ಸೂಪರ್‌ ಕಿಂಗ್ಸ್ ಜಯಭೇರಿ

7
ಚಾಂಪಿಯನ್ಸ್ ಲೀಗ್‌: ಒಂದೇ ಓವರ್‌ನಲ್ಲಿ ಐದು ಸಿಕ್ಸರ್‌ ಎತ್ತಿದ ದೋನಿ

ಸೂಪರ್‌ ಕಿಂಗ್ಸ್ ಜಯಭೇರಿ

Published:
Updated:
ಸೂಪರ್‌ ಕಿಂಗ್ಸ್ ಜಯಭೇರಿ

ರಾಂಚಿ (ಪಿಟಿಐ): ನಾಯಕ ಮಹೇಂದ್ರ ಸಿಂಗ್‌ ದೋನಿ ಒಂದೇ ಓವರ್‌ನಲ್ಲಿ ಐದು ಸಿಕ್ಸರ್‌ ಎತ್ತಿ ತವರಿನ ಪ್ರೇಕ್ಷಕರ ಎದುರು ಅಬ್ಬರಿಸಿದರು. ಅವರಿಗೆ ಅತ್ಯುತ್ತಮ ಬೆಂಬಲ ನೀಡಿದ ಸುರೇಶ್‌ ರೈನಾ ಕ್ರಿಕೆಟ್‌ ಪ್ರೇಮಿಗಳು ಹುಚ್ಚೆದ್ದು ಕುಣಿಯುವಂತೆ ಮಾಡಿದರು.ಇವರಿಬ್ಬರ ಸ್ಫೋಟಕ ಬ್ಯಾಟಿಂಗ್‌ ಬಲದಿಂದ ಚೆನ್ನೈ ಸೂಪರ್‌ ಕಿಂಗ್ಸ್ ತಂಡ  ಚಾಂಪಿಯನ್ಸ್‌ ಲೀಗ್‌ ಟ್ವೆಂಟಿ–20  ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ಎದುರು 12 ರನ್‌ಗಳ ಗೆಲುವು ಸಾಧಿಸಿತು.ಗುರುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಸೂಪರ್‌ ಕಿಂಗ್ಸ್‌ ತಂಡದವರು 20 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 202 ರನ್‌ ಗಳಿಸಿದರು. ಈ ಗುರಿ ಮುಟ್ಟುವ ಹಾದಿಯಲ್ಲಿ ಸನ್‌ರೈಸರ್ಸ್‌ ದಿಟ್ಟ ಹೋರಾಟ ತೋರಿತಾದರೂ ಕೊನೆಯಲ್ಲಿ ಎಡವಿತು.ನಿಗದಿತ ಓವರ್‌ಗಳು ಕೊನೆಗೊಂಡಾಗ ಏಳು ವಿಕೆಟ್‌ ನಷ್ಟಕ್ಕೆ 190 ರನ್‌ ಕಲೆ ಹಾಕಿತು. ಈ ಪಂದ್ಯದಲ್ಲಿ ಉಭಯ ತಂಡಗಳಿಂದ 40 ಓವರ್‌ಗಳಲ್ಲಿ ಹರಿದು ಬಂದಿದ್ದು ಒಟ್ಟು 392 ರನ್‌!ಟಾಸ್‌ ಗೆದ್ದ ಸನ್‌ರೈಸರ್ಸ್‌

ನಾಯಕ ಶಿಖರ್‌ ಧವನ್‌ ಸೂಪರ್‌ ಕಿಂಗ್ಸ್‌ ತಂಡವನ್ನು ಮೊದಲು ಬ್ಯಾಟ್‌ ಮಾಡಲು ಆಹ್ವಾನಿಸಿದರು. ಡೇಲ್‌ ಸ್ಟೇಯ್ನ್‌ ಮೊದಲ ಓವರ್‌ನಲ್ಲಿ ಮುರಳಿ ವಿಜಯ್‌ ಅವರ ವಿಕೆಟ್‌ ಪಡೆದು ಸನ್‌ರೈಸರ್ಸ್‌ ಮೇಲುಗೈ ಸಾಧಿಸಲು ಕಾರಣರಾದರು. ಮೈಕ್‌ ಹಸ್ಸಿ ಕೂಡ ಬೇಗನೇ ವಿಕೆಟ್‌ ಒಪ್ಪಿಸಿದರು. ಆದರೆ ಅಮೋಘ ಫಾರ್ಮ್‌ನಲ್ಲಿರುವ ಸುರೇಶ್‌ ರೈನಾ ಅಬ್ಬರದ ಇನಿಂಗ್ಸ್‌ ಕಟ್ಟಿದರು.57 ಎಸೆತಗಳನ್ನು ಎದುರಿಸಿದ ರೈನಾ (84) ಒಂದು ಸಿಕ್ಸರ್‌ ಹಾಗೂ 9 ಬೌಂಡರಿಗಳನ್ನು ಬಾರಿಸಿದರು. ಅಷ್ಟು ಮಾತ್ರವಲ್ಲದೇ, ಬದರೀನಾಥ್‌ ಜೊತೆಗೂಡಿ ಮೂರನೇ ವಿಕೆಟ್‌ಗೆ 70 ಹಾಗೂ ದೋನಿ ಜೊತೆಗೂಡಿ ನಾಲ್ಕನೇ ವಿಕೆಟ್‌ಗೆ 25 ಎಸೆತಗಳಲ್ಲಿ 60 ರನ್‌ ಸೇರಿಸಿದರು.ದೋನಿ ಕೇವಲ 16 ಎಸೆತಗಳಲ್ಲಿ ಅರ್ಧ ಶತಕ ಗಳಿಸಿದರು. ಇದು ಚಾಂಪಿಯನ್ಸ್‌ ಲೀಗ್‌ನಲ್ಲಿ ಮೂಡಿಬಂದ ವೇಗದ ಅರ್ಧ ಶತಕ ಕೂಡ. ತಿಸ್ಸಾರ ಪೆರೇರಾ ಹಾಕಿದ 18ನೇ ಓವರ್‌ನಲ್ಲಿ ದೋನಿ ಐದು ಸಿಕ್ಸರ್‌ ಎತ್ತಿದರು. ಆ ಓವರ್‌ನಲ್ಲಿ 34 ರನ್‌ಗಳು ಬಂದವು. ಅವರು (63; 19 ಎಸೆತ 1 ಬೌಂಡರಿ 8 ಸಿಕ್ಸರ್‌) ಅಜೇಯರಾಗುಳಿದರು.ಸೂಪರ್‌ ಕಿಂಗ್ಸ್‌ 17ನೇ ಓವರ್‌ ಮುಗಿದಾಗ 141 ರನ್‌ ಗಳಿಸಿತ್ತು. ಆದರೆ ಕೊನೆಯ ಮೂರು ಓವರ್‌ಗಳಲ್ಲಿ ಪಂದ್ಯಕ್ಕೆ ಹೊಸ ತಿರುವು ಲಭಿಸಿತು. ಕೊನೆಯ 18 ಎಸೆತಗಳಲ್ಲಿ 61 ರನ್‌ಗಳು ಬಂದವು. ಪೆರೇರಾ ಮೂರು ಓವರ್‌ಗಳಲ್ಲಿ 60 ರನ್‌ ನೀಡಿ

ದುಬಾರಿ ಎನಿಸಿದರು. ಎರಡು ಪಂದ್ಯಗಳನ್ನಾಡಿ­ರುವ ಸೂಪರ್‌ ಕಿಂಗ್ಸ್‌ ಎಂಟು ಪಾಯಿಂಟ್‌ಗಳಿಂದ ಅಗ್ರಸ್ಥಾನದಲ್ಲಿದೆ.ದೋನಿ ಅಬ್ಬರದ ಬ್ಯಾಟಿಂಗ್‌ ನಡೆಸಿದರಾದರೂ ಸುರೇಶ್‌ ರೈನಾ ಪಂದ್ಯ ಶ್ರೇಷ್ಠ ಗೌರವಕ್ಕೆ ಪಾತ್ರರಾದರು.‘ಚಾಂಪಿಯನ್ಸ್‌ ಲೀಗ್‌ ಟೂರ್ನಿಗಾಗಿ ಸಾಕಷ್ಟು ಅಭ್ಯಾಸ ನಡೆಸಿದ್ದೇನೆ. ಪ್ರತಿ ಪಂದ್ಯದಲ್ಲೂ ಉತ್ತಮ ಪ್ರದರ್ಶನ ತೋರಬೇಕು ಎನ್ನುವ ಕಾರಣಕ್ಕಾಗಿ ಹಿರಿಯ ಆಟಗಾರರಿಂದ ಹಲವು ಸಲಹೆಗಳನ್ನು ಪಡೆದಿದ್ದೇನೆ. ಆದ್ದರಿಂದ ಉತ್ತಮ ಪ್ರದರ್ಶನ ತೋರಲು ಸಾಧ್ಯವಾಗುತ್ತಿದೆ’ ಎಂದು ರೈನಾ ಪಂದ್ಯ  ಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದ ನಂತರ ಹೇಳಿದರು.ಹೋರಾಟ: ಗುರಿ ಮುಟ್ಟುವ ಹಾದಿಯಲ್ಲಿ ಉತ್ತಮ ಆರಂಭ ಪಡೆದ ಸನ್‌ರೈಸರ್ಸ್‌ ತಂಡ ಮೊದಲ ಏಳು ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೇ 69 ರನ್‌ ಗಳಿಸಿತ್ತು. ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಪಾರ್ಥೀವ್‌ ಪಟೇಲ್‌ (37) ಮತ್ತು ನಾಯಕ ಧವನ್‌ (48) ಅವರ ಆಟ ಇದಕ್ಕೆ ಕಾರಣ.ಡರೆನ್‌ ಸೆಮಿ (50) ಅರ್ಧಶತಕ ಹೊರೆತು ಪಡೆಸಿದರೆ, ಮಧ್ಯಮ ಕ್ರಮಾಂಕದ ಇನ್ನುಳಿದ ಬ್ಯಾಟ್ಸ್‌ಮನ್‌ಗಳು ಅಬ್ಬರಿಸಲಿಲ್ಲ. ಕೊನೆಯ ಓವರ್‌ವರೆಗೂ ಕುತೂಹಲ ಉಳಿಸಿಕೊಂಡ ಪಂದ್ಯದಲ್ಲಿ ಸೂಪರ್‌ ಕಿಂಗ್ಸ್‌ ಗೆಲುವಿನ ಸವಿ ತನ್ನದಾಗಿಸಿಕೊಂಡಿತು.                           ಸಂಕ್ಷಿಪ್ತ ಸ್ಕೋರ್‌:

ಚೆನ್ನೈ ಸೂಪರ್‌ ಕಿಂಗ್ಸ್‌: 20 ಓವರ್‌ಗಳಲ್ಲಿ 4 ವಿಕೆಟ್‌ಗೆ 202

(ಮೈಕ್‌ ಹಸ್ಸಿ 23, ಸುರೇಶ್‌ ರೈನಾ 84, ಎಸ್‌.ಬದರೀನಾಥ್‌ 13, ಎಂ.ಎಸ್‌.ದೋನಿ ಔಟಾಗದೆ 63; ಡೇಲ್‌ ಸ್ಟೇಯ್ನ್‌ 23ಕ್ಕೆ2, ಜೀನ್‌ ಪಾಲ್‌ ಡುಮಿನಿ 27ಕ್ಕೆ2).ಸನ್‌ರೈಸರ್ಸ್‌ ಹೈದರಾಬಾದ್‌ 20 ಓವರ್‌ಗಳಲ್ಲಿ 7  ವಿಕೆಟ್‌ಗೆ 190.

(ಪಾರ್ಥಿವ್‌ ಪಟೇಲ್‌ 37, ಶಿಖರ್‌ ಧವನ್‌ 48, ಡರೆನ್‌ ಸಮಿ 50; ಆರ್‌. ಅಶ್ವಿನ್‌ 32ಕ್ಕೆ1, ಜಾಸನ್‌ ಹೋಲ್ಡರ್‌ 39ಕ್ಕೆ2, ಡ್ವೇನ್‌ ಬ್ರಾವೊ 34ಕ್ಕೆ2).ಫಲಿತಾಂಶ: ಚೆನ್ನೈ ಸೂಪರ್‌ ಕಿಂಗ್ಸ್‌ಗೆ 12 ರನ್‌ ಜಯ. ಪಂದ್ಯ ಶ್ರೇಷ್ಠ: ಸುರೇಶ್‌ ರೈನಾ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry