ಸೋಮವಾರ, ಡಿಸೆಂಬರ್ 9, 2019
17 °C

ಸೂಪರ್ ಡಿವಿಷನ್ ಹಾಕಿ: ಏರ್ ಇಂಡಿಯಾಕ್ಕೆ ಭರ್ಜರಿ ಗೆಲುವು

Published:
Updated:
ಸೂಪರ್ ಡಿವಿಷನ್ ಹಾಕಿ: ಏರ್ ಇಂಡಿಯಾಕ್ಕೆ ಭರ್ಜರಿ ಗೆಲುವು

ಬೆಂಗಳೂರು: ಶಿವೇಂದರ್ ಸಿಂಗ್ ತಂದಿತ್ತ ಮೂರು ಗೋಲುಗಳ ನೆರವಿನಿಂದ ಏರ್ ಇಂಡಿಯಾ ತಂಡ  ಇಲ್ಲಿ ನಡೆಯುತ್ತಿರುವ ಕೆಎಸ್‌ಎಚ್‌ಎ ಆಶ್ರಯದ ‘ಓಜೋನ್ ಗ್ರೂಪ್’ ಪ್ರಾಯೋಜಿತ ರಾಜ್ಯ ಸೂಪರ್ ಡಿವಿಷನ್ ಹಾಕಿ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಗೆಲುವು ಪಡೆಯಿತು.ಅಕ್ಕಿ ತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಏರ್ ಇಂಡಿಯಾ 9-5 ಗೋಲುಗಳಿಂದ ಎಂಇಜಿ ತಂಡದ ಎದುರು ಸುಲಭ ಜಯ ಸಾಧಿಸಿತು. ಮಂಗಳವಾರದ ಪಂದ್ಯದಲ್ಲಿ ಏರ್ ಇಂಡಿಯಾ ತಂಡವು ಎಂಎಲ್‌ಐ ವಿರುದ್ಧ ಗೆಲುವು ಸಾಧಿಸಿತು.ಏರ್ ಇಂಡಿಯಾ ತಂಡದ ಪರ ಶಿವೇಂದರ್ ಸಿಂಗ್ 8, 33, 35ನೇ ನಿಮಿಷ ಹಾಗೂ ಲೆನ್ ಅಯ್ಯಪ್ಪ 18, 39ನೇ ನಿಮಿಷದಲ್ಲಿ ಗೋಲುಗಳನ್ನು ತಂದಿತ್ತರೆ. ಉಳಿದ ಗೋಲುಗಳನ್ನು ವಿಕ್ರಮ್ ಪಿಳ್ಳೆ (21), ಸಮೀರ್ ದಾದ್ (41), ಅರ್ಜುನ್ ಹಾಲಪ್ಪ (47), ಬೀರೇಂದರ್ ಲಾಕ್ರ (55) ಗಳಿಸಿದರು. ಎಂಇಜಿ ತಂಡದ ಪರ ಪೃಥ್ವಿ ಶೆಟ್ಟಿ (16), ಮುತ್ತಣ್ಣ (38), ಮೋಹನ್ ಮುತ್ತಣ್ಣ (54, 58) ಹಾಗೂ ಪೂವಣ್ಣ (60) ಗೋಲು ಗಳಿಸಿದರು.ದಿನದ ಇನ್ನೊಂದು ಪಂದ್ಯದಲ್ಲಿ ಬಿಪಿಸಿಎಲ್ ತಂಡ  5-1 ಗೋಲುಗಳಿಂದ ಎಸ್‌ಎಐ ತಂಡದ ಎದುರು ಸುಲಭ ಗೆಲುವು ಪಡೆಯಿತು. ಗುರುಪ್ರೀತ್ ಸಿಂಗ್ (35, 39, 55ನೇ ನಿಮಿಷ) ಮೂರು ಗೋಲುಗಳನ್ನು ತಂದಿತ್ತರೆ, ಅಮರ್ ಅಯ್ಯಮ್ಮ, ಷೇರ್ ಸಿಂಗ್ ತಲಾ ಒಂದು ಗೋಲು ಗಳಿಸಿದರು. ಎಸ್‌ಎಐ ತಂಡದ ಪರ ಪ್ರಧಾನ್ ಸೋಮಣ್ಣ ಮಾತ್ರ 43ನೇ ನಿಮಿಷದಲ್ಲಿ ಒಂದು ಗೋಲು ಗಳಿಸಿದರು.ನಾಮಧಾರಿ ಇಲೆವೆನ್ ಹಾಗೂ ಎಎಸ್‌ಸಿ ತಂಡದ ನಡುವಣ ಮತ್ತೊಂದು ಪಂದ್ಯ ಅರ್ಧದಲ್ಲೇ ಮೊಟಕುಗೊಂಡಿತು. ಟರ್ಫ್‌ಗೆ ನೀರು ಹಾಯಿಸುವ ಯಂತ್ರ ಕೈಕೊಟ್ಟ ಕಾರಣ ಪಂದ್ಯವನ್ನು ಅರ್ಧಕ್ಕೇ ನಿಲ್ಲಿಸಲಾಯಿತು. ಈ ವೇಳೆ ನಾಮಧಾರಿ ಇಲೆವನ್ 2-0 ಗೋಲುಗಳ ಮುನ್ನಡೆ ಸಾಧಿಸಿತ್ತು. ಪಂದ್ಯದ ಉಳಿದ ಅವಧಿಯ ಆಟವನ್ನು ಇನ್ನೊಂದು ದಿನ ನಡೆಸಲು ಸಂಘಟಕರು ನಿರ್ಧರಿಸಿದ್ದಾರೆ. ಗುರುವಾರ ಆರ್ಮಿ ರೆಡ್-ಎಂಎಲ್‌ಐ, ಆರ್ಮಿ ಗ್ರೀನ್- ನಾಮಧಾರಿ ಇಲೆವೆನ್ ತಂಡಗಳು ಪೈಪೋಟಿ ನಡೆಸಲಿವೆ.

ಪ್ರತಿಕ್ರಿಯಿಸಿ (+)