ಸೆನ್‌ಗೆ ಸುಪ್ರೀಂ ಜಾಮೀನು

7

ಸೆನ್‌ಗೆ ಸುಪ್ರೀಂ ಜಾಮೀನು

Published:
Updated:
ಸೆನ್‌ಗೆ ಸುಪ್ರೀಂ ಜಾಮೀನು

ನವದೆಹಲಿ (ಪಿಟಿಐ):  ಸರ್ಕಾರದ ವಿರುದ್ಧ ಪಿತೂರಿ ನಡೆಸಿದ ಹಾಗೂ ನಕ್ಸಲ್ ಸಂಘಟನೆಯನ್ನು ಕಟ್ಟಲು ನೆರವಾದ ಆರೋಪದ ಮೇಲೆ ಛತ್ತೀಸಗಡ ನ್ಯಾಯಾಲಯದಿಂದ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಮಾನವ ಹಕ್ಕು ಹೋರಾಟಗಾರ ವಿನಾಯಕ ಸೆನ್ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕೆಂದು ಸುಪ್ರೀಂಕೋರ್ಟ್ ಶುಕ್ರವಾರ ತೀರ್ಪು ನೀಡಿದೆ.

ಸೆನ್ ಅವರಿಗೆ ಜಾಮೀನು ನೀಡಲು ಯಾವುದೇ ಕಾರಣಗಳನ್ನು ಹೇಳುವುದಿಲ್ಲವೆಂದೂ ನ್ಯಾಯಾಲಯ ಸ್ಪಷ್ಟಪಡಿಸಿದೆ. ಇದೇ ವೇಳೆ ಸೆನ್ ಅವರಿಗೆ ಯಾವ ನಿಬಂಧನೆಗಳಡಿ ಜಾಮೀನು ನೀಡಬೇಕೆಂಬುದನ್ನು ಸ್ವಯಂ ನಿರ್ಧರಿಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ಸೂಚಿಸಿದೆ.

ತಮಗೆ ಜಾಮೀನು ನೀಡಲು ನಿರಾಕರಿಸಿದ್ದ ಛತ್ತೀಸಗಡ ಹೈಕೋರ್ಟಿನ ಆದೇಶದ ವಿರುದ್ಧ ಸೆನ್ ಅವರು ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಎಚ್.ಎಸ್.ಬೇಡಿ ಮತ್ತು ಸಿ.ಕೆ.ಪ್ರಸಾದ್ ಅವರನ್ನೊಳಗೊಂಡ ನ್ಯಾಯಪೀಠ ಈ ತೀರ್ಪು ನೀಡಿತು.

‘ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ. ಸೆನ್ ಅವರು ನಕ್ಸಲ್ ಪರ ಅನುಕಂಪ ಹೊಂದಿರಬಹುದು. ಹಾಗೆಂದ ಮಾತ್ರಕ್ಕೆ ರಾಷ್ಟ್ರದ್ರೋಹ ಎಸಗಿದ್ದಾರೆ ಎನ್ನಲು ಸಾಧ್ಯವಿಲ್ಲ’ ಎಂದು ನ್ಯಾಯಮೂರ್ತಿಗಳು ಸ್ಪಷ್ಟಪಡಿಸಿದರು.

ಜಾಮೀನು ಕೋರಿಕೆಯನ್ನು ಆಕ್ಷೇಪಿಸಿ ಛತ್ತೀಸಗಡ ಸರ್ಕಾರದ ಪರವಾಗಿ ಹಿರಿಯ ವಕೀಲ ಯು.ಯು.ಲಲಿತ್ ಸಲ್ಲಿಸಿದ ಪ್ರಮಾಣಪತ್ರವನ್ನು ಕೂಲಂಕಷವಾಗಿ ಪರಿಶೀಲಿಸಿದ ನ್ಯಾಯಮೂರ್ತಿಗಳು, ‘ಸೆನ್ ನಕ್ಸಲ್ ಪರ ಅನುಕಂಪ ಧೋರಣೆ ಹೊಂದಿರುವ ವ್ಯಕ್ತಿ ಅಷ್ಟೆ. ಅದನ್ನು ಹೊರತುಪಡಿಸಿದರೆ ಅವರತ್ತ ಬೆಟ್ಟು ಮಾಡಿ ತೋರಿಸುವಂತದ್ದು ಬೇರೇನೂ ಇಲ್ಲ’ ಎಂದರು.

ಸೆನ್ ಅವರ ಜಾಮೀನು ಕೋರಿಕೆಯನ್ನು ಆಕ್ಷೇಪಿಸಲು ಸರ್ಕಾರ ನೀಡಿರುವ ಕಾರಣಗಳಿಗೆ ಯಾವ ಪ್ರಸ್ತುತತೆಯೂ ಇಲ್ಲ. ಸೆನ್ ಅವರು ಸಹ ಆರೋಪಿ ಪಿಯೂಷ್ ಗುಹಾ ಅವರನ್ನು ಜೈಲಿನಲ್ಲಿ 30 ಬಾರಿ ಭೇಟಿಯಾಗಿದ್ದರು ಎಂಬುದಾಗಲೀ ಅಥವಾ ಬಂಧನದ ವೇಳೆ ಮಾವೋವಾದಿ ಆಂದೋಲನಕ್ಕೆ ಸಂಬಂಧಿಸಿದ ಕರಪತ್ರಗಳು ಮತ್ತು ದಾಖಲಾತಿಗಳು ಅವರ ಬಳಿ ಇದ್ದವೆಂಬುದಾಗಲೀ ದೇಶದ್ರೋಹದ ಆರೋಪವನ್ನು ಪುಷ್ಟೀಕರಿಸುವುದಿಲ್ಲ ಎಂದರು.

ಸೆನ್ ವಿರುದ್ಧದ ರಾಷ್ಟ್ರದ್ರೋಹದ ಆರೋಪ ಪುಷ್ಟೀಕರಿಸುವ ಬೇರಾವುದೇ  ದಾಖಲೆಗಳಿದ್ದರೆ ಸಲ್ಲಿಸುವಂತೆ ನ್ಯಾಯಪೀಠ ಸೂಚಿಸಿತು. ಆಗ ಲಲಿತ್ ಅವರು, ‘ಸೆನ್ ರಾಷ್ಟ್ರದ್ರೋಹ ಎಸಗಿದ್ದಾರೆಂಬ ನನ್ನ ವಾದವನ್ನು ವಿಚಾರಣಾ ನ್ಯಾಯಾಲಯ ಈಗಾಗಲೇ ಒಪ್ಪಿದೆ. ಈಗ ಸುಪ್ರೀಂಕೋರ್ಟ್, ಸೆನ್ ಜಾಮೀನಿಗೆ ಅರ್ಹರೋ, ಇಲ್ಲವೋ ಎಂಬುದನ್ನಷ್ಟೇ ಪರಿಗಣಿಸಬೇಕು’ ಎಂದರು.

ಸೆನ್-ಗುಹಾ ನಡುವೆ ಕೆಲವು ದಾಖಲೆಗಳ ವಿನಿಮಯವಾಗಿತ್ತು ಎಂಬ ಲಲಿತ್ ಅವರ ವಾದವನ್ನೂ ನ್ಯಾಯಪೀಠ ಒಪ್ಪಲಿಲ್ಲ. ಇಂತಹ ಚಟುವಟಿಕೆ ಮೇಲೆ ನಿಗಾ ಇಡಲೆಂದೇ ಜೈಲು ಸಿಬ್ಬಂದಿ ಇರುತ್ತಾರೆ. ಹೀಗಾಗಿ ಈ ಬಗ್ಗೆ ಈಗ ತಕರಾರು ಎತ್ತುವ ಅಗತ್ಯವೇ ಇಲ್ಲ ಎಂದರು.

ಸೆನ್ ವಿರುದ್ಧದ ದುರ್ವರ್ತನೆ ಆರೋಪಗಳನ್ನು ಸಮರ್ಥಿಸಿಕೊಳ್ಳಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ ಎಂದು ಅವರ ಪರವಾಗಿ ಪ್ರಮಾಣಪತ್ರ ಸಲ್ಲಿಸಿದ ರಾಂ ಜೇಠ್ಮಲಾನಿ ವಾದಿಸಿದರು.‘ಗಾಂಧಿ ಪುಸ್ತಕ ಇದ್ದರೆ ಗಾಂಧಿವಾದಿಯೇ?’

ವ್ಯಕ್ತಿಯೊಬ್ಬನ ಬಳಿ ಮಾವೋವಾದಿ ಕರಪತ್ರ-ಸಾಹಿತ್ಯ ಇದ್ದ ಮಾತ್ರಕ್ಕೆ ಆತನನ್ನು ರಾಷ್ಟ್ರದ್ರೋಹಿ ಎಂದು ಕರೆಯಲು ಸಾಧ್ಯವಿಲ್ಲ ಎಂದ ನ್ಯಾಯಪೀಠ, ವ್ಯಕ್ತಿಯೊಬ್ಬನ ಬಳಿ ಗಾಂಧೀಜಿ ಕುರಿತ ಪುಸ್ತಕ ಇದ್ದ ಮಾತ್ರಕ್ಕೆ ಆತನನ್ನು ಗಾಂಧಿವಾದಿ ಎಂದು ಕರೆಯಬಹುದೇ ಎಂದು ಛತ್ತೀಸಗಡ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry