ಸೂರಿಲ್ಲದೆ ರೇಷ್ಮೆ ಮಾರುಕಟ್ಟೆ ಆವರಣದಲ್ಲಿ ಬದುಕು

7
ಗುಡಿಸಲುಗಳಿಗೆ ನುಗ್ಗಿದ ಕೊಳಚೆ ನೀರು

ಸೂರಿಲ್ಲದೆ ರೇಷ್ಮೆ ಮಾರುಕಟ್ಟೆ ಆವರಣದಲ್ಲಿ ಬದುಕು

Published:
Updated:

ತಿ.ನರಸೀಪುರ:   ಮಳೆ ಬಂದರೆ ಇವರ ಜೀವನವೇ ಅಸ್ತವ್ಯಸ್ತ. ಸೂರಿಗಾಗಿ ಇವರ ಪರದಾಟ ಕೇಳುವವರಿಲ್ಲ. ಅನೈರ್ಮಲ್ಯ ಸ್ಥಿತಿಯಲ್ಲಿ ಶೋಚನೀಯ ಬದುಕು..ಈ ರೀತಿ ದುಸ್ಥಿತಿಯಲ್ಲಿ ಪಟ್ಟಣದ ಮಾರುಕಟ್ಟೆ ರಸ್ತೆಯ ಬದಿ ಹಾಗೂ ರಾಷ್ಟ್ರೀಯ ಹೆದ್ದಾರಿ 212ಕ್ಕೆ ಸಮೀಪಕ್ಕೆ ಹೊಂದಿಕೊಂಡಂತಿರುವ ಕುಂಚಿ ಕೊರಚರು ವಾಸಿಸುವ ದಾವಣಗೆರೆ ಕಾಲೊನಿಯ ಸದ್ಯದ ಚಿತ್ರಣ.ಮಾರುಕಟ್ಟೆ ಹಾಗೂ ಗೋಪಾಲಪುರ ಮುಖ್ಯರಸ್ತೆ ಬದಿಯಲ್ಲಿ ಕುಂಚಿ ಕೊರಚ ಸಮುದಾಯದ ಸುಮಾರು 50 ಕುಟುಂಬಗಳು ಗುಡಿಸಲು ಹಾಕಿಕೊಂಡು ವಾಸಿಸುತ್ತವೆ. ಈ ಬಡಾವಣೆಯ ನಿವಾಸಿಗಳು ನಿವೇಶನದಾರರಿಗೆ ಮಾಸಿಕ ನೆಲ ಬಾಡಿಗೆ ಕಟ್ಟಿಕೊಂಡು ಅನೇಕ ವರ್ಷಗಳಿಂದ ಗುಡಿಸಲಿನಲ್ಲೇ ವಾಸಿಸುತ್ತಿದ್ದಾರೆ. ಕೆಲವು ಕುಟುಂಬಗಳು ಇಲ್ಲಿ ವ್ಯವಸ್ಥೆ ಇಲ್ಲದ ಕಾರಣ ಬೇರೆಡೆಗೆ ಸ್ಥಳಾಂತರಗೊಂಡಿದೆ.ಈ ಕಾಲೊನಿಯ ಹಿಂಭಾಗದಲ್ಲಿಯೇ ಪಟ್ಟಣದ ಎಲ್ಲಾ ಬಡಾವಣೆಯ ಚರಂಡಿ ನೀರು ಹಾದು ಹೋಗಲು ದಾರಿ ಮಾಡಲಾಗಿದೆ. ಮಳೆ ಬಂದರೆ ಇಲ್ಲಿನ ಚರಂಡಿ ನೀರು ಬಡಾವಣೆಗೆ ಹರಿಯುತ್ತದೆ ಪಟ್ಟಣದಲ್ಲಿ  ಗುರುವಾರ  ಸುರಿದ ಮಳೆಯಿಂದ ಗುಡಿಸಲುಗಳಿಗೆ ಚರಂಡಿ  ಹಾಗೂ ಮಳೆ ನೀರು ನುಗ್ಗಿದ ಪರಿಣಾಮ ಬಡಾವಣೆಯ ನಿವಾಸಿಗಳ ಸ್ಥಿತಿ ಹೇಳತೀರದು. ಅಂದು ಮನೆಯೊಳಗೆ ನೀರು ನುಗ್ಗಿದ ಹಿನ್ನೆಲೆಯಲ್ಲಿ ರಾತ್ರೋರಾತ್ರಿ ಸಮೀಪದ ರೇಷ್ಮೇ ಗೂಡಿನ ಮಾರುಕಟ್ಟೆ ಆವರಣದಲ್ಲಿ ಆಶ್ರಯ ಪಡೆಯಬೇಕಾಯಿತು.ಅನೇಕ ವರ್ಷಗಳ ಹಿಂದೆ ಬಂದ ನಾವು ಈ ಸ್ಥಳದಲ್ಲಿ ನೆಲ ಬಾಡಿಗೆ ಕಟ್ಟಿಕೊಂಡು ಜೀವಿಸುತ್ತಿದ್ದೇವೆ. ಅಲೆಮಾರಿ ಹಾಗೂ ಹಂದಿ ಸಾಕಾಣಿಕೆಯಿಂದ  ಜೀವನ ಸಾಗಿಸುತ್ತಿದ್ದೇವೆ. ಮಳೆ ಬಂದರೆ ಇಲ್ಲಿ ವಾಸಿಸುವುದೇ ಕಷ್ಟ. ಶಾಲೆಗೆ ಹೋಗುವ ಸಣ್ಣ ಮಕ್ಕಳು, ಬಾಣಂತಿಯರು ಇದ್ದಾರೆ. ರಾತ್ರಿ ವೇಳೆ ಈ ರೀತಿ ಮಳೆ ಬಂದರೆ ಮಕ್ಕಳನ್ನು ಕರೆದುಕೊಂಡು ಹೋಗುವುದಾರೂ ಎಲ್ಲಿಗೆ? ಎಂಬುದು ಇಲ್ಲಿನ ನಿವಾಸಿಗಳ ಪ್ರಶ್ನೆ.ಸರ್ಕಾರದಿಂದ ನಮ್ಮಗೊಂದು ನೆಲೆ ಕೊಡಿಸಿ ಎಂದು ಬೇಡುತ್ತಿದ್ದೇವೆ. ನಮ್ಮ ಪರವಾಗಿ ಕೆಲವು ಸಂಘಟನೆಗಳು ಕೂಡ ಹೋರಾಟ ಮಾಡಿವೆ. ಆದರೆ, ಈವರೆಗೆ ನಮಗೆ ಯಾವುದೇ ಸೌಲಭ್ಯ ದೊರಕಿಲ್ಲ ಇಲ್ಲಿನ ಪಟ್ಟಣ ಪಂಚಾಯಿತಿಯ ಮತದಾರರಾಗ್ದ್ದಿದೇವೆ. ಕ್ಷೇತ್ರದ ಶಾಸಕರಿಗೆ, ಜಿಲ್ಲಾ ಮತ್ತು ತಾಲ್ಲೂಕು ಆಡಳಿತ ಮತ್ತು ಪಟ್ಟಣ ಪಂಚಾಯಿತಿಯ ಅಧಿಕಾರಿಗಳಿಗೆ ಅರ್ಜಿ ನೀಡಿ ವಸತಿ ಸೌಲಭ್ಯ ಕಲ್ಪಿಸಲು ಅನೇಕ ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗುತ್ತಿಲ್ಲ ಎನ್ನುವುದು  ನಿವಾಸಿಗಳ ಅಳಲು.ಹೋರಾಟದ ಎಚ್ಚರಿಕೆ

ಕಳೆದ ಇಪ್ಪತ್ತು ವರ್ಷಗಳಿಂದ ವಾಸಿಸುತ್ತಿರುವ ಕೊರಚರಿಗೆ ವಸತಿ ಸೌಲಭ್ಯ ಕಲ್ಪಿಸಿಕೊಡಬೇಕೆಂಬ ಬಗ್ಗೆ ಆಡಳಿತ ವ್ಯವಸ್ಥೆ ಕನಿಷ್ಠ ಕಾಳಜಿ ತೋರುತ್ತಿಲ್ಲ.  ಈ ಕುಟುಂಬಗಳಿಗೆ ನಿವೇಶನ ಮತ್ತು ವಸತಿ ಸೌಲಭ್ಯ ಕಲ್ಪಿಸಬೇಕೆಂಬ ಬೇಡಿಕೆ ಮುಂದಿಟ್ಟುಕೊಂಡು ದಲಿತ ಸಂಘರ್ಷ ಸಮಿತಿ ಈಗಾಗಲೇ ಹಲವು ಪ್ರತಿಭಟನೆ  ಮಾಡಿದೆ.  ಸರ್ವೇ ನಂ 7ರಲ್ಲಿನ ಖಾಲಿ ನಿವೇಶನದಲ್ಲಿ ಕೊರಚರಿಗೆ ನಿವೇಶನ ಕಲ್ಪಿಸುವ ಅವಕಾಶವಿದ್ದರೂ ಕ್ರಮ ಕೈಗೊಂಡಿಲ್ಲ.  ಕೊರಚರ  ಸಮುದಾಯದ ಕುಟುಂಬಗಳಿಗೆ ಜಿಲ್ಲಾಡಳಿತ ಪಟ್ಟಣದಲ್ಲಿ ವಸತಿ ಸೌಲಭ್ಯ ನೀಡದಿದ್ದಲ್ಲಿ ಜಿಲ್ಲಾಧಿಕಾರಿಗಳ ಕಛೇರಿ ಮುಂಭಾಗ ನಿವಾಸಿಗಳ ಜತೆಗೂಡಿ ಹೋರಾಟ ಆರಂಭಿಸಲಾಗುವುದು ಎಂದು ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಆಲಗೂಡು ಶಿವಕುಮಾರ್ ಎಚ್ಚರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry