ಶನಿವಾರ, ಏಪ್ರಿಲ್ 10, 2021
30 °C

ಸೂಳೆಕೆರೆಯಿಂದ ನೀರು ಪೂರೈಕೆಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ:  ಗ್ರಾಮಕ್ಕೆ ಶುದ್ಧ ಕುಡಿಯುವ ನೀರು ಪೂರೈಸುವಂತೆ ಆಗ್ರಹಿಸಿ ತಾಲ್ಲೂಕಿನ ಕುರುಬರಹಳ್ಳಿ ಹಾಗೂ ಸುತ್ತಮುತ್ತ ಗ್ರಾಮಸ್ಥರು ಬುಧವಾರ ಭೀಮಸಮುದ್ರದಿಂದ ಚಿತ್ರದುರ್ಗಕ್ಕೆ ತೆರಳುವ ಮಾರ್ಗವಾದ ಹಳಿಯೂರು ಮುಖ್ಯ ರಸ್ತೆಯಲ್ಲಿ ಬಿಂದಿಗೆಗಳೊಂದಿಗೆ ರಸ್ತೆ ತಡೆ ಮಾಡಿ ಬೃಹತ್ ಪ್ರತಿಭಟನೆ ನಡೆಸಿದರು.ಬೆಳಿಗ್ಗೆ 8.30ರಿಂದ ಮಧ್ಯಾಹ್ನ 1ಗಂಟೆವರೆಗೂ ಸಾವಿರಕ್ಕೂ ಹೆಚ್ಚು ಗ್ರಾಮಸ್ಥರು ರಸ್ತೆ ತಡೆಯಲ್ಲಿ ಪಾಲ್ಗೊಂಡಿದ್ದರು. ರಸ್ತೆ ತಡೆಯಿಂದಾಗಿ ಸಂಚಾರ ಅಸ್ತವ್ಯಸ್ತಗೊಂಡಿತ್ತು.ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಿದ್ದರೂ, ನೀರಿನ ಸಮಸ್ಯೆಯನ್ನು ಬಗೆಹರಿಸಲು ಯಾರೂ ಪ್ರಯತ್ನಿಸಿಲ್ಲ. ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಇದುವರೆಗೆ ಬಗೆಹರಿಸಿಲ್ಲ. ಹಲವು ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ಇದ್ದರೂ ಪರಿಹಾರ ಮಾತ್ರ ದೊರೆತಿಲ್ಲ. ಯಾವುದೇ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಈ ಸಮಸ್ಯೆಗೆ ಸ್ಪಂದಿಸಿಲ್ಲ ಎಂದು ಗ್ರಾಮಸ್ಥರು ದೂರಿದರು.ಗ್ರಾಮದಲ್ಲಿ ಕುಡಿಯುವ ನೀರಿನ ಅಭಾವವಿರುವುದರಿಂದ ಸುಮಾರು 2-3 ಕಿಲೋಮೀಟರ್ ದೂರದಿಂದ ನೀರು ತರಬೇಕಾಗಿದೆ. ಇದರಿಂದ ಮಹಿಳೆಯರು, ಮಕ್ಕಳಿಗೆ ತೀವ್ರ ತೊಂದರೆಯಾಗಿದೆ. ಗ್ರಾಮದಲ್ಲಿ ದೊರೆಯುವ ನೀರು ಫ್ಲೋರೈಡ್ ಅಂಶ ಹೊಂದಿದ್ದು, ಗ್ರಾಮಸ್ಥರು ಹಲವಾರು ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಆದ್ದರಿಂದ ಗ್ರಾಮಕ್ಕೆ ಸೂಳೆಕೆರೆಯಿಂದ ಶುದ್ಧ ನೀರು ಪೂರೈಸಬೇಕು. ಇದರಿಂದ ಮಾತ್ರ ಗ್ರಾಮದಲ್ಲಿನ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಸಾಧ್ಯ ಎಂದು ಆಗ್ರಹಿಸಿದರು.ಸ್ಥಳಕ್ಕೆ ಆಗಮಿಸಿದ ಉಪವಿಭಾಗಾಧಿಕಾರಿ ನಾಗರಾಜ್ ಮತ್ತು ತಹಶೀಲ್ದಾರ್ ಬಿ.ಟಿ. ಕುಮಾರಸ್ವಾಮಿ ಗ್ರಾಮಸ್ಥರ ಅಹವಾಲನ್ನು ಆಲಿಸಿದರು.ನೀರಿನ ಸಮಸ್ಯೆ ಮತ್ತು ಪರಿಹಾರ ರೂಪಿಸುವ ಬಗ್ಗೆ ಸರ್ಕಾರಕ್ಕೆ ವರದಿ ಕಳುಹಿಸುತ್ತೇವೆ. ಸರ್ಕಾರದಿಂದ ಅನುಮೋದನೆ ಪಡೆದ ನಂತರ ಶಾಂತಿಸಾಗರ ನೀರು ಪೂರೈಕೆ ಯೋಜನೆ ಅನುಷ್ಠಾನಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇವೆ ಎಂದು ಎಂದು ಅಧಿಕಾರಿಗಳು ತಿಳಿಸಿದರು.ಪ್ರತಿಭಟನೆಯಲ್ಲೂ ರಾಜಕೀಯ: ವಾಗ್ವಾದ

ರಸ್ತೆತಡೆ ಸಂದರ್ಭದಲ್ಲಿ ಶಾಸಕ ಎಸ್.ಕೆ. ಬಸವರಾಜನ್ ಮತ್ತು ಕಾಂಗ್ರೆಸ್ ಮಾಜಿ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಎಸ್. ಮಂಜುನಾಥ್ ನಡುವೆ ರಾಜಕೀಯ ವಿಷಯಕ್ಕೆ ಸಂಬಂಧಿಸಿದಂತೆ ಸ್ವಾರಸ್ಯಕರ ವಾಗ್ವಾದ ನಡೆಯಿತು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಎಸ್.ಕೆ. ಬಸವರಾಜನ್, ಈಗ ನಮ್ಮ ಸರ್ಕಾರ ಇಲ್ಲ.ಆದ್ದರಿಂದ ಈಗ ಗ್ರಾಮಕ್ಕೆ ಶಾಂತಿಸಾಗರ ನೀರು ಪೂರೈಸುವುದು ಕಷ್ಟಸಾಧ್ಯ. ಮುಂದಿನ ಆರು ತಿಂಗಳಲ್ಲಿ ಚುನಾವಣೆ ಬರುತ್ತದೆ. ನೀವು ನನ್ನನ್ನು ಮತ್ತೆ ಗೆಲ್ಲಿಸಿ. ಆಗ ನಮ್ಮ ಜೆಡಿಎಸ್ ಪಕ್ಷವೇ ಅಧಿಕಾರಕ್ಕೆ ಬರುತ್ತದೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಾನು ಗೆದ್ದ ಬಂದ ನಂತರ ನೀರಿನ ಸಮಸ್ಯೆ ಬಗೆಹರಿಸುತ್ತೇನೆ. ಸದ್ಯಕ್ಕೆ ಬೋರ್‌ವೆಲ್ ವ್ಯವಸ್ಥೆ ಮಾಡಿಸುತ್ತೇನೆ ಎಂದು ಭರವಸೆ ನೀಡಿದರು.ಶಾಸಕರ ಮಾತಿಗೆ ಬಿರುಸಿನ ಪ್ರತ್ಯುತ್ತರ ನೀಡಿದ ಜಿ.ಎಸ್. ಮಂಜುನಾಥ್, ಕಳೆದ ನಾಲ್ಕೂವರೆ ವರ್ಷಗಳಲ್ಲಿ ನೀವು ನೀರಿನ ಸಮಸ್ಯೆ ಬಗೆಹರಿಸಿಲ್ಲ. ಇನ್ನೂ ಮತ್ತೆ ಐದು ವರ್ಷಗಳು ಬೇಕೆ?. ಈ ಬಾರಿ ಬೇರೆಯವರಿಗೂ ಸ್ಥಾನ ಬಿಟ್ಟು ಕೊಡಿ. ಅವಕಾಶ ನೀಡಿದರೆ ಕೇವಲ 6 ತಿಂಗಳಲ್ಲಿ ನೀರಿನ ಸಮಸ್ಯೆ ಬಗೆಹರಿಸುತ್ತೇನೆ. ಸರ್ಕಾರ ಯಾವುದಿದ್ದರೂ ಶಾಸಕರಿಗೆ ಅನುದಾನ ದೊರೆಯುತ್ತದೆ. ಬಸವರಾಜನ್ ಗ್ರಾಮಸ್ಥರಿಂದ ತಪ್ಪಿಸಿಕೊಳ್ಳಲು ಬೇರೆ, ಬೇರೆ ದಾರಿ ಹುಡುಕುತ್ತಿದ್ದಾರೆ. ನಮಗೆ ಶಾಂತಿಸಾಗರ ನೀರು ಬೇಕೇ ಬೇಕು. ಬೇಕಿದ್ದರೆ ತಕ್ಷಣವೇ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ಮಾಡೋಣ ಎಂದು ವಾದ ಮಂಡಿಸಿದರು.ಇದೇ ಸಮಯದಲ್ಲಿ ಆಗಮಿಸಿದ ವಿಧಾನಪರಿಷತ್ ಸದಸ್ಯ ಜಿ.ಎಚ್. ತಿಪ್ಪಾರೆಡ್ಡಿ, ನೀರಿನ ವಿಷಯದಲ್ಲಿ ರಾಜಕೀಯ ಸಲ್ಲದು. ಸೂಳೆಕೆರೆಗೆ ನೀರು ತಂದಿದ್ದು ಯಾರು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ತಕ್ಷಣವೇ ಗ್ರಾಮಕ್ಕೆ ಶಾಂತಿಸಾಗರ ನೀರು ಹರಿಸಲು ಸಾಧ್ಯವಿಲ್ಲ. ಕನಿಷ್ಠ 6 ತಿಂಗಳಾದರೂ ಬೇಕು. ಸರ್ಕಾರದಲಿ ಚರ್ಚಿಸಿ ಈ ಸಮಸ್ಯೆ ಬಗೆಹರಿಸುತ್ತೇನೆ. ಸದ್ಯಕ್ಕೆ ಟ್ಯಾಂಕರ್ ಮೂಲಕ ನೀರು ಪೂರೈಸಲು ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.