ಸೂಪರ್ ಡಿವಿಷನ್ ಲೀಗ್ ಫುಟ್‌ಬಾಲ್: ಎಚ್‌ಎಎಲ್‌ಗೆ ಗೆಲುವು

7

ಸೂಪರ್ ಡಿವಿಷನ್ ಲೀಗ್ ಫುಟ್‌ಬಾಲ್: ಎಚ್‌ಎಎಲ್‌ಗೆ ಗೆಲುವು

Published:
Updated:
ಸೂಪರ್ ಡಿವಿಷನ್ ಲೀಗ್ ಫುಟ್‌ಬಾಲ್: ಎಚ್‌ಎಎಲ್‌ಗೆ ಗೆಲುವು

ಬೆಂಗಳೂರು: ಎಚ್‌ಎಎಲ್ ತಂಡದವರು ಇಲ್ಲಿ ನಡೆಯುತ್ತಿರುವ ಬಿಡಿಎಫ್‌ಎ ಆಶ್ರಯದ ಸೂಪರ್ ಡಿವಿಷನ್ ಲೀಗ್ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಪ್ರಯಾಸದ ಗೆಲುವು ಪಡೆದರು.ಅಶೋಕನಗರ ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಎಚ್‌ಎಎಲ್ 2-1 ಗೋಲುಗಳಿಂದ ಎಡಿಇ ತಂಡವನ್ನು ಮಣಿಸಿತು. ರಮೇಶ್ (12ನೇ ನಿಮಿಷ) ಮತ್ತು ಆರ್.ಸಿ. ಪ್ರಕಾಶ್ (31) ಗೋಲು ಗಳಿಸಿ ಎಚ್‌ಎಎಲ್ ಗೆಲುವಿಗೆ ಕಾರಣರಾದರು. ಎಡಿಇ ತಂಡದ ಶ್ರೀಧರ್ 82ನೇ ನಿಮಿಷದಲ್ಲಿ ಗೋಲು ಗಳಿಸಿ ಸೋಲಿನ ಅಂತರ ತಗ್ಗಿಸಿದರು.ಐ-ಲೀಗ್‌ನಲ್ಲಿ ಎರಡನೇ ಡಿವಿಷನ್‌ಗೆ ಹಿಂಬಡ್ತಿ ಪಡೆದಿರುವ ಎಚ್‌ಎಎಲ್ ಈ ಪಂದ್ಯದಲ್ಲಿ ಗೆಲುವು ಪಡೆಯಲು ಸಾಕಷ್ಟು ಪ್ರಯಾಸಪಟ್ಟಿತು. ಪ್ರಮುಖ ಆಟಗಾರರು ತಂಡವನ್ನು ತೊರೆದು ಬೇರೆ ಕ್ಲಬ್ ಸೇರಿಕೊಂಡಿರುವ ಕಾರಣ ಎಚ್‌ಎಎಲ್ ಹೊಸಮುಖಗಳೊಂದಿಗೆ ಕಣಕ್ಕಿಳಿದಿತ್ತು. ಐ-ಲೀಗ್ ವೇಳೆ ತಂಡದಲ್ಲಿದ್ದ ಜೋಸೆಫ್ ಫೆಮಿ, ಜೆ. ಹಮ್ಜಾ, ಮಲೆಂಗಾಂಬ ಮೇಟಿ, ಜೇಮ್ಸ ಸಿಂಗ್ ಮತ್ತು ರೋಹಿತ್ ಚಂದ್ ಈಗಾಗಲೇ ತಂಡವನ್ನು ತೊರೆದಿದ್ದಾರೆ. ಗೌತಮ್ ದೇವನಾಥ್, ಗೋಲ್‌ಕೀಪರ್ ಅಮರ್‌ದೇವ್ ಮತ್ತು ಅಜಿತ್ ಕುಮಾರ್ ಇನ್ನು ಕೆಲವು ಪಂದ್ಯಗಳಿಗೆ ಲಭ್ಯರಿದ್ದು, ಬಳಿಕ ತಂಡವನ್ನು ತೊರೆಯಲಿದ್ದಾರೆ.ಶನಿವಾರ ನಡೆದ `ಎ~ ಡಿವಿಷನ್ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಇಸ್ರೋ 2-1 ಗೋಲುಗಳಿಂದ ಧರ್ಮರಾಜ ಯೂನಿಯನ್ ತಂಡವನ್ನು ಮಣಿಸಿತು. ರಾಘವೇಂದ್ರ (32) ಮತ್ತು ತಾಮರಸೆಲ್ವಂ (54) ವಿಜೇತ ತಂಡದ ಪರ ಚೆಂಡನ್ನು ಗುರಿ ಸೇರಿಸಿದರು. ಧರ್ಮರಾಜ ಯೂನಿಯನ್ ತಂಡದ ಏಕೈಕ ಗೋಲನ್ನು ಶ್ಯಾಮ್ 68ನೇ ನಿಮಿಷದಲ್ಲಿ ತಂದಿತ್ತರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry