ಗುರುವಾರ , ಜೂನ್ 24, 2021
23 °C

ಸೂಫಿ ಸಂತ ಖಾದ್ರಿ ಪುಣ್ಯಾರಾಧನೆ ಇಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೃಷ್ಣಾ ನದಿ ತಟದಲ್ಲಿರುವ ಕೆನೆಮೊಸರಿನ ಕೊಲ್ಹಾರ ಪಟ್ಟಣವು ಐತಿಹಾಸಿಕವಾಗಿ, ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ  ಹಲವು ವಿಶೇಷತೆಗಳನ್ನು ಹೊಂದಿದ್ದು ಉನ್ನತ ಪರಂಪರೆ ಹೊಂದಿದೆ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ `ಪ್ರೌಢದೇವರಾಯ ಕಾವ್ಯ~ವನ್ನು ಬರೆದ ಅದೃಶ್ಯ ಕವಿಯ ತವರೂರು, ದಾಸ ಶ್ರೇಷ್ಠರಾದ ಮಹಿಪತಿದಾಸರ ತಪೋಭೂಮಿ ಕೊಲ್ಹಾರ.ಸಮಾನತೆಯ ಸಮಾಜ ಕಟ್ಟಲು ಶ್ರಮಿಸಿದ ಬಸವಾದಿ ಪ್ರಮಥರ ಕನಸನ್ನು ನನಸು ಮಾಡಲು ಶ್ರಮಿಸಿದ, ಹಿಂದೂ- ಮುಸ್ಲಿಮರ ಭಾವೈಕ್ಯತೆಯನ್ನು ನಾಡಿನಲ್ಲೆಲ್ಲ ಪಸರಿಸಿದ 20ನೇ ಶತಮಾನದ ಸೂಫಿ ಸಂತ ಹಜರತ್ ಮಹಮ್ಮದ್ ಅಬ್ದುಲ್ ಗಫಾರ್ ಖಾದ್ರಿ ಅವರ ಪುಣ್ಯಕ್ಷೇತ್ರವೂ ಹೌದು.ಪ್ರಪಂಚದಲ್ಲಿ ಅನ್ಯಾಯ, ಹಿಂಸೆ, ಮೂಢನಂಬಿಕೆಗಳು ಹೆಚ್ಚಾಗಿ ಸಾಮಾನ್ಯ ಜನತೆಯ ಶೋಷಣೆಯಾದಾಗಲೆಲ್ಲ, ಈ ಬಸವ ನಾಡಿನಲ್ಲಿ ಹಲವು ಧಾರ್ಮಿಕ ಸುಧಾರಕರು ಜನಿಸಿ ಮನುಕುಲದ ಉದ್ಧಾರಕ್ಕೆ ಶ್ರಮಿಸಿದ್ದಾರೆ. ಅಂಥ ಮಹಾತ್ಮರಲ್ಲಿ ಸೂಫಿ ಸಂತ ಖಾದ್ರಿ ಅಗ್ರಗಣ್ಯರು.

ಸಂಕ್ಷಿಪ್ತ ಪರಿಚಯ

ಮಹಮ್ಮದ್ ಅಬ್ದುಲ್ ಗಫಾರ್ ಖಾದ್ರಿ ಅವರು ಕ್ರಿ.ಶ.1855ರಲ್ಲಿ  ಉತ್ತರಪ್ರದೇಶದ ಅಲಹಾಬಾದ ಪಟ್ಟಣದವರು.  ಸೈಯ್ಯದ್ ಮೀರ್‌ಬಕ್ಷ್  ಅವರ ತಂದೆ. ಜಬಲಪುರದಲ್ಲಿ ಉನ್ನತ ಶಿಕ್ಷಣ ಪಡೆದು ಹಾಫೀಜ್, ಆಲೀಮ್ ಪದವಿ ಗಳಿಸಿ ಸಂನ್ಯಾಸ ದೀಕ್ಷೆ ಪಡೆದರು. ಲೋಕಕಲ್ಯಾಣಕ್ಕಾಗಿ ಗುರುಪೀಠ ಅಲಂಕರಿಸಿ ಸೂಫಿ  ಧರ್ಮ, ತತ್ವಗಳ ಪ್ರಚಾರ ಕೈಕೊಂಡರು. ಆಗಿನ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಜನರನ್ನು ಹುರಿದುಂಬಿಸಿದ್ದಲ್ಲದೆ, ಸಮಾಜದಲ್ಲಿ ಹಾಸುಹೊಕ್ಕಾಗಿದ್ದ ಅಜ್ಞಾನ, ಮೂಢನಂಬಿಕೆ, ಬಾಲ್ಯವಿವಾಹ, ಜಾತೀಯತೆ ನಿರ್ಮೂಲನೆಗೆ  ಅವಿರತವಾಗಿ ಶ್ರಮಿಸಿದ್ದಲ್ಲದೇ ಸಮಾಜದಲ್ಲಿ ಹಿಂದೂ-ಮುಸ್ಲಿಮರ ಭಾವೈಕ್ಯತೆಗೆ ಒತ್ತು ಕೊಟ್ಟರು. ಇದರಿಂದ ಎಲ್ಲಾ ಸ್ತರದ ಜನತೆ ಅವರ ಅನುಯಾಯಿಗಳಾಗಿದ್ದರು. }ಇಂಥ ಮಹಾನ್ ಸಮಾಜ ಸುಧಾರಕ, ಸಂತರ ಈಗಿನ ಉತ್ತರಾಧಿಕಾರಿಗಳಾಗಿರುವ ಕೊಲ್ಹಾರದ ಡಾ.ಭಕ್ತಿಯಾರ್‌ಖಾನ್  ಪಠಾಣ ಅವರು ತಮ್ಮ ಗುರುಗಳ ಸರಳ ಸಂದೇಶಗಳನ್ನು ಸರ್ವರಿಗೂ ತಿಳಿಸಲು ಪ್ರತಿ ವರ್ಷ ಮಾ. 18ರಂದು `ಸರ್ವಧರ್ಮ ಸದ್ಭಾವನಾ~ ಸಮಾರಂಭ ಏರ್ಪಡಿಸುತ್ತಿದ್ದಾರೆ. ತಮ್ಮ ಗುರುಗಳ ಹೆಸರಿನಲ್ಲಿ `ಅಲಹಾಬಾದ ಮೌಲಾನಾ ಸದ್ಭಾವನಾ ಪ್ರಶಸ್ತಿ~ ಸ್ಥಾಪಿಸಿ ಸಮಾಜ ಸುಧಾರಕರಿಗೆ, ಕವಿಗಳಿಗೆ, ಮಾನವತಾವಾದಿಗಳಿಗೆ ನೀಡುತ್ತಾ ಬಂದಿದ್ದಾರೆ.ಪ್ರಸಕ್ತ ಸಾಲಿನ ಈ ಪ್ರತಿಷ್ಠಿತ ಪ್ರಶಸ್ತಿಗೆ ಸಂಶೋಧಕ, ನೀರಾವರಿ ತಜ್ಞ, ಸಾಹಿತಿ ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿ ಅವರಿಗೆ ಸಂದಿರುವುದು ಎಲ್ಲರಲ್ಲಿ ಹರ್ಷ ಮೂಡಿಸಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.