ಶುಕ್ರವಾರ, ನವೆಂಬರ್ 15, 2019
27 °C
ಚುನಾವಣೆ ಅಕ್ರಮ ತಡೆಗೆ ಪ್ರಯತ್ನ

ಸೆಕ್ಟರ್ ಮ್ಯಾಜಿಸ್ಟ್ರೇಟ್‌ಗಳಿಗೆ ಹೆಚ್ಚು ಅಧಿಕಾರ

Published:
Updated:

ಕೋಲಾರ: ಚುನಾವಣೆ ಅಕ್ರಮಗಳು ನಡೆದ ಸಂದರ್ಭದಲ್ಲಿ ಸ್ಥಳ ಪರಿಶೀಲನೆ ಮಾಡಲು ಮತ್ತು ವಸ್ತುಗಳನ್ನು ವಶಪಡಿಸಿಕೊಳ್ಳಲು ವಿಶೇಷ ಅಧಿಕಾರವನ್ನು ಸೆಕ್ಟರ್ ಮ್ಯಾಜಿಸ್ಟ್ರೇಟ್‌ಗಳಿಗೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ್ ತಿಳಿಸಿದರು.ಸಿಆರ್‌ಪಿಸಿ ಸೆಕ್ಷನ್ 20ರ ಪ್ರಕಾರ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಮತ್ತು ತಹಶೀಲ್ದಾರರಿಗೆ ಮಾತ್ರ ಸ್ಥಳ ತಪಾಸಣೆ, ವಸ್ತು ವಶಪಡಿಸಿಕೊಳ್ಳುವ ಅಧಿಕಾರವಿದೆ. ಈ ಚುನಾವಣೆ  ಸಂದರ್ಭದಲ್ಲಿ ಅಕ್ರಮಗಳನ್ನು ತಡೆಗಟ್ಟಲು ಸೆಕ್ಷನ್ 21ರ ಅಡಿಯಲ್ಲಿ ಈ ಅಧಿಕಾರವನ್ನು ಸೆಕ್ಟರ್ ಮ್ಯಾಜಿಸ್ಟ್ಟ್ರೆಟ್‌ಗಳಿಗೂ ಇಂದಿನಿಂದ ನೀಡಲಾಗಿದೆ ಎಂದು ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಸೆಂಟ್ರಲ್ ಮ್ಯಾಜಿಸ್ಟ್ರೇಟ್‌ಗಳು, ಫ್ಲೈಯಿಂಗ್ ಸ್ಕ್ವಾಡ್ ಮುಖ್ಯಸ್ಥರು ಮತ್ತು ಸ್ಟ್ಯಾಟಿಕ್ ಸರ್ವೆಲೆನ್ಸ್ ಟೀಂನ ಮುಖ್ಯಸ್ಥರಿಗೆ ಈ ವಿಶೇಷ ಅಧಿಕಾರವನ್ನು ನೀಡಲಾಗಿದೆ. ಎಕ್ಸಿಕ್ಯುಟಿವ್ ಮ್ಯಾಜಿಸ್ಟ್ರೇಟ್‌ಗಳಾಗಿದ್ದ ಅವರಿಗೆ ಸ್ಪೆಷಲ್ ಎಕ್ಸಿಕ್ಯುಟಿವ್ ಮ್ಯಾಜಿಸ್ಟ್ರೇಟ್ ಸ್ಥಾನವನ್ನು ಕಲ್ಪಿಸಲಾಗಿದೆ ಎಂದರು.ತಪಾಸಣೆ: ಕಚೇರಿ ಕೆಲಸಗಳು ಹೆಚ್ಚು ಕಡಿಮೆ ಮುಗಿದಿದ್ದು, ಇನ್ನು ಮುಂದೆ ಚುನಾವಣೆ ಅಧಿಕಾರಿಗಳು ಮತ್ತು ತಹಶೀಲ್ದಾರರೂ ಚುನಾವಣೆ ಅಕ್ರಮ ತಡೆ ಮತ್ತು ತಪಾಸಣೆ ಮಾಡಲಿದ್ದಾರೆ. ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಅವರೂ ಸಂಚರಿಸಲಿದ್ದಾರೆ ಎಂದು ಹೇಳಿದರು.ಹೆಚ್ಚು ಸಿಬ್ಬಂದಿ: ಚುನಾವಣೆ ಅಕ್ರಮವನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ ಸಲುವಾಗಿ ಫ್ಲೈಯಿಂಗ್ ಸ್ಕ್ವಾಡ್‌ಗಳಲ್ಲಿದ್ದ ಸಿಬ್ಬಂದಿ ಸಂಖ್ಯೆಯನ್ನು ದ್ವಿಗುಣಗೊಳಿಸಲಾಗಿದೆ. ಪ್ರತಿ ತಂಡದಲ್ಲಿದ್ದ ಮೂವರ ಜೊತೆಗೆ ಹೆಚ್ಚುವರಿಯಾಗಿ ಇನ್ನೂ ಮೂವರನ್ನು ನಿಯೋಜಿಸಲಾಗಿದೆ ಎಂದರು.ಎಲ್ಲ ಸೆಕ್ಟರ್ ಅಧಿಕಾರಿಗಳಿಗೂ ವಾಹನಗಳನ್ನು ನೀಡಲಾಗಿದೆ. 24 ಗಂಟೆ ಕಾಲವೂ ಕಾರ್ಯಾಚರಣೆ ನಡೆಸುವ ರೀತಿಯಲ್ಲಿ ಪ್ರತಿ ಅಧಿಕಾರಿಗೆ 8ರಿಂದ 10 ಮತಕೇಂದ್ರಗಳ ಜವಾಬ್ದಾರಿ ವಹಿಸಲಾಗಿದೆ ಎಂದು ತಿಳಿಸಿದರು.ಮತ್ತೆ ತರಬೇತಿ: ಮತಗಟ್ಟೆ ಅಧಿಕಾರಿ ಮತ್ತು ಸಹಾಯಕ ಮತಗಟ್ಟೆ ಅಧಿಕಾರಿಗಳಿಗೆ ಸೋಮವಾರ ತರಬೇತಿ ನೀಡಲಾಗಿದೆ. ಹೆಚ್ಚುವರಿಯಾಗಿ ಮತ್ತೊಮ್ಮೆ ತರಬೇತಿ ನೀಡಲಾಗುವುದು ಎಂದರು.127 ದೂರು: ಇದುವರೆಗೂ ಚುನಾವಣೆ ಅಕ್ರಮಗಳಿಗೆ ಸಂಬಂಧಿಸಿ 127 ದೂರುಗಳನ್ನು ದಾಖಲಿಸಿಕೊಳ್ಳಲಾಗಿದೆ. ಕಾಲ್‌ಸೆಂಟರ್ ಮೂಲಕ 81 ಮತ್ತು ಆನ್‌ಲೈನ್‌ನಲ್ಲಿ 46 ದೂರುಗಳನ್ನು ದಾಖಲಿಸಲಾಗಿದ್ದು, ಎಲ್ಲ ದೂರುಗಳ ಅನ್ವಯ ಪರಿಶೀಲನೆ ಮತ್ತು ಕಾರ್ಯಾಚರಣೆ ನಡೆಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.ಹೆಚ್ಚು ವ್ಯವಹಾರ: ಬ್ಯಾಂಕ್‌ಗಳಲ್ಲಿ 10 ಲಕ್ಷಕ್ಕಿಂತ ಹೆಚ್ಚಿನ ವ್ಯವಹಾರ ಮತ್ತು ಅನಮಾನಾಸ್ಪದವಾಗಿ 1 ಲಕ್ಷಕ್ಕಿಂತ ಹೆಚ್ಚಿನ ವ್ಯವಹಾರ ನಡೆಸಿರುವುದು ಕಂಡುಬಂದರೆ ಕೂಡಲೇ ಮಾಹಿತಿ ನೀಡುವಂತೆ ಎಲ್ಲ ಬ್ಯಾಂಕ್‌ಗಳ ಸಿಬ್ಬಂದಿಗೆ ಸೂಚಿಸಲಾಗಿದೆ.

ಪ್ರತಿಕ್ರಿಯಿಸಿ (+)