ಬುಧವಾರ, ಫೆಬ್ರವರಿ 24, 2021
24 °C

ಸೃಜನ್‌ಗೆ ಸನ್ನಿ ಜೊತೆ ಕುಣಿಯುವ ಯೋಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೃಜನ್‌ಗೆ ಸನ್ನಿ ಜೊತೆ ಕುಣಿಯುವ ಯೋಗ

ಇಂದ್ರಜಿತ್ ಲಂಕೇಶ್ ನಿರ್ದೇಶನದ ‘ಲವ್ ಯು ಆಲಿಯಾ’ ಚಿತ್ರದಲ್ಲಿ ಹಾಡೊಂದಕ್ಕೆ ನಟಿ ಸನ್ನಿ ಲಿಯೋನ್ ಹೆಜ್ಜೆ ಹಾಕುತ್ತಾರೆ ಎಂದು ಸುದ್ದಿಯಾಗಿದ್ದೇ ತಡ, ಸನ್ನಿ ಜತೆ ಕುಣಿಯುವವರು ಯಾರು ಎಂಬ ಕುತೂಹಲ ಮೂಡಿತ್ತು.ಅದಕ್ಕೀಗ ಉತ್ತರ ಸಿಕ್ಕಿದೆ. ಸನ್ನಿ ಜತೆ ಸೃಜನ್ ಲೋಕೇಶ್ ಕುಣಿಯಲಿದ್ದಾರೆ. ಇನ್ನೊಂದು ಅಚ್ಚರಿಯ ಸಂಗತಿಯೆಂದರೆ, ಆ ಡಾನ್ಸ್‌ಗೆಂದೇ ಜಿಮ್‌ನಲ್ಲಿ ಸೃಜನ್ ದಿನಕ್ಕೆ ಐದು ತಾಸು ಬೆವರು ಸುರಿಸುತ್ತಿದ್ದಾರೆ.‘ನನ್ನ ಒಂದೊಂದು ಸಿನಿಮಾದಲ್ಲೂ ಒಂದೊಂದು ವಿಶೇಷ ಹಾಡು ಇರುತ್ತದೆ. ಅದರಂತೆ ಲವ್ ಯು ಆಲಿಯಾದಲ್ಲೂ ಇರುವ ಹಾಡಿಗೆ ಸನ್ನಿ ಲಿಯೋನ್ ಕುಣಿಯಲಿದ್ದಾರೆ. ಅವರ ಜತೆ ಡಾನ್ಸ್ ಮಾಡುವುದು ಸೃಜನ್ ಲೋಕೇಶ್’ ಎನ್ನುತ್ತಾರೆ ನಿರ್ದೇಶಕ ಇಂದ್ರಜಿತ್.ಅಷ್ಟಕ್ಕೂ ಸೃಜನ್ ಆಯ್ಕೆಯ ಹಿಂದೆ ಬಾಂಧವ್ಯದ ಒಂದು ಎಳೆ ಇದೆ ಎಂಬ ಗುಟ್ಟನ್ನು ಇಂದ್ರಜಿತ್ ತೆರೆದಿಡುತ್ತಾರೆ. ಇಂದ್ರಜಿತ್ ತಂದೆ ಲಂಕೇಶ್ ಅವರು ‘ಎಲ್ಲಿಂದಲೋ ಬಂದವರು’ ಚಿತ್ರಕ್ಕೆ ಲೋಕೇಶ್ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಿಕೊಂಡಿದ್ದರು. ಈಗ ಟೀವಿಯಲ್ಲಿ ಪ್ರಸಾರವಾಗುತ್ತಿರುವ ‘ಮಜಾ ಟಾಕೀಸ್‌’ನಲ್ಲಿ ಸೃಜನ್ ಅವರು ಇಂದ್ರಜಿತ್‌ಗೆ ಆ್ಯಕ್ಷನ್– ಕಟ್ ಹೇಳುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಸೃಜನ್‌ಗೆ ಇಂದ್ರಜಿತ್ ಕೊಟ್ಟಿದ್ದು ಸನ್ನಿ ಲಿಯೋನ್ ಜತೆ ಹೆಜ್ಜೆ ಹಾಕುವ ಅವಕಾಶ.‘ಎಲ್ಲಿಂದಲೋ ಬಂದವರು ಮೂಲಕ ಆರಂಭವಾದ ಬಾಂಧವ್ಯ ‘ಮಜಾ ಟಾಕೀಸ್‌’ವರೆಗೆ ಮುಂದುವರಿಯಿತು. ಸನ್ನಿ ಜತೆ ಡಾನ್ಸ್‌ಗೆ ಯಾರನ್ನು ಆಯ್ಕೆ ಮಾಡಬೇಕು ಎಂದು ನಾನು ಯೋಚಿಸುತ್ತಿದ್ದೆ. ಮಜಾ ಟಾಕೀಸ್‌ ಚಿತ್ರೀಕರಣ ನಡೆಯುತ್ತಿರುವ ಸಮಯದಲ್ಲೇ ಸೃಜನ್ ಜಿಮ್‌ನಲ್ಲಿ ಭಾರಿ ಕಸರತ್ತು ನಡೆಸುತ್ತಿದ್ದ ವಿಷಯ ಗೊತ್ತಾಯಿತು. ನಮ್ಮ ಸಿನಿಮಾದ ಹಾಡಿನ ಚಿತ್ರೀಕರಣಕ್ಕೆ ಬರೀ 45 ದಿನಗಳು ಉಳಿದಿದ್ದವು. ಜಿಮ್‌ನಲ್ಲಿ ಇನ್ನಷ್ಟು ವರ್ಕ್‌ಔಟ್ ಮಾಡಿದರೆ ಸಿಕ್ಸ್‌ಪ್ಯಾಕ್ ಕಷ್ಟವೇನಲ್ಲ ಅನಿಸಿತು. ಅದಕ್ಕೇ ಸೃಜನ್‌ ಆಯ್ಕೆ ಮಾಡಿದೆ.ಬಾಲಿವುಡ್‌ ಹೀರೋಗಳಂತೆ ಸೃಜನ್ ಕೂಡ ಸಿಕ್ಸ್‌ ಪ್ಯಾಕ್‌ ಮಾಡಿ ಕಣ್ಣು ಕೋರೈಸಲಿದ್ದಾರೆ’ ಎಂದು ವಿವರ ಕೊಡುತ್ತಾರೆ ಇಂದ್ರಜಿತ್.

ಜೆಸ್ಸಿ ಗಿಫ್ಟ್‌ ಸಂಗೀತ ಹೊಸೆದಿರುವ ಹಾಡಿಗೆ ಸಂತೋಷ್ ದನಿ ಕೊಟ್ಟಿದ್ದಾರೆ. ಪ್ರದೀಪ್ ಆಂಥೋನಿ ನೃತ್ಯ ನಿರ್ದೇಶನವಿದೆ. ಈ ಹಾಡಿನಲ್ಲಿ ಸೃಜನ್ ಅವರನ್ನು ಯಾರೂ ಕಂಡಿರದಂಥ ಬಗೆಯಲ್ಲಿ ಪ್ರೇಕ್ಷಕನಿಗೆ ತೋರಿಸುವ ಭರವಸೆಯನ್ನು ಇಂದ್ರಜಿತ್ ನೀಡುತ್ತಾರೆ.

ಜನ್ಮದಿನದ ಉಡುಗೊರೆ!ಸನ್ನಿ ಜತೆ ಕುಣಿಯುವ ಈ ಅವಕಾಶವನ್ನು ಸೃಜನ್‌ಗೆ ನೀಡಿದ್ದು ‘ಮಜಾ ಟಾಕೀಸ್‌’ನಲ್ಲೇ.ಜೂನ್‌ 28ರಂದು ಸೃಜನ್ ಜನ್ಮದಿನ. ಅಂದು ಪ್ರಸಾರ ಕಾಣಲಿರುವ ಕಂತಿನ ಚಿತ್ರೀಕರಣವು ಕೆಲ ದಿನಗಳ ಮೊದಲೇ ನಡೆಯಿತು. ‘ಮಜಾ ಟಾಕೀಸ್‌’ ತಂಡದ ಒಬ್ಬೊಬ್ಬ ಸದಸ್ಯನೂ ಸೃಜನ್‌ಗೆ ಬಗೆಬಗೆಯ ಉಡುಗೊರೆ ಕೊಡುತ್ತಿದ್ದ. ಅವುಗಳನ್ನೆಲ್ಲ ನೋಡಿದ ಸೃಜನ್, ಇಂದ್ರಜಿತ್ ಕಡೆ ತಿರುಗಿ ಹೇಳಿದರಂತೆ: ‘ನೋಡಿ ಎಷ್ಟೆಲ್ಲ ಗಿಫ್ಟ್‌! ಎಷ್ಟೊಂದು ಖುಷಿಯಾಗುತ್ತಿದೆ ಗೊತ್ತಾ?’ಆಗ ಇಂದ್ರಜಿತ್, ‘ನಾನು ಏನೂ ಕೊಡೋಕೆ ಆಗಲ್ಲ. ಆದರೆ ಸನ್ನಿ ಲಿಯೋನ್ ಜತೆ ಲವ್ ಯು ಆಲಿಯಾದಲ್ಲಿ ಒಂದು ಸಾಂಗ್ ಕೊಡ್ತೀನಿ! ಅದೇ ನಿಮ್ಮ ಜನ್ಮದಿನಕ್ಕೆ ನನ್ನ ಉಡುಗೊರೆ’ ಅಂದರಂತೆ.ಇಷ್ಟು ಹೇಳುತ್ತಲೇ ಸೃಜನ್ ಅವರ ಮುಖದಲ್ಲಿ ಮೂಡಿದ ಭಾವನೆ ಏನು? ಅವರ ಪ್ರತಿಕ್ರಿಯೆ ಹೇಗಿತ್ತು? ಇದನ್ನೆಲ್ಲ ನಾಳೆ (ಜೂನ್ 28) ಪ್ರಸಾರವಾಗಲಿರುವ ‘ಮಜಾ ಟಾಕೀಸ್‌’ನಲ್ಲಿ ನೋಡಬಹುದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.