ಸೆನ್ ಪರ ದನಿ ಸರಿಯೇ?

7

ಸೆನ್ ಪರ ದನಿ ಸರಿಯೇ?

Published:
Updated:‘ಈ ವಿನಾಯಕ ನಮ್ಮ ಕಾಲದ ವಿಭೀಷಣ’ ಎಂಬ ಯು. ಆರ್. ಅನಂತಮೂರ್ತಿ ಅವರ ಲೇಖನ (ಅನುಸಂಧಾನ ಜ.5) ನಾವು ಚಿಂತಿಸಬಹುದಾದ ಬೇರೆ ಮುಖವೊಂದನ್ನು ತೆರೆದಿಡಬಹುದಾದರೂ ಸಾಮಾಜಿಕ ಚಿಂತನೆಗೆ ಬೇಕಾದ ತಳಹದಿಯ ದೃಷ್ಟಿಯಿಂದ ಕೆಲವು ಮೂಲಭೂತ ದೋಷಗಳನ್ನು ಹೊಂದಿದೆ.ವಿನಾಯಕ ಸೆನ್‌ರನ್ನು ಇಂದಿನ ಕಾಲದ ವಿಭೀಷಣರಿಗೆ ಹೋಲಿಸಬಹುದಾದರೆ ಯಾವ ರಾಮನ ಪರವಾಗಿ ಅವರು ನಿಂತಿದ್ದಾರೆ? (ಅನಂತ ಮೂರ್ತಿಯವರೇ ಹೇಳುವಂತೆ) ‘ಕೋಕಾ ಕೋಲಾ ಸಂಸ್ಕೃತಿಯ ಗುಲಾಮತನ ಒಪ್ಪಿಕೊಂಡಿರುವ’ ಚೀನಾ ಮೂಲದ ಮಾವೋ ವಾದಿ ವಿಚಾರಧಾರೆ ಅಂತಹುದೆ? ವ್ಯವಸ್ಥೆಯ ವಿರುದ್ಧ ಹೋರಾಟ ರಾಷ್ಟ್ರದ್ರೋಹ ಅಲ್ಲವಾದರೆ ಭಯೋತ್ಪಾದಕರನ್ನೇಕೆ ಬಂಧಿಸಬೇಕು? ಮಾವೋ ವಾದಿ ನಕ್ಸಲರ ಹಿಂಸಾಚಾರವನ್ನು ಅವರಿಗೆ ಅನ್ಯಾಯ ಬಗೆವ ವ್ಯವಸ್ಥೆಯ ವಿರುದ್ಧ ಪ್ರಕಟವಾದ ಆಕ್ರೋಶದ ಹಿನ್ನೆಲೆಯಲ್ಲಿ ನೋಡಿ, ಅದಕ್ಕೆ ಅನುಕಂಪ ವ್ಯಕ್ತಪಡಿಸಿದ ವಿನಾಯಕ ಸೆನ್‌ರೊಂದಿಗೆ ಸಹಮತ ವ್ಯಕ್ತಪಡಿಸುವವರು, ಇದೇ ನೆಲೆಯಲ್ಲಿ ತಮ್ಮ ದೃಷ್ಟಿಯಿಂದ ಅನ್ಯಾಯದ ವ್ಯವಸ್ಥೆ ಎಂದು ಯಾವುದರ ಬಗ್ಗೆ ತಿಳಿದಿದ್ದರೋ ಅದರ ವಿರುದ್ಧ ಆಕ್ರೋಶ ಪ್ರಕಟಿಸಿದವರಿಗೆ ಸಹಾಯ ಮಾಡಿದ ಪ್ರಜ್ಞಾ ಸಿಂಗ್ ಠಾಕೂರ್ ಅಥವಾ ಕರ್ನಲ್ ಪುರೋಹಿತ್‌ರಿಗೂ ಶಿಕ್ಷೆಯಾಗಬಾರದೆಂದು ವಾದಿಸುವರೆ?ವಿನಾಯಕ ಸೆನ್‌ರು ವನವಾಸಿ ಮಕ್ಕಳಿಗೆ ಸೇವೆ ಮಾಡಲು ಕಾಡಿಗೆ ಹೋಗಿ ನಿಂತರು ಎಂಬುದಷ್ಟೇ ಸತ್ಯ. ಅವರು ಬೆಂಬಲಿಸುತ್ತಿರುವ ವಿಚಾರಧಾರೆಯಿಂದ ಅದಕ್ಕಿಂತಲೂ ಹೆಚ್ಚು ಮಕ್ಕಳು ನಿರಾಶ್ರಿತರಾಗಿದ್ದಾರೆ ಅಥವಾ ಬಂದೂಕು ಹಿಡಿದಿದ್ದಾರೆ. ವಿಚಿತ್ರವೆಂದರೆ ನಮ್ಮ ಅನೇಕ ಚಿಂತಕರು ಏಕ್‌ದಂ ವಿಶ್ವಶಾಂತಿಯ ಪ್ರತಿಪಾದಕರಾಗುತ್ತಾರೆ. ಅಥವಾ ಇನ್ನೊಂದು ತುದಿಯಲ್ಲಿ ವ್ಯಕ್ತಿ ಸ್ವಾತಂತ್ರ್ಯ ರಕ್ಷಣೆಯ ಹುರಿಯಾಳುಗಳಾಗುತ್ತಾರೆ. ಮಧ್ಯದ ಅನಿವಾರ್ಯವಾದ ‘ರಾಜ್ಯ ವ್ಯವಸ್ಥೆ’ ಯನ್ನು ಕೆಂಪು ಕಣ್ಣಿಂದ ನೋಡಿ ಎಲ್ಲ ಸಮಸ್ಯೆಗೂ ಅದೇ ಕಾರಣವೆಂದು ದೂಷಿಸುತ್ತಾರೆ. ಈ ಮಧ್ಯದ ವ್ಯವಸ್ಥೆ ಬದಲಾಗಿದ್ದರೆ ಮಾತ್ರ ವಿಶ್ವ ಶಾಂತಿ ಹಾಗು ವ್ಯಕ್ತಿ ಸ್ವಾತಂತ್ರ್ಯ ರಕ್ಷಣೆಯಾಗಬಲ್ಲದೆಂಬುದನ್ನು ಅರುಂಧತಿ ರಾಯ್, ಗಿಲಾನಿಗಳು ಜಾಣತನದಿಂದ ಮರೆಯುತ್ತಾರೆ. ‘ವಿನಾಯಕ ಸೆನ್‌ರಿಗೆ’ ಬೆಂಬಲ ವ್ಯಕ್ತಪಡಿಸುವವರು ನಾಗರಿಕ ಸಮಾಜದ ನಡುವೆ ‘ಸೇನೆ’ ನಿರ್ಮಿಸುವವರ ಪರವಾಗಿ ನಿಲ್ಲುತ್ತಿದ್ದೇವೆ ಎಂಬುದನ್ನು ಮನಗಾಣಬೇಕಲ್ಲವೇ?

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry