ಸೆಂಚುರಿ ಕ್ಲಬ್ ಪ್ರವೇಶದ್ವಾರಕ್ಕೆ ಹೊಸ ರೂಪ

7

ಸೆಂಚುರಿ ಕ್ಲಬ್ ಪ್ರವೇಶದ್ವಾರಕ್ಕೆ ಹೊಸ ರೂಪ

Published:
Updated:
ಸೆಂಚುರಿ ಕ್ಲಬ್ ಪ್ರವೇಶದ್ವಾರಕ್ಕೆ ಹೊಸ ರೂಪ

ಸರ್.ಎಂ.ವಿಶ್ವೇಶ್ವರಯ್ಯ ಅವರು ಮೈಸೂರು ಸಂಸ್ಥಾನದ ದಿವಾನರಾಗಿದ್ದ ಕಾಲದಲ್ಲಿ ಒಮ್ಮೆ ಬೆಂಗಳೂರು ಕ್ಲಬ್‌ಗೆ ಭೇಟಿ ನೀಡಿದ್ದರು. ಆಗ ಅಲ್ಲಿನ ಸಿಬ್ಬಂದಿ ಅವರನ್ನು ಒಳಗೆ ಬಿಡಲಿಲ್ಲವಂತೆ. ಅವರು ಧರಿಸಿದ್ದ  ಮೈಸೂರು ಪೇಟವನ್ನು ತೆಗೆದಿಟ್ಟು, ಟೋಪಿ ಜೊತೆಗೆ ಕೋಟ್ ಧರಿಸಿಕೊಂಡು ಬರುವಂತೆ ಆಜ್ಞಾಪಿಸಿದರಂತೆ.ಅದಕ್ಕೊಪ್ಪದೆ ಬೇಸರಗೊಂಡ ವಿಶ್ವೇಶ್ವರಯ್ಯ ಅವರು ಮೈಸೂರು ಸಂಸ್ಥಾನದ ಅಧಿಕಾರಿಗಳಿಗಾಗಿಯೇ ಒಂದು ಕ್ಲಬ್ ಆರಂಭಿಸಬೇಕೆಂದು ಮನಸ್ಸು ಮಾಡಿದರು. ಅದರಂತೆ ನೂರು ಮಂದಿ ಅಧಿಕಾರಿಗಳನ್ನೊಳಗೊಂಡ ಒಂದು ಕ್ಲಬ್ ಆರಂಭಿಸಿದರು. ಅದೇ ಕೆ.ಆರ್.ವೃತ್ತದ ಸಮೀಪವಿರುವ ಸೆಂಚುರಿ ಕ್ಲಬ್.ದಂಡು ಪ್ರದೇಶದಲ್ಲಿದ್ದ ಕ್ಲಬ್ಬುಗಳಲ್ಲಿ ಭಾರತೀಯರಿಗೆ ಅವಕಾಶವಿರಲಿಲ್ಲ. ಜೊತೆಗೆ ಅಲ್ಲಿನ ವಾತಾವರಣ, ಆಹಾರ ಪದ್ಧತಿ ಎಲ್ಲವೂ ಪಾಶ್ಚಾತ್ಯ ಸಂಪ್ರದಾಯವನ್ನೇ ಅನುಸರಿಸುತ್ತಿದ್ದವು. ಅಂದು ಪ್ರಸಿದ್ಧವಾಗಿದ್ದ `ಬೆಂಗಳೂರು ಕ್ಲಬ್~ ಸ್ಥಳೀಯರಿಗೆ ನಿಷೇಧ ಹೇರಿತ್ತು. ಇದಕ್ಕೆ ಪ್ರತಿಯಾಗಿ ದಿವಾನ್ ವಿಶ್ವೇಶ್ವರಯ್ಯ ಅವರು ಭಾರತೀಯ ವಾತಾವರಣದ ಕ್ಲಬ್ ಆರಂಭಿಸುವ ಮನವಿಯನ್ನು ಸರ್ಕಾರಕ್ಕೆ ಸಲ್ಲಿಸಿದರು.ಈ ಮನವಿಗೆ ಸ್ಪಂದಿಸಿದ ಅರಸರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಬ್ಬನ್‌ಪಾರ್ಕ್‌ನಲ್ಲಿ ಶೇಷಾದ್ರಿ ರಸ್ತೆಗೆ ಸೇರಿಕೊಂಡಂತೆ 7ಎಕರೆ 20ಗುಂಟೆ ಜಮೀನನ್ನು ಮಂಜೂರು ಮಾಡಿದರು. ಸರ್ಕಾರದಿಂದ ನಿವೇಶನ ಪಡೆದ ನಂತರ ಕೆಲಸ ಆರಂಭಿಸಿ ಎರಡು ವರ್ಷದಲ್ಲಿ ಸುಸಜ್ಜಿತ ಕ್ಲಬ್ ನಿರ್ಮಾಣವಾಯಿತು. 1917ರಲ್ಲಿ ಸೆಂಚುರಿ ಕ್ಲಬ್ ಆರಂಭವಾಯಿತು.ಮೊದಲ ಅಧ್ಯಕ್ಷರಾಗಿ ಸರ್. ಎಂ. ವಿಶ್ವೇಶ್ವರಯ್ಯ, ಉಪಾಧ್ಯಕ್ಷರಾಗಿ ಲೆಸ್ಲೆ ಸಿ. ಮಿಲ್ಲರ್, ಎಸ್. ಜಿ. ಫೋರ್ಬ್ಸ್, ಸಿ. ಎಸ್. ದೊರೆಸ್ವಾಮಿ ಅಯ್ಯಂಗಾರ್, ಮೈಸೂರಿನ ಮಾಜಿ ದಿವಾನರಾಗಿದ್ದ ಎನ್. ಮಾಧವ್‌ರಾವ್ ಕಾರ್ಯದರ್ಶಿಯಾಗಿ ಹಾಗೂ ಇತರೆ ಒಂಬತ್ತು ಮಂದಿ ಕಾರ್ಯನಿರ್ವಾಹಕ ಕಮಿಟಿ ಸದಸ್ಯರಾಗಿ ಸೇವೆ ಸಲ್ಲಿಸಿದರು. ನೂರು ಮಂದಿ ಸದಸ್ಯರಿಂದ ಕ್ಲಬ್ ಆರಂಭಿಸಿದ್ದರಿಂದ ಇದಕ್ಕೆ ವಿಶ್ವೇಶ್ವರಯ್ಯನವರೇ ಸೆಂಚುರಿ ಕ್ಲಬ್ ಎಂಬ ಹೆಸರನ್ನು ನಾಮಕರಣ ಮಾಡಿದರು.ಸೆಂಚುರಿ ಕ್ಲಬ್‌ನಲ್ಲಿ ಈಗ ಸುಮಾರು 5400 ಸದಸ್ಯರು ಇದ್ದಾರೆ. ಐಎಎಸ್, ಐಪಿಎಸ್ ಅಧಿಕಾರಿಗಳು, ವಾಣಿಜ್ಯೋದ್ಯಮಿಗಳು, ಸರ್ಕಾರಿ ಅಧಿಕಾರಿಗಳು ಸೇರಿದಂತೆ ಕಾರ್ಪೊರೇಟ್ ಮಂದಿಯೂ ಕ್ಲಬ್ ಸದಸ್ಯರಾಗಿದ್ದಾರೆ.ಲಾನ್ ಟೆನಿಸ್, ಬಿಲಿಯರ್ಡ್ಸ್, ಟೆಬಲ್ ಟೆನಿಸ್ ಆಟಗಳ ಸೌಲಭ್ಯವಿದೆ. ಜೊತೆಗೆ ಬಾರ್, ಹೋಟೆಲ್, ಗ್ರಂಥಾಲಯ, ಸೂಪರ್ ಮಾರ್ಕೆಟ್, ವ್ಯಾಯಾಮ ಶಾಲೆ, ಕಾರ್ಡ್ಸ್ ರೂಮ್, ಹೆಲ್ತ್‌ಕ್ಲಬ್ ಹಾಗೂ ಈಜುಕೊಳ ಎಲ್ಲವೂ ಇವೆ. ಶುಭ ಸಮಾರಂಭಗಳನ್ನು ಆಚರಿಸಿಕೊಳ್ಳಲು ಅವಕಾಶವಿದೆ. ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.ಕ್ಲಬ್‌ನಲ್ಲಿ ಸದಸ್ಯರು ಉಳಿದುಕೊಳ್ಳಲು ಅನುಕೂಲವಾಗುವಂತೆ ಹವಾ ನಿಯಂತ್ರಿತ ವ್ಯವಸ್ಥೆ ಇರುವ ಇಪ್ಪತ್ತು ಕೊಠಡಿಗಳಿವೆ. ಕರ್ನಾಟಕ ಸೊಸೈಟಿ ಆಕ್ಟ್‌ನ ಅಡಿಯಲ್ಲಿ ಕ್ಲಬ್ ನೋಂದಣಿಯಾಗಿದ್ದು, ಪ್ರತಿವರ್ಷ ಚುನಾವಣೆ ನಡೆಯುತ್ತದೆ. ಪ್ರಸ್ತುತ ಉಪಾಧ್ಯಕ್ಷರಾದವರೇ ಮುಂದಿನ ಚುನಾವಣೆಯಲ್ಲಿ ಅಧ್ಯಕ್ಷರಾಗುವ ಸಂಪ್ರದಾಯ ಬೆಳೆದುಕೊಂಡು ಬಂದಿದೆ ಎನ್ನುತ್ತಾರೆ ಕ್ಲಬ್ ಅಧ್ಯಕ್ಷ ಯು.ಬಿ.ಭಟ್.ಮೈಸೂರು ಬ್ಯಾಂಕ್, ಕನ್ನಂಬಾಡಿ ಅಣೆಕಟ್ಟೆ ನಿರ್ಮಾತೃ ವಿಶ್ವೇಶ್ವರಯ್ಯ ಸ್ಥಾಪಿಸಿದ ಕ್ಲಬ್‌ಗೆ ಈಗ ತೊಂಬತ್ತಾರರ ವಯಸ್ಸು. ಕಟ್ಟಡದ ಮುಂದಿನ ಪ್ರವೇಶದ್ವಾರ ನವೀಕರಿಸುವ ಮೂಲಕ ಆಧುನಿಕತೆಗೆ ತೆರೆದುಕೊಳ್ಳಲು ಮುಂದಾಗಿದೆ. ಯುವಪೀಳಿಗೆಯನ್ನು ಉದ್ದೇಶವಾಗಿಟ್ಟುಕೊಂಡು ಕ್ಲಬ್‌ನ ಹೊರಾಂಗಣ ವಿನ್ಯಾಸವನ್ನೂ ನವೀಕರಿಸಲಾಗಿದೆ. ಹಳೆಯ ಪ್ರವೇಶದ್ವಾರ ನವೀಕರಣಗೊಳಿಸಿದ್ದು, ಅದು ಶನಿವಾರ (ಜೂ.23) ಉದ್ಘಾಟನೆಯಾಯಿತು.ಮೊದಲಿನ ರೂಪುರೇಷೆ ಉಳಿಸಿಕೊಂಡು ಹದಿನಾರೂವರೆ ಲಕ್ಷ ವೆಚ್ಚದಲ್ಲಿ ಪ್ರವೇಶದ್ವಾರ ನವೀಕರಣಗೊಳಿಸಲಾಗಿದೆ. ಪ್ರವೇಶದ್ವಾರಕ್ಕೆ ಮಾರ್ಬಲ್ಸ್ ಹಾಕಲಾಗಿದ್ದು, ಸಂಸ್ಥಾಪಕರಾದ ಸರ್.ಎಂ.ವಿಶ್ವೇಶ್ವರಯ್ಯ ಅವರ ಪುತ್ಥಳಿಯ ಹಿಂಭಾಗದಲ್ಲಿ 15 ಅಡಿ ಎತ್ತರದ ಜಲಪಾತ ಮಾಡಲಾಗಿದೆ. ಇದರಿಂದ ಪ್ರವೇಶದ್ವಾರದ ಸೌಂದರ್ಯ ಮತ್ತಷ್ಟು ಹೆಚ್ಚಾಗಲಿದೆ ಎಂದು ವರ್ಣಿಸುತ್ತಾರೆ ಭಟ್.ರಾತ್ರಿ ಸಮಯದಲ್ಲಿ ಈ ಫಾಲ್ಸ್‌ಗೆ ಬಣ್ಣಬಣ್ಣದ ದೀಪಗಳ ಬೆಳಕು ಮತ್ತಷ್ಟು ರಂಗು ತುಂಬಲಿದೆ. ಜೊತೆಗೆ ಪ್ರವೇಶ ದ್ವಾರದ ಆಸುಪಾಸಿನಲ್ಲಿ ಹೂವಿನ ಗಿಡಗಳನ್ನು ಹಾಕಲಾಗಿದೆ. ಸರ್.ಎಂ.ವಿಶ್ವೇಶ್ವರಯ್ಯನವರ 150ನೇ ಜನ್ಮದಿನಾಚರಣೆ ಪ್ರಯುಕ್ತ, ಅವರ ನೆನಪಿಗಾಗಿ ಈ ಪ್ರವೇಶದ್ವಾರ ನವೀಕರಣಗೊಳಿಸಲಾಗಿದೆ ಎಂಬುದು ಭಟ್ ಅವರ ವಿವರಣೆ.ಕಬ್ಬನ್ ಉದ್ಯಾನದ ಅಂಚಿನಲ್ಲಿರುವ ಈ ಪ್ರಖ್ಯಾತ ಸೆಂಚುರಿ ಕ್ಲಬ್‌ನ ಸೌಂದರ್ಯ ಸವಿಯಲು ಒಂದು ರಾತ್ರಿ ಉಳಿದುಕೊಳ್ಳಲೇಬೇಕು. ಅಂದಹಾಗೆ ಈ ಕ್ಲಬ್‌ಗೆ ಸದಸ್ಯರು ಮತ್ತು ಅವರ ಆಹ್ವಾನಿತರಿಗೆ ಮಾತ್ರ ಪ್ರವೇಶ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry