ಶನಿವಾರ, ಮೇ 28, 2022
27 °C

ಸೂಪರ್ ಸೈನಾಗೆ ಚಾಂಪಿಯನ್ ಪಟ್ಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೂಪರ್ ಸೈನಾಗೆ ಚಾಂಪಿಯನ್ ಪಟ್ಟ

ಜಕಾರ್ತ (ಪಿಟಿಐ): ಲಂಡನ್ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಸೈನಾ ನೆಹ್ವಾಲ್ ಅವರ ಕನಸಿಗೆ ಮತ್ತಷ್ಟು ಬಲ ಬಂದಿದೆ. ಉತ್ಕೃಷ್ಟ ಪ್ರದರ್ಶನ ನೀಡುತ್ತಿರುವ ಅವರು 15 ದಿನಗಳ ಅಂತರದಲ್ಲಿ ಸತತ ಎರಡು ಟೂರ್ನಿಗಳಲ್ಲಿ ಚಾಂಪಿಯನ್ ಆಗಿದ್ದೇ ಅದಕ್ಕೆ ಸಾಕ್ಷಿ.ಐದನೇ ರ‌್ಯಾಂಕ್‌ನ ಆಟಗಾರ್ತಿ ನೆಹ್ವಾಲ್ ಭಾನುವಾರ ಕೊನೆಗೊಂಡ ಇಂಡೊನೇಷ್ಯಾ ಸೂಪರ್ ಸರಣಿ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಮತ್ತೆ ಚಾಂಪಿಯನ್ ಆಗುವ ಮೂಲಕ ಭಾರತದ ಕ್ರೀಡಾ ಅಭಿಮಾನಿಗಳ ಸಂತೋಷಕ್ಕೆ ಕಾರಣರಾದರು.ಸಾಕಷ್ಟು ಪೈಪೋಟಿಗೆ ಕಾರಣವಾದ ಫೈನಲ್‌ನಲ್ಲಿ ಸೈನಾ 13-21, 22-20, 21-19ರಲ್ಲಿ ಚೀನಾದ ಕ್ಸುಯೆರುಯಿ ಲಿ ಎದುರು ಗೆಲುವು ಸಾಧಿಸಿದರು. ಇದಕ್ಕಾಗಿ ಅವರು 27 ಲಕ್ಷ ರೂಪಾಯಿ ಬಹುಮಾನ ಪಡೆದರು. ರ‌್ಯಾಂಕಿಂಗ್ ಪಟ್ಟಿಯಲ್ಲಿ ತಮಗಿಂತ ಮೇಲಿರುವ ಆಟಗಾರ್ತಿ ಎದುರು ಗೆದ್ದು ಟ್ರೋಫಿ ಎತ್ತಿ ಹಿಡಿಯಲು ನೆಹ್ವಾಲ್ ತುಂಬಾ ಕಸರತ್ತು ನಡೆಸಬೇಕಾಯಿತು.ಈ ಮೂಲಕ ಅವರು ಈ ಟೂರ್ನಿಯಲ್ಲಿ ಮೂರು ಬಾರಿಗೆ ಚಾಂಪಿಯನ್ ಆದ ಸಾಧನೆ ಮಾಡಿದರು. 2009, 2010ರಲ್ಲಿ ಇಲ್ಲಿ ಚಾಂಪಿಯನ್ ಆಗಿದ್ದ ಸೈನಾ 2011ರಲ್ಲಿ ರನ್ನರ್ ಅಪ್ ಪಟ್ಟ ಪಡೆದಿದ್ದರು. ಈ ಟೂರ್ನಿ ಆರಂಭಕ್ಕೂ ಒಂದು ವಾರದ ಹಿಂದೆಯಷ್ಟೇ ಥಾಯ್ಲೆಂಡ್ ಓಪನ್‌ನಲ್ಲಿ ಪ್ರಶಸ್ತಿ ಜಯಿಸಿದ್ದರು. ಮಾರ್ಚ್‌ನಲ್ಲಿ ಸ್ವಿಟ್ಜರ್ಲೆಂಡ್ ಓಪನ್ ಗೆದ್ದಿದ್ದರು.ಈ ಸಾಧನೆಯಿಂದ ಉತ್ಸುಕರಾಗಿರುವ ಭಾರತದ ಆಟಗಾರ್ತಿ ಜುಲೈ 27ರಂದು ಆರಂಭವಾಗಲಿರುವ ಲಂಡನ್ ಒಲಿಂಪಿಕ್ಸ್‌ನಲ್ಲಿ ಪದಕದ ಮೇಲೆ ಕಣ್ಣಿಟ್ಟಿದ್ದಾರೆ. 15 ದಿನಗಳ ಅಂತರದಲ್ಲಿ ಸತತ ಎರಡು ಟೂರ್ನಿಗಳಲ್ಲಿ ಗೆದ್ದಿದ್ದು ಅವರಲ್ಲಿ ಮತ್ತಷ್ಟು ಸ್ಫೂರ್ತಿಗೆ ಕಾರಣವಾಗಿದೆ. ಜೊತೆಗೆ ಚೀನಾದ ಆಟಗಾರ್ತಿಯರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.`ಇದೊಂದು ವಿಶೇಷ ಅನುಭವ. ಫೈನಲ್ ಪಂದ್ಯ ಕಠಿಣ ಹೋರಾಟದಿಂದ ಕೂಡಿತ್ತು. ಆದರೆ ಇಲ್ಲಿನ ಪ್ರೇಕ್ಷಕರು ನನಗೆ ಬೆಂಬಲ ನೀಡಿದರು. ಇಲ್ಲಿನ ಕೋರ್ಟ್‌ಗೆ ಪ್ರವೇಶಿಸಿದಾಗಲೆಲ್ಲಾ ನಾನೇ ಚಾಂಪಿಯನ್ ಎಂಬ ಭಾವನೆ ಉಂಟಾಗುತ್ತದೆ. ಒಲಿಂಪಿಕ್ಸ್‌ನಲ್ಲಿ ಕಣಕ್ಕಿಳಿಯುವ ಮುನ್ನ ಸಾಕಷ್ಟು ಸುಧಾರಣೆ ಕಾಣಬೇಕಾಗಿದೆ~ ಎಂದು ಹೈದರಾಬಾದ್‌ನ 22 ವರ್ಷ ವಯಸ್ಸಿನ ಆಟಗಾರ್ತಿ ನುಡಿದರು.`ಇದೊಂದು ವಿಶೇಷ ಗೆಲುವು. ಸತತ ಎರಡು ವಾರ ಎರಡು ಟೂರ್ನಿಗಳಲ್ಲಿ ಆಡುವುದು ಹುಡುಗಾಟದ ವಿಷಯವಲ್ಲ. ಆದರೆ ಸೈನಾ ತಾಳ್ಮೆ ಕಳೆದುಕೊಳ್ಳಲಿಲ್ಲ. ಕಠಿಣ ಪೈಪೋಟಿಗೆ ಕಾರಣವಾದ ಪಂದ್ಯಗಳಲ್ಲಿ ಅವರು ಅದ್ಭುತ ಆಟದ ಮೂಲಕ ಯಶಸ್ಸು ಸಾಧಿಸಿದರು~ ಎಂದು ರಾಷ್ಟ್ರೀಯ ಕೋಚ್ ಪುಲ್ಲೇಲಾ ಗೋಪಿಚಂದ್ ಹೇಳಿದರು.ಒಂದು ಗಂಟೆ ನಾಲ್ಕು ನಿಮಿಷ ನಡೆದ ಈ ಹೋರಾಟ ಕ್ಷಣ ಕ್ಷಣಕ್ಕೂ ಕುತೂಹಲ ಮೂಡಿಸುತ್ತಾ ಹೋಯಿತು. ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್ ಕೂಡ ಆಗಿರುವ ಕ್ಸುಯೆರುಯಿ ಎದುರು ಈ ಹಿಂದೆ ಭಾರತದ ಆಟಗಾರ್ತಿ ನಾಲ್ಕು ಬಾರಿ ಸೋಲು ಕಂಡಿದ್ದರು. ಆದರೆ ಈ ಬಾರಿ ಅವರು ವಿಚಲಿತರಾಗಲಿಲ್ಲ.ಮೊದಲ ಗೇಮ್‌ನಲ್ಲಿಯೇ ಸೈನಾ ಸತತ ನಾಲ್ಕು ಪಾಯಿಂಟ್ ಸೋತರು. ಆಕರ್ಷಕ ಕ್ರಾಸ್   ಕೋರ್ಟ್ ಸ್ಮ್ಯಾಷ್‌ಗಳ ಮೂಲಕ ಚೀನಾದ ಆಟಗಾರ್ತಿ 11-6 ಪಾಯಿಂಟ್‌ಗಳಿಂದ ಮುನ್ನಡೆದರು. ಈ ಕಾರಣ ಸೈನಾಗೆ ಈ ಗೇಮ್‌ನಲ್ಲಿ ಅವರನ್ನು ಹಿಂದಿಕ್ಕಲು ಸಾಧ್ಯವಾಗಲಿಲ್ಲ. ಕ್ಸಯೆರುಯಿ 14 ಸ್ಮ್ಯಾಷ್‌ಗಳ ಮೂಲಕ ಮಿಂಚಿದರು.ಆದರೆ ಎರಡನೇ ಗೇಮ್‌ನಲ್ಲಿ ಆರಂಭದಿಂದಲೇ ನೆಹ್ವಾಲ್ ಎಚ್ಚರಿಕೆಯ ಆಟವಾಡಿದರು. 7-4ರಲ್ಲಿ ಮುನ್ನಡೆದು ಎದುರಾಳಿಯ ಮೇಲೆ ಒತ್ತಡ ಹೇರಿದರು. ಒಂದು ಹಂತದಲ್ಲಿ 11-7 ಹಾಗೂ 18-14ಕ್ಕೆ ಬಂದು ನಿಂತರು. ಆದರೆ ಈ ಹಂತದಲ್ಲಿ ಸೈನಾ ಒಮ್ಮೆಲೇ ಎಡವಿದರು.

 

18-20 ಪಾಯಿಂಟ್‌ಗಳಿಂದ ಹಿನ್ನಡೆ ಸಾಧಿಸಿದ ಅವರು ಚಾಂಪಿಯನ್ ಪಟ್ಟ ಕಳೆದುಕೊಳ್ಳುವ ಆತಂಕದಲ್ಲಿದ್ದರು. ಆಗ ಚಾಣಾಕ್ಷತನದ ಆಟದ ಮೂಲಕ 22-20ರಲ್ಲಿ ಗೇಮ್ ಗೆದ್ದರು.ನಿರ್ಣಾಯಕ ಗೇಮ್‌ನಲ್ಲೂ ಕಠಿಣ ಪೈಪೋಟಿ ಮೂಡಿಬಂತು. ಇದರಲ್ಲೂ ಅವರು ಒಂದು ಹಂತದಲ್ಲಿ 10-11ರಲ್ಲಿ ಹಿನ್ನಡೆ ಕಂಡಿದ್ದರು. ಆಗ ಎದುರಾಳಿ ಆಟಗಾರ್ತಿ ಮಾಡಿದ ತಪ್ಪು ಸೈನಾ ಅವರ ಚಾಂಪಿಯನ್ ಪಟ್ಟದ ಹಾದಿಯನ್ನು ಸುಗಮಗೊಳಿಸಿತು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.