ಸೆಕ್ಯರಿಟಿ ಗಾರ್ಡ್ ಕೊಲೆ: ಆರೋಪಿಗಳ ಬಂಧನ

7

ಸೆಕ್ಯರಿಟಿ ಗಾರ್ಡ್ ಕೊಲೆ: ಆರೋಪಿಗಳ ಬಂಧನ

Published:
Updated:

ಬೆಂಗಳೂರು: ನಗರದ ಹೊಸೂರು ರಸ್ತೆಯಲ್ಲಿರುವ ರಾಷ್ಟ್ರೀಯ ಹೈನು ಸಂಶೋಧನಾ ಸಂಸ್ಥೆಯಲ್ಲಿ (ಎನ್‌ಡಿಆರ್‌ಐ) ಸೆಕ್ಯುರಿಟಿ ಗಾರ್ಡ್ ಆಗಿದ್ದ ನೆಲ್ಸನ್ ನರೋನಾ (55) ಅವರ ಕೊಲೆ ಪ್ರಕರಣದ ಆರೋಪಿಗಳನ್ನು ಆಡುಗೋಡಿ ಪೊಲೀಸರು ಬಂಧಿಸಿದ್ದಾರೆ.ಆಡುಗೋಡಿಯ ಮುನ್ನಾ (30), ರ‌್ಯಾಂಟೊ ದಾಸ್ (32) ಮತ್ತು ಮುನಿರಾಮು (55) ಬಂಧಿತರು. ಆರೋಪಿಗಳು ಎನ್‌ಡಿಆರ್‌ಐನಲ್ಲೇ ಸೆಕ್ಯುರಿಟಿ ಗಾರ್ಡ್‌ಗಳಾಗಿದ್ದರು. ನೆಲ್ಸನ್ ಹಾಗೂ ಆ ಮೂರೂ ಮಂದಿ ಸೋಮವಾರ (ಅ.8) ರಾತ್ರಿ ಪಾಳಿಯ ಕೆಲಸದಲ್ಲಿದ್ದರು.

ಆ ವೇಳೆ ಪಾನಮತ್ತರಾಗಿದ್ದ ಆರೋಪಿಗಳು, ನೆಲ್ಸನ್ ಜತೆ ಜಗಳವಾಡಿದ್ದರು. ಆ ಸಂದರ್ಭದಲ್ಲಿ ಮುನ್ನಾ ಮದ್ಯದ ನಶೆಯಲ್ಲಿ ನೆಲ್ಸನ್ ಕೆನ್ನೆಗೆ ಮುತ್ತು ಕೊಟ್ಟಿದ್ದ. ಈ ವಿಷಯವಾಗಿ ಪರಸ್ಪರರ ನಡುವೆ ಆರಂಭವಾದ ಜಗಳ ವಿಕೋಪಕ್ಕೆ ತಿರುಗಿ ಆರೋಪಿಗಳು ಅವರ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದರು. ಬಳಿಕ ಶವವನ್ನು ಕಾಲುವೆಯೊಂದರ ಬಳಿ ಎಸೆದು ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.ಪ್ರಕರಣ ಸಂಬಂಧ ಎನ್‌ಡಿಆರ್‌ಐನ ಸೆಕ್ಯುರಿಟಿ ಗಾರ್ಡ್‌ಗಳನ್ನೆಲ್ಲಾ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗಿತ್ತು. ಅಲ್ಲದೇ ಅವರ ಮನೆಗಳಲ್ಲಿ ತಪಾಸಣೆ ಮಾಡುತ್ತಿದ್ದಾಗ ಆರೋಪಿ ಮುನ್ನಾನ ಮನೆಯಲ್ಲಿ ರಕ್ತದ ಕಲೆಯಾಗಿದ್ದ ಶರ್ಟ್ ಒಂದು ಪತ್ತೆಯಾಗಿತ್ತು. ಈ ಮಾಹಿತಿ ಆಧರಿಸಿ ವಿಚಾರಣೆ ಮುಂದುವರಿಸಿದಾಗ ಆತ ಕೊಲೆ ಮಾಡಿದ್ದನ್ನು ಒಪ್ಪಿಕೊಂಡ. ಬಳಿಕ ಇತರೆ ಆರೋಪಿಗಳನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ. ಇನ್‌ಸ್ಪೆಕ್ಟರ್ ಎಸ್.ಸುಧೀರ್ ಮತ್ತು ಸಿಬ್ಬಂದಿ ಆರೋಪಿಗಳನ್ನು ಬಂಧಿಸಿದ್ದಾರೆ.ದರೋಡೆ:
ಬಸವೇಶ್ವರನಗರ ಮೂರನೇ ಹಂತದಲ್ಲಿನ ಮನೆಯೊಂದಕ್ಕೆ ನುಗ್ಗಿದ ದುಷ್ಕರ್ಮಿಗಳು ಚಿನ್ನಾಭರಣ ದರೋಡೆ ಮಾಡಿರುವ ಘಟನೆ ಬುಧವಾರ ರಾತ್ರಿ ನಡೆದಿದೆ. ಈ ಸಂಬಂಧ ಅನಿಲ್ ಅಲೆಕ್ಸ್ ಎಂಬುವರು ದೂರು ಕೊಟ್ಟಿದ್ದಾರೆ. ಸಾಫ್ಟ್‌ವೇರ್ ಕಂಪೆನಿಯೊಂದರಲ್ಲಿ ಎಂಜಿನಿಯರ್ ಆಗಿರುವ ಅವರು, ತಾಯಿ ಗ್ರೇಸಿ ಅವರ ಜತೆ ಬಸವೇಶ್ವರನಗರ 14ನೇ ಮುಖ್ಯರಸ್ತೆಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.ಅನಿಲ್ ಅವರು ಕಚೇರಿಯಿಂದ ರಾತ್ರಿ ಮನೆಗೆ ಬಂದಿರಲಿಲ್ಲ. ಈ ವೇಳೆ ಗ್ರೇಸಿ, ಮನೆಗೆಲಸದವರಾದ ಮಂಜುಳಾ ಮತ್ತು ಸರಸ್ವತಿ ಅವರು ಮಾತ್ರ ಮನೆಯಲ್ಲಿದ್ದರು. ಈ ಸಂದರ್ಭದಲ್ಲಿ ದುಷ್ಕರ್ಮಿಗಳು ಅವರ ಮನೆಯ ಬಳಿ ಬಂದು ಕಾಲಿಂಗ್ ಬೆಲ್ ಮಾಡಿದ್ದಾರೆ.

ಮಗ ಬಂದಿರಬಹುದೆಂದು ಭಾವಿಸಿದ ಗ್ರೇಸಿ ಅವರು ಬಾಗಿಲು ತೆರೆಯುತ್ತಿದ್ದಂತೆ ಒಳ ನುಗ್ಗಿದ ದುಷ್ಕರ್ಮಿಗಳು ಆ ಮೂರೂ ಮಂದಿಯ ಕಣ್ಣಿಗೆ ಕಾರದ ಪುಡಿ ಎರಚಿ, ಅಲ್ಮೇರಾದಲ್ಲಿದ್ದ ಆಭರಣಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ದರೋಡೆಯಾಗಿರುವ ಆಭರಣಗಳ ಮೌಲ್ಯದ ಬಗ್ಗೆ ದೂರುದಾರರು ನಿಖರ ಮಾಹಿತಿ ನೀಡಿಲ್ಲ. ಆರೋಪಿಗಳ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಬಸವೇಶ್ವರನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸರಗಳವು: ಎಚ್‌ಎಎಲ್ ಎರಡನೇ ಹಂತದಲ್ಲಿ ದುಷ್ಕರ್ಮಿಗಳು ಬುಧವಾರ ರಾತ್ರಿ ಸಾವಿತ್ರಿ ಎಂಬ ಮಹಿಳೆಯ ಚಿನ್ನದ ಸರವನ್ನು ದೋಚಿದ್ದಾರೆ. ಎಚ್‌ಎಎಲ್ 14ನೇ `ಎ~ ಮುಖ್ಯರಸ್ತೆ ನಿವಾಸಿಯಾದ ಸಾವಿತ್ರಿ ಅವರು ಮನೆಯ ಸಮೀಪವೇ ವಾಯುವಿಹಾರಕ್ಕೆ ಹೋಗಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳು ಬೈಕ್‌ನಲ್ಲಿ ಹಿಂಬಾಲಿಸಿ ಬಂದು ಈ ಕೃತ್ಯ ಎಸಗಿದ್ದಾರೆ. ಸರದ ಮೌಲ್ಯ ಸುಮಾರು ಒಂದು ಲಕ್ಷ ರೂಪಾಯಿ ಎಂದು ಪೊಲೀಸರು ಹೇಳಿದ್ದಾರೆ. ಇಂದಿರಾನಗರ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.ಬಂಧನ:
ಜೂಜು ಆಡುತ್ತಿದ್ದ ಆರೋಪದ ಮೇಲೆ ಎಂಟು ಮಂದಿಯನ್ನು ಬಂಧಿಸಿರುವ ಕೇಂದ್ರ ಅಪರಾಧ ವಿಭಾಗದ ಪೊಲೀಸರು ಒಂದು ಲಕ್ಷ ನಗದು ಹಾಗೂ ಮೊಬೈಲ್‌ಗಳನ್ನು ಜಪ್ತಿ ಮಾಡಿದ್ದಾರೆ. ಮಾಗಡಿ ರಸ್ತೆಯ ಶ್ರೀನಿವಾಸ (25), ಇಟ್ಟಮಡುವಿನ ಲೋಕೇಶ್ (30), ಹೊಸಕೆರೆಹಳ್ಳಿಯ ರಾಮಚಂದ್ರ (37),ವಾಲ್ಮೀಕಿನಗರದ ಜವರನಾಯಕ (33), ದೊಡ್ಡಕಲ್ಲಸಂದ್ರದ ಶಿವಲಿಂಗ (23), ಚಂದ್ರಾಲೇಔಟ್‌ನ ಸುರೇಶ (32), ದಾಸರಹಳ್ಳಿಯ ದಿನೇಶ (29) ಮತ್ತು ವೇಣುಗೋಪಾಲ್ (28) ಬಂಧಿತರು. ಆರೋಪಿಗಳು ಮೂಡಲಪಾಳ್ಯ ಬಳಿಯ ಎಸ್‌ವಿಜಿ ನಗರದ ಮನೆಯೊಂದರಲ್ಲಿ ಜೂಜು ಆಡುತ್ತಿದ್ದರು. ಈ ಬಗ್ಗೆ ಮಾಹಿತಿ ಕಲೆ ಹಾಕಿ ಅವರನ್ನು ಬಂಧಿಸಲಾಯಿತು. ಅವರ ವಿರುದ್ಧ ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry