ಮಂಗಳವಾರ, ಅಕ್ಟೋಬರ್ 22, 2019
26 °C

ಸೃಜನಶೀಲ ಪ್ರತಿಭೆಗಳ ಅನಾವರಣ

Published:
Updated:

ಚಿತ್ರದುರ್ಗ: ಕೋಟೆ ನಾಡಿನಲ್ಲಿ ಕಳೆದ ಮೂರು ದಿನಗಳಿಂದ ನಡೆದ ಶೈಕ್ಷಣಿಕ- ಸಾಂಸ್ಕೃತಿಕ ವೈವಿಧ್ಯಮಯ ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ ಭಾನುವಾರ ಸಂಜೆ ಸಮಾರೋಪಗೊಂಡಿತು.33 ಸ್ಪರ್ಧೆಗಳಲ್ಲಿ 34 ಶೈಕ್ಷಣಿಕ ಜಿಲ್ಲೆಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಭಾನುವಾರ ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ನಡೆದ ಮಿಮಿಕ್ರಿ ಸಭಿಕರನ್ನು ರಂಜಿಸಿತು. ಪ್ರಥಮ ಸ್ಥಾನ ಪಡೆದ ದಕ್ಷಿಣ ಕನ್ನಡ ಜಿಲ್ಲೆಯ ಅಂಧ ವಿದ್ಯಾರ್ಥಿ ಶೈಲೇಶ್ ಮತ್ತು ತೃತೀಯ ಸ್ಥಾನ ಪಡೆದ ಕೊಪ್ಪಳದ 9ನೇ ತರಗತಿ ವಿದ್ಯಾರ್ಥಿ ಕಳಕೇಶ್ ಹೂಗಾರ್ ಸಭಿಕರನ್ನು ನಗೆಗಡಲಲ್ಲಿ ತೇಲಿಸಿದರು. ಈ ಇಬ್ಬರಿಗೂ ಸಮಾರೋಪ ಸಮಾರಂಭದಲ್ಲೂ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.3ನೇ ದಿನವೂ ನಾಟಕ ಸ್ಪರ್ಧೆಗಳು ನಡೆದವು. ಗುರುಭವನದಲ್ಲಿ ಯೋಗಾಸನ, ರಸಪ್ರಶ್ನೆ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಭಾಷಣ, ಘಜಲ್, ಚಿತ್ರಕಲೆ, ರಂಗೋಲಿ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಪ್ರತಿಭೆ ಪ್ರದರ್ಶಿಸಿದರು. 

ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಸಂಸತ್ ಸದಸ್ಯ ಜನಾರ್ದನಸ್ವಾಮಿ, ಇಂದಿನ ಶೈಕ್ಷಣಿಕ ವ್ಯವಸ್ಥೆ ಕೇವಲ ಪರೀಕ್ಷೆಗಾಗಿ ಮಾತ್ರ ಸೀಮಿತವಾಗುತ್ತಿದೆ. ವಿದ್ಯಾರ್ಥಿಗಳು ಶೇ.90ರಷ್ಟು ವಿಷಯವನ್ನು  ಅರ್ಥ ಮಾಡಿಕೊಳ್ಳುವುದಿಲ್ಲ. ಕೇವಲ ಅಂಕಗಳಿಕೆಗೆ ಮಾತ್ರ ಅಧ್ಯಯನ ಮಾಡುತ್ತಿದ್ದಾರೆ. ಕನಿಷ್ಠ ಶೇ.50ರಷ್ಟನ್ನಾದರೂ ವಿಷಯವನ್ನು ಗ್ರಹಿಸಿ ಅರ್ಥ ಮಾಡಿಕೊಳ್ಳಬೇಕು ಎಂದರು.ದೇಶ ಜಾಗತಿಕಮಟ್ಟದಲ್ಲಿ ಸಾಮರಸ್ಯ ಕಾಪಾಡಿಕೊಳ್ಳುವ ಜತೆಗೆ ಪೈಪೋಟಿಯನ್ನು ಸಹ ಎದುರಿಸಬೇಕಾಗಿದೆ. ಆದ್ದರಿಂದ ಮುಂದಿನ ವಿದ್ಯಾರ್ಥಿಗಳ ಮೇಲೆ ಜವಾಬ್ದಾರಿ, ಸವಾಲುಗಳಿವೆ ಎಂದರು.ಡಿಡಿಪಿಐ ಎಚ್. ಮಂಜುನಾಥ್, ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಂ. ವೀರೇಶ್, ಬಿಇಒ ರೇವಣಸಿದ್ದಪ್ಪ, ರವಿಶಂಕರರೆಡ್ಡಿ, ಶಿಕ್ಷಣಾಧಿಕಾರಿಗಳಾದ ರಮೇಶ್, ಎಸ್.ಕೆ.ಬಿ. ಪ್ರಸಾದ್, ಡಯಟ್ ಪ್ರಾಂಶುಪಾಲ ಮಲ್ಲಣ್ಣ ಮತ್ತಿತರರು ಹಾಜರಿದ್ದರು.ಮೆಚ್ಚುಗೆ: ಪ್ರತಿಭಾ ಕಾರಂಜಿಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ, ಅಧಿಕಾರಿಗಳಿಗೆ ಉತ್ತಮ ವ್ಯವಸ್ಥೆ ಮಾಡಲಾಗಿತ್ತು ಎಂದು ಆತಿಥ್ಯದ ಜವಾಬ್ದಾರಿ ವಹಿಸಿಕೊಂಡಿದ್ದ ಜಿಲ್ಲಾಡಳಿತ ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಶಿಕ್ಷಕರು ಸಮಾರೋಪ ಸಮಾರಂಭದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು. ಊಟ, ತಿಂಡಿಗೆ ತೊಂದರೆ ಆಗಲಿಲ್ಲ ಎಂದು ಶಿಕ್ಷಕರು ಪ್ರಶಂಸೆ ವ್ಯಕ್ತಪಡಿಸಿದರು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)