ಸೆಕ್ಯುರಿಟಿ ಗಾರ್ಡ್‌ಗಳಿಗೆ ತರಬೇತಿ

7

ಸೆಕ್ಯುರಿಟಿ ಗಾರ್ಡ್‌ಗಳಿಗೆ ತರಬೇತಿ

Published:
Updated:

ಬೆಂಗಳೂರು: `ಖಾಸಗಿ ಭದ್ರತಾ ಸಂಸ್ಥೆಗಳ ಸೆಕ್ಯುರಿಟಿ ಗಾರ್ಡ್‌ಗಳಿಗೆ ರಾಜ್ಯ ಕೈಗಾರಿಕಾ ಭದ್ರತಾ ಪಡೆ (ಕೆಎಸ್‌ಐಎಸ್‌ಎಫ್) ಕೇಂದ್ರದಲ್ಲಿ ತರಬೇತಿ ನೀಡಲು ನಿರ್ಧರಿಸಲಾಗಿದೆ' ಎಂದು ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ವಿ.ಉಮೇಶ್ ಹೇಳಿದರು.ನಗರದ ನೃಪತುಂಗ ರಸ್ತೆಯಲ್ಲಿರುವ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ಖಾಸಗಿ ಭದ್ರತಾ ಸಂಸ್ಥೆಗಳು ಈಚೆಗೆ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.`ಆನೇಕಲ್ ತಾಲ್ಲೂಕಿನಲ್ಲಿ 25 ಎಕರೆ ಪ್ರದೇಶದಲ್ಲಿ ಆರಂಭವಾಗಲಿರುವ ಕೆಎಸ್‌ಐಎಸ್‌ಎಫ್ ಕೇಂದ್ರದಲ್ಲಿ ಸೆಕ್ಯುರಿಟಿ ಗಾರ್ಡ್‌ಗಳಿಗೆ ತರಬೇತಿ ಶಿಬಿರ ನಡೆಸಲು ಉದ್ದೇಶಿಸಲಾಗಿದೆ. ಸೆಕ್ಯುರಿಟಿ ಏಜೆನ್ಸಿಗಳ ನೆರವಿನೊಂದಿಗೆ ಈ ಶಿಬಿರ ಆಯೋಜಿಸಲಾಗುತ್ತಿದ್ದು, ಪೊಲೀಸ್ ಅಧಿಕಾರಿಗಳು ಸೆಕ್ಯುರಿಟಿ ಗಾರ್ಡ್‌ಗಳಿಗೆ ವೃತ್ತಿ ಸವಾಲುಗಳ ಬಗ್ಗೆ ತರಬೇತಿ ನೀಡಲಿದ್ದಾರೆ' ಎಂದರು.ರಾಜ್ಯದಲ್ಲಿ ಪ್ರಸ್ತುತ 800 ನೋಂದಾಯಿತ ಸೆಕ್ಯುರಿಟಿ ಏಜೆನ್ಸಿಗಳಿವೆ. ಸುಮಾರು 4.50 ಲಕ್ಷ ಸೆಕ್ಯುರಿಟಿ ಗಾರ್ಡ್‌ಗಳಿದ್ದು, ಅವರಲ್ಲಿ ಮೂರು ಲಕ್ಷದಷ್ಟು ಮಂದಿ ಈಶಾನ್ಯ ರಾಜ್ಯಗಳಿಂದ ಬಂದಿದ್ದಾರೆ. ಸೆಕ್ಯುರಿಟಿ ಗಾರ್ಡ್‌ಗಳೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವ ಪ್ರಕರಣಗಳ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಇದರಿಂದ ಪೊಲೀಸರಿಗೆ ಆರೋಪಿಗಳನ್ನು ಪತ್ತೆ ಮಾಡುವುದು ಕಷ್ಟವಾಗುತ್ತಿದೆ. ಆದ್ದರಿಂದ ಭದ್ರತಾ ಸಂಸ್ಥೆಗಳು ಸೆಕ್ಯುರಿಟಿ ಗಾರ್ಡ್‌ಗಳನ್ನು ಕೆಲಸಕ್ಕೆ ನೇಮಿಸಿಕೊಳ್ಳುವಾಗ ಅವರ ವೈಯಕ್ತಿಕ ವಿವರವನ್ನು ಕಡ್ಡಾಯವಾಗಿ ದಾಖಲಿಸಿಟ್ಟುಕೊಳ್ಳಬೇಕು ಎಂದು ತಿಳಿಸಿದರು.ಸೆಕ್ಯುರಿಟಿ ಗಾರ್ಡ್‌ಗಳಿಗೆ ಶಸ್ತ್ರಾಸ್ತ್ರ ಪರವಾನಗಿ ನೀಡುವಂತೆ ಖಾಸಗಿ ಭದ್ರತಾ ಸಂಸ್ಥೆಗಳಿಂದ ಬೇಡಿಕೆ ಹೆಚ್ಚುತ್ತಿದೆ. ಈ ಬಗ್ಗೆ ಸಂಸ್ಥೆಗಳು ಚರ್ಚೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿದರೆ, ಗಂಭೀರವಾಗಿ ಪರಿಗಣಿಸಲಾಗುವುದು. ಸಂಸ್ಥೆಗಳು ಸೆಕ್ಯುರಿಟಿ ಗಾರ್ಡ್‌ಗಳಿಗೆ ಉತ್ತಮ ಸೌಕರ್ಯಗಳನ್ನು ಕಲ್ಪಿಸಿಕೊಡಬೇಕು. ಆಗ ಮಾತ್ರ ಅವರು ದಕ್ಷತೆಯಿಂದ ಕೆಲಸ ಮಾಡಲು ಸಾಧ್ಯ. ಅಲ್ಲದೇ, ಕೆಲಸಕ್ಕೆ ನಿಯೋಜಿಸುವುದಕ್ಕೂ ಮುನ್ನ ಅವರಿಗೆ ಸೂಕ್ತ ತರಬೇತಿ ನೀಡಬೇಕು.ಮಾಲ್‌ಗಳು, ಚಿತ್ರಮಂದಿರಗಳು, ಹೋಟೆಲ್ ಮತ್ತಿತರ ಕಡೆಗಳಿಗೆ ಸ್ನೇಹಪರತೆಯಿಂದಿರುವ ಸೆಕ್ಯುರಿಟಿ ಗಾರ್ಡ್‌ಗಳನ್ನು ನಿಯೋಜಿಸಬೇಕು. ಎಟಿಎಂ ಘಟಕಗಳು, ಬ್ಯಾಂಕ್ ಇನ್ನಿತರ ಹಣಕಾಸು ಸಂಸ್ಥೆಗಳ ಬಳಿ ದಕ್ಷ ಹಾಗೂ ಸವಾಲಿನ ಕೆಲಸಗಳನ್ನು ಸಮರ್ಥವಾಗಿ ನಿಭಾಯಿಸಬಲ್ಲ ಸಿಬ್ಬಂದಿಯನ್ನು ನೇಮಿಸಬೇಕು ಎಂದು ಸಲಹೆ ನೀಡಿದರು.ಕೆಎಸ್‌ಐಎಸ್‌ಎಫ್‌ನ ಕಾನ್‌ಸ್ಟೇಬಲ್ ಹುದ್ದೆಗಳಿಗೆ ಈಗಾಗಲೇ 1,721 ಮಂದಿಯನ್ನು ನೇಮಿಸಿಕೊಳ್ಳಲಾಗಿದ್ದು, ಅವರನ್ನು ತರಬೇತುಗೊಳಿಸುವ ಪ್ರಕ್ರಿಯೆ ಸದ್ಯದಲ್ಲೇ ಆರಂಭವಾಗಲಿದೆ. ತರಬೇತಿ ಮುಗಿಯುತ್ತಿದ್ದಂತೆ ಅವರನ್ನು ಬ್ಯಾಂಕ್ ಮತ್ತಿತರ ಹಣಕಾಸು ಸಂಸ್ಥೆಗಳ ಭದ್ರತಾ ಕಾರ್ಯಕ್ಕೆ ನಿಯೋಜಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.ಆಂತರಿಕ ಭದ್ರತಾ ವಿಭಾಗದ ಐಜಿಪಿ ಭಾಸ್ಕರ್‌ರಾವ್, ಎಸ್‌ಐಎಸ್ ಸೆಕ್ಯುರಿಟಿ ಗ್ರೂಪ್‌ನ ಮುಖ್ಯಸ್ಥ ಆರ್.ಕೆ.ಸಿನ್ಹಾ ಇತರರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry