ಸೂರ್ಯನಗರದಲ್ಲಿಯೂ ಎಲ್ಲ ಸರಿ ಇಲ್ಲ!

7

ಸೂರ್ಯನಗರದಲ್ಲಿಯೂ ಎಲ್ಲ ಸರಿ ಇಲ್ಲ!

Published:
Updated:

ಬೆಂಗಳೂರು: ಕರ್ನಾಟಕ ಗೃಹ ಮಂಡಳಿ ಬೆಂಗಳೂರಿನ ಸೂರ್ಯ ನಗರದಲ್ಲಿ ಒಂದರಿಂದ ನಾಲ್ಕು ಹಂತದ ವಸತಿ ಯೋಜನೆಗಳನ್ನು ಜಾರಿಗೊಳಿಸಿದೆ. ಲಭ್ಯ ದಾಖಲೆಗಳನ್ನು ಪರಿಶೀಲಿಸಿದರೆ ಇಲ್ಲಿ ಕೂಡ ಎಲ್ಲ ಸರಿಯಾಗಿ ನಡೆದಿಲ್ಲ ಎನ್ನುವುದು ತಿಳಿಯುತ್ತದೆ.ಒಂದೇ ನಿವೇಶನವನ್ನು ಬೇರೆ ಬೇರೆ ವ್ಯಕ್ತಿಗಳಿಗೆ ಮಂಜೂರು ಮಾಡಿರು­ವುದು, ಖಾಸಗಿ ಡೆವಲಪರ್ಸ್ ಒತ್ತಡಕ್ಕೆ ಮಣಿದು ನಿವೇಶನದ ಬೆಲೆಯನ್ನು ಹೆಚ್ಚಿಸಿರುವುದು, ಮಾಧ್ಯಮಗಳಲ್ಲಿ ಅಧಿಸೂಚನೆ ಪ್ರಕಟಿಸದೇ ನಿವೇಶನಗಳ ಹಂಚಿಕೆ  ಮುಂತಾದ ಹಲವಾರು ಲೋಪಗಳು ಆಗಿವೆ.

ಸೂರ್ಯನಗರ 3ನೇ ಹಂತದಲ್ಲಿ ಅರ್ಜಿದಾರರಿಗೆ ಆರಂಭಿಕ ಠೇವಣಿ ಕಟ್ಟಲು ಸೂಚಿಸಿದ ಸಂದರ್ಭದಲ್ಲಿ ಇದ್ದ ನಿವೇಶನದ ಬೆಲೆಯೇ ಬೇರೆ. ಬಾಕಿ ಕಂತನ್ನು ಕಟ್ಟಲು ಗೃಹ ಮಂಡಳಿ ಸೂಚಿಸಿದ ಪತ್ರದಲ್ಲಿ ಇರುವ ಬೆಲೆಯೇ ಬೇರೆ.ಆರಂಭಿಕ ಠೇವಣಿ ಕಟ್ಟಲು ಸೂಚಿಸಿದಾಗ ಇಲ್ಲಿನ ಬೆಲೆ ಪ್ರತಿ ಚದರ ಅಡಿಗೆ ರೂ. 500 ಎಂದು ಸೂಚಿಸ­ಲಾಗಿತ್ತು. ಆದರೆ ದಿಢೀರನೆ ಅದು ರೂ. 900ಕ್ಕೆ ಏರಿದೆ. ಇದರ ಹಕೀಕತ್‌ ಏನು ಎಂದು ಹುಡುಕಲು ತೊಡಗಿದರೆ ಹೊಸ ಕತೆ ಬಿಚ್ಚಿಕೊಳ್ಳುತ್ತದೆ. ಕೃಷ್ಣಯ್ಯ ಶೆಟ್ಟಿ ಅವರು ವಸತಿ ಸಚಿವರಾಗಿದ್ದಾಗ ಇಲ್ಲಿನ ನಿವೇಶನದ ಬೆಲೆಯನ್ನು ಪ್ರತಿ ಚದರ ಅಡಿಗೆ ಎಲ್‌ಐಜಿ ರೂ. 500, ಎಂಐಜಿ ರೂ.550 ಹಾಗೂ ಎಚ್‌ಐಜಿಗೆ ರೂ. 600 ಎಂದು ನಿಗದಿ ಮಾಡಿದ್ದರು. ಆದರೆ ಏಕಾಏಕಿ ಇಲ್ಲಿನ ನಿವೇಶನದ ಬೆಲೆಯನ್ನು ಹೆಚ್ಚಳ ಮಾಡಿದ್ದು ಏಕೆ?ಸೂರ್ಯನಗರದ ಸುತ್ತಮುತ್ತ ಹಲ­ವಾರು ಖಾಸಗಿ ಬಡಾವಣೆಗಳು ತಲೆ ಎತ್ತುತ್ತಿವೆ. ಗೃಹ ಮಂಡಳಿಯ ನಿವೇಶನದ ಬೆಲೆ ಚದರ ಅಡಿಗೆ ರೂ. 500 ಎಂದಾದರೆ ಖಾಸಗಿ ಬಡಾವಣೆಗಳ ನಿವೇಶನಗಳ ಬೇಡಿಕೆ ಕಡಿಮೆಯಾಗು­ತ್ತದೆ. ಹೀಗಾಗಿ ಹಲವಾರು ಖಾಸಗಿ ಡೆವಲಪರ್ಸ್‌ಗಳು  ಮಂಡಳಿಯ ಅಧಿಕಾ­ರಿಗಳ ಮೇಲೆ ಒತ್ತಡ ಹೇರಿ ನಿವೇಶನದ ಬೆಲೆಯನ್ನು ಹೆಚ್ಚಿಸುವಂತೆ ಮಾಡಿದ್ದಾರೆ ಎಂದು ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ.ಕೃಷ್ಣಯ್ಯ ಶೆಟ್ಟಿ ಅವರ ಅಧಿಕಾರಾ­ವಧಿಯಲ್ಲೂ ಇಂತಹ ಪ್ರಯತ್ನ ನಡೆದಿತ್ತು. ಆಗ ಅದನ್ನು ಗೃಹ ಮಂಡಳಿ ಉನ್ನತ ಅಧಿಕಾರಿಗಳೇ ತಡೆದಿದ್ದರು. ನಂತರ ಕೃಷ್ಣಯ್ಯ ಶೆಟ್ಟಿ ರಾಜೀನಾಮೆ ನೀಡಿದ ಮೇಲೆ ಖಾಸಗಿ ಡೆವಲಪರ್ಸ್‌ ತಮ್ಮ ಬೇಡಿಕೆಯನ್ನು ಈಡೇರಿಸಿಕೊಳ್ಳಲು ಯಶಸ್ವಿಯಾಗಿದ್ದಾರೆ. ಈಗ ಗೃಹ ಮಂಡ­ಳಿಯ ನಿವೇಶನದ ಬೆಲೆ ರೂ.900 ಆದರೆ ಖಾಸಗಿ ನಿವೇಶನಗಳ ಬೆಲೆ ರೂ.1000­ದಿಂದ ರೂ. 1,200 ಇದೆ ಎಂದು ಅವರು ಹೇಳುತ್ತಾರೆ.ಸೂರ್ಯನಗರದಲ್ಲಿ ನಿರ್ಮಿಸ­ಲಾ­ಗಿದ್ದ 600 ಮನೆಗಳನ್ನು ಸಾರ್ವಜನಿಕ ಪ್ರಕಟಣೆ ನೀಡದೆ ಹರಾಜು ಮಾಡ­ಲಾಗಿದೆ. ನಿವೇಶನ ಅಥವಾ ಮನೆಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಬೇಕು. ಆದರೆ ಇಲ್ಲಿ 600 ಮನೆಗಳ ಹರಾಜು ಮಾಡುವ ಅಧಿಕಾರವನ್ನು ಮಂಡಳಿಯ ಆಯುಕ್ತರಿಗೇ ನೀಡಲಾಗಿತ್ತು. ಗೃಹ ಮಂಡಳಿ ಸಭೆಯಲ್ಲಿಯೇ ಅದು ತೀರ್ಮಾ­ನವಾಗಿತ್ತು. ಹೀಗೆ ತೀರ್ಮಾನ ಮಾಡುವುದು ನಿಯಮಕ್ಕೆ ವಿರುದ್ಧ ಎಂದು ಕೆಲವು ಅಧಿಕಾರಿಗಳು ಆಕ್ಷೇಪ­ವೆತ್ತಿದರೂ ಅದನ್ನು ಕಡೆಗಣಿಸಲಾಗಿದೆ ಎಂಬುದು ಅವರ ಕಳವಳ.

ಮನೆಗಳ ಹರಾಜು ಅಧಿಕಾರವನ್ನು ಆಯುಕ್ತರಿಗೇ ನೀಡಿದ್ದರಿಂದ ಅವರ ಮೇಲೆ ಒತ್ತಡ ತಂದು ಅಧಿಕಾರಿಗಳು, ಎಂಜಿನಿಯರ್‌ಗಳು, ಗೃಹ ಮಂಡಳಿ ಸದ­ಸ್ಯರು ಮತ್ತು ಅಧ್ಯಕ್ಷರು ತಮಗೆ ಬೇಕಾ­ದವರಿಗೆ ಬೇಕಾಬಿಟ್ಟಿಯಾಗಿ ಮನೆಗಳನ್ನು ಹಂಚಿದರು ಎಂದೂ ಅವರು ಹೇಳುತ್ತಾರೆ.ಸೂರ್ಯನಗರ ಮೂರನೇ ಹಂತದ ವಸತಿ ಯೋಜನೆ ಬಹುತೇಕ ಮುಕ್ತಾ­ಯವಾಗಿದ್ದು ಈಗ ನಾಲ್ಕನೇ ಹಂತದ ಯೋಜನೆ ಚಾಲ್ತಿಯಲ್ಲಿದೆ. ಈಗ ಗೃಹ ಮಂಡಳಿಗೆ ಹೊಸದಾಗಿ ಬಂದಿರುವ ಆಯುಕ್ತ ಜೆ.ರವಿಶಂಕರ್‌ ಅವರು, ಮನೆಗಳ ಹರಾಜು ಜವಾಬ್ದಾರಿಯನ್ನು ಆಯುಕ್ತರಿಗೆ ನೀಡಿದ ಗೃಹ ಮಂಡಳಿ ಕ್ರಮವನ್ನು ರದ್ದುಪಡಿಸಲು ವಸತಿ ಇಲಾಖೆಗೆ ಪತ್ರ ಬರೆದಿದ್ದಾರೆ.ಒಂದೇ ಸ್ವತ್ತು ಇಬ್ಬರಿಗೆ ಹಂಚಿಕೆ: ಅಧಿಕಾರಸ್ಥರು, ರಾಜಕಾರಣಿಗಳ ಒತ್ತ­ಡಕ್ಕೆ ಮಣಿದು ಸೂರ್ಯನಗರದಲ್ಲಿ ಮನೆ ಹಾಗೂ ನಿವೇಶನಗಳನ್ನು ಬೇಕಾ­ಬಿಟ್ಟಿ­ಯಾಗಿ ಹಂಚಿದ್ದರಿಂದ ಒಂದೇ ನಿವೇ­ಶ­ನವನ್ನು ಎರಡು ಮಂದಿಗೆ ಮಂಜೂರು ಮಾಡಿದ ಹಲವಾರು ಉದಾಹರ­ಣೆಗಳಿವೆ. 30/50ರ 1970 ಸಂಖ್ಯೆಯ ಎಂಐಜಿ–1ನ್ನು ಕೆ.ವಿ.ಸುಪ್ರಿಯಾ ಮತ್ತು ಎಂ.ರಮೇಶ್‌ ಅವರಿಗೆ ಮಂಜೂರು ಮಾಡಲಾಗಿದೆ. 1971 ಸಂಖ್ಯೆಯ ನಿವೇಶನವನ್ನು ಜಯಂತಿ ಮತ್ತು ನಟ­ರಾಜ್‌ ಅವರಿಗೆ, 1972ರ ನಿವೇಶನ­ವನ್ನು ರಾಜಶೇಖರಯ್ಯ ಮತ್ತು ನಾಗ­ರಾಜ್‌ ಅವರಿಗೆ, 1932ನ್ನು ದೀಪ್ತಿ ನಮೋಶಿ  ಮತ್ತು ಡಾ.ಎ.ಆರ್‌.­ವಿನೋದ್‌­­ಕುಮಾರ್‌ ಅವರಿಗೆ, 106­ನ್ನು ಶ್ರದ್ಧಾ ಸುರೇಶ್‌ ಅಂಗಡಿ ಮತ್ತು ದೀಪ್ತಿ ನಮೋಶಿ ಅವರಿಗೆ,1920ರ ನಿವೇಶನ­ವನ್ನು ಬಿಳಿಗಮ್ಮ ಮತ್ತು ಡಾ.ಕೆ.ಎಸ್‌.­ ನರಸಿಂಹಮೂರ್ತಿ ಅವರಿಗೆ, 1921ನ್ನು ಎಂ.ಪ್ರಭಾಕರ್‌, ಬಿ.ಆರ್‌.ಮೀನಾ ಅವರಿಗೆ, 1954ನ್ನು ಎಸ್‌.ಬಿ.ಶರತ್‌ ಬಾಬು, ಗೋಪಾಲ್‌ ಎಸ್‌.ಯಡಗೆರೆ ಅವರಿಗೆ, 1952ನ್ನು ಕೆ.ಸಿ.ವೇಣು­ಗೋಪಾಲ್‌ ಮತ್ತು ಕೆ.­ತಿಮ್ಮಪ್ಪ ಅವ­ರಿಗೆ, 1955ರ ನಿವೇಶ­ನವನ್ನು ಪಿ.­ಕೋಟೇ­ಶ್ವರರಾವ್‌ ಮತ್ತು ಎನ್‌.­ಮಂಜು­ನಾಥ್‌ ಅವರಿಗೆ ಹಂಚಿಕೆ ಮಾಡ­ಲಾಗಿದೆ. ಮುಖ್ಯಮಂತ್ರಿ ಶಿಫಾ­ರಸ್ಸಿ­ನಂತೆ ಒಬ್ಬರಿಗೆ ನಿವೇಶನ ನೀಡಿದರೆ ಅದೇ ನಿವೇಶನವನ್ನು ಮಂತ್ರಿ ಶಿಫಾ­ರಸ್ಸಿನಂತೆ ಇನ್ನೊಬ್ಬರಿಗೆ ನೀಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry