ಸೂಪರ್ ಕಿಂಗ್ಸ್- ನೈಟ್ ರೈಡರ್ಸ್ ಸೆಣಸು

7

ಸೂಪರ್ ಕಿಂಗ್ಸ್- ನೈಟ್ ರೈಡರ್ಸ್ ಸೆಣಸು

Published:
Updated:
ಸೂಪರ್ ಕಿಂಗ್ಸ್- ನೈಟ್ ರೈಡರ್ಸ್ ಸೆಣಸು

ಚೆನ್ನೈ (ಪಿಟಿಐ): ಒಂದು ವಾರದ ಹಿಂದೆಯಷ್ಟೇ ಜೊತೆಯಾಗಿ ಆಡಿ ಭಾರತಕ್ಕೆ ವಿಶ್ವಕಪ್ ಗೆದ್ದುಕೊಟ್ಟ ಮಹೇಂದ್ರ ಸಿಂಗ್ ದೋನಿ ಮತ್ತು ಗೌತಮ್ ಗಂಭೀರ್ ಇದೀಗ ಪರಸ್ಪರ ಎದುರಾಳಿಗಳಾಗಿ ಕಣಕ್ಕಿಳಿಯಲಿದ್ದಾರೆ.ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್‌ನ ನಾಲ್ಕನೇ ಋತುವಿನ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಶುಕ್ರವಾರ ಮಹೇಂದ್ರ ಸಿಂಗ್ ದೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಗೌತಮ್ ಗಂಭೀರ್ ಸಾರಥ್ಯದ ಕೋಲ್ಕತ್ತ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ.ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುವ ಈ ಪಂದ್ಯದೊಂದಿಗೆ ಐಪಿಎಲ್‌ನ ಅಬ್ಬರಕ್ಕೆ ಚಾಲನೆ ಲಭಿಸಲಿದೆ. ವಿಶ್ವಕಪ್ ಟ್ರೋಫಿ ಎತ್ತಿಹಿಡಿದ ದೋನಿ ಅವರು ಇದೀಗ ‘ಚುಟುಕು’ ಕ್ರಿಕೆಟ್‌ನಲ್ಲಿ ಚೆನ್ನೈ ತಂಡವನ್ನು ಮುನ್ನಡೆಸಲಿದ್ದಾರೆ.ಕಳೆದ ಬಾರಿಯ ಚಾಂಪಿಯನ್ ಸೂಪರ್ ಕಿಂಗ್ಸ್ ತಂಡ ಫೇವರಿಟ್ ಎಂಬ ಹಣೆಪಟ್ಟಿಯೊಂದಿಗೆ ಶುಕ್ರವಾರ ಕಣಕ್ಕಿಳಿಯಲಿದೆ. ಚೆನ್ನೈ ತಂಡ ದೋನಿ ಒಳಗೊಂಡಂತೆ ನಾಲ್ಕು ಆಟಗಾರರನ್ನು ತನ್ನಲ್ಲೇ ಉಳಿಸಿಕೊಂಡಿತ್ತಲ್ಲದೆ, ಹರಾಜಿಗೆ ಬಿಟ್ಟುಕೊಟ್ಟಿರಲಿಲ್ಲ. ಸುರೇಶ್ ರೈನಾ, ಮುರಳಿ ವಿಜಯ್ ಮತ್ತು ದಕ್ಷಿಣ ಆಫ್ರಿಕದ ಅಲ್ಬಿ ಮಾರ್ಕೆಲ್ ಅವರು ತಂಡದಲ್ಲಿ ಮುಂದುವರಿದಿದ್ದಾರೆ.ಅದೇ ರೀತಿ ಕಳೆದ ಮೂರು ವರ್ಷ ತಂಡದ ಜೊತೆಗಿದ್ದ ಆರ್. ಅಶ್ವಿನ್, ಎಸ್. ಬದರೀನಾಥ್ ಮತ್ತು ಮೈಕ್ ಹಸ್ಸಿ ಅವರನ್ನು ಹರಾಜಿನಲ್ಲಿ ಮತ್ತೆ ಕೊಳ್ಳಲು ಯಶಸ್ವಿಯಾಗಿತ್ತು. ಈ ಕಾರಣ ಚೆನ್ನೈ ತಂಡದ ಆಟಗಾರರಿಗೆ ಪರಸ್ಪರ ಹೊಂದಿಕೊಳ್ಳಲು ಹೆಚ್ಚು ಕಷ್ಟವಾಗದು.ಮತ್ತೊಂದೆಡೆ ನೈಟ್ ರೈಡರ್ಸ್ ತಂಡ ಹೊಸ ರೂಪ ಪಡೆದುಕೊಂಡಿದೆ. ಗಂಭೀರ್ ನೂತನ ನಾಯಕರಾಗಿದ್ದಾರೆ. ಕೋಲ್ಕತ್ತದ ಜನರ ನೆಚ್ಚಿನ ‘ದಾದಾ’ ಅವರು ಈ ಬಾರಿ ಆಡುತ್ತಿಲ್ಲ. ಹರಾಜಿನ ವೇಳೆ ಸೌರವ್ ಗಂಗೂಲಿ ಅವರನ್ನು ಕೊಳ್ಳಲು ಯಾವುದೇ ತಂಡ ಆಸಕ್ತಿ ವಹಿಸಿಲ್ಲ.ಗಂಭೀರ್ ಅಲ್ಲದೆ ಅಪಾಯಕಾರಿ ಬ್ಯಾಟ್ಸ್‌ಮನ್ ಯೂಸುಫ್ ಪಠಾಣ್ ಅವರು ಕೋಲ್ಕತ್ತ ತಂಡದ ಬ್ಯಾಟಿಂಗ್‌ಗೆ ಬಲ ನೀಡಲಿದ್ದಾರೆ. ವಿದೇಶಿ ಆಟಗಾರರಾದ ಜಾಕ್ ಕಾಲಿಸ್ ಮತ್ತು ಎಯೊನ್ ಮಾರ್ಗನ್ ಅವರ ಬಲ ಕೂಡಾ ತಂಡಕ್ಕೆ ಇದೆ.ಮೊದಲ ಕೆಲವು ಪಂದ್ಯಗಳಿಗೆ ಕೋಲ್ಕತ್ತ ತಂಡಕ್ಕೆ ಬ್ರೆಟ್ ಲೀ ಅವರ ಸೇವೆ ಲಭಿಸುತ್ತಿಲ್ಲ. ಏಕೆಂದರೆ ಆಸ್ಟ್ರೇಲಿಯಾ ತಂಡ ಇದೀಗ ಏಕದಿನ ಸರಣಿಯನ್ನಾಡಲು ಬಾಂಗ್ಲಾದೇಶ ಪ್ರವಾಸದಲ್ಲಿದೆ. ಆದ್ದರಿಂದ ಬೌಲಿಂಗ್‌ನಲ್ಲಿ ತಂಡವು ಲಕ್ಷ್ಮೀಪತಿ ಬಾಲಾಜಿ, ಪ್ರದೀಪ್ ಸಂಗ್ವಾನ್ ಮತ್ತು ಇಕ್ಬಾಲ್ ಅಬ್ದುಲ್ಲಾ ಅವರನ್ನು ನೆಚ್ಚಿಕೊಂಡಿದೆ.ಶಾರೂಖ್ ಖಾನ್ ಒಡೆತನದ ನೈಟ್ ರೈಡರ್ಸ್ ಮೊದಲ ಮೂರು ವರ್ಷಗಳ ಟೂರ್ನಿಯಲ್ಲಿ ನಿರಾಸೆ ಅನುಭವಿಸಿತ್ತು. ಒಮ್ಮೆಯೂ ಸೆಮಿಫೈನಲ್ ಪ್ರವೇಶಿಸಿಲ್ಲ. ಆದ್ದರಿಂದ ಈ ಬಾರಿ ಧನಾತ್ಮಕ ರೀತಿಯಲ್ಲಿ ಟೂರ್ನಿಯನ್ನು ಆರಂಭಿಸುವ ವಿಶ್ವಾಸದಲ್ಲಿದೆ.ತಂಡಗಳು

ಚೆನ್ನೈ ಸೂಪರ್ ಕಿಂಗ್ಸ್: ಮಹೇಂದ್ರ ಸಿಂಗ್ ದೋನಿ (ನಾಯಕ), ಸುರೇಶ್ ರೈನಾ, ಮುರಳಿ ವಿಜಯ್, ಮೈಕ್ ಹಸ್ಸಿ, ಶ್ರೀಕಾಂತ್ ಅನಿರುದ್ಧ್, ಎಸ್. ಬದರೀನಾಥ್, ಫಾಫ್ ಡು ಪ್ಲೆಸಿಸ್, ವೃದ್ದಿಮನ್ ಸಹಾ, ಅಭಿನವ್ ಮುಕುಂದ್, ಜಾರ್ಜ್ ಬೈಲಿ, ಅಲ್ಬಿ ಮಾರ್ಕೆಲ್, ಸ್ಕಾಟ್ ಸ್ಟೈರಿಸ್, ಟಿಮ್ ಸೌಥಿ, ಆರ್. ಅಶ್ವಿನ್, ಬೆನ್ ಹಿಲ್ಫೆನಾಸ್, ಜೋಗಿಂದರ್ ಶರ್ಮ, ನುವಾನ್ ಕುಲಶೇಖರ, ಸುದೀಪ್ ತ್ಯಾಗಿ, ಸೂರಜ್ ರಂದೀವ್, ಶಾದಾಬ್ ಜಕಾತಿ, ವಿ. ಯ್ಯೋಮಹೇಶ್, ಕೆ. ವಾಸುದೇವದಾಸ್, ಜಿ. ವಿಘ್ನೇಶ್.ಕೋಲ್ಕತ್ತ ನೈಟ್ ರೈಡರ್ಸ್: ಗೌತಮ್ ಗಂಭೀರ್ (ನಾಯಕ), ಜಾಕ್ ಕಾಲಿಸ್, ಎಯೊನ್ ಮಾರ್ಗನ್, ಮನೋಜ್ ತಿವಾರಿ, ರ್ಯಾನ್ ಟೆನ್ ಡಾಶೆಟ್, ಯೂಸುಫ್ ಪಠಾಣ್, ಶಕೀಬ್ ಅಲ್ ಹಸನ್, ಜೇಮ್ಸ್ ಪ್ಯಾಟಿಸನ್, ಬ್ರಾಡ್ ಹಡಿನ್, ಬ್ರೆಟ್ ಲೀ, ಎಲ್. ಬಾಲಾಜಿ, ಜೈದೇವ್ ಉನದ್ಕತ್, ಸರಬ್ಜಿತ್ ಲಡ್ಡಾ, ರಜತ್ ಭಾಟಿಯಾ, ಮನ್ವಿಂದರ್ ಬಿಸ್ಲಾ, ಶ್ರೀವತ್ಸ್ ಗೋಸ್ವಾಮಿ, ಇಕ್ಬಾಲ್ ಅಬ್ದುಲ್ಲಾ, ಪ್ರದೀಪ್ ಸಂಗ್ವಾನ್, ಶಮಿ ಅಹ್ಮದ್, ಲಕ್ಷ್ಮೀ ರತನ್ ಶುಕ್ಲಾ.ಪಂದ್ಯದ ಆರಂಭ: ರಾತ್ರಿ 8.00ಕ್ಕೆ

ನೇರ ಪ್ರಸಾರ: ಸೆಟ್ ಮ್ಯಾಕ್ಸ್ 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry