ಬುಧವಾರ, ಜೂನ್ 23, 2021
22 °C

ಸೂಡಿ: ಸ್ವಚ್ಛತೆಗೆ ಆಗ್ರಹಿಸಿ ದಲಿತರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಜೇಂದ್ರಗಡ: ‘ಸ್ಥಳೀಯ ಆಡಳಿತ ದಲಿತ ಕೇರಿಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುತ್ತಿಲ್ಲ. ಚರಂಡಿ ಅಕ್ಕ–ಪಕ್ಕದಲ್ಲಿಯೇ ಸಾರ್ವಜನಿಕ ನಲ್ಲಿಗಳನ್ನು ಸ್ಥಾಪಿಸಿರುವುದರಿಂದ ಚರಂಡಿಯಲ್ಲಿನ ಗಲೀಜಿನಲ್ಲಿಯೇ ನೀರು ಸಂಗ್ರಹಿಸಬೇಕಾದ ಅನಿವಾರ್ಯತೆ ಇದೆ’ ಎಂದು ಆರೋಪಿಸಿ ಸೂಡಿ ಗ್ರಾಮದಲ್ಲಿ ದಲಿತರು ಪ್ರತಿಭನೆ ನಡೆಸಿದರು.ಗ್ರಾಮ ಪಂಚಾಯ್ತಿ ಆಡಳಿತ ದಲಿತ ಕೇರಿಗಳಲ್ಲಿ ಅವೈಜ್ಞಾನಿಕ ಚರಂಡಿ ಮತ್ತು ಗಟಾರುಗಳನ್ನು ನಿರ್ಮಿಸಿದೆ. ಅವೈಜ್ಞಾನಿಕ ಗಟಾರು ಮತ್ತು ಚರಂಡಿಗಳ ನಿರ್ಮಾಣದಿಂದಾಗಿ ದಲಿತರು ಬಳಕೆ ಮಾಡಿಬಿಟ್ಟ ಮಲೀನ ನೀರು ವ್ಯವಸ್ಥಿತ ರೀತಿಯಲ್ಲಿ ಹರಿದು ಹೋಗಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಚರಂಡಿಯಲ್ಲಿನ ನೀರು ರಸ್ತೆಯಲ್ಲಿ ಹರಿಯುತ್ತಿದೆ. ಹೀಗೆ ಹರಿಯುವ ಮಲೀನ ನೀರು ಸಾರ್ವಜನಿಕ ನಲ್ಲಿಗಳಿರುವ ಪ್ರದೇಶವನ್ನು ಅಕ್ರಮಿಸುತ್ತಿದೆ. ಮಲೀನ ನೀರಿನಲ್ಲಿಯೇ ಕೇರಿಯ ಜನತೆ ನೀರು ಸಂಗ್ರಹಿಸಬೇಕಾದ ಅನಿವಾರ್ಯತೆ ಇದೆ’ ಎಂದು ಯಮನಪ್ಪ ಕಡಬಿನವರ, ಹನಮಪ್ಪ ಮಾದರ ಆಕ್ರೋಶ ವ್ಯಕ್ತಪಡಿಸಿದರು.‘ಬೇಸಿಗೆ ದಿನಗಳಲ್ಲಿ ಅಷ್ಟಾಗಿ ಗಲೀಜು ಸೃಷ್ಠಿಯಾಗುವುದಿಲ್ಲ. ಮಳೆ ಸುರಿದಾಗ ಚರಂಡಿಯಲ್ಲಿನ ಕೆಸರು ಸಹಿತ ಗಲೀಜು ಸಾರ್ವಜನಿಕ ನಲ್ಲಿಗಳಿರುವ ಪ್ರದೇಶವನ್ನು ವ್ಯಾಪಿಸುತ್ತದೆ. ಇದರಿಂದಾಗಿ ಕೊಳಕಿನಲ್ಲಿಯೇ ದಲಿತರು ಕೊಡಗಳನ್ನಿರಿಸಿ ಕುಡಿಯಲು ನೀರು ಸಂಗ್ರಹಿಸಬೇಕಾದ ಅನಿವಾರ್ಯತೆಯನ್ನು ಸ್ಥಳೀಯ ಆಡಳಿತ ಸೃಷ್ಟಿದೆ. ಈ ಸಮಸ್ಯೆ ನಿವಾರಿಸುವಂತೆ ಸ್ಥಳೀಯ ಆಡಳಿತಕ್ಕೆ ದಲಿತರು ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ದುರಗಪ್ಪ ಮಾದರ, ಶೇಖಪ್ಪ ಮಾದರ ಆರೋಪಿಸಿದರು.‘ದಲಿತರು ಸ್ಥಳೀಯ ಆಡಳಿತಕ್ಕೆ ಪಾವತಿಸಬೇಕಾದ ತೆರಿಗೆಯನ್ನು ಪಾವತಿಸುತ್ತೇವೆ. ಹೀಗಿದ್ದರೂ ಗ್ರಾಮ ಪಂಚಾಯ್ತಿ ಆಡಳಿತ ಕೇರಿಗಳಲ್ಲಿನ ಚರಂಡಿ, ಗಟಾರಗಳಲ್ಲಿನ ಹೂಳನ್ನು ತೆರವುಗೊಳಿಸಲು ಮುಂದಾಗುತ್ತಿಲ್ಲ. ಎರಡ್ಮೂರು ತಿಂಗಳಿಗೊಮ್ಮೆ ಚರಂಡಿಗಳಲ್ಲಿನ ಹೂಳು ತೆರವುಗೊಳಿಸಲು ಮುಂದಾಗುತ್ತಿದೆ. ಸ್ಥಳೀಯ ಆಡಳಿತದ ಇಂತಹ ನಿರ್ಣಯಗಳಿಂದಾಗಿ ದಲಿತ ಕೇರಿ ಸಾಂಕ್ರಾಮಿಕ ರೋಗಗಳ ಉತ್ಪತ್ತಿ ತಾಣವಾಗಿ ಮಾರ್ಪಟ್ಟಿದೆ’ ಎಂದು ಹನಮಪ್ಪ ಕಡಬಿನ, ಮಹಾಂತೇಶ ಮಾದರ ದೂರಿದರು.‘ದಲಿತ ಕೇರಿಯಲ್ಲಿ ಸ್ಥಳೀಯ ಆಡಳಿತ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಅವೈಜ್ಞಾನಿಕ ಕಾಮಗಾರಿಗಳನ್ನು ಕೂಡಲೇ ಸ್ಥಗಿತಗೊಳಿಸಿ ವೈಜ್ಞಾನಿಕ ಕಾಮಗಾರಿಗೆ ಆದ್ಯತೆ ನೀಡಬೇಕು. ಹೂಳು ತುಂಬಿಕೊಂಡಿರುವ ಚರಂಡಿ ಮತ್ತು ಗಟಾರುಗಳಲ್ಲಿನ ಹೂಳನ್ನು ಶೀಘ್ರ ತೆರವುಗೊಳಿಸಬೇಕು.ಪ್ರತಿ ಎಂಟು ದಿನಕ್ಕೊಮ್ಮೆ ಚರಂಡಿಗಳಲ್ಲಿನ ಹೂಳನ್ನು ತೆರವುಗೊಳಿಸಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಅನಿವಾರ್ಯ’ ಎಂದು ರೇಣುಕಪ್ಪ ಮಾದರ, ಪರಸಪ್ಪ ಮಾದರ ಎಚ್ಚರಿಕೆ ನೀಡಿದರು.ಭೀಮಪ್ಪ ಮಾದರ, ಹನಮಪ್ಪ ಮಾದರ, ಯಮನಪ್ಪ ಮಾದರ, ಲಕ್ಷ್ಮಣ್ಣ ಮಾದರ, ರವಿ ಮಾದರ, ಬಸವರಾ ಜ ಮಾದರ, ಶಿವಪ್ಪ ಚಲವಾದಿ, ಲಕ್ಷ್ಮಣ್ಣ ಭಜಂತ್ರಿ, ಮಾರುತಿ ಭಜಂತ್ರಿ, ಪರಸಪ್ಪ ಭಜಂತ್ರಿ, ಶರಣಪ್ಪ ಭಜಂತ್ರಿ, ರಾಮಪ್ಪ ಭಜಂತ್ರಿ ಪ್ರತಿಭಟನೆಯಲ್ಲಿದ್ದರು.ಶಿವಾನುಭವ ಇಂದು

ರೋಣ: ತಾಲ್ಲೂಕಿನ ಸೂಡಿ ಜುಕ್ತಿಮಠದಲ್ಲಿ ಉಮಾಪತಿ ಶಿವಾಚಾರ್ಯ ಸುವರ್ಣ ಮಹೋತ್ಸವದ ಅಂಗವಾಗಿ 203 ನೇ ಶಿವಾನುಭವ ಇದೇ  6 ರಂದು 8 ಗಂಟೆಗೆ ನಡೆಯುವುದು. ಡಾ. ಕೊಟ್ಟೂರ ಬಸವೇಶ್ವರ ಶಿವಾಚಾರ್ಯ ಸಾನಿಧ್ಯವಹಿಸುವರು. ಬೂದಿಹಾಳದ ಸಿದ್ದನಗೌಡ ಪಾಟೀಲ  ಉಪನ್ಯಾಸ ನೀಡುವರು.  ಸಿ.ಎಸ್.ಭಿಕ್ಷಾವತಿ ಮಠ ಹಾಗೂ ಸಂಗಪ್ಪ ಅಂಗಡಿ ಭಕ್ತಿ ಸೇವೆ ಸಲ್ಲಿಸಲಿದ್ದಾರೆ ಎಂದು ಶಿವಾನುಭವ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.