ಸೃಜನಶೀಲತೆಗೆ ಸ್ತ್ರೀವಾದಿ ಧೋರಣೆ ಅಡ್ಡಿಯಾಗದಿರಲಿ

7
`ಗೆಳತಿಯಾಗುವುದೆಂದರೆ' ಪುಸ್ತಕ ಬಿಡುಗಡೆ ಮಾಡಿದ ಡಾ. ಎಲ್ ಹನುಮಂತಯ್ಯ ಸಲಹೆ

ಸೃಜನಶೀಲತೆಗೆ ಸ್ತ್ರೀವಾದಿ ಧೋರಣೆ ಅಡ್ಡಿಯಾಗದಿರಲಿ

Published:
Updated:
ಸೃಜನಶೀಲತೆಗೆ ಸ್ತ್ರೀವಾದಿ ಧೋರಣೆ ಅಡ್ಡಿಯಾಗದಿರಲಿ

ಬೆಂಗಳೂರು: ಕೆಲವು ಕೃತಿಗಳು ಉತ್ತಮವಾಗಿದ್ದರೂ ಸ್ತ್ರೀವಾದಿ ಧೋರಣೆ ಹೊಂದಿರುವ ಕಾರಣದಿಂದಾಗಿ ಉತ್ಕೃಷ್ಟ ಸ್ಥಾನವನ್ನು ಪಡೆಯಲು ಸಾಧ್ಯವಾಗಿಲ್ಲ ಎಂದು ಸಾಹಿತಿ ಡಾ.ಎಲ್.ಹನುಮಂತಯ್ಯ ವಿಶ್ಲೇಷಿಸಿದರು.ನೆಲೆಮಲೆ ಪಬ್ಲಿಷಿಂಗ್ ಹೌಸ್ ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಲೇಖಕಿ ಡಾ.ಎಸ್.ಪಿ.ಪದ್ಮಿನಿ ನಾಗರಾಜು ಅವರ `ಗೆಳತಿಯಾಗುವುದೆಂದರೆ' ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.ಸಾಮಾನ್ಯವಾಗಿ ಮಹಿಳಾ ಲೇಖಕಿಯರ ಕೃತಿಗಳು ಹೆಚ್ಚಾಗಿ ಮಹಿಳಾ ಸಂವೇದನೆಯಿಂದ ಕೂಡಿರುತ್ತವೆ. ಕೃತಿಗಳಲ್ಲಿ ಬರೀ ಪುರುಷರನ್ನು ದೂಷಣೆ ಮಾಡುವ ಬದಲು ಮಹಿಳೆಯರ ಭಾವನೆಗಳನ್ನು ಕಾವ್ಯಗಳಲ್ಲಿ ವ್ಯಕ್ತಪಡಿಸಬೇಕು. ಇಲ್ಲವಾದರೆ ಕಾವ್ಯಗಳಲ್ಲಿನ ಸ್ತ್ರೀವಾದಿ ಧೋರಣೆ ಕಾವ್ಯದ ಸೃಜನಶೀಲತೆಗೆ ಅಡ್ಡಗಾಲಾಗಿ ಪರಿಣಮಿಸುತ್ತದೆ ಎಂದು ತಿಳಿಸಿದರು.`ಲೇಖಕಿ ಪದ್ಮಿನಿ ನಾಗರಾಜು ಅವರ `ಗೆಳತಿಯಾಗುವುದೆಂದರೆ' ಕವನ ಸಂಕಲನದಲ್ಲಿ ಹೆಣ್ತನದ ಕುರಿತಾದ ಕವಿತೆಗಳೇ ಹೆಚ್ಚಾಗಿ ಇವೆ. ದುಡಿಯುವ ಮಹಿಳೆಯರ ತೊಳಲಾಟಗಳು, ಗಂಡೂ ಅಲ್ಲದ ಹೆಣ್ಣೂ ಅಲ್ಲದವರ ಭಾವನೆಗಳು, ಕಾರ್ಪೋರೇಟ್ ಸಂಸ್ಥೆಯಲ್ಲಿ ಕೆಲಸ ಮಾಡುವ ಮಗಳು ಹಾಗೂ ಆಕೆಯ ತಾಯಿ ನಡುವೆ ನಡೆಯುವ ಮಾತುಕತೆಯ ಸಂವಾದವನ್ನು ತಮ್ಮ ಕವಿತೆಗಳಲ್ಲಿ ಅದ್ಭುತವಾಗಿ ತಂದಿದ್ದಾರೆ. ಆದರೆ ಪದ್ಮಿನಿ ನಾಗರಾಜು ಅವರು ಸಾಮಾಜಿಕ ಸಮಸ್ಯೆಗಳನ್ನು ಮುಟ್ಟುವಂತಹ ಪ್ರಯತ್ನ ಮಾಡಿಲ್ಲ' ಎಂದು ಅನಿಸಿಕೆ ವ್ಯಕ್ತಪಡಿಸಿದರು.ಯಾವುದೇ ಲೇಖಕ ತನ್ನ ಅನುಭವಕ್ಕೆ ಬಂದಿರುವ ಅಥವಾ ಸುತ್ತುಮುತ್ತಲ ಘಟನೆಗಳನ್ನು ಆಧರಿಸಿ ಕಾವ್ಯವನ್ನು ರಚಿಸಬೇಕು. ಆಗ ಮಾತ್ರ ಅದು ಯಶಸ್ಸು ಕಾಣಲು ಸಾಧ್ಯವಾಗುತ್ತದೆ. ಒತ್ತಾಯಪೂರಕವಾಗಿ ಹುಟ್ಟುವ ಕಾವ್ಯ, ಕಾವ್ಯ ಎನಿಸಿಕೊಳ್ಳುವುದಿಲ್ಲ ಎಂದು ಕಿವಿಮಾತು ಹೇಳಿದರು.ಕವಯತ್ರಿ ಡಾ.ಎಚ್.ಎಲ್.ಪುಷ್ಪ ಮಾತನಾಡಿ ಜನರ ನೋವು, ನಲಿವುಗಳ ನಡುವೆ ಕಾವ್ಯ ನಿಂತಾಗ ಮಾತ್ರ ಗೆಲುವು ಸಾಧಿಸಲು ಸಾಧ್ಯ. ಇಂದು  ಸಂಬಂಧಗಳ ನಡುವಿನ ಮೌಲ್ಯಗಳು ಕುಸಿಯುತ್ತಿದ್ದು, ದಿಕ್ಕು ಕಾಣದ ಸ್ಥಿತಿಯಲ್ಲಿ ಜನರಿದ್ದಾರೆ. ಇಂತಹ ಸಮಸ್ಯೆಗಳಿಗೆ ಪರಿಹಾರಗಳನ್ನು ಸೂಚಿಸುವ ಕಾವ್ಯಗಳ ರಚನೆ ಅಗತ್ಯವಿದೆ ಎಂದು ಪ್ರತಿಪಾದಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಹಿತಿ ಶೂದ್ರ ಶ್ರೀನಿವಾಸ ವಹಿಸಿದ್ದರು. ಲೇಖಕಿ ಡಾ.ಎಸ್.ಪಿ.ಪದ್ಮಿನಿ ನಾಗರಾಜು, ಭಾರತೀಯ ಜೈನ್ ಮಿಲನ್ ರಾಷ್ಟ್ರೀಯ ಅಧ್ಯಕ್ಷ ಧರ್ಮಸ್ಥಳ ಸುರೇಂದ್ರಕುಮಾರ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry