ಮಂಗಳವಾರ, ನವೆಂಬರ್ 19, 2019
29 °C
ಪೂರ್ಣಿಮಾ ಬಳಗುಳಿ

ಸೂರಿನ ಆಸೆಗಾಗಿ ಪ್ರಚಾರದ ಹಂಗು

Published:
Updated:

ಬೆಂಗಳೂರು: ನಗರದ ಈಜಿಪುರ ಕೊಳೆಗೇರಿ ಇದ್ದ ಜಾಗ. ಪುನರ್ವಸತಿ ಯೋಜನೆ ಕಾರಣ ಬೀದಿಗೆ ಬಿದ್ದವರಲ್ಲಿ ಕೆಲವರು ಸನಿಹದಲ್ಲೇ ಜೋಪಡಿ ಕಟ್ಟಿಕೊಂಡಿದ್ದಾರೆ. ವಾಸಕ್ಕೊಂದು ಮನೆ ಸಿಕ್ಕರೆ ಸಾಕು ಎಂದು ಹಂಬಲಿಸುತ್ತಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ವಿವಿಧ ಪಕ್ಷಗಳ ಮುಖಂಡರು ಇಲ್ಲಿಗೆ ಭೇಟಿ ನೀಡುವುದು ನಿತ್ಯದ ದೃಶ್ಯ. ಭರವಸೆಗಳ ಮಹಾಪೂರ ಹರಿದು ಬರುತ್ತಿದೆ. ಈ ಬಾರಿ ತಮಗೆ ಏನಾದರೂ ವ್ಯವಸ್ಥೆ ಆದೀತು ಎಂಬ ನಿರೀಕ್ಷೆಯಲ್ಲಿಯೇ ಇಲ್ಲಿನ ಕೆಲವರು ಪ್ರಚಾರ ಸಭೆಗಳಿಗೆ ಹೋಗುತ್ತಿದ್ದಾರೆ.`ದುಡ್ಡು, ಕಾಸು ಬೇಡ. ನಮ್‌ಗೊಂದು ಮನೆ ಬೇಕು. ಯಾವ್ ಪಕ್ಷದೋರ್ ನಮಗೆ ಸಹಾಯ ಮಾಡ್ತಾರೋ ಅವರಿಗೆ ನಾವ್ ವೋಟ್ ಹಾಕ್ತೀವಿ'- ಗುಲಾಬ್ ಜಾನ್ ಹೀಗೆ ಹೇಳುವ ಹೊತ್ತಿಗೆ ಅಕ್ಕಪಕ್ಕದ ಜೋಪಡಿಯಲ್ಲಿದ್ದವರೆಲ್ಲ ಒಬ್ಬೊಬ್ಬ ರಾಗಿಯೇ ಹೊರಕ್ಕೆ ಬಂದರು.ಗುಲಾಬ್ ಜಾನ್ ಮೂಲತಃ ಚಿಕ್ಕಬಳ್ಳಾಪುರದವರು. ಸುಮಾರು 15 ವರ್ಷಗಳಿಂದ ಇಲ್ಲಿ ನೆಲೆಸಿದ್ದು, ಹೊಟ್ಟೆಪಾಡಿಗೆ ಸಾಂಬ್ರಾಣಿ ಕಡ್ಡಿ ಮಾರುತ್ತಾರೆ. ಕುಟುಂಬದ ಉಳಿದವರು ಕೆಲಸ ಮಾಡುವುದು ವೆಲ್ಡಿಂಗ್‌ಶಾಪ್‌ನಲ್ಲಿ. ಈ ಹಿಂದೆ ಇಲ್ಲಿನ ಇಡಬ್ಲುಎಸ್ (ಆರ್ಥಿಕವಾಗಿ ಹಿಂದುಳಿದವರ) ವಸತಿ ಸಮುಚ್ಚಯದಲ್ಲಿ ಸರ್ಕಾರ ಅಂದಾಜು ಮಾಡಿದ ಪ್ರಕಾರ ಸುಮಾರು 1,512 ಕುಟುಂಬಗಳು ಇದ್ದವು.ಇಲ್ಲಿನ ಶೆಡ್‌ಗಳನ್ನು ನೆಲಸಮ ಮಾಡಿದ ಬಳಿಕ ಇವರೆಲ್ಲ ಈಗ ದಿಕ್ಕಾಪಾಲಾಗಿದ್ದಾರೆ. ಗುಲಾಬ್‌ಜಾನ್, ಅಮೀರ್‌ಜಾನ್, ಲಕ್ಷ್ಮಣ್ ಮುಂತಾದವರು ನೆಲಸಮವಾದ ಸಮುಚ್ಚಯದ ಪಕ್ಕದಲ್ಲಿಯೇ ಶೆಡ್ ನಿರ್ಮಿಸಿಕೊಂಡಿದ್ದಾರೆ. ಪಡಿತರ ಚೀಟಿ, ಮತದಾರರ ಗುರುತಿನ ಪತ್ರ, ಆಧಾರ್ ಕಾರ್ಡ್ - ಇವೇ ಮುಂತಾದವು ಸದ್ಯಕ್ಕೆ ಇವರ ಅಸ್ತಿತ್ವದ ಕುರುಹುಗಳು. ಇಲ್ಲಿ ಬಹುತೇಕ ಎಲ್ಲರ ಬಳಿಯೂ ಈ ಕಾರ್ಡ್‌ಗಳು ಇವೆ.ಮನೆ ಕಟ್ಟಿಕೊಡುವ ಭರವಸೆ ನೀಡಿದ್ದಕ್ಕಾಗಿ ಇಲ್ಲಿ ಕೆಲವರು ಹ್ಯಾರಿಸ್ ಪರ ಪ್ರಚಾರಕ್ಕೆ ಹೋಗುತ್ತಿದ್ದಾರೆ. ತಬ್ರೆಜ್‌ನಂಥ ಯುವಕರು ಯಾವ ಪಕ್ಷದ ಕಾರ್ಯಕರ್ತರು ಕರೆದರೂ ಹೋಗುತ್ತಾರೆ. ಇದಕ್ಕಾಗಿ ದಲ್ಲಾಳಿ ಮೂಲಕ ತಲಾ 50 ರಿಂದ 100 ರೂಪಾಯಿ ಪಡೆಯುತ್ತಾರೆ. ಬೇರೆ ಕೆಲಸಕ್ಕೆ ಹೋದರೆ 500 ರೂಪಾಯಿ ದಿನಗೂಲಿ ಸಂಪಾದಿಸುವ ಇವರಿಗೆ ಈ ಹಣ ಏನೇನೂ ಅಲ್ಲ. ಆದರೆ ಮುಂದೊಂದು ದಿನ ತಮಗೆ ರಾಜಕೀಯ ಮುಖಂಡರಿಂದ ಏನಾದರೂ ನೆರವು ಸಿಕ್ಕೀತು ಎಂಬ ಸಣ್ಣ ನಿರೀಕ್ಷೆ ಅಷ್ಟೆ.`ಬೆಳೆದ ಹೆಣ್ಣುಮಕ್ಕಳು ಇದಾರೆ. ಇಂಥ ಜೋಪಡೀಲಿ ಇರೋಕಾಗುತ್ತಾ' ಎನ್ನುವುದು ಇಲ್ಲಿನ ತಾಯಂದಿರ ಪ್ರಶ್ನೆ. ಅಮೀರ್ ಜಾನ್ ಜೋಪಡಿಗೆ ಹೋದಾಗ ಅವರೊಬ್ಬರೇ ಇದ್ದರು. ಅವರ ಪತ್ನಿ ಮುಷ್ತರಿ ಹಾಗೂ ಸೊಸೆ ನಗೀನಾ ಪ್ರಚಾರ ಸಭೆಗೆ ಹೋಗಿದ್ದರು. `ಯಾವ್ ಏರಿಯಾಗೆ ಹೋಗಿದಾರೆ? ಯಾರು ಕರೆದೊಯ್ದರು' ಎಂದು ಕೇಳಿದ್ದಕ್ಕೆ `ಎಲ್ಲೋ ಗೊತ್ತಿಲ್ಲ. ಶಾಂತಿಯಮ್ಮ ಬಂದು ಕರ‌್ಕೊಂಡ್ ಹೋದ್ರು' ಎಂಬ ಉತ್ತರ ಬಂತು.ಅಲ್ಲಿ ಬಹುತೇಕರು ಇದೇ ರೀತಿಯ ಪ್ರತಿಕ್ರಿಯೆ ನೀಡಿದರು. `ನಮ್‌ಗೆ ಮನೆ ಬೇಕು ಅಷ್ಟೆ. ಯಾರ್ ಕರೀತಾರೆ ಅನ್ನೋದು ಮುಖ್ಯವಲ್ಲ' ಎಂದರು ಲಕ್ಷ್ಮಣ್.ಮಧ್ಯವರ್ತಿ ಯಾರು: ಸಮತಾ ಸೈನಿಕ ದಳದ ಶಾಂತಾ ಎಂಬುವವರು ಪ್ರಚಾರ ಸಭೆಗೆ ಕೊಳೆಗೇರಿ ಜನರನ್ನು ಸಂಘಟಿಸುತ್ತಾರೆ. `ಇಲ್ಲಿನ ಜನ ಬೀದಿಗೆ ಬಂದಿದ್ದಾರೆ. ಈ ಮೂಲಕವಾದರೂ ಅವರಿಗೆ ಅಷ್ಟಿಷ್ಟು ನೆರವಾಗಲಿ ಎನ್ನುವುದು ನನ್ನ ಉದ್ದೇಶ' ಎನ್ನುವುದು ಅವರ ಸಮರ್ಥನೆ.ಇತ್ತ ಜಯನಗರದ ಗುಲ್ಬರ್ಗಾ ಕಾಲೋನಿಯದು ಬೇರೆಯದೇ ಕಥೆ.  ಹೋದ ಸಲ ಸ್ಥಳೀಯ ಕಾರ್ಯಕರ್ತರು ಈ ಕೊಳೆಗೇರಿಗೆ ಬಂದು ಇವರಲ್ಲಿ ಕೆಲವರನ್ನು ಪ್ರಚಾರ ಸಭೆಗೆ ಕರೆದುಕೊಂಡು ಹೋಗಿದ್ದರಂತೆ. `ಕಳೆದ ಬಾರಿ ಚುನಾವಣೆನಾಗ ನಾವ್ ಪ್ರಚಾರ ಮಾಡಾಕ್ ಹೋಗಿದ್ವಿ. ಈ ಸಲ ಇಲ್ಲೆ ಮಟ ಯಾರೂ ಕರ್‌ದಿಲ್ಲ ನೋಡ್ರಿ'- ಎಂದರು ಕಾಲೊನಿ ವಾಸಿ ಬೂದ್ಯಪ್ಪ.`ರೊಕ್ಕಾ ಕೊಟ್ರೆ ಮಾತ್ರ ಹೋಗೋದು. ಆಗ ನಮಗೆ 100 ರೂಪಾಯ್ ಕೊಟ್ಟಿದ್ರು. ಮಿನಿ ಬಸ್‌ನ್ಯಾಗ ಹೋದ್ವಿ. ಅದರಲ್ಲೇ ಹೊಳ್ಳಿ ಬಂದ್ವಿ' ಎಂದು ಅಲ್ಲಿದ್ದ ಯುವಕರು ದನಿಗೂಡಿಸಿದರು.ಗುಲ್ಬರ್ಗಾ ಕಾಲೋನಿ ಅಸ್ತಿತ್ವಕ್ಕೆ ಬಂದಿದ್ದು ಸುಮಾರು 11 ವರ್ಷಗಳ ಹಿಂದೆ. ಅದಕ್ಕೂ ಮೊದಲು ಬೇರೆ ಕಡೆ ಜೋಪಡಿಗಳಲ್ಲಿ ಇದ್ದ ಜನರನ್ನೆಲ್ಲ ಇಲ್ಲಿಗೆ ಸ್ಥಳಾಂತರಿಸಲಾಯಿತು. ಇವರೆಲ್ಲ ಉತ್ತರ ಕರ್ನಾಟಕದಿಂದ ಗುಳೆ ಬಂದವರು. ಹೆಚ್ಚಿನವರು ಕಟ್ಟಡ ಕಾರ್ಮಿಕರು. ಹೋಟೆಲ್ ಕೆಲಸ ಮಾಡುವವರೂ ಇದ್ದಾರೆ. ಪುಟ್ಟ ಮಕ್ಕಳು ಇಲ್ಲಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಹೋಗುತ್ತಾರೆ. ಕೇರಿಯ ಹೆಣ್ಣುಮಕ್ಕಳಲ್ಲಿ ಕೆಲವರು ಪಕ್ಕದ ಬಡಾವಣೆಗಳಲ್ಲಿ ಮನೆಗೆಲಸ ಮಾಡುತ್ತಾರೆ.`ಗೆದ್ದೋರು ಈ ಕಡೆ ಮುಖ ಹಾಕಾಂಗಿಲ್ಲ. ರಸ್ತೆ ಸರಿ ಇಲ್ಲ, ನೀರು ಇಲ್ಲ'- ಹೀಗೆ ಒಂದೊಂದಾಗಿಯೇ ಸಮಸ್ಯೆಗಳನ್ನು ಹೇಳಿಕೊಂಡರು ಮಹಿಳೆಯರು.`ಯಾರೇ ಪ್ರಚಾರಕ್ ಬರ್ಲಿ. ನಮ್ ವೋಟ್ ಮಾತ್ರ ಬದಲಾಗೊವಲ್ದ್' ಎಂದು ಬೂದ್ಯಪ್ಪ ಪಕ್ಷನಿಷ್ಠೆ ತೋರುವುದನ್ನು ಮರೆಯಲಿಲ್ಲ. ಇಲ್ಲಿ ಕೂಡ ಎಲ್ಲರ ಬಳಿಯೂ ಮತದಾರರ ಗುರುತಿನ ಪತ್ರ ಹಾಗೂ ರೇಶನ್ ಕಾರ್ಡ್ ಇದೆ.ಚುನಾವಣಾ ಪ್ರಚಾರ ಸಭೆಗಳಿಗೆ ಕೊಳೆಗೇರಿ ಜನರನ್ನು ದುಡ್ಡು ಕೊಟ್ಟು ಕರೆಸಿಕೊಳ್ಳುವುದು ಎಂದಿನಿಂದಲೂ ಇರುವಂಥದ್ದು. ಆದರೆ ಈ ಬಾರಿ ಇದು ತುಸು ಹೆಚ್ಚೇ ಎನ್ನುವಷ್ಟು ಕಂಡುಬರುತ್ತಿದೆ. ಇದು ಎಷ್ಟರ ಮಟ್ಟಿಗೆ ಎಂದರೆ ಕಟ್ಟಡ ನಿರ್ಮಾಣ ಕಾಮಗಾರಿಗೆ ಕೆಲವು ಕಡೆ ಗಾರೆ ಕೆಲಸದವರು ಸಿಗುವುದೇ ಕಷ್ಟ ಎಂಬಂತಾಗಿಬಿಟ್ಟಿದೆ.ಅಮೆರಿಕದಂಥ ದೇಶದ ಚುನಾವಣೆ ಪ್ರಕ್ರಿಯೆಯಲ್ಲಿ ಬಹು ಪಾಲು ಸುಶಿಕ್ಷಿತರ ಭಾಗವಹಿಸುವಿಕೆ ಇದ್ದರೆ, ನಮ್ಮಲ್ಲಿ ಬಡವರು, ಕೊಳೆಗೇರಿ ವಾಸಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಮತದಾನದಲ್ಲಿ ಪಾಲ್ಗೊಳ್ಳುತ್ತಾರೆ. `ಗುಲ್ಬರ್ಗಾ ಕಾಲೋನೀಲಿ ಎಲ್ಲಾರ್ ಹತ್ರಾನೂ ವೋಟರ್ ಐಡಿ ಐತಿ. ವೋಟ್ ಮಿಸ್ ಮಾಡಂಗಿಲ್ಲ'- ಎಂದು ಶ್ರೀನಿವಾಸ ಹೇಳಿದ ಮಾತೇ ಇದಕ್ಕೆ ಸಾಕ್ಷಿ. ಒಂದು ಅಂದಾಜಿನ ಪ್ರಕಾರ ಮತದಾನದಲ್ಲಿ ಗ್ರಾಮೀಣ ಜನರು ಹಾಗೂ ನಗರದ ಬಡವರ ಪಾಲ್ಗೊಳ್ಳುವಿಕೆ ಶೇ 80 ಅಥವಾ ಅದಕ್ಕಿಂತ ಹೆಚ್ಚು.ಬಡ ಜನರು ಪ್ರತಿಯೊಂದಕ್ಕೂ ಸರ್ಕಾರವನ್ನೇ ನೆಚ್ಚಿಕೊಳ್ಳಬೇಕಾದ ಅನಿವಾರ್ಯತೆಯು ರಾಜಕಾರಣಿಗಳ ಪಾಲಿನ `ವೋಟ್ ಬ್ಯಾಂಕ್' ಆಗಿರುವುದು ವಿಪರ್ಯಾಸ!

ಪ್ರತಿಕ್ರಿಯಿಸಿ (+)