ಶುಕ್ರವಾರ, ಮೇ 20, 2022
19 °C

ಸೂಪರ್ ಮೂನ್: ಆತಂಕ ಅನಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಭೂಮಿಯ ಸಮೀಪಕ್ಕೆ ಇದೇ 19ರಂದು ಚಂದ್ರ ಬಂದಾಗ ಏನಾಗುತ್ತದೆ? ಭೂಮಿಯಲ್ಲಿ ಚಂಡಮಾರುತ ಬೀಸುತ್ತದೆಯೇ? ಜ್ವಾಲಾಮುಖಿಗಳು ಬೆಂಕಿಯುಗುಳುತ್ತವೆಯೇ? ಅಥವಾ ಕಡಲ ತೀರಗಳು ಸುನಾಮಿಯ ಹೊಡೆತಕ್ಕೆ ಸಿಲುಕುತ್ತವೆಯೇ?ಮೇಲೆ ಹೇಳಿದ ಎಲ್ಲ ಅಪಾಯಗಳೂ ಕಾದಿವೆ ಎಂದು ಇಂಟರ್‌ನೆಟ್‌ನಲ್ಲಿ ಅನೇಕರು ಬರೆಯುತ್ತಿದ್ದಾರೆ, ಜನಸಾಮಾನ್ಯರೂ ಅನೇಕ ಕಡೆ ಇದೇ ಚರ್ಚೆ ನಡೆಸುತ್ತಿದ್ದಾರೆ. ಆದರೆ ಆ ದಿನ ಯಾವುದೇ ಅಪಾಯ ಸಂಭವಿಸದು ಎನ್ನುತ್ತಾರೆ ವಿಜ್ಞಾನಿಗಳು.

ಚಂದ್ರ ಇದೇ 19ರಂದು ಭೂಮಿಗೆ ಅತ್ಯಂತ ಸಮೀಪ ಬರಲಿದ್ದಾನೆ. ಆ ದಿನ ಭೂಮಿ ಮತ್ತು ಚಂದ್ರನ ನಡುವಿನ ಅಂತರ 2,21,556 ಮೈಲಿ ಇರಲಿದೆ. ಇದನ್ನು ‘ಲೂನಾರ್ ಪೆರಿಜೀ’ ಎಂದು ಕರೆಯುತ್ತಾರೆ. ಇದು ಪ್ರತಿ ತಿಂಗಳೂ ನಡೆಯುವ ಪ್ರಕ್ರಿಯೆ. ಆದರೆ ಮಾ.19ರಂದು ಹುಣ್ಣಿಮೆಯ ದಿನದಂದೇ ‘ಲೂನಾರ್ ಪೆರಿಜೀ’ ಸಂಭವಿಸಲಿರುವುದು ವಿಶೇಷ.ಲೂನಾರ್ ಪೆರಿಜೀ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಬೆಂಗಳೂರಿನ ಜವಾಹರಲಾಲ್ ನೆಹರು ತಾರಾಲಯದ ನಿರ್ದೇಶಕ ಪ್ರೊ.ಸಿ.ಎಸ್. ಶುಕ್ರೆ, ‘ಚಂದ್ರ ಭೂಮಿಗೆ ಸನಿಹದಲ್ಲಿರುತ್ತಾನೆ ಎಂಬ ಕಾರಣಕ್ಕೆ ಮಾ.19ರಂದು ಯಾವುದೇ ಅನಾಹುತಗಳು ಸಂಭವಿಸುವುದಿಲ್ಲ. ಆ ಬಗ್ಗೆ ಭಯ ಅನಗತ್ಯ’ ಎಂದರು.‘ಭೂಮಿಯ ಸುತ್ತ ಚಂದ್ರ ಸುತ್ತುವುದು ವೃತ್ತಾಕಾರದಲ್ಲಿ ಅಲ್ಲ, ಚಂದ್ರ ಸುತ್ತುವುದು ಅಂಡಾಕಾರದಲ್ಲಿ. ಇದೇ ಕಾರಣಕ್ಕೆ ಚಂದ್ರ ಮತ್ತು ಭೂಮಿಯ ನಡುವಿನ ಅಂತರ ಬದಲಾಗುತ್ತದೆ. ಈ ರೀತಿ ಆಗುವುದು ಬಹಳ ಸಾಮಾನ್ಯವಾದ ಪ್ರಕ್ರಿಯೆ’ ಎಂದು ಪ್ರೊ.ಶುಕ್ರೆ ಹೇಳಿದರು.ಮಾ. 19ರಂದು ಚಂದ್ರ ಭೂಮಿಯ ಸಮೀಪ ಬಂದಾಗ ಭೂಮಿಯ ಹವಾಮಾನದಲ್ಲಿ ತೀವ್ರ ಬದಲಾವಣೆಗಳು ಕಾಣಿಸಿಕೊಳ್ಳಲಿವೆ ಎಂದೂ ಕೆಲವೆಡೆ ವರದಿಯಾಗಿವೆ. ಇಂಥ ಅನುಮಾನಗಳನ್ನು ಅಲ್ಲಗಳೆಯುವ ಪ್ರೊ. ಶುಕ್ರೆ, ‘ಚಂದ್ರ ಭೂಮಿಗೆ ಹತ್ತಿರವಾಗುವುದು ಸಹಜ, ಸಾಮಾನ್ಯ. ಎಷ್ಟೋ ವರ್ಷಗಳಿಂದ ಇದು ನಡೆಯುತ್ತಿದೆ. ಲೂನಾರ್ ಪೆರಿಜೀ ಕಾರಣಕ್ಕೆ ಯಾವುದೇ ಪ್ರಾಕೃತಿಕ ಅವಘಡಗಳು ಸಂಭವಿಸುವುದಿಲ್ಲ’ ಎಂದರು.‘ವೈಜ್ಞಾನಿಕ ದೃಷ್ಟಿಯಿಂದ ಈ ಪ್ರಕ್ರಿಯೆಯಲ್ಲಿ ಹೊಸದೇನೂ ಇಲ್ಲ. ಆದರೆ ಆ ದಿನ ಚಂದ್ರ ಸಾಮಾನ್ಯ ದಿನಗಳಲ್ಲಿ ಕಾಣುವುದಕ್ಕಿಂತ ಶೇ 10ರಷ್ಟು ದೊಡ್ಡದಾಗಿ ಕಾಣಿಸುತ್ತಾನೆ. ಛಾಯಾಗ್ರಾಹಕರಿಗೆ ಅದು ಒಳ್ಳೆಯ ದಿನ’ ಎಂದರು.

‘ಭೂಮಿಯ ಹತ್ತಿರಕ್ಕೆ ಚಂದ್ರ ಬರುವುದು ನಿಜ, ಆದರೆ ಚಂಡಮಾರುತ, ಭೂಕಂಪದಂತಹ ಯಾವುದೇ ಅಪಾಯ ಇಲ್ಲ. ಸಮುದ್ರದ ಉಬ್ಬರ ಸ್ವಲ್ಪ ಹೆಚ್ಚಾಗಬಹುದು’ ಎನ್ನುತ್ತಾರೆ ಉಜಿರೆಯ ಎಸ್‌ಡಿಎಂ ಕಾಲೇಜಿನ ಭೌತಶಾಸ್ತ್ರ ಪ್ರಾಧ್ಯಾಪಕ ಪ್ರೊ.ಟಿ.ಎನ್. ಕೇಶವ.ದೂರವಾಣಿ ಮೂಲಕ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ‘ಚಂದ್ರ ಇಂದೂ ಭೂಮಿಗೆ ಹತ್ತಿರವಾಗಿದ್ದಾನೆ. ಮಾ. 19ರಂದು ಇನ್ನಷ್ಟು ಹತ್ತಿರವಾಗಲಿದ್ದಾನೆ, ಅಷ್ಟೆ. ಹಾಗೆ ನೋಡಿದರೆ ಇಂದಿನಿಂದಲೇ ಅಪಾಯಗಳು ಸಂಭವಿಸಬೇಕಿತ್ತು. ಚಂದ್ರ ಹತ್ತಿರ ಬಂದಾಗ ಭೂಮಿಯ ಮೇಲೆ ಪ್ರಾಕೃತಿಕ ಅವಘಡಗಳು ಸಂಭವಿಸಿದ ದಾಖಲೆ ಇಲ್ಲ’ ಎಂದು ಹೇಳಿದರು.ಭೂಕಂಪ, ಜ್ವಾಲಾಮುಖಿ ಸ್ಫೋಟ ಮುಂತಾದವುಗಳು ಸಂಭವಿಸುವುದಿಲ್ಲ. ಒಂದು ವೇಳೆ ಹಾಗೆ ಏನಾದರೂ ಆದಲ್ಲಿ, ಅದಕ್ಕೂ ಚಂದ್ರ ಹತ್ತಿರ ಬಂದದಕ್ಕೂ ಯಾವುದೇ ಸಂಬಂಧ ಕಲ್ಪಿಸಬೇಕಾಗಿಲ್ಲ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.