಗರು ಕಲಾವಿದನ ಬಗ್ಗೆ ಅಭಿಮಾನಪಡುವಂತೆ ಮಾಡಿರುವ ಬಗೆಯನ್ನು ಸ್ವತಃ ಆನಂದಿಸಬೇಕು. ಆರ್.ಎಚ್. ಪಾಟೀಲರ ಈ ಕಲಾಕೃತಿಗಳ ಪ್ರದರ್ಶನ ಇಂದು (ಸೆ.13) ಕೊನೆಗೊಳ್ಳುತ್ತದೆ. ಸಮಯ: ಬೆಳಿಗ್ಗೆ 11ರಿಂದ ಸಂಜೆ 7. ಸಂಪರ್ಕಕ್ಕೆ: 99803 02685

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry