ಸೂರ್ಯ ಸಿಟಿ 2ನೇ ಹಂತ: ಜಮೀನು ವಶ

7

ಸೂರ್ಯ ಸಿಟಿ 2ನೇ ಹಂತ: ಜಮೀನು ವಶ

Published:
Updated:
ಸೂರ್ಯ ಸಿಟಿ 2ನೇ ಹಂತ: ಜಮೀನು ವಶ

ಆನೇಕಲ್: ತಾಲ್ಲೂಕಿನ ಹಿನ್ನಕ್ಕಿಯ ಸೂರ್ಯ ಸಿಟಿ ಎರಡನೇ ಹಂತದಲ್ಲಿ ಭೂಸ್ವಾಧೀನಕ್ಕೆ ಒಳಪಡಿಸಲಾಗಿದ್ದ ಆರು ಎಕರೆ ಜಮೀನನ್ನು ಬಿಗಿ ಪೊಲೀಸ್ ಬಂದೋಬಸ್ತ್ ಮೂಲಕ ಬುಧವಾರ ಗೃಹ ಮಂಡಳಿ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡರು.ಹಿನ್ನಕ್ಕಿಯ ಮಹದೇವಯ್ಯ ಅವರಿಗೆ ಸೇರಿದ 1.16ಎಕರೆ ಜಮೀನು, ನಂಜುಂಡಪ್ಪ ಅವರಿಗೆ ಸೇರಿದ ಸರ್ವೇ ನಂಬರ್ 184/1ರ 2.02 ಎಕರೆ ಜಮೀನು, ಮುನಿಸ್ವಾಮಿ ಅವರಿಗೆ ಸೇರಿದ 2.29 ಎಕರೆ ಮತ್ತು 32 ಗುಂಟೆ ಜಮೀನನ್ನು ಗೃಹ ಮಂಡಳಿ ವಶಕ್ಕೆ ತೆಗೆದುಕೊಂಡಿತು.ಸೂರ್ಯಸಿಟಿ ಎರಡನೇ ಹಂತಕ್ಕೆ ಜಮೀನು ಭೂ ಸ್ವಾಧೀನ ಮಾಡಿಕೊಂಡ ಸಂದರ್ಭದಲ್ಲಿ ಯೋಜನೆಯ ಮಧ್ಯ ಭಾಗದಲ್ಲಿದ್ದ ಮೂರು ಕುಟುಂಬಗಳು ಜಮೀನು ನೀಡಲು ವಿರೋಧ ವ್ಯಕ್ತಪಡಿಸಿ ತಮ್ಮ ಜಮೀನಿನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಅವಕಾಶ ನೀಡದೇ ತಡೆಯೊಡ್ಡಿ ಕೃಷಿ ಚಟುವಟಿಕೆಗಳನ್ನು ನಡೆಸುತ್ತಿದ್ದರು.ಗೃಹ ಮಂಡಳಿಯ ಆಯುಕ್ತರ ಆದೇಶದಂತೆ ಸ್ವಾಧೀನಕ್ಕೆ ಒಳಪಟ್ಟಿದ್ದ ಜಮೀನಿನಲ್ಲಿದ್ದ ಬೆಳೆಗಳು ಹಾಗೂ ಕಟ್ಟಡವನ್ನು ನೆಲಸಮಗೊಳಿಸಿ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಗೃಹ ಮಂಡಳಿಯ ಎಂಜಿನಿಯರ್ ಸುರೇಶ್ ತಿಳಿಸಿದರು.ಡಿವೈಎಸ್‌ಪಿ ಕುಮಾರಸ್ವಾಮಿ ನೇತೃತ್ವದಲ್ಲಿ 200ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನೆಲಸಮಗೊಳಿಸುವ ಸ್ಥಳದಲ್ಲಿ ಹಾಜರಿದ್ದು ಭದ್ರತೆ ಕೈಗೊಂಡಿದ್ದರು.10ಕ್ಕೂ ಹೆಚ್ಚು ಜೆಸಿಬಿ ಯಂತ್ರಗಳು ರೈತ ಮಹದೇವಯ್ಯ ಅವರ ಜಮೀನಿನಲ್ಲಿ ಬೆಳೆದಿದ್ದ ಬಾಳೆ ಹಾಗೂ ಸೇವಂತಿಗೆ ತೋಟವನ್ನು ನೆಲಸಮಗೊಳಿಸಿದವು. ತೋಟದಲ್ಲೇ ಇದ್ದ ವಾಸದ ಮನೆಯನ್ನೂ ನೆಲಸಮಗೊಳಿಸಲಾಯಿತು.ಮಹದೇವಯ್ಯ ಮತ್ತು ಪತ್ನಿ ಭಾಗ್ಯ ಅವರು ವಿರೋಧ ವ್ಯಕ್ತ ಪಡಿಸಿದರು ಸಹ ಅಧಿಕಾರಿಗಳು ಕಿವಿಗೊಡಲಿಲ್ಲ. ಇರಲು ಮನೆ ಸಹ ಇಲ್ಲ ಬೀದಿಯಲ್ಲಿ ಇರಬೇಕಾದ ಪರಿಸ್ಥಿತಿ ಉಂಟಾಗಿದೆ ಎರಡು ಹೆಣ್ಣು ಮಕ್ಕಳು ಮನೆಯಲ್ಲಿದ್ದು ಆಶ್ರಯವೇ ಇಲ್ಲದ್ದಂತಾಗಿದೆ ಎಂದು ಅಳಲು ತೋಡಿಕೊಂಡರು.ಮೊದಲೇ ನೋಟಿಸ್ ನೀಡಿದ್ದರೆ ಪರ್ಯಾಯ ವ್ಯವಸ್ಥೆಯನ್ನಾದ್ದರು ಮಾಡಿಕೊಳ್ಳಬಹುದಾಗಿತ್ತು. ಆದರೆ ಮಾನವೀಯತೆ ಇಲ್ಲದೆ ಅಧಿಕಾರಿಗಳು ದೌರ್ಜನ್ಯ ಎಸಗಿದ್ದಾರೆ ಎಂದು ಮಹದೇವಯ್ಯ `ಪ್ರಜಾವಾಣಿ~ಗೆ ಅಳಲು ತೋಡಿಕೊಂಡರು.ಜೆಸಿಬಿ ಯಂತ್ರಗಳು ಬೆಳೆದ ಬೆಳೆಗಳನ್ನು ನೆಲಸಮಗೊಳಿಸುತ್ತಿದ್ದರೆ ಮಹದೇವಯ್ಯ ಅವರ ವೃದ್ಧ ತಾಯಿ ಬೆಳೆಗಳ ಬಳಿ ನಿಂತು ಕಣ್ಣಿರಿಡುತ್ತಿದ್ದ ದೃಶ್ಯ ಮನ ಕಲುಕುವಂತಿತ್ತು. ಗೃಹ ಮಂಡಳಿಯ ಅಧಿಕಾರಿಗಳನ್ನು ಈ ಬಗ್ಗೆ ಪ್ರಶ್ನಿಸಿದಾಗ ಎರಡು ವರ್ಷಗಳಿಂದ ಅವಕಾಶಗಳನ್ನು ನೀಡಿದ್ದರೂ ಸಹ ಯಾವುದೇ ರೀತಿ ಸ್ಪಂದಿಸದೇ ಇದ್ದುದರಿಂದ ಪೊಲೀಸ್ ಬಂದೋಬಸ್ತ್‌ನಲ್ಲಿ ತೆರವು ಕಾರ್ಯಚರಣೆ ಕೈಗೊಳ್ಳಲಾಗಿದೆ. ಅವರಿಗೆ ದೊರೆಯುವ ಎಲ್ಲ ಪರಿಹಾರಗಳನ್ನು ಕಾನೂನು ರೀತಿ ನೀಡಲು ಮಂಡಳಿ ಸಿದ್ಧವಿದೆ ಎಂದು ಎಂಜಿನಿಯರ್ ಸುರೇಶ್ ವಿವರಿಸಿದರು.ಆನೇಕಲ್ ಸಿಪಿಐ ಎಚ್.ಎಸ್.ವೆಂಕಟೇಶ್, ಅತ್ತಿಬೆಲೆ ಸಿಪಿಐ ವೆಂಕಟ ಶೆಟ್ಟಿ, ತಿರುಮಶೆಟ್ಟಹಳ್ಳಿ ಸಿಪಿಐ ಪರಮೇಶ್, ಪಿಎಸ್‌ಐಗಳಾದ ಚೇತನ್ ಕುಮಾರ್, ವಿಶ್ವನಾಥ್, ವಿರೂಪಾಕ್ಷ ಸ್ವಾಮಿ ಮತ್ತಿತರರು ಬಂದೋಬಸ್ತ್‌ನಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry