ಸೋಮವಾರ, ಮೇ 17, 2021
22 °C

ಸೆನ್ ರಾಜೀನಾಮೆ; ಒಪ್ಪದ ರಾಷ್ಟ್ರಪತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೆನ್ ರಾಜೀನಾಮೆ; ಒಪ್ಪದ ರಾಷ್ಟ್ರಪತಿ

ನವದೆಹಲಿ (ಪಿಟಿಐ): ರಾಜ್ಯಸಭೆಯಲ್ಲಿ ವಾಗ್ದಂಡನೆಗೆ ಗುರಿಯಾಗಿರುವ ಕೋಲ್ಕತ್ತ ಹೈಕೋರ್ಟ್ ನ್ಯಾಯಮೂರ್ತಿ ಸೌಮಿತ್ರ ಸೆನ್ ಗುರುವಾರ ರಾಷ್ಟ್ರಪತಿಗೆ ಕಳುಹಿಸಿರುವ ರಾಜೀನಾಮೆ ಪತ್ರ ಕ್ರಮಬದ್ಧವಾಗಿ ಇರದ ಕಾರಣ, ಪ್ರತಿಭಾ ಪಾಟೀಲ್ ಅದನ್ನು ನ್ಯಾಯಾಂಗ ಇಲಾಖೆಗೆ ಕಳುಹಿಸಿದ್ದಾರೆ.ನಿಯಮದ ಪ್ರಕಾರ, ನ್ಯಾಯಮೂರ್ತಿಯಾದವರು ರಾಜೀನಾಮೆ ಪತ್ರವನ್ನು ಕೈಯ್ಯಾರೆ ಬರೆದು ಕಳುಹಿಸಬೇಕು. ಆದರೆ ಸೆನ್ ರಾಜೀನಾಮೆ ಪತ್ರವನ್ನು ರಾಷ್ಟ್ರಪತಿಗೆ ಗುರುವಾರ ಫ್ಯಾಕ್ಸ್ ಮೂಲಕ ಕಳುಹಿಸಿದ್ದು, ಅದರಲ್ಲಿ ಮೂಲ ಸಹಿ ಇಲ್ಲ ಎಂದು ಅಧಿಕೃತ ಮೂಲಗಳು ಶುಕ್ರವಾರ ತಿಳಿಸಿವೆ.`ಫ್ಯಾಕ್ಸ್ ಮೂಲಕ ಕಳುಹಿಸಿದ ರಾಜೀನಾಮೆಯನ್ನು ಅಂಗೀಕರಿಸಲು ಆಗದು. ರಾಜೀನಾಮೆ ಪತ್ರ ಕೈಯ್ಯಾರೆ ಸಹಿ ಹಾಕಿದ ಮೂಲಪ್ರತಿ ಆಗಿರಬೇಕು~ ಎಂಬ ಅಡಿ ಟಿಪ್ಪಣಿಯನ್ನು ರಾಷ್ಟ್ರಪತಿ ಬರೆದಿದ್ದಾರೆ ಎಂದೂ ಮೂಲಗಳು ವಿವರಿಸಿವೆ.ಈ ಮಧ್ಯೆ, ನ್ಯಾಯಮೂರ್ತಿಯ ಸಹಿ ಇರುವ ರಾಜೀನಾಮೆಯ ಮೂಲಪ್ರತಿಯನ್ನು ರಾಷ್ಟ್ರಪತಿ ಮತ್ತು ಸ್ಪೀಕರ್ ಅವರಿಗೆ ಕಳುಹಿಸಲಾಗಿದೆ ಎಂದು ಸೆನ್ ವಕೀಲ ಸುಭಾಷ್ ಭಟ್ಟಾಚಾರ್ಯ ಕೋಲ್ಕತ್ತದಲ್ಲಿ ಹೇಳಿದ್ದಾರೆ.ತಾವು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಸೆನ್ ಕೆಲ ದಿನಗಳ ಮುಂಚೆ ಹೇಳಿದ್ದರು. ಆದರೆ ಇದೀಗ, ಸ್ವತಂತ್ರ ಭಾರತದಲ್ಲಿ ಸಂಸತ್ತಿನ ವಾಗ್ದಂಡನೆಗೆ ಗುರಿಯಾದ ಮೊತ್ತಮೊದಲ ನ್ಯಾಯಮೂರ್ತಿ ಎಂಬ ಕಳಂಕದಿಂದ ಪಾರಾಗಲು ಸೆನ್ ರಾಜೀನಾಮೆ ಕಳುಹಿಸಿದ್ದಾರೆ ಎನ್ನಲಾಗಿದೆ.ತಜ್ಞರಲ್ಲಿ ಜಿಜ್ಞಾಸೆ: ಸೆನ್ ವಿರುದ್ಧದ ವಾಗ್ದಂಡನೆ ಗೊತ್ತುವಳಿಗೆ ರಾಜ್ಯಸಭೆ ಈಗಾಗಲೇ ಅನುಮೋದನೆ ನೀಡಿದೆ. ಲೋಕಸಭೆಯಲ್ಲಿ ಸೆ. 5ರಂದು ವಾಗ್ದಂಡನೆ ಪ್ರಕ್ರಿಯೆ ಕೈಗೆತ್ತಿಕೊಳ್ಳಲು ನಿಗದಿಯಾಗಿತ್ತು. ಅದಕ್ಕೆ ಮುನ್ನವೇ ಸೆನ್ ರಾಜೀನಾಮೆ ಸಲ್ಲಿಸಿರುವುದರಿಂದ ಈಗ ವಾಗ್ದಂಡನೆ ವಿಧಿಸುವುದು ಅಗತ್ಯವೋ, ಅನಗತ್ಯವೋ ಎಂಬ ಜಿಜ್ಞಾಸೆ ಕಾನೂನು ತಜ್ಞರಲ್ಲಿ ಉಂಟಾಗಿದೆ.`ಸೆನ್ ರಾಜೀನಾಮೆ ನೀಡಿರುವುದರಿಂದ ಲೋಕಸಭೆಯಲ್ಲಿ ಈ ಕುರಿತ ಚರ್ಚೆಗೆ ಆಸ್ಪದವಿಲ್ಲ ಎಂಬುದು ನನ್ನ ಅನಿಸಿಕೆ. ಆದರೆ ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ಸರ್ಕಾರ ನಿಯಮಾವಳಿಯನ್ನು ಕೂಲಂಕಷವಾಗಿ ಪರಿಶೀಲಿಸಿ ಖಚಿತಪಡಿಸಿಕೊಳ್ಳಬೇಕು~ ಎಂದು ಸಂಸದೀಯ ವ್ಯವಹಾರ ಖಾತೆ ರಾಜ್ಯ ಸಚಿವ ರಾಜೀವ್ ಶುಕ್ಲ ಹೇಳಿದ್ದಾರೆ.`ಯಾವುದೇ ನಿರ್ದಿಷ್ಟ ಲೋಪವಿಲ್ಲದಿದ್ದರೆ ಸೆನ್ ರಾಜೀನಾಮೆ ಅಂಗೀಕರಿಸುವುದು ರಾಷ್ಟ್ರಪತಿಯವರ ಬಾಧ್ಯ ಹೊಣೆಗಾರಿಕೆ~ ಎನ್ನುವುದು ಭಾರತದ ನಿವೃತ್ತ ಮುಖ್ಯ ನ್ಯಾಯಮೂರ್ತಿ ವಿ.ಎನ್.ಖರೆ ಮತ್ತು ಸಂವಿಧಾನ ತಜ್ಞ ಅನಿಲ್ ದಿವಾನ್ ಅವರ ವಾದ.ವ್ಯಕ್ತಿಯೊಬ್ಬರು ಈಗಾಗಲೇ ರಾಜೀನಾಮೆ ನೀಡಿದ್ದರೆ ಇನ್ನು ವಜಾಗೊಳಿಸುವ ಪ್ರಶ್ನೆ ಎಲ್ಲಿಂದ ಬರುತ್ತದೆ? ರಾಜೀನಾಮೆ ನೀಡಿದವರು ಆ ಸ್ಥಾನದಲ್ಲಿ ಇಲ್ಲವೇ ಇಲ್ಲ ಎಂದ ಮೇಲೆ ವಜಾ ಪ್ರಕ್ರಿಯೆ ನಿರರ್ಥಕವಾಗುತ್ತದೆ ಎಂಬುದು ದಿವಾನ್ ಪ್ರತಿಪಾದನೆ.ಆದರೆ ಲೋಕಸಭಾ ಪ್ರಧಾನ ಕಾರ್ಯದರ್ಶಿ ಸುಭಾಷ್ ಸಿ.ಕಶ್ಯಪ್ ಅವರ ಅಭಿಪ್ರಾಯ ಬೇರೆಯೇ ಆಗಿದೆ. ಎಲ್ಲ ಸಂದರ್ಭಗಳಲ್ಲೂ ರಾಷ್ಟ್ರಪತಿಯವರು ನ್ಯಾಯಮೂರ್ತಿಯವರ ರಾಜೀನಾಮೆ ಅಂಗೀಕರಿಸಬೇಕೇ ಎಂಬುದರ ಬಗ್ಗೆ ನಿಯಮದಲ್ಲೇ ಸ್ಪಷ್ಟತೆ ಇಲ್ಲ. ಹಾಗಾಗಿ ಈ ಕುರಿತು ರಾಷ್ಟ್ರಪತಿ ಅವರೇ ನಿರ್ಧರಿಸಬೇಕು ಎಂದಿದ್ದಾರೆ.ಕಶ್ಯಪ್ ಅವರ ಪ್ರಕಾರ ರಾಷ್ಟ್ರಪತಿ ಮುಂದೆ ಈ ಮೂರು ಆಯ್ಕೆಗಳಿವೆ. ಸುಪ್ರೀಂಕೋರ್ಟ್ 1978ರಲ್ಲಿ ಗೋಪಾಲ್ ಚಂದ್ರ ಪ್ರಕರಣದಲ್ಲಿ ವಿವರಿಸಿರುವ ಪ್ರಕಾರ, ರಾಷ್ಟ್ರಪತಿಯವರಿಗೆ ಕೈಯ್ಯಾರೆ ರಾಜೀನಾಮೆ ಪತ್ರ ಬರೆದಿದ್ದರೆ ಅದನ್ನು ಅಂಗೀಕರಿಸಬಹುದು ಅಥವಾ ಯಾವುದೇ ನಿರ್ಧಾರ ಕೈಗೊಳ್ಳದೆ ಸಂಸತ್ತಿನ ಎರಡೂ ಸದನಗಳಲ್ಲಿ ವಾಗ್ದಂಡನೆ ಪ್ರಕ್ರಿಯೆ ಮುಗಿಯುವ ತನಕ ಕಾಯಬಹುದು. ಮೂರನೇ ಆಯ್ಕೆಯಲ್ಲಿ, ಸಮಯಾಭಾವದಿಂದ ಪ್ರಸ್ತುತ ಅಧಿವೇಶನದಲ್ಲಿ  ವಾಗ್ದಂಡನೆ ಪ್ರಕ್ರಿಯೆ ನಡೆಸಲು ಸಾಧ್ಯವಿಲ್ಲ ಎಂದು ಜನಪ್ರತಿನಿಧಿಗಳು ವಿಷಯ ಕೈಗೆತ್ತಿಕೊಳ್ಳುವುದನ್ನೇ ಮುಂದೂಡಿದರೆ ಈ ಬಿಕ್ಕಟ್ಟು ತಂತಾನೇ ಅಪ್ರಸ್ತುತವಾಗುತ್ತದೆ.ಹೆಸರಾಂತ ವಕೀಲ ಹಾಗೂ ಮಾಜಿ ಕಾನೂನು ಸಚಿವ ರಾಂ ಜೇಠ್ಮಲಾನಿ ಅವರದ್ದು ತದ್ವಿರುದ್ಧ ವಾದ. ವಜಾಗೊಳಿಸುವುದು ಹಾಗೂ ರಾಜೀನಾಮೆ ನೀಡುವುದು- ಇವೆರಡರ ಮಧ್ಯೆ ಭಾರಿ ವ್ಯತ್ಯಾಸವಿದೆ.ವಜಾಗೊಳಿಸುವುದೆಂದರೆ ಈ ಬಗ್ಗೆ ರಾಷ್ಟ್ರಪತಿ ಆದೇಶ ಹೊರಡಿಸಬೇಕಾಗುತ್ತದೆ. ಆದರೆ ರಾಜೀನಾಮೆ ಹಾಗಲ್ಲ ಎಂದು ಅವರು ಹೇಳಿದ್ದಾರೆ.ಸೆನ್ ರಾಜೀನಾಮೆ ಅಂಗೀಕರಿಸಲು ಅಥವಾ ಹಾಗೆ ಮಾಡದೇ ಇರಲು ರಾಷ್ಟ್ರಪತಿಯವರಿಗೆ ಮುಕ್ತ ಆಯ್ಕೆ ಅವಕಾಶ ಇದೆ ಎಂದೂ ಅಭಿಪ್ರಾಯಪಟ್ಟಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.