ಸೆನ್‌ಗೆ ವಾಗ್ದಂಡನೆ: ಪ್ರಕ್ರಿಯೆ ಆರಂಭ

7

ಸೆನ್‌ಗೆ ವಾಗ್ದಂಡನೆ: ಪ್ರಕ್ರಿಯೆ ಆರಂಭ

Published:
Updated:
ಸೆನ್‌ಗೆ ವಾಗ್ದಂಡನೆ: ಪ್ರಕ್ರಿಯೆ ಆರಂಭ

ನವದೆಹಲಿ: ಹಣಕಾಸು ನಿಧಿ ದುರ್ಬಳಕೆ ಹಾಗೂ ಮತ್ತಿತರ ಆರೋಪಗಳಿಗೆ ಸಿಲುಕಿರುವ ಕೋಲ್ಕತ್ತ ಹೈಕೋರ್ಟ್ ನ್ಯಾಯಮೂರ್ತಿ ಸೌಮಿತ್ರ ಸೆನ್ ಅವರಿಗೆ ವಾಗ್ದಂಡನೆ ವಿಧಿಸುವ ಪ್ರಕ್ರಿಯೆ ರಾಜ್ಯ     ಸಭೆಯಲ್ಲಿ ಬುಧವಾರ ಆರಂಭಗೊಂಡಿತು. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನ್ಯಾಯಾಲಯವಾಗಿ ಮಾರ್ಪಟ್ಟ ರಾಜ್ಯಸಭೆಯ ಕಟಕಟೆಯಲ್ಲಿ ಸೆನ್ 90 ನಿಮಿಷಗಳ ಕಾಲ ತಮ್ಮನ್ನು ಸಮರ್ಥಿಸಿಕೊಳ್ಳುವ ಜತೆಗೆ ಭಾರತದ ನಿವೃತ್ತ ಮುಖ್ಯ ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್ ವಿರುದ್ಧ ಪಕ್ಷಪಾತದ ಆಪಾದನೆ ಮಾಡಿದರು.     

 

`ನಾನು ಮೂರು ವರ್ಷಗಳ ಕಾಲ ನ್ಯಾಯಮೂರ್ತಿಯಾಗಿದ್ದ ಅವಧಿಯಲ್ಲಿ ನನ್ನ ಪ್ರಾಮಾಣಿಕತೆ ಮತ್ತು ಬದ್ಧತೆ ಬಗ್ಗೆ ಸಣ್ಣ ದೂರಿಗೂ ಆಸ್ಪದ ನೀಡದಂತೆ ಕಾರ್ಯ ನಿರ್ವಹಿಸಿದ್ದೇನೆ~ ಎಂದರು.ಪ್ರಸ್ತುತ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾಗಿರುವ ಬಾಲಕೃಷ್ಣನ್ ವಿರುದ್ಧ ಸೆನ್ ಪದೇ ಪದೇ ಆಪಾದನೆ ಮಾಡಿದರು. `ಪೂರ್ವಭಾವಿಯಾಗಿಯೇ ನನ್ನನ್ನು ತಪ್ಪಿತಸ್ಥ ಎಂದು ನಿರ್ಧರಿಸಲಾಗಿದ್ದು, ಆರಂಭದಿಂದಲೇ ಸ್ಪಷ್ಟವಾಗಿ ಪಕ್ಷಪಾತ~ ಎಸಗಲಾಗಿದೆ ಎಂದರು.

 

ಸೆನ್ ವಿರುದ್ದ ವಾಗ್ದಂಡನೆ ಪ್ರಕ್ರಿಯೆ ಆರಂಭಿಸಲು ಶಿಫಾರಸು ಮಾಡಿ ಬಾಲಕೃಷ್ಣನ್ ಅವರು 2008ರ ಆಗಸ್ಟ್‌ನಲ್ಲಿ ಪತ್ರ ಬರೆದಿದ್ದರು. ತಾವು ನೇಮಿಸಿದ್ದ ಮೂವರು ಸದಸ್ಯರ ಆಂತರಿಕ ಸಮಿತಿಯ ವರದಿ ಆಧರಿಸಿ, 24 ಲಕ್ಷ ರೂಪಾಯಿ ನಿಧಿ ದುರುಪಯೋಗದ ಆರೋಪ ವರದಿಯಲ್ಲಿತ್ತು.ಸೆನ್ ಅವರು 1990ರಲ್ಲಿ ಕೋರ್ಟ್‌ನಿಂದ ರಿಸೀವರ್(ಆಸ್ತಿ ನಿರ್ವಾಹಕ) ಆಗಿ ನೇಮಕಗೊಂಡಿದ್ದಾಗ ಈ ಅಕ್ರಮ ಎಸಗಿದ್ದಾರೆ ಎಂದು ಸಮಿತಿ ಹೇಳಿತ್ತು.ಬಾಲಕೃಷ್ಣನ್ ರಚಿಸಿದ್ದ ಆಂತರಿಕ ಸಮಿತಿಯಲ್ಲಿದ್ದ ಮೂವರ ಪೈಕಿ ಇಬ್ಬರಾದ ನ್ಯಾಯಮೂರ್ತಿ ಎ.ಕೆ.ಪಟ್ನಾಯಕ್ ಮತ್ತು ನ್ಯಾಯಮೂರ್ತಿ ಆರ್.ಎಂ.ಲೋಧಾ ಅವರಿಗೆ ಎರಡು ತಿಂಗಳೊಳಗೆ ಬಡ್ತಿ ಸಿಕ್ಕಿತು.ಮತ್ತೊಬ್ಬ ನ್ಯಾಯೂರ್ತಿ ಎ.ಪಿ.ಷಾ ಅವರು ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ನಿವೃತ್ತರಾದ ಸಂದರ್ಭದಲ್ಲಿ ಬಡ್ತಿ ಸಿಗದಿದ್ದುದಕ್ಕೆ ದುಃಖ ತೋಡಿಕೊಂಡಿದ್ದರು ಎಂಬುದನ್ನು ಅವರು ವಿವರಿಸಿದರು.`ವಾಸ್ತವಗಳನ್ನು ಮುಚ್ಚಿಟ್ಟು ನನ್ನನ್ನು ಬಲಿಪಶು ಮಾಡಲಾಗುತ್ತಿದೆ. ನ್ಯಾಯಾಂಗದ ಕೊಳೆ ತೊಳೆಯುವ ಉತ್ಸಾಹದಲ್ಲಿ ಹೀಗೆಲ್ಲಾ ಮಾಡಲಾಗುತ್ತಿದೆ. ನನ್ನ ಪ್ರಕರಣದಲ್ಲಿ ಬಾಲಕೃಷ್ಣನ್ ಅವರು ಆರೋಪಿ ಮಾತ್ರವಲ್ಲ, ವಕೀಲ ಹಾಗೂ ನ್ಯಾಯಮೂರ್ತಿಯೂ ಆಗಿ ತ್ರಿಪಾತ್ರ ವಹಿಸಿದ್ದಾರೆ~ ಎಂದರು.`ನನ್ನ ವಿರುದ್ಧ ಭೂ ಕಬಳಿಕೆ ಆರೋಪವಿದೆಯೇ? ನನ್ನ ನೆಂಟರಿಷ್ಟರು ಆಸ್ತಿ ಸಂಗ್ರಹದಲ್ಲಿ ನಿರತರಾಗಿರುವರೇ? ನನ್ನ ಮಗನಾಗಲೀ, ಅಳಿಯನಾಗಲೀ ಅಥವ ಸೋದರನಾಗಲೀ ಈ ಆರೋಪಕ್ಕೆ ಸಿಲುಕಿಲ್ಲ~ ಎಂದು ಸೆನ್ ಪರೋಕ್ಷವಾಗಿ ಬಾಲಕೃಷ್ಣನ್ ವಿರುದ್ಧ ದೂಷಿಸಿದರು.ಬಾಲಕೃಷ್ಣನ್ ಮುಖ್ಯ ನ್ಯಾಯಮೂರ್ತಿಯಾಗಿದ್ದ ಅವಧಿಯಲ್ಲಿ ಭವಿಷ್ಯ ನಿಧಿ ಹಗರಣದ ಪ್ರಮುಖ ಸಾಕ್ಷಿ ಮೃತಪಟ್ಟರು.  ಪಂಜಾಬ್- ಹರಿಯಾಣ ಹೈಕೋರ್ಟಿನ ನ್ಯಾಯಮೂರ್ತಿಯೊಬ್ಬರ ಬಾಗಿಲಿಗೆ 15 ಲಕ್ಷ ರೂಪಾಯಿ ತಲುಪಿಸಿದ ಘಟನೆ ನಡೆದಿತ್ತು ಎಂಬ ಉದಾಹರಣೆಗಳನ್ನು ನೀಡಿದರು.ರಿಸೀವರ್ ಆಗಿದ್ದ ಅವಧಿಯಲ್ಲಿನ ನಿಧಿ ದುರ್ಬಳಕೆ ಆರೋಪದಿಂದ ಕೋಲ್ಕತ್ತ ಹೈಕೋರ್ಟಿನ ವಿಭಾಗೀಯ ಪೀಠ ತಮ್ಮನ್ನು ದೋಷಮುಕ್ತಿಗೊಳಿಸಿದ ಆದೇಶವನ್ನು ಸೆನ್ ಇದೇ ವೇಳೆ ಓದಿದರು.`ನನ್ನ ವಿರುದ್ಧ ಹೆಚ್ಚೆಂದರೆ, ನಿಧಿಯನ್ನು ಸಮರ್ಪಕವಾಗಿ ನಿರ್ವಹಿಸದ ಆರೋಪ ಹೊರಿಸಬಹುದು. ಆಗ ನನ್ನ ಯುವ ವಕೀಲನಾಗಿದ್ದೆ.... ಆದರೆ ನಾನು ನ್ಯಾಯಮೂರ್ತಿಯಾಗಿದ್ದ ಮೂರು ವರ್ಷಗಳಲ್ಲಿ ಒಂದೇ ಒಂದು ಭ್ರಷ್ಟಾಚಾರದ ಆರೋಪಕ್ಕೂ ತುತ್ತಾಗಿಲ್ಲ~ ಎಂದರು.`ನನ್ನ ವಿರುದ್ದ ಮಾಡಲಾಗಿರುವ ಎಲ್ಲ ಆರೋಪಗಳ ಹಿಂದೆ ಪೂರ್ವನಿರ್ಧಾರಿತ ದುರುದ್ದೇಶವಿದೆ. `ನನ್ನನ್ನು ಸಮರ್ಥಿಸಿಕೊಳ್ಳಲು ಕಾನೂನಿನ ಎಲ್ಲ ಮಾರ್ಗೋಪಾಯಗಳನ್ನು ಬಳಸಿ, ಅದು ಫಲ ನೀಡದೇ ಇದ್ದುದರಿಂದ ಇಲ್ಲಿಗೆ ಬಂದಿದ್ದೇನೆ. ನೀವು ನನಗೆ ವಾಗ್ದಂಡನೆ ವಿಧಿಸಿದ್ದೇ ಆದರೆ, ಅದು  ಘೋರ ಅನ್ಯಾಯವಾಗಲಿದೆ. ಇದು ನನ್ನ ಜೀವದ ಪ್ರಶ್ನೆಯಾಗಿರುವುದರಿಂದ ದಯವಿಟ್ಟು ನಿರ್ಧಾರಕ್ಕೆ ಬರುವ ಮುನ್ನ ಯೋಚಿಸಿ~ ಎಂದು ಸೆನ್ ಮನವಿ ಮಾಡಿದರು.ನನಗೆ ವಾಗ್ದಂಡನೆ ವಿಧಿಸಿದರೂ ಕಟ್ಟಡದ ತಾರಸಿ ಮೇಲೆ ನಿಂತು `ಅಧಿಕ ಆಸ್ತಿ ಸಂಗ್ರಹಿಸಿಲ್ಲ~ ಎಂದು ಗಟ್ಟಿಯಾಗಿ ಚೀರುತ್ತೇನೆ... ನ್ಯಾಯಾಂಗದ ಕೊಳೆ ತೊಳೆಯುವ ಉತ್ಸಾಹದಲ್ಲಿ ನನ್ನನ್ನು ಬಲಿಪಶು ಮಾಡಲಾಗುತ್ತಿದೆ. ಆದರೆ ನ್ಯಾಯಮೂರ್ತಿಯ ವರ್ಚಸ್ಸಿಗೆ ಕುಂದು ತಂದರೆ ಅದು ನ್ಯಾಯಾಂಗಕ್ಕೇ ಕುಂದುಂಟು ಮಾಡಿದಂತೆ ಎಂದು ಪ್ರತಿಪಾದಿಸಿದರು.ರಾಜ್ಯಸಭೆ ಅಧ್ಯಕ್ಷ ಹಮೀದ್ ಅನ್ಸಾರಿ ಅವರ ಪೀಠದ ಎದುರಿನಲ್ಲಿ ಸೆನ್ ವಿಚಾರಣೆಗಾಗಿ ಕಟಕಟೆ ಹಾಕಲಾಗಿತ್ತು. ವಾಗ್ದಂಡನೆ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಹಮೀದ್ ಅನ್ಸಾರಿ ಮಾರ್ಷಲ್‌ಗಳತ್ತ ನೋಡಿ, `ಸೆನ್ ಅವರು ಹಾಜರಾಗಿದ್ದಾರೆಯೇ?... ಅವರನ್ನು ಸದನದ ಕಟಕಟೆಗೆ ಕರೆತನ್ನಿ~ ಎಂದು ಸೂಚಿಸಿದರು.

ಸಿಪಿಎಂ ನಾಯಕ ಸೀತಾರಾಂ ಯೆಚೂರಿ ಸೆನ್ ವಿರುದ್ಧ ಎರಡು ಗೊತ್ತುವಳಿಗಳನ್ನು ಮಂಡಿಸಿದರು. ರಾಜ್ಯಸಭೆ ಪ್ರತಿಪಕ್ಷ ನಾಯಕ ಅರುಣ್ ಜೇಟ್ಲಿ ಇದನ್ನು ಬೆಂಬಲಿಸಿದರು.ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಗೊಳ್ಳುವ ಮುನ್ನ ಹಣ ದುರ್ಬಳಕೆ ಮಾಡಿದ, ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ ಹಾಗೂ ತಮ್ಮ ಆಸ್ತಿಪಾಸ್ತಿ ಕುರಿತು ಹೈಕೋರ್ಟಿಗೆ ತಪ್ಪು ಮಾಹಿತಿ ನೀಡಿದ್ದಾರೆಂಬ ಆಪಾದನೆಗಳು ಸೆನ್‌ರನ್ನು ಸುತ್ತಿಕೊಂಡಿವೆ.2003ರ ಡಿ.3ರಂದು ಕೋಲ್ಕತ್ತ ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಗೊಂಡ ಸೌಮಿತ್ರ ಸೆನ್‌ಗೆ ಕಳೆದ ನಾಲ್ಕು ವರ್ಷಗಳಿಂದ ಯಾವುದೇ ಕೆಲಸ ನೀಡಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry