ಸೋಮವಾರ, ಆಗಸ್ಟ್ 19, 2019
22 °C

ಸೆಣಬು ಚೆಲುವೆಲ್ಲಾ ನಂದೆಂದಿತು...!

Published:
Updated:

ಮಂಗಳೂರು: ಬೊಂಬೆಗಳು, ಬಳೆ, ವ್ಯಾನಿಟಿ ಬ್ಯಾಗ್, ಮೊಬೈಲ್ ಚೀಲ, ಕಾರ್ಪೆಟ್, ಜೋಕಾಲಿ ಕುರ್ಚಿ, ಕಿವಿಯೋಲೆ ಮತ್ತಿತರ ಆಭರಣಗಳು... ಎಲ್ಲವೂ ಅಲ್ಲಿದ್ದವು... ಅಚ್ಚರಿ ಎಂದರೆ ಇವೆಲ್ಲ ಉತ್ಪನ್ನಗಳ ತಯಾರಿಕೆಗೆ ಬಳಸಿದ್ದು ಸೆಣಬನ್ನು... ಒಂದನ್ನೊಂದು ಮೀರಿಸುವ ಸೊಬಗು ಸೆಣಬಿನ ಉತ್ಪನ್ನಗಳದು!   ನಗರದ ಹೋಟೆಲ್ ವುಡ್‌ಲ್ಯಾಂಡ್‌ನ ಸಭಾಂಗಣದಲ್ಲಿ ಬುಧವಾರ ಆರಂಭವಾದ ಸೆಣಬಿನ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳವು ಸೆಣಬಿನಿಂದ ತಯಾರಾದ ನಾನಾ ನಮೂನೆಯ, ನಾಜೂಕಾದ, ಚಿತ್ತಾಕರ್ಷಕವಾದ ಗೃಹೋಪಯೋಗಿ ಹಾಗೂ ಆಲಂಕಾರಿಕ ವಸ್ತುಗಳನ್ನು ನಗರದ ಜನತೆಗೆ ಪರಿಚಯಿಸಿದೆ.ಬೇರೆ ಬೇರೆ ಗುಣಮಟ್ಟದ ಸೆಣಬುಗಳಿಂದ ತಯಾರಿಸಿದ ವ್ಯಾನಿಟಿ ಬ್ಯಾಗ್, ಕಂಪ್ಯೂಟರ್ ಬ್ಯಾಗ್, ಕಚೇರಿ ಬಳಕೆಯ ಬ್ಯಾಗ್‌ಗಳು, ಕಾನ್ಫರೆನ್ಸ್ ಬ್ಯಾಗ್‌ಗಳು ಇಲ್ಲಿ ಲಭ್ಯ. ಪ್ರತಿ ಉತ್ಪನ್ನದ ಬೆಲೆ 150 ರೂಪಾಯಿಯಿಂದ ಸಾವಿರಾರು ರೂಪಾಯಿವರೆಗೆ ಇದೆ. ಮೊಬೈಲ್, ಎಟಿಎಂ ಕಾರ್ಡ್‌ಗಳನ್ನು ಇಡುವ ಪುಟ್ಟ ಚೀಲಗಳು, ಸಿ.ಡಿ.ಗಳನ್ನು ಇಡುವ ಬ್ಯಾಗ್, ಪರ್ಸ್, ಕಡತಗಳು, ಬುತ್ತಿ, ನೀರಿನ ಬಾಟಲಿ ಒಯ್ಯುವ ಬ್ಯಾಗ್, ಹಣ್ಣು ಹಂಪಲುಗಳನ್ನು ಒಯ್ಯುವ ಬ್ಯಾಗ್‌ಗಳೂ ಇಲ್ಲಿವೆ. ಕೆಲವು ಬ್ಯಾಗ್‌ಗಳಲ್ಲಿ ಆಂಧ್ರದ ಕಲಂಕಾರಿ ಶೈಲಿಯ ಚಿತ್ತಾರಗಳಿದ್ದು, ಆಧುನಿಕ ಜೀವನ ಶೈಲಿಗೂ ಇವು ಒಪ್ಪುವಂತಿವೆ.ಸೆಣಬಿನಿಂದಲೇ ತಯಾರಿಸಿದ ಬೊಂಬೆಗಳಂತೂ ನಯನ ಮನೋಹರವಾಗಿವೆ. ನಾನಾ ನಮೂನೆಯ ವಾಲ್ ಹ್ಯಾಂಗಿಂಗ್ಸ್‌ಗಳೂ ಇಲ್ಲಿ ಲಭ್ಯ. ಸೆಣಬಿನ ವಾಲ್ ಹ್ಯಾಂಗಿಂಗ್ಸ್‌ಗೆ ಚೆಂದದ ಉಬ್ಬು ಶಿಲ್ಪಗಳನ್ನು ಜೋಡಿಸಲಾಗಿದೆ. ಈ ಅಕ್ರಿಲಿಕ್ ಬಣ್ಣ ಬಳಸಿ ತಯಾರಿಸಿದ ಈ ಉಬ್ಬುಶಿಲ್ಪಗಳು ಗೋಡೆಗಳ ಸೊಬಗನ್ನು ಇಮ್ಮಡಿಗೊಳಿಸುವಂತಿವೆ.ಮಹಿಳೆಯರಿಗೆ ಇಷ್ಟವಾಗುವಂತಹ ಹೇರ್‌ಕ್ಲಿಪ್, ವಿವಿಧ ವಿನ್ಯಾಸದ ನೆಕ್ಲೇಸ್, ಕಂಠಿಹಾರಗಳೂ ಇಲ್ಲಿ ಲಭ್ಯ. ಇವೆಲ್ಲವೂ ಸೆಣಬಿನಿಂದ ತಯಾರಾದ ಕರಕುಶಲ ವಸ್ತುಗಳು ಇಲ್ಲಿವೆ.ಸೆಣಬಿನ ಹೂಕುಂಡ:  ಸೆಣಬಿನಿಂದ ತಯಾರಿಸಿ ಹೂಕುಂಡ, ಮೇಳದ ಆಕರ್ಷಣೆಗಳಲ್ಲೊಂದು. ಪ್ರತಿ ಹೂಕುಂಡಕ್ಕೆ 250 ರೂಪಾಯಿ ಬೆಲೆ ಇದೆ. ಈ ಹೂಕುಂಡದ ಜತೆ ತೆಂಗಿನ ನಾರಿನ ಹುಡಿಯ ಬಿಲ್ಲೆಯೂ ಲಭ್ಯ.`ಬಿಲ್ಲೆಯನ್ನು ನೀರಿನಲ್ಲಿ ಹಾಕಿಟ್ಟರೆ, ಅದು ನೀರನ್ನು ಹೀರಿಕೊಳ್ಳುತ್ತದೆ. ಅದನ್ನು  ಪುಡಿ ಮಾಡಿ ಹೂಗಿಡಗಳ ಬುಡಕ್ಕೆ ಹಾಕಿದರೆ ಎರಡು ದಿನಗಳವರೆಗೆ ತೇವಾಂಶವನ್ನು ಕಾಪಾಡುತ್ತದೆ' ಎಂದು ತಮಿಳುನಾಡಿನ ಪೊಲ್ಲಾಚಿಯ ಪದ್ಮಪ್ರಿಯ ವಿವರಿಸಿದರು.ರಾಷ್ಟ್ರೀಯ ಸೆಣಬು ಮಂಡಳಿ ಆಶ್ರಯದಲ್ಲಿ ಹಮ್ಮಿಕೊಂಡ ಈ ಸೆಣಬಿನ ಮೇಳಕ್ಕೆ ಜಿಲ್ಲಾಧಿಕಾರಿ ಎನ್.ಪ್ರಕಾಶ ಅವರು ಚಾಲನೆ ನೀಡಿದರು.ಪಶ್ಚಿಮ ಬಂಗಾಳ, ಆಂಧ್ರ ಪ್ರದೇಶ, ತಮಿಳುನಾಡು, ಕೇರಳ ಸೇರಿದಂತೆ ವಿವಿಧ ರಾಜ್ಯಗಳ ಕರಕುಶಲಕರ್ಮಿಗಳ 25 ಮಳಿಗೆಗಳು ಮೇಳದಲ್ಲಿ ಭಾಗವಹಿಸಿವೆ. ಎಲ್ಲ ಕರಕುಶಲಕರ್ಮಿಗಳಿಗೆ ಉಚಿತ ಅವಕಾಶ ಕಲ್ಪಿಸಲಾಗಿದೆ. ಅವರಿಗೆ ದಿನಭತ್ಯೆ ಹಾಗೂ ಪ್ರಯಾಣ ಭತ್ಯೆಯನ್ನೂ ಒದಗಿಸುತ್ತೇವೆ, ಮಂಗಳೂರಿನಲ್ಲಿ ಈ ಹಿಂದೆಯೂ ಸೆಣಬಿನ ಮೇಳಗಳನ್ನು ಹಮ್ಮಿಕೊಂಡಿದ್ದು, ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು' ಎಂದು ಸೆಣಬಿನ ಉತ್ಪನ್ನಗಳ ಮಾರುಕಟ್ಟೆ ಉತ್ತೇಜನಾಧಿಕಾರಿ ಟಿ.ಅಯ್ಯಪ್ಪನ್ ಸುದ್ದಿಗಾರರಿಗೆ ತಿಳಿಸಿದರು.

ರಾಷ್ಟ್ರೀಯ ಸೆಣಬು ಮಂಡಳಿಯ ಲೆಕ್ಕಾಧಿಕಾರಿ ಜಯಂತ್ ಸರ್ಕಾರ್ ಜತೆಗಿದ್ದರು.

Post Comments (+)