ಸೃಜ ಮಜ

7

ಸೃಜ ಮಜ

Published:
Updated:
ಸೃಜ ಮಜ

ನಿರೂಪಣೆಯಲ್ಲಿ ಹೊಸತನವನ್ನು ತರಬೇಕೆಂಬ ತುಡಿತ ಬಹುಕಾಲದಿಂದ ಕಾಡುತ್ತಿತ್ತು. ಅವಕಾಶಕ್ಕಾಗಿ ಕಾಯುತ್ತಿದ್ದೆ. `ಸೈ~ ನೃತ್ಯ ಕಾರ್ಯಕ್ರಮದ ಆಡಿಷನ್‌ಗೆ ಬಂದಾಗ ಸ್ಕ್ರಿಪ್ಟನ್ನು ಸಾರಾಸಗಟಾಗಿ ತಿರಸ್ಕರಿಸಿದ್ದೆ. ಅದೇ ಕಾರಣಕ್ಕೆ ಕಾರ್ಯಕ್ರಮದಿಂದ ತಿರಸ್ಕೃತನಾಗುವ ಸಾಧ್ಯತೆಗಳೂ ಇದ್ದವು.ಇವನೇನೋ ಅಧಿಕ ಪ್ರಸಂಗಿ, ಹೊಸರೀತಿ ಮಾಡುತ್ತಾನೆಂದು ಹೊರಟಿದ್ದಾನಲ್ಲಾ ಎಂದು ಮೂಗು ಮುರಿದವರೇ ಹೆಚ್ಚು. ಮೊದಲೆರಡು ಕಂತುಗಳಿಗೆ ಸಿಕ್ಕ ಅದ್ಭುತ ಪ್ರತಿಕ್ರಿಯೆ ನೋಡಿ ಸಂಯೋಜಕರೂ ಬೆರಗಾಗಿದ್ದರು. ಡ್ಯಾನ್ಸ್ ಕಾರ್ಯಕ್ರಮಕ್ಕಿಂತಲೂ ನಿರೂಪಣೆ ಸೊಗಸಾಗಿದೆ ಎಂದು ಹೊಗಳಿದ ಹತ್ತು ಹಲವು ಕರೆಗಳು ಕಚೇರಿಗೆ ಬಂದಿದ್ದವು. ಬಾಲನಟನಾಗಿ `ಸುರಸುಂದರಾಂಗಿ~, `ವೀರಪ್ಪನ್~, `ಭುಜಂಗಯ್ಯ~ ಮೊದಲಾದ ಚಿತ್ರಗಳಲ್ಲಿ ಅಭಿನಯಿಸುತ್ತಾ ಮಾಯಾಲೋಕಕ್ಕೆ ಕಾಲಿಟ್ಟೆ. ಬಳಿಕ ರಂಗಭೂಮಿ ನನ್ನನ್ನು ಸೆಳೆಯಿತು. ಅಲ್ಲಿ ಕಲಿತಿದ್ದು ಬಹಳಷ್ಟು. ಅಲ್ಲಿಂದ ಕಿರುತೆರೆಗೆ. ಮತ್ತೆ ಬೆಳ್ಳಿರಂಗಕ್ಕೆ ಕಾಲಿಟ್ಟು ಕೆಲವಷ್ಟು ಚಿತ್ರಗಳಲ್ಲಿ ತೊಡಗಿಸಿಕೊಂಡೆ. ಇದೀಗ `ಸ್ನೇಹಿತರು~ ಚಿತ್ರದ ನಾಲ್ಕು ನಾಯಕರಲ್ಲಿ ಒಬ್ಬನಾಗಿ ನಟಿಸುತ್ತಿದ್ದೇನೆ.ನಿರೂಪಣೆ ನನ್ನ ಬಹುವರ್ಷಗಳ ಕನಸೂ ಹೌದು. ವಿಭಿನ್ನವಾದ ಕಾರ್ಯಕ್ರಮ ನೀಡಬೇಕು ಎಂಬ ನನ್ನ ಚಿಂತನೆಯಿಂದ ರೂಪುಗೊಂಡಿದ್ದೇ `ಮಜಾ ವಿತ್ ಸೃಜಾ~ ಕಾರ್ಯಕ್ರಮ. ಒಂದು ಗಂಟೆ ವೀಕ್ಷಕರಿಗೆ ಸಂಪೂರ್ಣ ಮನರಂಜನೆ ನೀಡಬೇಕು ಎಂಬುದಷ್ಟೇ ನನ್ನ ಉದ್ದೇಶ.ವೀಕ್ಷಕರನ್ನು ಸಮಾಧಾನಿಸಿ ಅವರಿಗಿಷ್ಟದ ಕಾರ್ಯಕ್ರಮ ನೀಡುವುದು ಸವಾಲಿನ ಕೆಲಸವೂ ಹೌದು. ಈ ಕಾರ್ಯಕ್ರಮ ಆರಂಭಿಸುವಾಗಲೂ ಅಷ್ಟೇ ಭಯ ಕಾಡಿತ್ತು. ಅಲ್ಲಿಯವರೆಗೆ ನಿರೂಪಣೆಯಲ್ಲಿ ಚಾಲ್ತಿಯಲ್ಲಿದ್ದ ನೀರಸ ಮಾತುಗಳು ಅಂದಿನಿಂದ ಹೊಸ ಸ್ವರೂಪ ಪಡೆದುಕೊಂಡವು.ಕಳೆದ ಎರಡು ವರ್ಷಗಳಲ್ಲಿ ಈ ಬದಲಾವಣೆ ಆಗಿದೆ ಎಂದರೆ ಇದರಲ್ಲಿ ನನ್ನ ಕೊಡುಗೆಯೂ ಸ್ವಲ್ಪ ಇದೆ ಎಂಬ ಹೆಮ್ಮೆ ನನಗೆ. ಯಾರನ್ನಾದರೂ ಅನುಕರಿಸಿ ಕಾರ್ಯಕ್ರಮ ನಿರೂಪಿಸುವುದನ್ನು ನಾನು ದ್ವೇಷಿಸುತ್ತೇನೆ. ನಾನು ಯಾರನ್ನೂ ಮಾದರಿಯಾಗಿ ಇಟ್ಟುಕೊಂಡವನಲ್ಲ.

 

ಯಾವುದೇ ಹಿಂದಿ ಚಾನೆಲ್‌ನ ಹಾಸ್ಯ ಕಾರ್ಯಕ್ರಮಗಳನ್ನು ನೋಡುವುದಿಲ್ಲ. ಅನಿಮಲ್ ಪ್ಲಾನೆಟ್ ಇಲ್ಲವೇ ಡಿಸ್ಕವರಿ ಚಾನೆಲ್‌ಗಳು ನನಗಿಷ್ಟ. ಪ್ರತಿದಿನ ಕನಿಷ್ಠ ಎರಡು ಗಂಟೆ ಪತ್ರಿಕೆ ಓದಿಗೆ ಮೀಸಲು. ಮೊದಲ ಪುಟದಿಂದ ಕೊನೆಯ ಪುಟದವರೆಗೆ ಒಂದಕ್ಷರವೂ ಬಿಡದೆ ಓದಿ ಅಪ್‌ಡೇಟ್ ಆಗುತ್ತೇನೆ.ಚಿತ್ರರಂಗಕ್ಕೂ ನಿರೂಪಣೆಗೂ ಅಜಗಜಾಂತರ ವ್ಯತ್ಯಾಸವಿದೆ. ಅಲ್ಲಿ ಬರೆದಿಟ್ಟ ಕತೆ, ಸಂಭಾಷಣೆಗಳಿವೆ. ವೈಯಕ್ತಿಕ ಅಭಿಪ್ರಾಯಗಳಿಗೆ ಮನ್ನಣೆಯೂ ಸಿಗುವುದಿಲ್ಲ. ಭಾಷೆ ಮೇಲೆ ಹಿಡಿತವಿದ್ದವರಿಗೆ ಮಾತ್ರ ನಿರೂಪಣೆ ಕಸುಬಾಗುತ್ತದೆ. ಇಲ್ಲಿ ವಿಭಿನ್ನವಾದ ವೈಯಕ್ತಿಕ ಶೈಲಿ ಅನುಸರಿಸುವುದೂ ಅಷ್ಟೇ ಮುಖ್ಯ.ಯಾರಾದರೂ ಅದ್ಭುತವಾಗಿ ಕಾರ್ಯಕ್ರಮ ನಿರೂಪಿಸುತ್ತಾರೆ ಎಂದಾದರೆ ಅವರನ್ನು ಪ್ರೋತ್ಸಾಹಿಸುವ ಮನೋಭಾವವನ್ನು ನಮ್ಮ ಎಲ್ಲಾ ನಿರೂಪಕರೂ ಬೆಳೆಸಿಕೊಳ್ಳಬೇಕು.

ಮಾತು ಆಡೋಕೆ ಮುಂಚೆ ಬಂಡವಾಳದ ಅರಿವಿರಬೇಕು. ಚೆನ್ನಾಗಿ ಮಾತನಾಡಬಲ್ಲೆ ಎಂಬ ಹುಂಬತನದೊಂದಿಗೆ ಮಾತಿಗಿಳಿದರೆ ಅಪಾರ್ಥವಾಗುವುದೇ ಹೆಚ್ಚು. ಹಿರಿಯರು ಹೇಳಿಲ್ಲವೇ `ಅಲ್ಪಜ್ಞಾನಿ ಮಹಾ ಗರ್ವಿ~ ಎಂದು.ಯಾವುದೇ ವಿಷಯವನ್ನಾಗಲಿ ಸಂಪೂರ್ಣವಾಗಿ ಅರಿತುಕೊಳ್ಳದೆ ಮಾತಿಗಿಳಿಯುವುದು ತಪ್ಪು. ಸಿಟ್ಟಿನಲ್ಲಿ ಯಾರಾದರೂ ಒಂದು ಏಟು ಹೊಡೆದರೂ ಅದು ಕ್ರಮೇಣ ಮರೆತೀತು. ಆದರೆ ಆಡಿದ ಮಾತು... ಅದು ಮನಸ್ಸಿಗೆ ವಾಸಿಯಾಗದ ಗಾಯ ಮಾಡುವಂಥದ್ದು.ನಂಗೆ ಅಮ್ಮ ಅಂದರೆ ಶತ್ರು, ಗೆಳತಿ, ವಿಮರ್ಶಕಿ, ತಲೆನೋವು, ಪ್ರೋತ್ಸಾಹಕಿ, ಕಿರಿಕ್, ಗುರು ಎಲ್ಲವೂ. ಎಷ್ಟೋ ಬಾರಿ ಶತ್ರುಗಳಂತೆ ಜಗಳವಾಡಿದ್ದೇವೆ. ಎರಡು ನಿಮಿಷದ ಬಳಿಕ ಮತ್ತೆ ಮಗುವಿನಂತೆ ಮುದ್ದಾಡಿದ್ದಾಳೆ.ಆಕೆ ಎಂದಿಗೂ ದೇವರು. ಮಡದಿ ಗ್ರೀಷ್ಮಾ ಒಲವು ನೃತ್ಯದೆಡೆಗೆ ಹೆಚ್ಚಿದ್ದು, ನನ್ನ ಕಾರ್ಯಕ್ರಮಗಳಿಗೂ ಪ್ರೋತ್ಸಾಹ ನೀಡುತ್ತಿರುತ್ತಾಳೆ. ನನ್ನ ಅಕ್ಕಪಕ್ಕ ಇರುವವರನ್ನೂ ನಾನು ಸದಾ ಸಂತೋಷದಲ್ಲಿಡಲು ಬಯಸುತ್ತೇನೆ. ಎಲ್ಲರೂ ನನ್ನ ಪ್ರಶ್ನಿಸುತ್ತಾರೆ, ಟೀವಿ ಪರದೆ ಮೇಲೆ ಮಾತುಮಾತಿಗೂ ಕಾಲೆಳೆಯುತ್ತಾ, ಎಲ್ಲರನ್ನೂ ನಗಿಸುವ ನೀನು ಬಣ್ಣ ಕಳಚಿದಾಗ ಗಂಭೀರ ವ್ಯಕ್ತಿಯಾಗುತ್ತೀಯಲ್ಲಾ ಎಂದು. ಆಗೆಲ್ಲ ನನ್ನ ಉತ್ತರ ಒಂದೇ... `ಅಲ್ಲಿ ದುಡ್ಡು ಕೊಡುತ್ತಾರೆ, ನಿಮ್ಮ ಬಳಿ ಮಾತನಾಡಿದರೆ...?~

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry