ಬುಧವಾರ, ಡಿಸೆಂಬರ್ 11, 2019
22 °C

ಸೂಪರ್ ಡಿವಿಷನ್ ಹಾಕಿ: ಐಒಸಿಎಲ್‌ಗೆ ರೋಚಕ ಜಯ

Published:
Updated:
ಸೂಪರ್ ಡಿವಿಷನ್ ಹಾಕಿ: ಐಒಸಿಎಲ್‌ಗೆ ರೋಚಕ ಜಯ

ಬೆಂಗಳೂರು: ವಿ. ಆರ್. ರಘುನಾಥ್ ತಂದಿತ್ತ ಮೂರು ಗೋಲುಗಳ ನೆರವಿನಿಂದ ಐಒಸಿಎಲ್ ತಂಡ ಇಲ್ಲಿ ನಡೆಯುತ್ತಿರುವ ಕೆಎಸ್‌ಎಚ್‌ಎ ಆಶ್ರಯದ ‘ಓಜೋನ್ ಗ್ರೂಪ್’ ಪ್ರಾಯೋಜಿತ ಸೂಪರ್ ಡಿವಿಷನ್ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ ರೋಚಕ ಜಯ ಸಾಧಿಸಿತು. ಅಕ್ಕಿತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಐಒಸಿಎಲ್ 6-5 ಗೋಲುಗಳಿಂದ ಎಂಇಜಿ ತಂಡವನ್ನು ಮಣಿಸಿತು.ರಘುನಾಥ್ ಅವರು ಪಂದ್ಯದ 23, 26 ಮತ್ತು 36ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿದರು. ತಂಡದ ಇತರ ಗೋಲುಗಳನ್ನು ರೋಶನ್ ಮಿಂಜ್ (6ನೇ ನಿಮಿಷ), ಗಗನ್‌ದೀಪ್ (20) ಮತ್ತು ರಾಜ್ಪಾಲ್ (24) ಅವರು ತಂದಿತ್ತರು. ಎಂಇಜಿ ಪರ ಮುತ್ತಣ್ಣ (9 ಮತ್ತು 10), ಪೂವಣ್ಣ (34 ಮತ್ತು 63) ಹಾಗೂ ಸಗಾಯ್ ಜಯಶೀಲನ್ (66) ಗೋಲು ಗಳಿಸುವಲ್ಲಿ ಯಶ ಕಂಡರು. ಕೊನೆಯ 10 ನಿಮಿಷಗಳಲ್ಲಿ ಎಂಇಜಿ ತಂಡ ಗೆಲುವಿಗಾಗಿ ಕಠಿಣ ಪರಿಶ್ರಮ ನಡೆಸಿತು. ಆದರೆ ಐಒಸಿಎಲ್ ಒತ್ತಡವನ್ನು ಮೆಟ್ಟಿನಿಂತು ಗೆಲುವು ತನ್ನದಾಗಿಸಿಕೊಂಡಿತು. ಫೋರ್ಟಿಸ್‌ಗೆ ಜಯ: ದಿನದ ಮತ್ತೊಂದು ಪಂದ್ಯದಲ್ಲಿ ಫೋರ್ಟಿಸ್ ತಂಡ 4-2 ಗೋಲುಗಳಿಂದ ಎಎಸ್‌ಸಿ ತಂಡವನ್ನು ಮಣಿಸಿತು.ದಿವಾಕರ್ ರಾಮ್ (9ನೇ ನಿಮಿಷ), ವಿಕಾಸ್ ಟೊಪ್ಪೊ (18), ನಾರದ್ (39) ಮತ್ತು ಪ್ರಮೋದ್ (53) ಅವರು ವಿಜಯಿ ಫೋರ್ಟಿಸ್ ತಂಡದ ಪರ ಗೋಲು ಗಳಿಸಿದರು. ಎಎಸ್‌ಸಿ ತಂಡದ ಪರ ಕೆ.ಪಿ. ದೀಪು (52) ಹಾಗೂ ಹರ್‌ಪ್ರೀತ್ ಸಿಂಗ್ (68) ಚೆಂಡನ್ನು ಗುರಿ ಸೇರಿಸುವಲ್ಲಿ ಯಶ ಕಂಡರು. ಮಂಗಳವಾರ ನಡೆಯುವ ಲೀಗ್‌ನ ಪಂದ್ಯಗಳಲ್ಲಿ ಬಿಪಿಸಿಎಲ್- ಎಂಇಜಿ, ಐಒಸಿಎಲ್- ಎಂಎಲ್‌ಐ ಮತ್ತು ಆರ್ಮಿ ಗ್ರೀನ್- ಫೋರ್ಟಿಸ್ ತಂಡಗಳು ಪರಸ್ಪರ ಪೈಪೋಟಿ ನಡೆಸಲಿವೆ.

ಪ್ರತಿಕ್ರಿಯಿಸಿ (+)