ಸೂರ್ಯಕಾಂತಿ-ತೊಗರಿ-ಹತ್ತಿ ಬೆಳೆಗೆ ಕೀಟ-ರೋಗ ಬಾಧೆ:ಹತೋಟಿಗೆ ತಜ್ಞರ ತಂಡದ ಸಲಹೆ

7

ಸೂರ್ಯಕಾಂತಿ-ತೊಗರಿ-ಹತ್ತಿ ಬೆಳೆಗೆ ಕೀಟ-ರೋಗ ಬಾಧೆ:ಹತೋಟಿಗೆ ತಜ್ಞರ ತಂಡದ ಸಲಹೆ

Published:
Updated:

ರಾಯಚೂರು: ಇಲ್ಲಿನ ಕೃಷಿ ವಿಶ್ವವಿದ್ಯಾಲಯದ ಸಹ ಸಂಶೋಧನಾ ನಿರ್ದೇಶಕ ಡಾ.ಐ ಶಂಕರಗೌಡ, ಕೀಟಶಾಸ್ತ್ರ ವಿಭಾಗದ ತಜ್ಞ ಡಾ. ವಿಜಯಕುಮಾರ ಘಂಟೆ, ಸಸ್ಯರೋಗ ಶಾಸ್ತ್ರ ವಿಭಾಗದ ತಜ್ಞ ಡಾ.ಎಂ.ಆರ್ ಗೋವಿಂದಪ್ಪ,  ಬೇಸಾಯಶಾಸ್ತ್ರ ವಿಭಾಗದ ತಜ್ಞರಾದ ಡಾ.ಯು.ಕೆ ಶಾನವಾಡ ಅವರನ್ನೊಳಗೊಂಡ ಕೃಷಿ ವಿಜ್ಞಾನಿಗಳ ತಂಡವು ಈಚೆಗೆ ಜಿಲ್ಲೆಯ ಲಿಂಗಸುಗೂರು ಹಾಗೂ ದೇವದುರ್ಗ ತಾಲ್ಲೂಕಿನ ವಿವಿಧ ಗ್ರಾಮಗಳ ರೈತರ ಹೊಲಗಳಿಗೆ ಭೇಟಿ ನೀಡಿ ಬೆಳೆಗಳನ್ನು ವೀಕ್ಷಿಸಿದರು.ಈ ಭಾಗದ ಪ್ರಮುಖ ಬೆಳೆಗಳಾದ ಹತ್ತಿ, ಸೂರ್ಯಕಾಂತಿ, ತೊಗರಿ ಬೆಳೆಗಳು ವಿವಿಧ ಹಂತದಲ್ಲಿದ್ದು, ಸೆಪ್ಟೆಂಬರ್ ತಿಂಗಳ ಕೊನೆಯಲ್ಲಿ ಬಿದ್ದ ಮಳೆಯಿಂದ ಬೆಳೆಗಳು ಸುಧಾರಿಸಿಕೊಳ್ಳುತ್ತಿವೆ. ಅಲ್ಲಲ್ಲಿ ಕೆಲ ಕೀಟ ಹಾಗೂ ರೋಗಗಳ ಬಾಧೆ ಕಂಡು ಬಂದಿದೆ. ರೋಗ ಮತ್ತು ಕೀಟಗಳ ಹತೋಟಿಗೆ ಕೆಲ ಕ್ರಮಗಳನ್ನು ಅನುಸರಿಸಲು ಈ ತಜ್ಞರ ತಂಡ ರೈತರಿಗೆ ಸಲಹೆ ನೀಡಿದೆ.ಸೂರ್ಯಕಾಂತಿ ಬೆಳೆ:  ನಂಜಾನು ರೋಗ ಮತ್ತು ಎಲೆ ತಿನ್ನುವ ಹುಳುವಿನ ಬಾಧೆ ಈ ಬೆಳೆಯಲ್ಲಿ ಕಂಡು ಬಂದಿದೆ. ಇಮಿಡಕ್ಲೋಪ್ರಿಡ್ 0.3 ಮಿ.ಲಿ/ ಲೀ ನಿರಿಗೆ ಮತ್ತು ಮೆಟಾಸಿಸ್ಟಾಕ್ಸ್ 1.5 ಮಿ.ಲಿ/ಲೀ ನೀರಿಗೆ ಬೆರೆಸಿ ಸಿಂಪಡಿಸಬೇಕು, ಎಲೆಗಳ ಕೆಳಭಾಗದಲ್ಲಿರುವ ಗುಂಪು ಗುಂಪಾಗಿರುವ ಮೊಟ್ಟೆಗಳನ್ನು ಹಾಗೂ ಮರಿ ಹುಳುಗಳನ್ನು ಎಲೆ ಸಮೇತ ಕಿತ್ತು ನಾಶಪಡಿಸಬೇಕು, ಹೊಲದಲ್ಲಿ ಅಲ್ಲಲ್ಲಿ ಕಸ ಕಡ್ಡಿಗಳನ್ನು ಗುಂಪು ಹಾಕಬೇಕು.

 

ಮರುದಿನ ಅದರ ಕೆಳಗಡೆ ಆಶ್ರಯಕ್ಕೆ ಬರುವ ಈ ಕೀಡೆಗಳನ್ನು ನಾಶಪಡಿಸಬೇಕು, ಶೇ 5ರ ಮೀಲಾಥಿಯನ್ ಅಥವಾ ಶೇ 1.5ರ ಕ್ವಿನಾಲ್‌ಫಾಸ್ ಅಥವಾ ಶೇ 0.4ರ ಪೆನ್‌ವಲರೇಟ್ ಅಥವಾ ಶೇ 2ರ ಮಿಥೈಲ್ ಪ್ಯಾರಾಥಿಯಾನ್ ಪುಡಿಯನ್ನು ಪ್ರತಿ ಹೆಕ್ಟೇರ್‌ಗೆ 20 ಕಿಲೋದಂತೆ ಧೂಳೀಕರಿಸಬೇಕು ಎಂದು         ಹೇಳಿದ್ದಾರೆ.ಅದೇ ರೀತಿ ಧೂಳೀಕರಣ ಬದಲಾಗಿ ಸ್ಟೈನೋಸ್ಯಾಡ್ 45 ಎಸ್.ಸಿ 0.1 ಮಿ.ಲಿ/ ಲೀಟರ್ ನೀರಿಗೆ ಅಥವಾ ಇಂಡಾಕ್ಸಾಕಾರ್ಬ್ 14.5 ಎಸ್.ಸಿ. 0.3 ಮೀ.ಲಿ/ ಲೀಟರ್ ನೀರಿಗೆ ಅಥವಾ ಲ್ಯಾಲ್ಡಾಸೈಲೋಪ್ರಿನ್ 5 ಇ.ಸಿ. 0.5 ಮಿ.ಲಿ/ ಲೀಟರ್ ಅಥವಾ ಶೇ 0.4ರ ಪೆನ್ ವಲರೇಟ್ ಅಥವಾ ಶೇ 2 ರ ಮಿಥೈಲ್ ಪ್ಯಾರಾಥಿಯಾನ್ ಪುಡಿಯನ್ನು ಪ್ರತಿ ಹೆಕ್ಟೇರ್‌ಗೆ 20 ಕಿಲೋದಂತೆ ಧೂಳೀಕರಿಸಬೇಕು    ಎಂದಿದ್ದಾರೆ.ಬೆಳೆದ ಮರಿಹುಳುಗಳು ಒಂದು ಹೊಲದಿಂದ ಮತ್ತೊಂದು ಹೊಲಕ್ಕೆ ವಲಸೆ ಹೋಗದಂತೆ ಹೊಲದ ಸುತ್ತ ಆಳವಾಗಿ ರೆಮಟೆ ಅಥವಾ ನೇಗಿಲಿನಿಂದ ಕಂದಕವನ್ನು ತೆಗೆದು ಅದರಲ್ಲಿ ಶೇ 5ರ ಮಿಲಾಥಿಯಾನ್ ಅಥವಾ ಶೇ 1.5ರ ಕ್ವಿನಾಲ್‌ಫಾಸ್ ಅಥವಾ ಶೇ 0.4ರ ಫೆನಾವಲರೇಟ್ ಅಥವಾ ಶೇ  2ರ ಮಿಥೈಲ್ ಪ್ಯಾರಾಥಿಯಾನ್ ಕೀಟನಾಶಕ ಪುಡಿಯನ್ನು ಧೂಳೀಕರಿಸುವುದರಿಂದ ಇವು ವಲಸೆ ಹೋಗುವಾಗ ಕೀಟನಾಶಕ ಸಂಪರ್ಕ ಹೊಂದಿ ಸಾಯುತ್ತವೆ ಎಂದು ಕೃಷಿ ತಜ್ಞರ ತಂಡವು ರೈತರಿಗೆ ಸಲಹೆ ನೀಡಿದೆ.ಹತ್ತಿ ಬೆಳೆ(ಬಿಟಿ): ಬಿಟಿ ಹತ್ತಿ ಬೆಳೆಯಲ್ಲಿ ಎಲೆ ಕೆಂಪಾಗುವಿಕೆ ಕಂಡು ಬರುತ್ತಿದೆ. ಇದರ ಹತೋಟಿಗೆ  ಶಿಫಾರಸ್ಸು ಮಾಡಿದ ರಾಸಾಯನಿಕ ಗೊಬ್ಬರಗಳ ಜೊತೆಗೆ ಎರಡು ಬಾರಿ ಶೇ 1ರ ಮ್ಯಾಗ್ನಿಷಿಯಂ ಸಲ್ಫೇಟ್‌ನ್ನು  ಬಿತ್ತಿದ 90 ಹಾಗೂ 110 ದಿವಸಗಳ ನಂತರ ಸಿಂಪರಣೆ ಕೈಗೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.ತೊಗರಿ ಬೆಳೆ:  ತೊಗರಿ ಬೆಳೆಯಲ್ಲಿ ಎಲೆ ಮಡಚುವಿಕೆ ಹುಳು ಮತ್ತು ಕಾಯಿ ಬೆಳವಣಿಗೆಗೆ ರೋಗ ಬಾಧೆ ಕಂಡು ಬಂದಿದೆ. ಇದರ ಹತೋಟಿಗೆ ಪ್ರೊಪೆನೋಫಾಸ್ 20.ಮಿ.ಲಿ/ಲೀ ನೀರಿಗೆ ಬೆರೆಸಿ ಸಿಂಪಡಿಸಬೇಕು ಎಂದು ರಾಯಚೂರು ಕೃಷಿ ವಿಶ್ವವಿದ್ಯಾಲಯದ ಕೃಷಿ ತಜ್ಞರ ತಂಡವು ರೈತರಿಗೆ ಸಲಹೆ ನೀಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry