ಗುರುವಾರ , ನವೆಂಬರ್ 21, 2019
26 °C
ಡಿವಿಲಿಯರ್ಸ್, ಕೊಹ್ಲಿ ಆಟ ವ್ಯರ್ಥ; ಗೆಲುವಿನ ದಡದಲ್ಲಿ ಎಡವಿದ ರಾಯಲ್ ಚಾಲೆಂಜರ್ಸ್

ಸೂಪರ್ ಕಿಂಗ್ಸ್‌ಗೆ ರೋಚಕ ಗೆಲುವು

Published:
Updated:
ಸೂಪರ್ ಕಿಂಗ್ಸ್‌ಗೆ ರೋಚಕ ಗೆಲುವು

ಚೆನ್ನೈ: ಕೊನೆಯವರೆಗೂ ಕುತೂಹಲ ಕೆರಳಿಸಿದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ನಾಲ್ಕು ವಿಕೆಟ್‌ಗಳಿಂದ ಮಣಿಸಿದ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ಟ್ವೆಂಟಿ-20 ಟೂರ್ನಿಯಲ್ಲಿ ಎರಡನೇ ಗೆಲುವು ತನ್ನದಾಗಿಸಿಕೊಂಡಿದೆ.ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಶನಿವಾರ ನಡೆದ `ಬಲಿಷ್ಠ ತಂಡಗಳ ನಡುವಿನ ಹೋರಾಟ' ಕ್ರಿಕೆಟ್ ಪ್ರೇಮಿಗಳ ಮನಗೆದ್ದಿತು. ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 165 ರನ್ ಪೇರಿಸಿತು. ಕ್ರಿಸ್ ಗೇಲ್ ವಿಫಲರಾದರೂ, ಎಬಿ ಡಿವಿಲಿಯರ್ಸ್ (64) ಮತ್ತು ನಾಯಕ ವಿರಾಟ್ ಕೊಹ್ಲಿ (58) ಗಳಿಸಿದ ಅರ್ಧಶತಕ ತಂಡದ ಉತ್ತಮ ಮೊತ್ತಕ್ಕೆ ಕಾರಣ.ಈ ಗುರಿ ಬೆನ್ನಟ್ಟಿದ ಮಹೇಂದ್ರ ಸಿಂಗ್ ದೋನಿ ಬಳಗ 19.5 ಓವರ್‌ಗಳಲ್ಲಿ 6 ವಿಕೆಟ್‌ಗೆ 166 ರನ್ ಗಳಿಸಿ ಗೆಲುವಿನ ನಗು ಬೀರಿತು. ಚೆನ್ನೈ ಇನಿಂಗ್ಸ್‌ನ ಹೆಚ್ಚಿನ ಅವಧಿಯಲ್ಲೂ ಪಂದ್ಯ ಆರ್‌ಸಿಬಿ ಕೈಯಲ್ಲಿತ್ತು. ಆದರೆ ಅಂತಿಮ ಓವರ್‌ಗಳಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ `ಮಹಿ' ಬಳಗ ಗೆಲುವು ಸಾಧಿಸಿತು.ಸುರೇಶ್ ರೈನಾ (30, 22 ಎಸೆತ), ಎಸ್. ಬದರೀನಾಥ್ (34, 29 ಎಸೆತ), ದೋನಿ (33, 23 ಎಸೆತ, 1 ಬೌಂ, 2 ಸಿಕ್ಸರ್) ಮತ್ತು ಕೊನೆಯಲ್ಲಿ ಸಿಡಿದು ನಿಂತ ರವೀಂದ್ರ ಜಡೇಜ (ಅಜೇಯ 38, 20 ಎಸೆತ, 3 ಬೌಂ, 1 ಸಿಕ್ಸರ್) ಸೂಪರ್ ಕಿಂಗ್ಸ್ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.ಸೂಪರ್ ಕಿಂಗ್ಸ್ ತಂಡದ ಆರಂಭ ಆಘಾತಕಾರಿಯಾಗಿತ್ತು. ಮೈಕ್ ಹಸ್ಸಿ (6) ಮತ್ತು ಮುರಳಿ ವಿಜಯ್ (2) ಬೇಗನೇ ಔಟಾದರು. ಬಳಿಕ ಬಂದ ಬ್ಯಾಟ್ಸ್‌ಮನ್‌ಗಳು ಜವಾಬ್ದಾರಿಯುತ ಆಟ ತೋರಿದರು.ಕೊನೆಯ 5 ಓವರ್‌ಗಳಲ್ಲಿ ತಂಡಕ್ಕೆ 65 ರನ್‌ಗಳು ಬೇಕಿದ್ದವು. ದೋನಿ ಅಬ್ಬರದ ಆಟ ತೋರಿದ ಕಾರಣ ಕೊನೆಯ ಎರಡು ಓವರ್‌ಗಳಲ್ಲಿ 29 ರನ್‌ಗಳ ಅವಶ್ಯಕತೆಯಿತ್ತು. 19ನೇ ಓವರ್‌ನ ಮೊದಲ ಎಸೆತದಲ್ಲಿ ದೋನಿ ಔಟಾದಾಗ ಆರ್‌ಸಿಬಿ ಗೆಲುವಿನ ಕನಸು ಕಂಡಿದ್ದು ನಿಜ. ಆದರೆ ಜಡೇಜ ಮಾತ್ರ ಆರ್‌ಸಿಬಿ ಕನಸಿಗೆ ತಣ್ಣೀರೆರಚಿದರು.ರವಿ ರಾಂಪಾಲ್ ಎಸೆದ 19ನೇ ಓವರ್‌ನಲ್ಲಿ ದೋನಿ ಮತ್ತು ಡ್ವೇನ್ ಬ್ರಾವೊ ಔಟಾದರೂ ಚೆನ್ನೈನ ತಂಡ 13 ರನ್ ಕಲೆಹಾಕಿತು. ಈ ಕಾರಣ ಅಂತಿಮ ಓವರ್‌ನಲ್ಲಿ 16ರನ್‌ಗಳು ಬೇಕಿದ್ದವು. ಆರ್.ಪಿ. ಸಿಂಗ್ ಎಸೆದ ಓವರ್‌ನ ಮೊದಲ ಎರಡು ಎಸೆತಗಳಲ್ಲಿ ಜಡೇಜ ಬೌಂಡರಿ ಹಾಗೂ ಸಿಕ್ಸರ್ ಗಳಿಸಿದರು.ಕೊನೆಯ ಎಸೆತದಲ್ಲಿ ಎರಡು ರನ್‌ಗಳು ಬೇಕಿದ್ದವು. ಜಡೇಜ ಬ್ಯಾಟ್‌ನಿಂದ ಚಿಮ್ಮಿದ ಚೆಂಡನ್ನು ಥರ್ಡ್‌ಮ್ಯಾನ್ ಕ್ಷೇತ್ರದಲ್ಲಿ ರಾಂಪಾಲ್ ಕ್ಯಾಚ್ ಪಡೆದರು. ಆರ್‌ಸಿಬಿ ಆಟಗಾರರು ಗೆಲುವಿನ ಸಂಭ್ರಮ ಆಚರಿಸತೊಡಗಿದರು. ಆದರೆ ಆ ಎಸೆತ ನೋಬಾಲ್ ಆಗಿತ್ತು! ಬ್ಯಾಟ್ಸ್ ಮನ್‌ಗಳು ಒಂದು ರನ್ ಗಳಿಸಿದರಲ್ಲದೆ, ಸೂಪರ್ ಕಿಂಗ್ಸ್‌ಗೆ ರೋಚಕ ಗೆಲುವು ತಂದಿತ್ತರು. ಚಿದಂಬರಂ ಕ್ರೀಡಾಂಗಣದಲ್ಲಿ ನೆರೆದಿದ್ದ ಪ್ರೇಕ್ಷಕರು ಹುಚ್ಚೆದ್ದು ಕುಣಿದರೆ, ಕೊಹ್ಲಿ ಬಳಗ ತಲೆತಗ್ಗಿಸಿ ಪೆವಿಲಿಯನ್‌ನತ್ತ ಹೆಜ್ಜೆಯಿಟ್ಟಿತು. ಆ ಎಸೆತ ನೋಬಾಲ್ ಆಗಿರದೇ ಇದ್ದಲ್ಲಿ, ಚಾಲೆಂಜರ್ಸ್‌ಗೆ ಒಂದು ರನ್ನಿನ ರೋಚಕ ಗೆಲುವು ದೊರೆಯುತ್ತಿತ್ತು. ಆದರೆ ತಂಡಕ್ಕೆ ಅದೃಷ್ಟ ಕೈಕೊಟ್ಟಿತು.ನಿರಾಸೆ ಮೂಡಿಸಿದ ಗೇಲ್: ನಾಯಕ ದೋನಿ ಟಾಸ್ ಗೆದ್ದರೂ ಕ್ಷೇತ್ರರಕ್ಷಣೆ ಆಯ್ದಕೊಂಡಿದ್ದನ್ನು ಸಮರ್ಥಿಸಿಕೊಳ್ಳುವಂತೆ ಸೂಪರ್ ಕಿಂಗ್ಸ್‌ನ ಬೌಲರ್‌ಗಳು ಆರಂಭದಲ್ಲಿ ಬೌಲಿಂಗ್ ಮಾಡಿದರು. ಅಪಾಯಕಾರಿ ಬ್ಯಾಟ್ಸ್‌ಮನ್ ಗೇಲ್ ಅವರನ್ನು ಎರಡನೇ ಓವರ್‌ನಲ್ಲಿ ಕಟ್ಟಿ ಹಾಕಿದಾಗ ಕ್ರಿಸ್ ಮೊರಿಸ್ ಸಂಭ್ರಮಿಸಿದ ರೀತಿಯೇ ಗೇಲ್ ಎಂತಹ  ಬ್ಯಾಟ್ಸ್ ಮನ್ ಎನ್ನುವುದಕ್ಕೆ ಸಾಕ್ಷಿಯಾಗಿತ್ತು.ಕೊಹ್ಲಿ-ಡಿವಿಲಿಯರ್ಸ್ ಆಟ: ಗೇಲ್ ಬೇಗನೇ ಪೆವಿಲಿಯನ್ ಸೇರಿಕೊಂಡಾಗ ಸೂಪರ್ ಕಿಂಗ್ಸ್ ಬೌಲರ್‌ಗಳು ಅತೀವ ಆನಂದದಿಂದ ಇದ್ದರು. ಆದರೆ, ಈ ಖುಷಿ ಹೆಚ್ಚು ಹೊತ್ತು ಇರಲಿಲ್ಲ. ಇದಕ್ಕೆ ಕಾರಣ ಕೊಹ್ಲಿ ಹಾಗೂ ಡಿವಿಲಿಯರ್ಸ್. ಇವರು ಸೂಪರ್ ಕಿಂಗ್ಸ್ ಬೌಲರ್‌ಗಳನ್ನು ಚೆನ್ನಾಗಿಯೇ ದಂಡಿಸಿದರು.ಕೇವಲ 32 ಎಸೆತಗಳನ್ನು ಎದುರಿಸಿದ ಡಿವಿಲಿಯರ್ಸ್ ಎಂಟು ಬೌಂಡರಿ ಹಾಗೂ ಒಂದು ಅಮೋಘ ಸಿಕ್ಸರ್ ಸೇರಿದಂತೆ 64 ರನ್‌ಗಳನ್ನು ಗಳಿಸಿದರು. ಕೊಹ್ಲಿ ಎರಡು ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳು ಒಳಗೊಂಡಂತೆ 58 ರನ್‌ಗಳನ್ನು ಗಳಿಸಿದರು.ಕೊಹ್ಲಿ ಹಾಗೂ ಡಿವಿಲಿಯರ್ಸ್ ಮೂರನೇ ವಿಕೆಟ್ ಜೊತೆಯಾಟದಲ್ಲಿ ಕೇವಲ 48 ಎಸೆತಗಳಲ್ಲಿ 82 ರನ್‌ಗಳನ್ನು ಕಲೆ ಹಾಕಿ ತಂಡದ ಮೊತ್ತವನ್ನು 150ಕ್ಕಿಂತಲೂ ಹೆಚ್ಚು ಮಾಡಿದರು. ಆರನೇ ವಿಕೆಟ್ ಜೊತೆಯಾಟದಲ್ಲಿ ಡಿವಿಲಿಯರ್ಸ್ ಹಾಗೂ ವಿಕೆಟ್ ಕೀಪರ್ ಅರುಣ್ ಕಾರ್ತಿಕ್ ಸೇರಿ 13 ಎಸೆತಗಳಲ್ಲಿ 27 ರನ್‌ಗಳನ್ನು ತಂದಿತ್ತರು. ಆರ್‌ಸಿಬಿ ಕೊನೆಯ ಐದು ಓವರ್‌ಗಳಲ್ಲಿ 50 ರನ್‌ಗಳನ್ನು ಸೇರಿಸಿತು.

ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರ್‌ಗಳಲ್ಲಿ

6 ವಿಕೆಟ್‌ಗೆ 165

ಕ್ರಿಸ್ ಗೇಲ್ ಸಿ ದೋನಿ ಬಿ ಕ್ರಿಸ್ ಮೊರಿಸ್  04

ಮಯಂಕ್ ಅಗರ್‌ವಾಲ್ ಸ್ಟಂಪ್ಡ್ ದೋನಿ ಬಿ ಆರ್. ಅಶ್ವಿನ್  24

ವಿರಾಟ್ ಕೊಹ್ಲಿ ಸಿ ದೋನಿ ಬಿ ಕ್ರಿಸ್ ಮೊರಿಸ್  58

ಎ.ಬಿ. ಡಿವಿಲಿಯರ್ಸ್ ಸಿ ಡ್ವೇನ್ ಬ್ರಾವೊ ಬಿ ಡಿರ್ಕ್ ನ್ಯಾನಸ್  64

ಡೇನಿಯಲ್ ಕ್ರಿಸ್ಟಿಯನ್ ಸಿ ಸುರೇಶ್ ರೈನಾ ಬಿ ಕ್ರಿಸ್ ಮೊರಿಸ್  02

ರವಿ ರಂಪಾಲ್ ಸಿ  ದೋನಿ ಬಿ ಡ್ವೇನ್ ಬ್ರಾವೊ  00

ಅರುಣ್ ಕಾರ್ತಿಕ್ ಔಟಾಗದೆ  05

ಇತರೆ: (ಲೆಗ್ ಬೈ-1, ವೈಡ್-6,  ನೋಬಾಲ್-1)  08

ವಿಕೆಟ್ ಪತನ: 1-6 (ಗೇಲ್; 1.5), 2-51 (ಅಗರ್‌ವಾಲ್; 8.4), 3-133 (ಕೊಹ್ಲಿ; 16.4), 4-135 (ಕ್ರಿಸ್ಟಿಯನ್; 16.6), 5-138 (ರಾಂಪಾಲ್; 17.5), 6-165 (ಡಿವಿಲಿಯರ್ಸ್; 19.6).

ಬೌಲಿಂಗ್: ಡಿರ್ಕ್ ನ್ಯಾನಸ್ 4-0-31-1, ಕ್ರಿಸ್ ಮೊರಿಸ್ 4-0-40-3, ಮೋಹಿತ್ ಶರ್ಮಾ 2-0-13-0, ಆರ್. ಅಶ್ವಿನ್ 4-0-28-1, ರವೀಂದ್ರ ಜಡೇಜಾ 2-0-20-0, ಡ್ವೇನ್ ಬ್ರಾವೊ 4-0-32-1.

ಚೆನ್ನೈ ಸೂಪರ್ ಕಿಂಗ್ಸ್: 19.5 ಓವರ್‌ಗಳಲ್ಲಿ 6 ವಿಕೆಟ್‌ಗೆ 166

ಮೈಕ್ ಹಸ್ಸಿ ಸಿ ಅಗರ್‌ವಾಲ್ ಬಿ ಆರ್. ವಿನಯ್ ಕುಮಾರ್  06

ಮುರಳಿ ವಿಜಯ್ ಸಿ ಅರುಣ್ ಬಿ ರವಿ ರಾಂಪಾಲ್  02

ಸುರೇಶ್ ರೈನಾ ಸಿ ಕಾರ್ತಿಕ್ ಬಿ ಸೈಯದ್ ಮೊಹಮ್ಮದ್  30

ಬದರೀನಾಥ್ ಸಿ ಅಗರ್‌ವಾಲ್ ಬಿ ಸೈಯದ್ ಮೊಹಮ್ಮದ್  34

ಮಹೇಂದ್ರ ಸಿಂಗ್ ದೋನಿ ಸಿ ಅರಣ್ ಬಿ ರವಿ ರಾಂಪಾಲ್  33

ರವೀಂದ್ರ ಜಡೇಜ ಔಟಾಗದೆ  38

ಡ್ವೇನ್ ಬ್ರಾವೊ ಎಲ್‌ಬಿಡಬ್ಲ್ಯುಬಿ ರವಿ ರಾಂಪಾಲ್  08

ಕ್ರಿಸ್ ಮೊರಿಸ್ ಔಟಾಗದೆ  07

ಇತರೆ: (ಲೆಗ್‌ಬೈ-1, ವೈಡ್-4, ನೋಬಾಲ್-3)  08

ವಿಕೆಟ್ ಪತನ: 1-4 (ವಿಜಯ್; 2.1), 2-10 (ಹಸ್ಸಿ; 3.6), 3-66 (ರೈನಾ; 10.3), 4-78 (ಬದರೀನಾಥ್; 12.2), 5-137 (ದೋನಿ; 18.1), 6-146 (ಬ್ರಾವೊ; 18.4)

ಬೌಲಿಂಗ್: ರವಿ ರಾಂಪಾಲ್ 4-0-31-3, ಆರ್.ಪಿ. ಸಿಂಗ್ 3.5-0-41-0, ಆರ್. ವಿನಯ್ ಕುಮಾರ್ 4-0-36-1, ಡೇನಿಯಲ್ ಕ್ರಿಸ್ಟಿಯನ್ 2-0-13-0, ಮುರಳಿ ಕಾರ್ತಿಕ್ 3-0-29-0, ಸೈಯದ್ ಮೊಹಮ್ಮದ್ 3-0-15-2

ಸೂಪರ್ ಕಿಂಗ್ಸ್‌ಗೆ 4 ವಿಕೆಟ್ ಗೆಲುವು, ಪಂದ್ಯಶ್ರೇಷ್ಠ: ಜಡೇಜ

ಪ್ರತಿಕ್ರಿಯಿಸಿ (+)