ಶನಿವಾರ, ಫೆಬ್ರವರಿ 27, 2021
23 °C
ಪೇಟೆ ಮೇಲೆ ಜಾಗತಿಕ ವಿದ್ಯಮಾನಗಳ ಪ್ರಭಾವ

ಸೂಚ್ಯಂಕ 364 ಅಂಶ ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೂಚ್ಯಂಕ 364 ಅಂಶ ಹೆಚ್ಚಳ

ಮುಂಬೈ (ಪಿಟಿಐ): ಜಾಗತಿಕ ಷೇರುಪೇಟೆಗಳಲ್ಲಿ ಶುಕ್ರವಾರ ಉತ್ತಮ ವಹಿವಾಟು ನಡೆಯಿತು. ಇದರ ಫಲವಾಗಿ ಭಾರತದ ಷೇರುಪೇಟೆಗಳೂ ಏರುಮುಖವಾಗಿ ವಹಿವಾಟು ಅಂತ್ಯಗೊಳಿಸಿದವು.ಬ್ಯಾಂಕ್‌ ಆಫ್ ಇಂಗ್ಲೆಂಡ್‌,  2009ರ ಬಳಿಕ ಇದೇ ಮೊದಲ ಬಾರಿಗೆ ಬಡ್ಡಿದರವನ್ನು ಶೇ 0.25ರಷ್ಟು ಕಡಿತ ಮಾಡಿದೆ. ಇದರಿಂದ ಜಾಗತಿಕ ಷೇರುಪೇಟೆಗಳಲ್ಲಿ ಉತ್ತಮ ವಹಿವಾಟು ನಡೆಯಿತು. ಭಾರತದ ಷೇರುಪೇಟೆಗಳು ಸಕಾರಾತ್ಮಕ ಮಟ್ಟದಲ್ಲಿ ವಾರದ ವಹಿವಾಟು ಅಂತ್ಯಗೊಳಿಸಲು ನೆರವಾಯಿತು.ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) 364 ಅಂಶಗಳಷ್ಟು ಏರಿಕೆ ಕಂಡು, 28,078 ಅಂಶಗಳಲ್ಲಿ ವಹಿವಾಟು ಅಂತ್ಯ ಕಂಡಿತು. ಜುಲೈ 11ರ ನಂತರ (500 ಅಂಶ ಏರಿಕೆ)  ಬಿಎಸ್‌ಇ ಸೂಚ್ಯಂಕವು ದಿನದ ವಹಿವಾಟಿನಲ್ಲಿ ಕಂಡಿರುವ ಗರಿಷ್ಠ ಏರಿಕೆ ಇದಾಗಿದೆ.ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ, 132 ಅಂಶ ಏರಿಕೆಯಾಗಿ, 8,683 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ. ದಿನದ ವಹಿವಾಟಿನ ಮೊತ್ತವು ₹3,167 ಕೋಟಿಗಳಿಂದ ₹3,688 ಕೋಟಿಗಳಿಗೆ ಏರಿಕೆಯಾಗಿದೆ.ಜಿಎಸ್‌ಟಿ ಪ್ರಭಾವ: ರಾಜ್ಯಸಭೆಯಲ್ಲಿ ಜಿಎಸ್‌ಟಿ ಮಸೂದೆಗೆ ಅಂಗೀಕಾರ ದೊರೆತಿರುವುದು ಷೇರುಪೇಟೆಯಲ್ಲಿ ಸಂಚಲನ ಮೂಡಿಸಿದೆ. ಬುಧವಾರ ಮಸೂದೆಗೆ ಅಂಗೀಕಾರ ಸಿಗುವುದಕ್ಕೂ ಮುನ್ನ ಬಿಎಸ್‌ಇ ಸೂಚ್ಯಂಕ 284 ಅಂಶಗಳಷ್ಟು ಕುಸಿತ ಕಂಡು, ಮೂರು ವಾರಗಳ ಕನಿಷ್ಠ ಮಟ್ಟವಾದ 27,698 ಅಂಶಗಳಿಗೆ ಇಳಿಕೆಯಾಗಿತ್ತು. ಮಸೂದೆಗೆ ಅಂಗೀಕಾರ ದೊರೆತ ನಂತರ ಗುರುವಾರ 17 ಅಂಶಗಳ ಚೇತರಿಕೆ ಕಂಡಿತ್ತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 78 ಅಂಶ ಇಳಿದು, 8,544ಕ್ಕೆ ತಲುಪಿತ್ತು. ಗುರುವಾರ ಕೇವಲ 6 ಅಂಶ ಏರಿಕೆಯಾಗಿತ್ತು.ಪ್ರಗತಿಗೆ ಪೂರಕ: ಜಿಎಸ್‌ಟಿ ಜಾರಿಯಿಂದ ದೇಶದ ಆರ್ಥಿಕ ಪ್ರಗತಿಗೆ ಹೆಚ್ಚು ಅನುಕೂಲವಾಗಲಿದೆ ಎಂಬ ಮೂಡೀಸ್‌ ವಿಶ್ಲೇಷಣೆಯೂ ಹೂಡಿಕೆದಾರರಲ್ಲಿ ಹೊಸ ಉತ್ಸಾಹ ಮೂಡಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.