ಸೂಫಿ- ಶರಣ ಸಾಹಿತ್ಯ: ಸಂಶೋಧನೆ ಅಗತ್ಯ

ಶನಿವಾರ, ಜೂಲೈ 20, 2019
24 °C

ಸೂಫಿ- ಶರಣ ಸಾಹಿತ್ಯ: ಸಂಶೋಧನೆ ಅಗತ್ಯ

Published:
Updated:

ಬೆಂಗಳೂರು: `ಸೂಫಿ- ಶರಣ ಸಾಹಿತ್ಯಕ್ಕೆ ಮಹತ್ವದ ಸಾಂಸ್ಕೃತಿಕ ಹಿನ್ನೆಲೆಯಿದ್ದು, ಇದರ ಕುರಿತು ಹೆಚ್ಚಿನ ಸಂಶೋಧನೆ ನಡೆಯಬೇಕಿದೆ~ ಎಂದು ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಪಟ್ಟರು.ವಿಶ್ವಚೇತನ ಯುವ ವೇದಿಕೆಯು ನಗರದ ನಯನ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ `ಸೂಫಿ- ಶರಣರ ಸಾಂಸ್ಕೃತಿಕ ಉತ್ಸವ~ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.`ಈ ಎರಡೂ ಸಾಹಿತ್ಯಗಳು ಆಧ್ಯಾತ್ಮಿಕ ಚಿಂತನೆಯನ್ನೇ ಪ್ರತಿಪಾದಿಸಿವೆ. ಇಂದಿನ ಎಲ್ಲ ಅನಾಹುತಗಳು, ಅಪಾಯಕಾರಿ ವಿದ್ಯಮಾನಗಳಿಗೆ ಆಧ್ಯಾತ್ಮಿಕತೆಯ ಕೊರತೆಯೇ ಕಾರಣ. ಭೌತಿಕ ಸಮಸ್ಯೆಗಳನ್ನು ಹೇಗೋ ಪರಿಹರಿಸಬಹುದು. ಆದರೆ ಆಧ್ಯಾತ್ಮಿಕತೆ ಅಭಾವದಿಂದ ಉಂಟಾಗುವ ಪರಿಣಾಮ ಅಪಾಯಕಾರಿ. ಅಧ್ಯಾತ್ಮ ಚಿಂತನೆಗೆ ಸೂಫಿ- ಶರಣ ಸಾಹಿತ್ಯ ಸಹಕಾರಿ ಎನಿಸಿದೆ~ ಎಂದು ಹೇಳಿದರು.`ಆಧುನಿಕ ಜಗತ್ತಿನಲ್ಲಿ ಮನುಷ್ಯ ಭ್ರಮೆಯಲ್ಲಿ ಬದುಕುತ್ತಿದ್ದಾನೆ. ಭ್ರಮೆಗಳಿಂದ ಹೊರಬಂದು ಬದುಕನ್ನು ಪ್ರೀತಿಸುವುದನ್ನು ಕಲಿಯಬೇಕು. ಆಧ್ಯಾತ್ಮಿಕ ಚಿಂತನೆಯನ್ನೇ ಕೇಂದ್ರವಾಗಿಟ್ಟುಕೊಂಡು ಬದುಕನ್ನು ನಡೆಸಲು ಪ್ರಯತ್ನಿಸಬೇಕು~ ಎಂದು ಕಿವಿಮಾತು ಹೇಳಿದರು.`ಭಾರತ- ಪಾಕಿಸ್ತಾನದ ಜನತೆಯ ನಡುವೆ ಪರಸ್ಪರ ಪ್ರೀತಿ ಕಾಣದಾಗಿದೆ. ಹಾಗಾಗಿ ಈ ಜನರಲ್ಲಿ ಸಾಮರಸ್ಯ ಮೂಡಿಸುವ ನಿಟ್ಟಿನಲ್ಲಿ ಲಾಹೋರ್‌ನಲ್ಲಿ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ ಆಯೋಜಿಸುತ್ತ ವೇದಿಕೆ ಚಿಂತಿಸಬೇಕು~ ಎಂದು ಸಲಹೆ ನೀಡಿದರು.ವಿಮರ್ಶಕ ಡಾ.ಕೆ. ಮರುಳಸಿದ್ದಪ್ಪ, `ರಾಜ್ಯದ ಕರಾವಳಿಯಲ್ಲಿ ಆತಂಕದ ವಾತಾವರಣವಿದೆ. ಬೇರೆ ಬೇರೆ ಜಾತಿಯ ಯುವಕ- ಯುವತಿ ಸ್ನೇಹಿತರಾದರೆ ಅವರಿಗೆ ಬೆದರಿಕೆ ಒಡ್ಡುವಂತಹ ಕ್ರೂರ ಸ್ಥಿತಿ ಇದೆ.ರಾಜ್ಯದಲ್ಲೇ ಇಂತಹ ವಿಷಮ ಸ್ಥಿತಿಯಿದ್ದು, ಈ ಪ್ರದೇಶದಲ್ಲಿ ಸಾಮರಸ್ಯ ಮೂಡಿಸುವಂತಹ ಸಂಸ್ಕೃತಿ ಉತ್ಸವ ನಡೆಯಬೇಕು~ ಎಂದು ಮಾರ್ಮಿಕವಾಗಿ ನುಡಿದರು.`ಅನ್ಯ ಜಾತಿಗೆ ಸೇರಿದ ವ್ಯಕ್ತಿಯೊಬ್ಬರು ವೀರಶೈವ ಧರ್ಮಕ್ಕೆ ಸೇರಿದರೆ ಅದನ್ನು ದೀಕ್ಷೆ ಪಡೆಯುವುದು ಎನ್ನುತ್ತಾರೆ. ಅದೇ ಬೇರೆ ಜಾತಿಯವರು ಇಸ್ಲಾಂ ಇಲ್ಲವೇ ಕ್ರೈಸ್ತ ಧರ್ಮಕ್ಕೆ ಸೇರಿದರೆ ಅದು ಮತಾಂತರ ಎನ್ನಲಾಗುತ್ತದೆ. ಈ ಇಬ್ಬಗೆಯ ನೀತಿ ಸರಿಯಲ್ಲ~ ಎಂದು ಹೇಳಿದರು.ನಾಟಕಕಾರ ಶ್ರೀನಿವಾಸ ಜಿ. ಕಪ್ಪಣ್ಣ, `ಸೂಫಿ- ಶರಣ ಸಾಹಿತ್ಯದ ಸಾರ ಒಂದೇ. ಆದರೆ ಸೂಫಿ  ಸಾಹಿತ್ಯಕ್ಕೆ ಅಂತರರಾಷ್ಟ್ರೀಯ ಮನ್ನಣೆ ದೊರಕಿದ್ದು, ಜಗತ್ತಿನ ಪ್ರಬಲ ಸಂಸ್ಕೃತಿ ಎನಿಸಿದೆ. ಆದರೆ ವಚನಗಳ ಪ್ರಚಾರ ಸೂಕ್ತ ರೀತಿಯಲ್ಲಿ ಆಗದಿರುವುದು ವಿಷಾದನೀಯ. ಇನ್ನು ಮುಂದಾದರೂ ವಚನಗಳು ಹಾಗೂ ವಚನಕಾರರ ಬಗ್ಗೆ ಜಗತ್ತಿನ ಎಲ್ಲ ಭಾಗದ ಜನತೆಗೆ ಮಾಹಿತಿ ದೊರೆಯುವಂತಾಗಬೇಕು~ ಎಂದರು.ರಾಜ್ಯಸಭಾ ಸದಸ್ಯೆ ಬಿ.ಜಯಶ್ರೀ, ಶಾಸಕ ಸುನೀಲ್ ವಲ್ಯ್‌ಪುರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಮನು ಬಳಿಗಾರ್, ವೇದಿಕೆ ಕಾರ್ಯದರ್ಶಿ ಡಾ.ನಜೀರುದ್ದೀನ್, ಸೂಫಿ ಸಾಹಿತಿ ಸೈಯದ್ ರವೂಫ್ ಖಾದ್ರಿ, ಜೋಗಿಲ ಸಿದ್ದರಾಜು ಉಪಸ್ಥಿತರಿದ್ದರು.ಅನಾರೋಗ್ಯಕರ ಚರ್ಚೆ

`ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಸಂಸದ ಎಚ್.ಡಿ. ಕುಮಾರಸ್ವಾಮಿ ಅವರು ಪರಸ್ಪರ ಆಣೆ ಪ್ರಮಾಣ ಕುರಿತು ಹೇಳಿಕೆ ನೀಡುತ್ತಿರುವುದು ಅನಾರೋಗ್ಯಕರ ಚರ್ಚೆ ಎನಿಸಿದೆ~ ಎಂದು ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಪ್ರತಿಕ್ರಿಯಿಸಿದರು.`ಪ್ರಮುಖ ರಾಜಕಾರಣಿಗಳಿಬ್ಬರು ಈ ರೀತಿ ಸಂಘರ್ಷ ನಡೆಸುವುದು ಸರಿಯಲ್ಲ. ಇಂತಹ ಗಂಭೀರ ವಿಷಯಗಳ ಕುರಿತು ಜನತೆಗೆ ತಿಳಿಸಿ ಹೇಳಬೇಕು. ಅದನ್ನು ಬಿಟ್ಟು ಆಣೆ, ಪ್ರಮಾಣ ಮಾಡುವುದು ಪ್ರಜಾಪ್ರಭುತ್ವದ ಹಿತದೃಷ್ಟಿಯಿಂದ ಒಳ್ಳೆಯದಲ್ಲ~ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry